ಅಧ್ಯಾತ್ಮ ಲೋಕದಲ್ಲಿ ರೇಣುಕಾಚಾರ್ಯರ ಹೆಸರು ಅಜರಾಮರ

ತಾಳಿಕೋಟೆ: ಅಧ್ಯಾತ್ಮ ಲೋಕದಲ್ಲಿ ಶ್ರೀ ಜಗದ್ಗುರು ರೇಣುಕಾಚಾರ್ಯರ ಹೆಸರು ಅಜರಾಮರ. ಸಮಾಜದ ಅಂಕು ಡೊಂಕುಗಳನ್ನು ತಿದ್ದಿ ತೀಡಿದ ಮಹಾನುಭಾವರು. ಕರ್ಮ ಕಳೆದು ಧರ್ಮ ಬೆಳೆಸಿ ಬದುಕು ಬಂಗಾರಗೊಳಿಸಿದವರು. ಅವರ ಧಾರ್ಮಿಕ ಮತ್ತು ಸಾಮಾಜಿಕ ಚಿಂತನೆಗಳು ಸರ್ವರ ಬಾಳಿಗೆ ಬೆಳಕು ತೋರಿವೆ ಎಂದು ಹಿರೂರ ಅನ್ನದಾನೇಶ್ವರ ಸಂಸ್ಥಾನಮಠದ ಗುರುಜಯಸಿದ್ಧೇಶ್ವರ ಶಿವಾಚಾರ್ಯರು ಹೇಳಿದರು.

ಪಟ್ಟಣದ ವಿಠ್ಠಲ ಮಂದಿರದಲ್ಲಿ ಮಂಗಳವಾರ ಜಂಗಮ ಸಮಾಜ, ಶ್ರೀ ಜಗದ್ಗುರು ರೇಣುಕಾಚಾರ್ಯ ಯುವಕ ಮಂಡಳದ ಸಹಯೋಗದಲ್ಲಿ ನಡೆದ ಶ್ರೀ ಜಗದ್ಗುರು ರೇಣುಕಾಚಾರ್ಯರ ಜಯಂತ್ಯುತ್ಸವ, ಕುಂಭೋತ್ಸವ ಹಾಗೂ ಧರ್ಮ ಸಭೆಯಲ್ಲಿ ಅವರು ಮಾತನಾಡಿದರು.

ಪರಮ ಸತ್ಯ ಪರಮಾತ್ಮನ ಶಿವದಾಹಿತ್ವ ಜ್ಞಾನ ಸಂಪತ್ತನ್ನು ಎಲ್ಲೆಡೆ ಹಂಚಿದವರು. ಹೊರಗಿನ ಶ್ರೀಮಂತಿಕೆಗಿಂತ ಒಳಗಿರುವ ಶ್ರೀಮಂತಿಕೆ ಹೆಚ್ಚಿಸಲು ಶ್ರಮಿಸಿದವರು. ಜಾತಿ, ಮತ, ಪಂಥಗಳೆನ್ನದೆ ಸರ್ವರ ಏಳಿಗೆಗಾಗಿ ಶ್ರಮಿಸಿದ ಶ್ರೇಯಸ್ಸು ಶ್ರೀ ಜಗದ್ಗುರು ರೇಣುಕಾಚಾರ್ಯರಿಗೆ ಸಲ್ಲುತ್ತದೆ ಎಂದರು.

ಗುಂಡಕನಾಳ ಬೃಹನ್ಮಠದ ಗುರುಲಿಂಗ ಶಿವಾಚಾರ್ಯರು ಮಾತನಾಡಿ, ವಿಶ್ವಬಂಧುತ್ವ ಸಾರಿದ ವೀರಶೈವ ಧರ್ಮ ಸಂಸ್ಥಾಪಕ ಶ್ರೀ ಜಗದ್ಗುರು ರೇಣುಕಾಚಾರ್ಯರು ಬೋಧಿಸಿದ ಮಾನವೀಯತೆ ಧರ್ಮದ ಸೂತ್ರಗಳು ಸರ್ವಕಾಲಕ್ಕೂ ಸರ್ವರಿಗೂ ದಾರಿ ದೀಪವಾಗಿವೆ. ಲೋಕ ಕಲ್ಯಾಣವನ್ನೇ ತಮ್ಮ ಜೀವನದ ಉಸಿರಾಗಿಸಿಕೊಂಡ ರೇಣುಕಾಚಾರ್ಯರು ಧರ್ಮ ಕಾರ್ಯಗಳೊಂದಿಗೆ ಅದ್ಭುತ ಸಾಮಾಜಿಕ ಸತ್ಕ್ರಾಂತಿ ಮಾಡಿದ್ದು ಅವಿಸ್ಮರಣೀಯ ಎಂದರು.

