ಟ್ರಾಫಿಕ್ ಸಿಗ್ನಲ್ ಅಳವಡಿಕೆಗೆ ಮನವಿ

ತಾಳಿಕೋಟೆ: ಪಟ್ಟಣದ ಮುಖ್ಯಭಾಗದಲ್ಲಿ ಹಾಯ್ದು ಹೋಗಿರುವ ಮನಗೂಳಿ-ದೇವಾಪುರ ಬಿಜ್ಜಳ ರಾಜ್ಯ ಹೆದ್ದಾರಿ (61)ಯಲ್ಲಿ ವಾಹನ ದಟ್ಟನೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು ಮುಖ್ಯರಸ್ತೆಯ ವೃತ್ತಗಳಲ್ಲಿ ಟ್ರಾಫಿಕ್ ಸಿಗ್ನಲ್ ಅಳವಡಿಸುವ ಜತೆಗೆ ಸಂಚಾರ ಪೊಲೀಸ್ ಸಿಬ್ಬಂದಿ ನೇಮಿಸಬೇಕು ಎಂದು ಆಗ್ರಹಿಸಿ ಕರವೇ ಪದಾಧಿಕಾರಿಗಳು ಎಸ್‌ಪಿ ಪ್ರಕಾಶ ನಿಕ್ಕಂ ಅವರಿಗೆ ಶುಕ್ರವಾರ ಮನವಿ ಸಲ್ಲಿಸಿದರು.

ತಾಳಿಕೋಟೆ ಪೊಲೀಸ್ ಠಾಣೆಗೆ ಆಗಮಿಸಿದ್ದ ನಿಕ್ಕಂ ಅವರನ್ನು ಭೇಟಿಯಾದ ಕಾರ್ಯಕರ್ತರು ಮಾತನಾಡಿ, ಬಸವೇಶ್ವರ ವೃತ್ತ, ಅಂಬೇಡ್ಕರ್, ಟಿಪ್ಪು ವೃತ್ತಗಳಲ್ಲಿ ಶಾಲೆ ಮಕ್ಕಳು, ವೃದ್ಧರು, ಅಂಗವಿಕಲರು ರಸ್ತೆ ದಾಟುವುದು ದುಸ್ತರವಾಗಿದೆ. ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಕರವೇ ತಾಲೂಕು ಅಧ್ಯಕ್ಷ ನಿಸಾರ ಬೇಪಾರಿ, ಉಪಾಧ್ಯಕ್ಷ ಜೈಭೀಮ ಮುತ್ತಗಿ, ಜಾಕೀರ ಬಡಗಣ, ಫಿರಶ್ಯಾ ಕುಳಗೇರಿ, ಟಿಪ್ಪು ಕಾಳಗಿ, ಪ್ರಭು ಅಣ್ಣಿಗೇರಿ, ಚೇತನ ಮಣೂರ, ಪ್ರಭು ಪಾಟೀಲ, ವೀರೇಶ ಸಾಸನೂರ, ವೀರೇಶ ಸಾಲವಾಡಗಿ, ಜಬ್ಬರ ಹವಾಲ್ದಾರ, ರಾಜು ಕಲಾಲ, ಬುಡ್ಡೇಸಾ ಉಣ್ಣೇಭಾವಿ, ಶಬ್ಬೀರ ಮಕಾಂದಾರ, ಜಹೇರ ಅವಟಿ ಇತರರು ಇದ್ದರು.

ಸಂಚಾರ ಪೊಲೀಸ್ ಸಿಬ್ಬಂದಿ ನೇಮಕಕ್ಕೆ ಸೂಚನೆ: ಕರವೇ ಪದಾಧಿಕಾರಿಗಳ ಮನವಿ ಪರಿಶೀಲಿಸಿದ ಎಸ್‌ಪಿ ಪ್ರಕಾಶ ನಿಕ್ಕಂ, ಸ್ಥಳದಲ್ಲಿದ್ದ ಸಿಪಿಐ ರವಿಕುಮಾರ ಕಪ್ಪತ್ತನವರ ಹಾಗೂ ಪಿಎಸ್‌ಐ ಗೋವಿಂದಗೌಡ ಪಾಟೀಲ ಅವರ ಜತೆ ಚರ್ಚಿಸಿ, ಸಿಗ್ನಲ್ ಕೂಡಿಸಲು ಸರ್ಕಾರಕ್ಕೆ ವರದಿ ಕಳಿಸಿ ಪರವಾನಗಿ ಪಡೆಯುವುದು ತಡವಾಗುತ್ತದೆ. ಕೂಡಲೇ ಮೂರೂ ವೃತ್ತಗಳಲ್ಲಿ ಸಂಚಾರ ಪೊಲೀಸರನ್ನು ನೇಮಿಸಿ ಎಂದು ಸೂಚಿಸಿದರು.