More

    ಇಬ್ಬರ ಜಗಳ ಮೂರನೇಯವನಿಗೆ ಲಾಭ ಎಂಬಂತಿದೆ ತಾಲಿಬಾನ್ ನಾಯಕರ ಸ್ಥಿತಿ: ಮತಾಂಧರ ಇನ್​ಸೈಡ್​ ಸ್ಟೋರಿ!

    ಭಿನ್ನಮತ, ಒಳಜಗಳ ಅನ್ನೋದು ನಮ್ಮಲ್ಲಿನ ಪಕ್ಷಗಳಲ್ಲಿ, ರಾಜಕಾರಣಿಗಳಲ್ಲಿ ಕಾಮನ್. ಆದರೆ, ಯಾವುದೋ ಮತಾಂಧ ಸಿದ್ಧಾಂತದ ಮೇಲೆ ಅಧಿಕಾರ ಹಿಡಿದ ತಾಲಿಬಾನಿ ಉಗ್ರರಲ್ಲೂ ನಡೆದಿದೆ ಆಂತರಿಕ ಯುದ್ಧ ಹಾಗೂ ನಾನೋ..ನೀನೋ ಎಂಬ ತಿಕ್ಕಾಟ. ಆಗಸ್ಟ್ 15ರಂದೇ ಅಫ್ಘನ್​​ನಲ್ಲಿ ಪಾರಮ್ಯ ಮೆರೆದ ತಾಲಿಬಾನಿಗಳು, ಈ ಕಾರಣದಿಂದಲೇ ಇನ್ನೂ ಹೊಸ ಸರ್ಕಾರ ರಚಿಸೋಕೆ ಸಾಧ್ಯವಾಗಿಲ್ಲ. ಎರಡು ಪ್ರಬಲ ಬಣಗಳ ನಡುವೆ ಫೈಟ್ ಜೋರಾದಂತೆಯೇ, ಇಬ್ಬರ ಜಗಳ ಮೂರನೇಯವರಿಗೆ ಲಾಭ ಎಂಬಂತಾಗಿದೆ ತಾಲಿಬಾನ್ ಉಗ್ರನಾಯಕರ ಸ್ಥಿತಿ.

    ತಾಲಿಬಾನ್ ಉಗ್ರರಲ್ಲೂ ಭಿನ್ನಮತದ ಬೆಂಕಿ!
    ಅಫ್ಘಾನಿಸ್ತಾನ ತಾಲಿಬಾನ್ ವಶಕ್ಕೆ ಸಿಲುಕಿ ಮೂರು ವಾರಗಳೇ ಕಳೆದಿವೆ. ಅಮೆರಿಕ ಹಾಗೂ ನ್ಯಾಟೋ ಪಡೆಗಳು ಅಫ್ಘನ್ ನೆಲ ಬಿಟ್ಟು ಒಂದು ವಾರ ಮುಗಿದಿದೆ. ಅಫ್ಘಾನಿಸ್ತಾನದಲ್ಲಿ ಪಾರಮ್ಯ ಮೆರೆದ ತಾಲಿಬಾನಿಗಳು, ತನ್ನ ಕೈಗೆಟುಕದೇ ಆಟವಾಡಿಸಿದ್ದ ಪಂಜ್​ಶಿರ್ ಪ್ರಾಂತ್ಯವನ್ನೂ ಹೆಚ್ಚುಕಮ್ಮಿ ಕಂಟ್ರೋಲ್​ಗೆ ತೆಗೆದುಕೊಂಡಿದ್ದಾರೆ. ಇಷ್ಟೆಲ್ಲಾ ಆದ್ರೂ ಅಫ್ಘಾನಿಸ್ತಾನದಲ್ಲಿ ಮಾತ್ರ ಇನ್ನೂ ಅಸ್ತಿತ್ವಕ್ಕೆ ಬಂದಿಲ್ಲ ಹೊಸ ತಾಲಿಬಾನ್ ಸರ್ಕಾರ.

    ಅಧಿಕಾರ ಹಂಚಿಕೆಗಾಗಿ ಕಚ್ಚಾಟ
    ಇದೇಕೆ ಹೀಗೆ? ಸರ್ಕಾರ ರಚನೆಗೆ ಮೂರು ವಾರ ಸಮಯ ಬೇಕಾ? ನಿಜಕ್ಕೂ ಇಷ್ಟೊಂದು ವಿಳಂಬಕ್ಕೆ ಕಾರಣ ಏನು? ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಲು ಹೊರಟರೆ, ಇಲ್ಲಿ ಬೆಳಕಿಗೆ ಬರುತ್ತಿವೆ ನಾನಾ ಸಂಗತಿಗಳು. ಅದರಲ್ಲಿ ಪ್ರಮುಖವಾಗಿರೋದೇ, ತಾಲಿಬಾನ್ ನಾನಾ​​ ಬಣಗಳ ಮಧ್ಯೆ ಅಧಿಕಾರ ಹಂಚಿಕೆಗಾಗಿ ನಡೆದಿರೋ ಕಚ್ಚಾಟ.!

    ಯಾವುದೇ ಪ್ರಜಾಪ್ರಭುತ್ವ ಸರ್ಕಾರ ರಚನೆ ಆಗುವ ಬಹುತೇಕ ಸಂದರ್ಭಗಳಲ್ಲಿ ಅಧಿಕಾರಕ್ಕಾಗಿ ಫೈಟ್ ನಡೆಯೋದು ಮಾಮೂಲು. ಆದ್ರೆ, ಕ್ರೌರ್ಯತೆಗೆ ಹೆಸರಾದ ತಾಲಿಬಾನ್ ಸಂಘಟನೆಯಲ್ಲೂ ಹೊಸ ಸರ್ಕಾರ ರಚನೆಗೆ ಅಡ್ಡಿಯಾಗಿದ್ದು ಅಧಿಕಾರ ಲಾಲಸೆ. ನಾನೋ..ನೀನೋ ಎಂಬ ತೋಳ್ಬಲ ಪ್ರದರ್ಶನ.! ಇಲ್ಲಿರೋ ನಾನಾ ಬಣಗಳ ನಡುವೆ ಅಧಿಕಾರಕ್ಕಾಗಿ ಕಾದಾಟ.