ನಾವದಗಿಯ ರಾಜೇಂದ್ರ ಒಡೆಯರ, ಕೈಲಾಸಪೇಟೆಯ ಬಸವಪ್ರಭು ದೇವರು, ವಿಜಯಪುರ ಶಿವಬಸವ ಯೋಗಾಶ್ರಮದ ಶಂಭುಲಿಂಗ ಸ್ವಾಮಿಗಳು, ಶಿವಶಂಕರ ಹಿರೇಮಠ ಮಾತನಾಡಿದರು.

ಸಾಸನೂರ ಹಿರೇಮಠ ಮಹಾಂತಲಿಂಗ ಶಿವಾಚಾರ್ಯರು ಸಾನ್ನಿಧ್ಯ ವಹಿಸಿದ್ದರು. ಖಾಸ್ಗತೇಶ್ವರ ಮಠದ ಆಡಳಿತಾಧಿಕಾರಿ ವೇ. ಮುರುಗೇಶ ವೀರಕ್ತಮಠ, ಸಂಗಯ್ಯ ಹಿರೇಮಠ ಮತ್ತಿತರರಿದ್ದರು. ಲಕ್ಷ್ಮಣಸಿಂಗ್ ಹಜೇರಿ ಪ್ರಾರ್ಥಿಸಿದರು. ಆರ್.ಬಿ. ದಮ್ಮೂರಮಠ ಸ್ವಾಗತಿಸಿದರು. ವಿಜಯಕುಮಾರ ಹಿರೇಮಠ ನಿರೂಪಿಸಿದರು. ಪ್ರಕಾಶ ಡೋಣೂರಮಠ ವಂದಿಸಿದರು.

ಇದಕ್ಕೂ ಮುನ್ನ ಪಟ್ಟಣದ ಬಜಾರ ಬಸವೇಶ್ವರ ದೇವಸ್ಥಾನದಿಂದ ವಿಠಲ ಮಂದಿರವರೆಗೆ ರೇಣುಕಾಚಾರ್ಯರ ಭವ್ಯ ಭಾವಚಿತ್ರ ಮೆರವಣಿಗೆ ನಡೆಯಿತು. ಸುಮಂಗಲಿಯರು ಪೂರ್ಣಕುಂಭ ಹೊತ್ತು ಸಾಗಿದರು. ಮೆರವಣಿಗೆ ಉದ್ದಕ್ಕೂ ತಾಲೂಕಿನ ಎಲ್ಲ ಶ್ರೀಗಳು ನಡೆದುಕೊಂಡೇ ಆಗಮಿಸಿದರು.

ಪ್ರಶಸ್ತಿ
ಗುಂಡಕನಾಳ-ಗಡಿ ಸೋಮನಾಳ ಬ್ರಹನ್ಮಠದ ಗುರುಲಿಂ,ಗ ಶಿವಾಚಾರ್ಯರ ದ್ವಾದಶ ಪಟ್ಟಾಧಿಕಾರಿ ಮಹೋತ್ಸವದಂಗವಾಗಿ ನೀಡಲಾಗುವ ಸಮಾಜ ಸೇವಾ ಪ್ರಶಸ್ತಿಯನ್ನು ಪಟ್ಟಣದ ಗಣ್ಯ ವರ್ತಕ, ದಿ. ತಾಳಿಕೋಟೆ ಸಹಕಾರಿ ಬ್ಯಾಂಕ್ ಅಧ್ಯಕ್ಷ, ಸಹಕಾರಿ ಧುರೀಣ ವಿಠ್ಠಲಸಿಂಗ್ ಹಜೇರಿಗೆ ನೀಡಿ ಗೌರವಿಸಲಾಯಿತು.