ಸೃಜನಶೀಲತೆಯಿಂದ ಬದುಕು ಕ್ರಿಯಾಶೀಲ

ಶೃಂಗೇರಿ: ಸೃಜನಶೀಲತೆಯಿಂದ ಬದುಕು ಕ್ರಿಯಾಶೀಲವಾಗಿರುತ್ತದೆ ಎಂದು ರಂಗಕರ್ವಿು ರಮೇಶ್ ಬೇಗಾರ್ ತಿಳಿಸಿದರು.

ಪಟ್ಟಣದ ಶ್ರೀ ಭಾರತೀತೀರ್ಥ ಸಾಂಸ್ಕೃತಿಕ ಮತ್ತು ಜಾನಪದ ಅಧ್ಯಯನ ಕೇಂದ್ರ ಟ್ರಸ್ಟ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಪಡುಬೈಲು ಗ್ರಾಮದಲ್ಲಿ ಏರ್ಪಡಿಸಿದ್ದ ಯುವ ಮಲೆನಾಡು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ನಮ್ಮೊಳಗಿನ ವಿವೇಚನೆಗಳಿಗೆ ಮೂರ್ತರೂಪ ನೀಡುವಂತಹ ಕಲೆ ಎಲ್ಲರಲ್ಲೂ ಇರುತ್ತದೆ. ಆದರೆ ಸಾಮಾಜಿಕ ಜಾಲತಾಣದ ಮಿತಿಮೀರಿದ ಅವಲಂಬನೆಯಿಂದಾಗಿ ಯುವಜನರು ಸಾಂಸ್ಕೃತಿಕವಾಗಿ ಮರೆಯಾಗುತ್ತಿದ್ದಾರೆ. ಪ್ರತಿಭೆ ಬೆಳೆಸಿಕೊಳ್ಳುವ ಆಸಕ್ತಿಯನ್ನು ಕಳೆದುಕೊಳ್ಳುತ್ತಿದ್ದಾರೆ. ಅವರಲ್ಲಿ ಇರಬಹುದಾದ ಕಲಾವಂತಿಕೆೆಗೆ ಯೋಗ್ಯ ವೇದಿಕೆ ನೀಡುವ ಮೂಲಕ ಸಾಂಸ್ಕೃತಿಕ ಮುಖ್ಯವಾಹಿನಿಗೆ ಕರೆತರಬೇಕಾಗಿದೆ ಎಂದರು.

ಈಗಾಗಲೆ ನಮ್ಮ ಟ್ರಸ್ಟ್ ಕಾಲೇಜು ವಿದ್ಯಾರ್ಥಿಗಳಿಗೆ ರಂಗ ತರಬೇತಿ ಶಿಬಿರ ಏರ್ಪಡಿಸಿದೆ. ವಿದ್ಯಾರ್ಥಿಗಳಲ್ಲಿ ಅಡಗಿರುವ ಸುಪ್ತ ಪ್ರತಿಭೆಯ ಅನಾವರಣಕ್ಕಾಗಿ ಯುವ ಮಲೆನಾಡು ಎಂಬ ವಿಶೇಷ ಕಾರ್ಯಕ್ರಮ ರೂಪಿಸಿದೆ. ಮುಖ್ಯವಾಗಿ ಅಳಿವಿನಂಚಿಗೆ ಸಾಗುತ್ತಿರುವ ಕಲಾಪ್ರಕಾರಗಳನ್ನು ಯುವ ತಲೆಮಾರಿಗೆ ಪರಿಚಯಿಸುವ ಕಾರ್ಯವನ್ನು ಸಂಸ್ಥೆ ರೂಪಿಸಿಕೊಂಡು ಬರುತ್ತಿದೆ ಎಂದು ತಿಳಿಸಿದರು.

ಕೃಷಿಕ ಕಾನುವಳ್ಳಿ ಕೃಷ್ಣಪ್ಪ ಗೌಡ ಮಾತನಾಡಿ, ಪಡುಬೈಲು ಗ್ರಾಮ ಮಲೆನಾಡಿನಲ್ಲಿ ಸಾಂಸ್ಕೃತಿಕವಾಗಿ ಗುರುತಿಸಿಕೊಳ್ಳಲು ಆಸಕ್ತಿ ಹೊಂದಿದ್ದು ಪ್ರತಿವರ್ಷ ವೈವಿಧ್ಯಮಯ ಸಾಂಸ್ಕೃತಿಕ ಮೇಳಕ್ಕೆ ಸಾಕ್ಷಿಯಾಗುತ್ತಿದೆ. ಜತೆಗೆ ಸುಸಜ್ಜಿತ ರಂಗಮಂದಿರ ಹೊಂದುವ ಉದ್ದೇಶವಿದೆ ಎಂದರು.