    ಬಣಬಣ ಕಿತ್ತಾಟದ ನಡುವೆಯೂ ಅಫ್ಘಾನಿಸ್ತಾನದ ಹೊಸ ಅಧ್ಯಕ್ಷರಾಗಿ ಹೊಸ ಹೆಸರು ಸೆಲೆಕ್ಟ್ ಆದಂತಿದೆ. ಅಷ್ಟೇನೂ ಪ್ರಸಿದ್ಧನಲ್ಲದ ಮುಲ್ಲಾ ಮಹಮದ್ ಹಸನ್ ಅಖುಂಡ್​​ ಆಯ್ಕೆ ಬಹುತೇಕ ಫಿಕ್ಸ್ ಆದಂತಿದೆ. ಕೊನೆ ಕ್ಷಣದವರೆಗೂ ತಾಲಿಬಾನ್ ಅಧ್ಯಕ್ಷ ಹುದ್ದೆ ರೇಸ್​​ನಲ್ಲಿ ಕಂಡು ಬಂದ ಹೆಸರು ಮುಲ್ಲಾ ಬರಾದರ್. ಬರಾದರ್ ಬಿಟ್ರೆ, ಮುಲ್ಲಾ ಓಮರ್ ಪುತ್ರ ಮುಲ್ಲಾ ಯಾಕೂಬ್​ ಅಧ್ಯಕ್ಷರಾಗಬಹುದು ಎಂದೇ ಹೇಳಲಾಗುತ್ತಿತ್ತು. ಆದ್ರೆ, ಹೆವಿವೈಟ್​​ಗಳ ಮಧ್ಯೆ ಪೈಪೋಟಿ ತೀವ್ರವಾದಾಗ, ಸ್ಪರ್ಧೆಯಿಂದ ಹಿಂದೆ ಸರಿಯದಿದ್ದಾಗ, ಅಂತಿಮವಾಗಿ ಎಲ್ಲರ ಸಹಮತದ ಅಭ್ಯರ್ಥಿಯಾಗಿ ಆಯ್ಕೆಯಾಗಿದ್ದೇ ಈ ಹಸನ್ ಅಖುಂಡ. ಅಷ್ಟಾಗಿ ಪ್ರಖ್ಯಾತರಲ್ಲದ ಮುಲ್ಲಾ ಮಹಮದ್ ಹಸನ್ ಅಖುಂಡ್ ಬಗ್ಗೆ ಎಲ್ಲಾ ಉಗ್ರ ಪ್ರಮುಖರೂ ಓಕೆ ಎಂದ ಕಾರಣ ಲಕ್ ಖುಲಾಯಿಸಿದೆ.

    ಯಾರು ಈ ಮುಲ್ಲಾ ಮಹಮದ್ ಹಸನ್ ಅಖುಂಡ್?
    ತಾಲಿಬಾನ್ ಸಹಸಂಸ್ಥಾಪಕ ಮುಲ್ಲಾ ಓಮರ್​ನ ಸಹವರ್ತಿಯಾದ ಈ ಮುಲ್ಲಾ ಮಹಮದ್ ಹಸನ್ ಅಖುಂಡ್, ಸದ್ಯ ತಾಲಿಬಾನ್​​​ನ ನಿರ್ಣಾಯಕ ಸಂಸ್ಥೆ ರಹಬರಿ ಶುರಾದ ಮುಖ್ಯಸ್ಥ. ಕಂದಹಾರ್ ಮೂಲದ ಹಸನ್ ಅಖುಂಡ್, ತಾಲಿಬಾನ್ ಸಂಸ್ಥೆಯ ಸಂಸ್ಥಾಪಕ ಸದಸ್ಯ ರಲ್ಲೊಬ್ಬ. 20 ವರ್ಷಗಳ ಕಾಲ ರಹಬರಿ ಶುರಾವನ್ನ ಮುನ್ನಡೆಸಿದ ಅನುಭವವುಳ್ಳ ಈ ಹಸನ್ ಅಖುಂಡ್ ಸಂಘಟನೆಯಲ್ಲಿ ಉತ್ತಮ ಹೆಸರು ಹೊಂದಿದ್ದಾರೆ. ಆದ್ರೆ, ಸೇನಾ ಹಿನ್ನಲೆಗಿಂತ ಅಧಿಕವಾಗಿ ಧಾರ್ಮಿಕ ಬ್ಯಾಕ್​ಗ್ರೌಂಡ್ ಹೊಂದಿದ ಅಖುಂಡ್​​​ಗೆ ತಾಲಿಬಾನ್ ಸರ್ಕಾರ ಮುನ್ನಡೆಸೋ ಹೊಣೆಗಾರಿಕೆ ಸಿಕ್ಕಿದೆ. ಅಮೆರಿಕ ಹಾಗೂ ವಿಶ್ವಸಂಸ್ಥೆ ಭಯೋತ್ಪಾದಕರ ಪಟ್ಟಿಯಲ್ಲಿ ಈತನೂ ಸ್ಥಾನ ಪಡೆದಿದ್ದಾನೆ.

    ಮುಲ್ಲಾ ಬರಾದಾರ್​ಗೆ ತೊಡಕಾಗಿದ್ದು ಏನು?
    ಇನ್ನ, ಮುಂಚೂಣಿಯಲ್ಲಿದ್ದ ಮುಲ್ಲಾ ಬರಾದಾರ್​ನನ್ನ ಮೃದುಸ್ವಭಾವದ ಮುಲ್ಲಾ ಹಸನ್ ಅಖುಂಡಾ ಹಿಂದಿಕ್ಕಿದ್ದು ಹೇಗೆ ಎಂಬ ಪ್ರಶ್ನೆ ಬಹಳ ಜನರನ್ನ ಕಾಡಬಹುದು. ಈ ಹಿಂದಿನ ತಾಲಿಬಾನ್ ಸರ್ಕಾರದಲ್ಲಿ ಕೂಡ ಹಸನ್ ಅಖುಂಡ ಪ್ರಮುಖ ಸ್ಥಾನಮಾನ ಹೊಂದಿದ್ದ. ಈ ಹಸನ್ ಅಖುಂಡ, ತಾಲಿಬಾನ್ ಸರ್ಕಾರದ ಸುಪ್ರೀಂ ನಾಯಕ ಹೈಬತ್ತುಲ್ಲಾ ಅಖುಂಡಜ್ಯಾದಾ ನಿಕಟವರ್ತಿ. 20ಕ್ಕೂ ಹೆಚ್ಚು ವರ್ಷಗಳಿಂದ ಹಸನ್ ಅಖುಂಡ, ಹೈಬತ್ತುಲ್ಲಾ ಅಖುಂಡಜ್ಯಾದಾಗೆ ತೋರಿದ ನಿಷ್ಠೆ ಇವತ್ತು ಉನ್ನತ ಸ್ಥಾನಕ್ಕೇರೋ ಅವಕಾಶ ಸೃಷ್ಟಿಸಿದೆ ಅಂತಾನೇ ಹೇಳ ಬಹುದು.

