ರೈತರು, ಸೈನಿಕರು ದೇಶದ ಆಸ್ತಿ

ತಾಳಿಕೋಟೆ: ಶಿಷ್ಯ ಕಷ್ಟದಲ್ಲಿದ್ದಾಗ ಸ್ಪಂದಿಸುವವನೇ ನಿಜವಾದ ಗುರು. ಶಿಷ್ಯನ ಪಾಪ ನಾಶ ಮಾಡುವ ಶಕ್ತಿ ಗುರುವಿನಲ್ಲಿದೆ ಎಂದು ಉಜ್ಜೈನಿ ಜಗದ್ಗುರು ಡಾ. ಅಭಿನವ ಸಿದ್ದಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯರು ಹೇಳಿದರು.

ತಾಲೂಕಿನ ಗುಂಡಕನಾಳ ಗ್ರಾಮದ ಬೃಹನ್ಮಠದ ಪಿಠಾಧಿಪತಿ ಗುರುಲಿಂಗ ಶಿವಾಚಾರ್ಯರ ದ್ವಾದಶ ಪಟ್ಟಾಧಿಕಾರ ಮಹೋತ್ಸವ ಅಂಗವಾಗಿ ನಡೆದ ಧರ್ಮ ಸಭೆಯಲ್ಲಿ ಮಾತನಾಡಿ, ಧಾರ್ಮಿಕ ಕಾರ್ಯಕ್ರಮಗಳಿಂದ ಮನಸ್ಸು ಪರಿವರ್ತನೆ ಆಗುತ್ತದೆ. ರೈತರು ಮತ್ತು ಸೈನಿಕರು ನಮ್ಮ ದೇಶದ ಅತ್ಯುತ್ತಮ ಆಸ್ತಿಯಾಗಿದ್ದು ಅವರನ್ನು ಪ್ರತಿಯೊಬ್ಬರೂ ಗೌರವದಿಂದ ಕಾಣಬೇಕು ಎಂದು ಆಶೀರ್ವಚನ ನೀಡಿದರು.

ಜಾಲಹಳ್ಳಿ ಬೃಹನ್ಮಠದ ಜಯಶಾಂತಲಿಂಗ ಶಿವಾಚಾರ್ಯರು ಮಾತನಾಡಿ, ಮನುಷ್ಯನಲ್ಲಿ ಮುಖ್ಯವಾಗಿ ದಾನ ಗುಣವಿರಬೇಕು. ನಾವು ದಾನ ಮಾಡಿದ್ದಕ್ಕೆ ಪ್ರತಿಯಾಗಿ ದೇವರು ಇನ್ನೂ ಹೆಚ್ಚಿನ ಸಂಪತ್ತು ನೀಡುತ್ತಾನೆ. ದ್ವಾದಶ ಪಟ್ಟಾಧಿಕಾರ ಮಹೋತ್ಸವ ಅಂಗವಾಗಿ ಮಹಾರುದ್ರ ಯಾಗ ಮಾಡಿದ್ದು ಉತ್ತಮವಾಗಿದೆ ಎಂದರು.

ಬದಾಮಿಯ ನವಗ್ರಹ ಹಿರೇಮಠದ ಶಿವಪೂಜಾ ಶಿವಾಚಾರ್ಯರು, ಇಟಗಿ ಹಿರೇಮಠದ ಗುರುಶಾಂತವೀರ ಶಿವಾಚಾರ್ಯರು, ದೇವರಭೂಪುರದ ಅಮರೇಶ್ವರ ಗುರು ಗಜದಂಡ ಸ್ವಾಮಿಗಳು, ರೌಡಕುಂದಿ ಸಂಸ್ಥಾನದ ಮರಿಸಿದ್ದಲಿಂಗ ಶಿವಾಚಾರ್ಯರು, ಚಿಮ್ಮಲಗಿಯ ಸಿದ್ದರೇಣುಕಾ ದೇವರು, ಜಾಗಟಗಲ್ಲ ಬೆಟ್ಟದಪ್ಪಯ್ಯ ತಾತನವರು, ಬಸಲಿಂಗಯ್ಯ ತಾತನವರು, ಮುತ್ತಗಿಯ ಪಂಡಿತಾರಾಧ್ಯ ಶಿವಾಚಾರ್ಯರು, ಕೆಂಬಾವಿಯ ಚನ್ನಬಸವ ಶಿವಾಚಾರ್ಯರು, ಮುಖಂಡರಾದ ಮುರುಗೆಪ್ಪ ಸರಶೆಟ್ಟಿ, ಕಾಶಿನಾಥ ಸಜ್ಜನ, ಶರಣ ದೇಶಮುಖ, ರವಿ ತಾಳಪಲ್ಲೆ, ಬಸನಗೌಡ ಗಬಸಾವಳಗಿ ಇದ್ದರು. ಸಂಗೀತ ಶಿಕ್ಷಕ ಬಸವರಾಜ ಭಂಟನೂರ ಸಂಗೀತ ಕಾರ್ಯಕ್ರಮ ನಡೆಸಿದರು. ಶಹಾಪುರದ ಬಸವರಾಜ ಶಾಸಿಗಳು ಕಾರ್ಯಕ್ರಮ ನಡೆಸಿಕೊಟ್ಟರು. ಗುರುಪ್ರಕಾಶ ಹಿರೇಮಠ ವಂದಿಸಿದರು.

ಶ್ರೀಗಳಿಗೆ ಮಂಗಲ ಸ್ನಾನ
ಉಜ್ಜೈನಿ ಜಗದ್ಗುರು ಡಾ. ಅಭಿನವ ಸಿದ್ದಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯರು ಹಾಗೂ ಹರಗುರು ಚರಮೂರ್ತಿಗಳ ನೇತೃತ್ವದಲ್ಲಿ ಪಿಠಾಧಿಪತಿ ಗುರುಲಿಂಗ ಶಿವಾಚಾರ್ಯರಿಗೆ ಮಂಗಲ ಸ್ನಾನ ಮಾಡಿಸಲಾಯಿತು. ನಂತರ ಮಹಾರುದ್ರ ಯಜ್ಞದ ಪೂರ್ಣಾಹುತಿ ಪೂಜೆ ಸಲ್ಲಿಸಲಾಯಿತು. ಸುಮಂಗಲೆಯರಿಗೆ ಉಡಿ ತುಂಬುವ ಕಾರ್ಯಕ್ರಮ ನಡೆಸಲಾಯಿತು.