    ಇನ್ನೊಂದೆಡೆ, ಮುಲ್ಲಾ ಮಹಮದ್ ಹಸನ್ ಅಖುಂಡಗೆ ಇಲ್ಲಿ ನಿಜಕ್ಕೂ ನೆರವಾಗಿದ್ದು ಆತನ ಸರಳ ಹಾಗೂ ಅಪರಿಚಿತ ಅನಿಸುವಂತಹ ವ್ಯಕ್ತಿತ್ವ. ಲೋ ಪ್ರೊಫೈಲ್ ಹೊಂದಿದ ಈತ ಅಧಿಕಾರಕ್ಕೇರಿದ್ರೆ, ಭವಿಷ್ಯದಲ್ಲೂ ಯಾರ ಮೇಲೂ ಪ್ರಾಬಲ್ಯತೆ ಸಾಧಿಸಲ್ಲ ಎಂಬ ಭಾವನೆ ಇತರೆ ಉಗ್ರ ನಾಯಕರಲ್ಲಿ ಮೂಡಿದೆ. ಹೀಗಾಗಿ ಅಧ್ಯಕ್ಷ ಪದವಿಗೆ ತೀವ್ರ ಜಿದ್ದಾಜಿದ್ದಿ ನಡೆಸಿದ್ದ ಪ್ರಮುಖ ಮೂವರು ನಾಯಕರು, ಹಸನ್​​ ಅಧ್ಯಕ್ಷ ನಾದ್ರೆ ತಕರಾರಿಲ್ಲ ಅಂತಾ ಒಪ್ಪಿಗೆ ಕೊಟ್ಟಿದ್ದಾರೆ.

    ಇಷ್ಟಲ್ಲದೆ, ಇಲ್ಲಿ ಸುಪ್ರೀಂ ನಾಯಕ ಹೈಬತ್ತುಲ್ಲಾ ಅಖುಂಡ್​ಜ್ಯಾದಾ ಪ್ರಯೋಗಿಸಿದ ದಾಳ ಕೂಡ ವರ್ಕ್​ಔಟ್ ಆಗಿದೆ. ತಾಲಿಬಾನ್​​ ಬಲಿಷ್ಠ ಉಗ್ರನಾಯಕರು ಅಧ್ಯಕ್ಷ ಪದವಿಗೇರಿದ್ರೆ, ಪರ್ಯಾಯ ಶಕ್ತಿಕೇಂದ್ರವಾಗೋ ಆತಂಕ ಸುಪ್ರೀಂ ನಾಯಕ ಹೈಬತ್ತುಲ್ಲಾ ಅಖುಂಡ್​​​ಜಾದಾಗೆ ಕಾಡಿದೆ. ಹೇಗಾದ್ರೂ ಮಾಡಿ ಮುಲ್ಲಾ ಬರಾದಾರ್, ಮುಲ್ಲಾ ಯಾಕೂಬ್ ಅಥವಾ ಸಿರಾಜುದ್ದೀನ್ ಹಕ್ಕಾನಿ ಅಫ್ಘಾನಿಸ್ತಾನದ ಅಧ್ಯಕ್ಷ ರಾಗದಂತೆ ತಡೆಯಬೇಕು ಅಂತಾ ಪ್ಲ್ಯಾನ್ ರೂಪಿಸಿದ ಹೈಬತ್ತುಲ್ಲಾ, ಹಸನ್ ಹೆಸರು ಮುನ್ನೆಲೆಗೆ ಬರುವಂತೆ ನೋಡಿಕೊಂಡಿದ್ದಾನೆ ಎನ್ನ ಲಾಗಿದೆ.

    ಇಲ್ಲೂ ಆಟವಾಡಿದ ಪಾಕಿಸ್ತಾನ ಐಎಸ್​ಐ!
    ಇನ್ನೂ ಅಮೆರಿಕಾ ಜತೆ ನಡೆದ ಸಂಧಾನ ಸಭೆ ಬಳಿಕ ಅಫ್ಘಾನಿಸ್ತಾನದ ಅಧ್ಯಕ್ಷ ರೇಸ್​ನಲ್ಲಿ ಪ್ರಮುಖವಾಗಿ ಕೇಳಿಬಂದಿದ್ದು ಮುಲ್ಲಾ ಬರಾದಾರ್ ಹೆಸರು. ತಾಲಿಬಾನ್​ ಉಗ್ರನಾಯರಲ್ಲೇ ಚಾಣಕ್ಯನೆನಿಸಿದ ಈ ಮುಲ್ಲಾ ಬರಾದಾರ್​, ಸಂಘಟನೆ ಮೇಲೂ ಸಾಕಷ್ಟು ಹಿಡಿತ ಸಾಧಿಸಿದ್ದ. ಆದ್ರೆ, ಬರಾದಾರ್​ಗೆ ತಾಲಿಬಾನ್​ನಲ್ಲೇ ಎರಡು ಕಡೆಯಿಂದ ಚೆಕ್​ಮೇಟ್ ಎದುರಾಯಿತು. ಮೊದಲನೇಯದ್ದು ಸುಪ್ರೀಂ ಲೀಡರ್ ಹಬೈತ್ತುಲ್ಲಾ ಅಖುಂಡ್​ಜಾದಾ ಆದ್ರೆ, ಬರಾದಾರ್​ಗೆ ಎದುರಾದ ಎರಡನೇ ಅಡ್ಡಗಾಲು..ಪಾಕಿಸ್ತಾನದ ಐಎಸ್​ಐ.!

    ಮೊದಲೇ ತಾಲಿಬಾನ್​​ಗೆ ಸಕಲ ರೀತಿಯಲ್ಲೂ ನೆರವು ಕೊಟ್ಟಿರೋ ಪಾಕಿಸ್ತಾನಕ್ಕೆ ತಾಲಿಬಾನ್ ಸರ್ಕಾರದ ಮುಖ್ಯಸ್ಥ ತನ್ನ ಕೈಗೊಂಬೆ ಆಗ ಬೇಕೆಂಬುದು ಆಸೆ. ಆದ್ರೆ, ಪ್ರಬಲ ನಾಯಕ ಮುಲ್ಲಾ ಬರಾದಾರ್​ ಅಧ್ಯಕ್ಷನಾದ್ರೆ, ಎಲ್ಲಿ ತನ್ನ ಬೇಳೆ ಬೇಯೋದಿಲ್ವೋ ಎಂಬ ಆತಂಕ ಐಎಸ್​ಐಗಿದೆ. ಹೀಗಾಗಿಯೇ ಮೂರು ದಿನಗಳ ಹಿಂದೆ ಕಾಬೂಲ್​ಗೆ ಭೇಟಿ ಕೊಟ್ಟ ಐಎಸ್​ಐ ಮುಖ್ಯಸ್ಥ ಮಹಮದ್ ಫಯಾಜ್ ಕೂಡ ಪ್ರಭಾವ ಶಾಲಿ ಉಗ್ರ ನಾಯಕ ಮುಲ್ಲಾ ಬರಾದಾರ್ ಅಧ್ಯಕ್ಷರಾಗದಂತೆ ಒತ್ತಡ ಹೇರಿದ್ದಾರೆ ಎನ್ನಲಾಗಿದೆ. ಇದರ ಜತೆಗೆ ತನ್ನ ಕೂಸು ಹಕ್ಕಾನಿ ನೆಟ್​ವರ್ಕ್​ಗೆ ಅತ್ಯಧಿಕ ಸ್ಥಾನಮಾನ ದೊರಕಿಸಿಕೊಡೋ ಸಂಬಂಧ ಐಎಸ್ಐ ಮುಖ್ಯಸ್ಥ ಕಸರತ್ತು ನಡೆಸಿದ್ದಾರೆ ಎನ್ನಲಾಗಿದೆ.

    ಇಷ್ಟಲ್ಲದೆ, ಬರಾದಾರ್​ ಕೈಗೆ ಅಧ್ಯಕ್ಷ ಪದವಿ ಒಲಿಯದೇ ಇರೋಕೆ ಇನ್ನೂ ಒಂದು ಪ್ರಮುಖ ಕಾರಣವಿದೆ. ಅದೆಂದ್ರೆ, ಅಮೆರಿಕಾ ಜತೆಗೆ ಬರಾದಾರ್ ಹೊಂದಿರೋ ಸ್ನೇಹ. ದೋಹಾ ಒಪ್ಪಂದದ ಸಂದರ್ಭದಲ್ಲೂ ಅಮೆರಿಕಾ ಜತೆ ಯಶಸ್ವಿ ಸಂಧಾನವಾಗುವಂತೆ ನೋಡಿಕೊಂಡ ಪ್ರಮುಖ ಉಗ್ರ ನಾಯಕರಲ್ಲಿ ಈ ಬರಾದಾರ್ ಕೂಡ ಒಬ್ಬ. ಹೀಗಾಗಿ ಅಮೆರಿಕಾ ಜತೆ ಸುಮಧುರ ಬಾಂಧವ್ಯ ಹೊಂದಿದ ಬರಾದಾರ್, ಒಂದೊಮ್ಮೆ ಸರ್ಕಾರದ ಪ್ರಮುಖ ನೀತಿರೂಪಣೆ ಸಂದರ್ಭದಲ್ಲಿ ದೊಡ್ಡಣ್ಣನ ಒತ್ತಡಕ್ಕೆ ಮಣಿದಾನು ಎಂಬ ಆತಂಕ ಪಾಕ್​ನ ಐಎಸ್​ಐ ಸೇರಿದಂತೆ ತಾಲಿಬಾನ್ ಉಗ್ರ ನಾಯಕರಿಗೆ ಕಾಡಿದೆ. ಹೀಗಾಗಿ ಎಲ್ಲರೂ ಸೇರಿ ಬರಾದಾರ್ ಅಧ್ಯಕ್ಷ ಸ್ಥಾನಕ್ಕೇರದಂತೆ ನೋಡಿಕೊಳ್ಳೋದರಲ್ಲಿ ಸಕ್ಸಸ್ ಆಗಿದ್ದಾರೆ ಎಂದು ಹೇಳಲಾಗುತ್ತಿದೆ.

    ದೋಹಾ ಟೀಂ..ಕಂದಹಾರ್​ ಟೆರರಿಸ್ಟ್ಸ್..ಹಕ್ಕಾನಿ ನೆಟ್​ವರ್ಕ್​..ಇದೇನು ಯಾವುದೋ ಹೊಸ ಕ್ರಿಕೆಟ್​​ ಟೀಂಗಳ ಹೆಸರುಗಳಂತಿವೆ ಅಂತೀರಾ..ಇವು ತಾಲಿಬಾನ್​ ಟೆರರಿಸ್ಟ್​ಗಳಲ್ಲೇ ಇರೋ ಗ್ರೂಪ್​ಗಳು. ಮೊದಲು ಅಫ್ಘನ್ ನೆಲಕ್ಕಾಗಿ ಒಗ್ಗಟ್ಟಾಗಿ ಹೋರಾಡಿದ ಈ ಉಗ್ರರು, ಈಗ ಅಧಿಕಾರಕ್ಕಾಗಿ ತಮ್ಮ ತಮ್ಮಲ್ಲೇ ಫೈಟ್ ಮಾಡೋ ಸ್ಥಿತಿ ಬಂದೊದಗಿದೆ. ಹೊಸ ಸರ್ಕಾರ ರಚನೆ ಉತ್ಸಾಹದ ಮಧ್ಯೆಯೇ ಘನಘೋರ ಅಂತಃ ಕದನಕ್ಕೆ ತಾಲಿಬಾನ್ ಅಕ್ಷರಶಃ ಶೇಕ್ ಆಗಿಹೋಗಿದೆ.

    ‘ತಾಲಿ’ ಸರ್ಕಾರದಲ್ಲಿ ಯಾರಿಗೆ ದೊಡ್ಡ ಖಾತೆ?
    ಅಫ್ಘಾನಿಸ್ತಾನದಲ್ಲಿ ಹೊಸ ಸರ್ಕಾರ ಅಸ್ತಿತ್ವಕ್ಕೆ ಬರೋಕೆ ಮೂರು ವಾರಗಳ ಸಮಯ ಹಿಡಿದಿದೆ. ಇಷ್ಟೊಂದು ಟೈಂ ಹಿಡಿಯಲು ಮೇಯಿನ್ ರೀಸನ್ ಏನು? ಈ ಬಗ್ಗೆ ನೋಡ್ತಾ ಹೋದ್ರೆ, ಗೋಚರಿಸೋದು ತಾಲಿಬಾನ್​​ ನಲ್ಲಿನ ಒಡಕು. ತಾಲಿಬಾನ್ ಉಗ್ರ ಸಂಘಟನೆಯಾದ್ರೂ ಯಾವುದೇ ರಾಜಕೀಯ ಪಕ್ಷಗಳಿಗೆ ಕಮ್ಮಿ ಇಲ್ಲದಂತಿದೆ ಆಂತರಿಕ ಕಚ್ಚಾಟ. ಹಾಗೆ ನೋಡಿದ್ರೆ ತಾಲಿಬಾನ್​ನಲ್ಲೂ ಇವೆ ನಾನಾ ಬಣಗಳು. ಈ ಫ್ಯಾಕ್ಷನ್​​ಗಳ ನಡುವಿನ ತಿಕ್ಕಾಟವೇ ಹೊಸ ಸರ್ಕಾರ ರಚನೆಗೆ ವಿಳಂಬ ಆಗುತ್ತಿದೆ. ಮೇಲ್ನೋಟಕ್ಕೆ ತಾಲಿಬಾನ್​ ಉಗ್ರರಲ್ಲೇ ಪ್ರಮುಖವಾಗಿ ಕಂಡುಬರೋದು ಮೂರು ಬಣ. ಇನ್ನ, ಈ ತಾಲಿಬಾನ್​​ ಬಣಗಳು ಯಾವುವು ಅಂತಾ ನೋಡಿದ್ರೆ, ಮೊದಲೇಯದ್ದು ದೋಹಾ ಬಣ. ಕತಾರ್​ನ ದೋಹಾವನ್ನೇ ಕೇಂದ್ರವನ್ನಾಗಿಟ್ಕೊಂಡ ಈ ಬಣ, ತಾಲಿಬಾನ್ ಸಂಘಟನೆಯ ರಾಜತಾಂತ್ರಿಕ ನಿರ್ಣಯಗಳನ್ನ, ತಂತ್ರಗಾರಿಕೆಗಳನ್ನ ರೂಪಿಸೋದರಲ್ಲಿ ಎಕ್ಸ್​ಪರ್ಟ್​. ಅಮೆರಿಕ, ಅಫ್ಘನ್​​ ನೆಲದಿಂದ ಕಾಲ್ತೆಗೆಯೋ ಸಂಬಂಧ ತಾಲಿಬಾನ್ ಪರ ಸಂಧಾನ ಸಭೆ ನಡೆಸಿದ್ದು ಕೂಡ ಇದೇ ದೋಹಾ ಟೀಂ.

    ಇನ್ನೂ ಎರಡನೇ ತಾಲಿಬಾನ್ ಟೀಂ ಅಂದ್ರೆ ಅದು ಕಂದಹಾರ್ ಬಣ. ಇದು ಅಕ್ಷರಶಃ ಉಗ್ರ ಹೋರಾಟಗಾರರ, ಕಟ್ಟರ್ ಭಯೋತ್ಪಾದಕರ ತಂಡ. ಒಂದರ್ಥದಲ್ಲಿ ಇದೇ ತಾಲಿಬಾನ್​ನ​ ಸೇನಾ ತುಕಡಿ. ಅಫ್ಘಾನಿಸ್ತಾನವನ್ನ ನಿಯಂತ್ರಣಕ್ಕೆ ತೆಗೆದುಕೊಳ್ಳಲು ನಡೆಸಿದ ಹೋರಾಟದ ನೇತೃತ್ವ ವಹಿಸಿದ್ದು ಇದೇ ಕಂದಹಾರ್ ಭಯೋತ್ಪಾದಕರ ಬಣ. ಈ ಬಣದ ನಾಯಕತ್ವ ವಹಿಸಿಕೊಂಡಾತ ತಾಲಿಬಾನ್ ಸಹಸಂಸ್ಥಾಪಕ ಮುಲ್ಲಾ ಓಮರ್​ನ ಪುತ್ರ ಮುಲ್ಲಾ ಯಾಕೂಬ್. ಈತನೇ ಸದ್ಯ ತಾಲಿಬಾನ್ ಸೇನೆಯ ಮುಖ್ಯಸ್ಥ.

    ಹಾಗೆಯೇ ತಾಲಿಬಾನ್ ಉಗ್ರರಲ್ಲಿನ ಮೂರನೇ ಫ್ಯಾಕ್ಷನ್ ಅಂದ್ರೆ ಅದು ಹಕ್ಕಾನಿ ನೆಟ್​ವರ್ಕ್​. ಈ ಹಕ್ಕಾನಿ ನೆಟ್​ವರ್ಕ್​ ಬೇರುಗಳಿರೋದು ಪಾಕಿಸ್ತಾನದಲ್ಲಿ. ಪಾಕ್ ಗುಪ್ತಚರ ಏಜೆನ್ಸಿ ಐಎಸ್ಐ ಹುಕುಂನಂತೆ ಕಾರ್ಯನಿರ್ವಹಿಸೋ ಹಕ್ಕಾನಿ ನೆಟ್​ವರ್ಕ್​, ಕಾಬೂಲ್ ವಶಪಡಿಸಿ ಕೊಳ್ಳೋಕೆ ತನ್ನದೇ ಆದ ಉಗ್ರರ ಪಡೆ ಕಟ್ಟಿಕೊಂಡು ಹೋರಾಡಿದೆ. ಸಿರಾಜುದ್ದೀನ್ ಹಕ್ಕಾನಿ ನೇತೃತ್ವದ ಈ ಉಗ್ರರ ಪಡೆಗೆ ಸಾಧ್ಯವಾದಷ್ಟೂ ಹೆಚ್ಚಿನ ಸ್ಥಾನಮಾನ ದೊರಕಿಸಿಕೊಡಬೇಕು ಎಂಬುದು ಪಾಕಿಸ್ತಾನದ ಐಎಸ್​ಐ ಪ್ಲ್ಯಾನ್. ಹೀಗೆ ತನ್ನಲ್ಲೇ ಇರೋ ಮೂರು ತಂಡಗಳ ನಡುವಿನ ವೈಮನಸ್ಯ, ಜಿದ್ದಾಜಿದ್ದಿಯಿಂದ ತಾಲಿಬಾನ್ ಉಗ್ರಸಂಘಟನೆ ಹೈರಾಣಾಗಿದೆ. ಎಲ್ಲಾ ರಾಜಕೀಯ ಪಾರ್ಟಿಗಳಂತೆ ಇಲ್ಲೂ ಅಧಿಕಾರಕ್ಕಾಗಿ ತೆರೆಮರೆ ಫೈಟ್ ನಡೆದಿದೆ. ಅದರಲ್ಲೂ ಈ ಟೆರರಿಸ್ಟ್​ಗಳು ಅಧಿಕಾರಕ್ಕಾಗಿ ಪರಸ್ಪರ ಹೊಡೆದಾಡಿಕೊಂಡಿದ್ದಾರೆ. ಒಂದು ಮೂಲದ ಪ್ರಕಾರ ಬರಾದಾರ್​ ಗುಂಪು ಹಾಗೂ ಹಕ್ಕಾಣಿ ಗುಂಪಿನ ನಡುವೆ ಶುಕ್ರವಾರ ರಾತ್ರಿ ಭಯಾನಕ ಮಾರಾಮಾರಿ ನಡೆದಿದೆ. ಈ ಸಂದರ್ಭದಲ್ಲಿ ಬರಾದಾರ್​ಗೆ ಗಾಯಗಳಾಗಿವೆ ಎಂದು ಕೂಡ ಹೇಳಲಾಗುತ್ತಿದೆ.

    ತಾಲಿಬಾನ್​​ ಒಳಗಿನ ಬಣಗಳ ಜತೆಗೆ ಬಾಹ್ಯ ಬೆಂಬಲ ಕೊಟ್ಟ ಆಲ್​ಕೈದಾ, ಐಸಿಸ್, ಹಕ್ಕಾನಿ, ಜೈಷ್​ಇ-ಮಹಮದ್, ಜೈಷ್​​ಇ-ದವಾ.. ಹೀಗೆ ನಾನಾ ಉಗ್ರ ಸಂಘಟನೆಗಳು ಕೂಡ ಇದೀಗ ಅಧಿಕಾರದಲ್ಲಿ ಪಾಲು ಕೇಳುತ್ತಿವೆ. ಅಂದ್ರೆ, ತಾವು ಸೂಚಿಸಿದವರಿಗೆ ಹೊಸ ಸರ್ಕಾರದಲ್ಲಿ ಅವಕಾಶ ಕೊಡುಬೇಕೆಂದು ಈ ಟೆರರಿಸ್ಟ್​​ ಗ್ರೂಪ್​ಗಳು ಪಟ್ಟುಹಿಡಿದಿವೆ. ಹೀಗಾಗಿ ಹೊಸ ಅಧ್ಯಕ್ಷರನ್ನ ಆಯ್ಕೆ ಮಾಡಲು 20 ದಿನಗಳೇ ಬೇಕಾ ಗಿದೆ. ತಾಲಿಬಾನ್ ಸರ್ಕಾರದ ಸುಪ್ರೀಂ ಹಾಗೂ ಅಧ್ಯಕ್ಷ ಹುದ್ದೆ ಬಹುತೇಕ ಕ್ಲಿಯರ್ ಆದ್ರೂ, ಈಗ ಪ್ರಮುಖ ಖಾತೆಗಳಿಗಾಗಿ ಬಡಿದಾಟ ಆರಂಭವಾಗಿದೆ.

    ತಾಲಿಬಾನ್ ಉಗ್ರರಲ್ಲಿ ಭಿನ್ನಮತ ಸ್ಫೋಟಗೊಳ್ಳಲು ಕಾರಣ, ಕೆಲ ಬಣಗಳು ದೋಹಾ ತಂಡವನ್ನ ಪ್ರಬಲವಾಗಿ ವಿರೋಧಿಸಿದ್ದು. ತಾಲಿಬಾನ್ ಹೊಸ​ ಸರ್ಕಾರದಲ್ಲಿ ನಾಗರೀಕ ಪ್ರಮುಖರನ್ನೂ ಸೇರಿಸಿಕೊಳ್ಳಬೇಕೋ..ಬೇಡವೋ ಎಂಬ ಬಗ್ಗೆ ವಾಗ್ವಾದವೇ ನಡೆದಿದೆ ಎನ್ನಲಾಗಿದೆ. ಅಫ್ಘಾನಿಸ್ತಾನ ವಶಪಡಿಸಿಕೊಳ್ಳಲು ಪ್ರಾಣ ಲೆಕ್ಕಸಿದೇ ಹೋರಾಡಿದ್ದು ತಾಲಿಬಾನಿ ಸೇನೆ. ಆದ್ರೆ, ಸ್ಟಾರ್ ಹೋಟೆಲ್​ಗಳಲ್ಲಿ, ಏಸಿ ರೂಂಗಳಲ್ಲಿ ನೆಲೆಸಿರೋ ದೋಹಾ ಟೀಂಗೆ ಏಕೆ ಅಧಿಕಾರ ಕೊಡಬೇಕು ಎಂಬುದು ಹಲವು ತಾಲಿಬಾನ್ ಉಗ್ರನಾಯಕರ ಪ್ರಶ್ನೆ. ಹೀಗಾಗಿಯೇ ಅಧ್ಯಕ್ಷ ಸ್ಥಾನ ಸೇರಿದಂತೆ ಹೊಸ ಸರ್ಕಾರ ರಚನೆ ಕಗ್ಗಂಟಾಗಿದೆ ಎಂದು ಹೇಳಲಾಗಿದೆ. ಇದಲ್ಲದೆ, ತಾಲಿಬಾನ್​​ನಲ್ಲಿ ಸೇನಾ ಹಿನ್ನೆಲೆ ಹೊಂದಿರದ ಹಮೀದ್ ಕರ್ಜಾಯಿ, ಅಬ್ದುಲ್ಲಾ ಅಬ್ದುಲ್ಲಾ ಮುಂತಾದ ನಾಗರೀಕ ನಾಯಕರಿಗೆ ಸ್ಥಾನಮಾನ ನೀಡೋ ಬಗ್ಗೆಯೂ ಹಕ್ಕಾನಿ ನೆಟ್​​ವರ್ಕ್​ ಅಪಸ್ವರ ಎತ್ತಿದೆ.

    ಇನ್ನ, ಹೊಸ ಸರ್ಕಾರ ಇಸ್ಲಾಮಿಕ್ ಶರಿಯಾರ್ ಕಾನೂನಿಗೆ ಆದ್ಯತೆ ಕೊಡಬೇಕೋ..ಅಥವಾ ಆಧುನಿಕ ಕಾನೂನಿಗೆ ಮಾನ್ಯತೆ ಕೊಡಬೇಕೋ ಎಂಬ ಬಗ್ಗೆಯೂ ತಾಲಿಬಾನ್ ಉಗ್ರರಲ್ಲಿ ಜಿಜ್ಞಾಸೆ ಉಂಟಾಗಿದೆ. ಕಟ್ಟರ್ ಪಂಥರ್ ಉಗ್ರನಾಯಕರು ಶರಿಯಾರ್ ಪರ ಇದ್ರೆ, ತಾಲಿಬಾನ್​ನಲ್ಲೇ ಇರೋ ಕೆಲ ಸುಧಾರಣಾವಾದಿ ನಾಯಕರು, ಆಧುನಿಕ ಕಾನೂನು ಅನುಷ್ಠಾನದ ಕಡೆ ಒಲವು ತೋರಿದ್ದಾರೆ ಎನ್ನಲಾಗಿದೆ.

    ಕೊನೆಗೂ ತಾಲಿಬಾನ್​​​ನಲ್ಲಿ ಪವರ್ ಫೈಟ್ ಮಧ್ಯೆಯೇ ಅಂತೂ ಇಂತೂ ತಾಲಿಬಾನ್ ಹೊಸ ಸರ್ಕಾರ ಘೋಷಣೆಯಾಗಿದೆ. 22 ದಿನಗಳ ಕಾಲ ಆಂತರಿಕ ಕಚ್ಚಾಟದಿಂದ ನಲುಗಿದ ತಾಲಿಬಾನ್ ಉಗ್ರರು, ಅಂತೂ ಸರ್ಕಾರದ ಫೈನಲ್ ಚಿತ್ರಣ ಬಿಚ್ಚಿಟ್ಟಿದ್ದಾರೆ. ಸೀನಿಯರ್ ತಾಲಿಬಾನಿ ಲೀಡರ್ ಹೈಬತ್ತುಲ್ಲಾ ಅಖುಂಡ್​ಜ್ಯಾದಾ ಹೊಸ ಸರ್ಕಾರದ ಸುಪ್ರೀಂ ನಾಯಕನಾದ್ರೆ, ಮುಲ್ಲಾ ಮಹಮದ್ ಹಸನ್ ಅಖುಂಡ್ ಪ್ರಧಾನಮಂತ್ರಿಯಾಗಿದ್ದಾರೆ. ಇನ್ನ ಪ್ರಭಾವಿ ನಾಯಕ ಮುಲ್ಲಾ ಬರಾದಾರ್ ಮೊದಲನೇ ಉಪಪ್ರಧಾನಿಯಾದ್ರೆ, ಎಎಸ್ ಹನಾಫಿ 2ನೇ ಉಪಪ್ರಧಾನಿ.

    ಹಾಗೆಯೇ ರಕ್ಷಣಾ ಖಾತೆ ಮುಲ್ಲಾ ಯಾಕೂಬ್ ಗೆ ಒಲಿದ್ರೆ, ಹಕ್ಕಾನಿ ನೆಟ್​ವರ್ಕ್​ ನ ಸಿರಾಜುದ್ದೀನ್ ಹಕ್ಕಾನಿಗೆ ಪ್ರಭಾವಿ ಆಂತರಿಕ ಸಚಿವ ಸ್ಥಾನ ದೊರೆತಿದೆ. ಇನ್ನ, ಮುಲ್ಲಾ ಆಮೀರ್​ ಖಾನ್​​ ಮುತ್ತಖಿಗೆ ವಿದೇಶಾಂಗ ಖಾತೆ ಸಿಕ್ರೆ, ಹಿದಾಯತ್ತುಲ್ಲಾ ಬದರಿ ಹಣಕಾಸು ಸಚಿವ. ಹಾಗೆಯೇ ಅಬ್ದುಲ್ ಹಕೀಂಗೆ ಕಾನೂನು ಸಚಿವ ಸ್ಥಾನ, ಶೇಖ್ ಮುನೀರ್​ಗೆ ಶಿಕ್ಷಣ ಖಾತೆ, ಮುಲ್ಲಾ ಜವಾದ್- ಗುಪ್ತಚರ ಇಲಾಖೆ ಮುಖ್ಯಸ್ಥ, ಶೇರ್ ಅಬ್ಬಾಸ್ ಸ್ಟ್ಯಾನಿಕ್​​ಝೈ- ಉಪವಿದೇಶಾಂಗ ಸಚಿವ ಹುದ್ದೆ ಅಲಂಕರಿಸ್ತಿದ್ದಾರೆ. ಜಬೀವುಲ್ಲಾ ಮುಜಾಹಿದ್ ಉಪ ವಾರ್ತಾ ಸಚಿವರಾದ್ರೆ, ಮುಲ್ಲಾ ಅಬ್ದುಲ್ ಹಕ್ ವಸೀಖ್ ರಾಷ್ಟ್ರೀಯ ಭದ್ರತಾ ನಿರ್ದೇಶಕರಾಗಿದ್ದಾರೆ.

    ಇನ್ನೊಂದೆಡೆ, ಹೊಸ ಸರ್ಕಾರ ರಚನೆ ಹುಮ್ಮಸ್ಸಿನಲ್ಲಿರೋ ತಾಲಿಬಾನಿ ಉಗ್ರರು ಪಂಜ್​ಶಿರ್​ನಲ್ಲಿ ಆಘಾತ ಎದುರಿಸಿದ್ದಾರೆ. ಪಂಜ್​ಶಿರ್ ವಶ ಬಗ್ಗೆ ಬಡಾಯಿಕೊಚ್ಚಿಕೊಂಡ ತಾಲಿಬಾನಿಗಳ ಮೇಲೆ ರಾತೋರಾತ್ರಿ ಮೂರು ಅಪರಿಚಿತ ಜೆಟ್ ವಿಮಾನಗಳು ಏಕಾಏಕಿ ಬಾಂಬ್ ದಾಳಿ ನಡೆಸಿವೆ. ತಾಲಿಬಾನ್ ಉಗ್ರರ ಶಿಬಿರಗಳ ಮೇಲೆ ದಿಢೀರ್ ದಾಳಿ ನಡೆಸಿರೋ ಅಪರಿಚಿತ ವಾಯುಪಡೆ, ಬಾಂಬ್ ದಾಳಿ ಜತೆಗೆ ಗುಂಡಿನ ಸುರಿಮಳೆಗೈದಿದೆ.

    ಇನ್ನ, ಪಂಜ್​ಶಿರ್ ಎನ್​ಆರ್​ಎಫ್​​ ಪರ ಅಟ್ಯಾಕ್ ನಡೆಸಿದ್ದು ಯಾರು ಎಂಬ ಕುತೂಹಲ ಮೂಡಿರೋ ನಡುವೆಯೇ, ಇದು ರಷ್ಯಾ ಅಥವಾ ತಜಕಿಸ್ತಾನ ನಡೆಸಿರೋ ದಾಳಿ ಇರಬಹುದು ಎಂಬ ಮಾತು ಕೇಳಿಬಂದಿದೆ. ಇನ್ನೊಂದು ಮೂಲದ ಪ್ರಕಾರ, ಅಫ್ಘಾನಿಸ್ತಾನ ಸೇನೆಗೆ ಅಮೆರಿಕ ಕೊಟ್ಟ ವಿಮಾನಗಳನ್ನ ಕೊನೇ ಕ್ಷಣದಲ್ಲಿ ಹೊತ್ತೊಯ್ದಿದ್ದ ಅಫ್ಘನ್ ಯೋಧರು, ಈಗ ತಾಲಿಬಾನ್ ವಿರುದ್ಧ ದಾಳಿಗೆ ಬಳಸಿಕೊಂಡಿದ್ದಾರೆ ಎನ್ನಲಾಗ್ತಿದೆ. ಆದ್ರೆ ಯಾವುದೇ ಅಧಿಕೃತ ಮಾಹಿತಿ ಸಿಕ್ಕಿಲ್ಲ. ಇನ್ನೊಂದೆಡೆ, ಯಾವುದೇ ಕಾರಣಕ್ಕೂ ಪಂಜ್​ಶಿರ್ ಹೋರಾಟ ಕೈಬಿಡಲ್ಲ ಅಂತಾ ಮಸೂದ್ ನೇತೃತ್ವದ ಎನ್​ಆರ್ಎಫ್​ ಪಡೆಗಳ ನಾಯಕರು ಪುನರುಚ್ಛರಿಸಿದ್ದಾರೆ. ಇವೆಲ್ಲವನ್ನ ನೋಡಿದ್ರೆ, ಸಿಂಹಗಳ ನಾಡು ಪಂಜ್​ಶಿರ್ ಸದ್ಯಕ್ಕೆ ತಾಲಿಬಾನ್​​ಗೆ ಮಣಿಯೋ ಲಕ್ಷಣ ಕಾಣುತ್ತಿಲ್ಲ.

    ಅಮೆರಿಕಾಗೆ ಸೆಡ್ಡಿ ಹೊಡೆದ ತಾಲಿಬಾನಿಗಳನ್ನೇ ತಲ್ಲಣಗೊಳಿಸಿದೆ ಆಂತರಿಕ ಕದನ. ಒಳಬೇಗುದಿಯಿಂದ ನರಳಿರೋ ತಾಲಿಬಾನ್, ಪ್ರಯಾಸದಿಂದ ಹೊಸ ಸರ್ಕಾರ ನಡೆಸೋಕೆ ಹೆಜ್ಜೆ ಮುಂದಿಟ್ಟಿದೆ., ಆದ್ರೆ, ಹಿಂಸೆಯನ್ನೇ ಆಧಾರವಾಗಿಟ್ಟುಕೊಂಡ ಉಗ್ರ ಸಂಘಟನೆಯಲ್ಲಿ ಶಾಂತಿಯುತ ಆಡಳಿತ ಸಾಧ್ಯವೇ? ಮೇಲ್ನೋಟಕ್ಕೆ ಇಲ್ಲಿ ರಾಜಿ ಪಂಚಾಯ್ತಿಗಳಾಗಿದ್ರೂ, ಉಗ್ರನಾಯಕರ ನಡುವೆ ಧಗಧಗಿಸುತ್ತಿರೋ ಬೆಂಕಿ ಸದ್ಯಕ್ಕೆ ಆರೋ ಲಕ್ಷಣವಂತೂ ಕಾಣ್ತಿಲ್ಲ. ಇದು ಮುಂದಿನ ದಿನಗಳಲ್ಲಿ ಯಾವ ಸ್ವರೂಪ ತಳೆಯುತ್ತೋ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts