ಶೃಂಗೇರಿ: ಜೆಇಇ, ಸಿಇಟಿ, ಎನ್‌ಇಇಟಿ ಮುಂತಾದ ಸ್ಪರ್ಧಾತ್ಮಕ ಪರೀಕ್ಷೆಗಳು ವಿದ್ಯಾರ್ಥಿಗಳ ಪ್ರತಿಭೆ ಬೆಳವಣಿಗೆಗೆ ದಾರಿ ಮಾಡಿಕೊಡಲಿವೆ. ಪ್ರತಿ ವಿದ್ಯಾರ್ಥಿಯೂ ತರಬೇತಿ ಪಡೆದು ಯಶಸ್ಸು ಸಾಧಿಸಬೇಕು. ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುವುದು ಜೀವನದ ಅತ್ಯಂತ ಮಹತ್ವದ ಘಟ್ಟ ಎಂದು ಆದಿಚುಂಚನಗಿರಿ ಶಾಖಾ ಮಠದ ಶ್ರೀ ಗುಣನಾಥ ಸ್ವಾಮೀಜಿ ಹೇಳಿದರು.
ಆದಿಚುಂಚನಗಿರಿ ಬಿಜಿಎಸ್ ಚರಕ ವಿಜ್ಞಾನ ವಿದ್ಯಾಲಯದಲ್ಲಿ ಸೋಮವಾರ ಆಯೋಜಿಸಿದ್ದ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿಯಲ್ಲಿ ಮಾತನಾಡಿದರು.
ಸ್ಪರ್ಧಾತ್ಮಕ ಪರೀಕ್ಷೆಗಳು ಉದ್ಯೋಗ ಮತ್ತು ಜೀವನ ನಿರ್ವಹಣೆಗೆ ಸಹಕಾರಿ ಆಗಲಿವೆ. ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆ ತೆಗೆದುಕೊಳ್ಳುವ ಕುರಿತು ವ್ಯಾಸಂಗದ ವೇಳೆಯೇ ದೃಢ ನಿರ್ಧಾರ ಮಾಡಬೇಕು. ಸುತ್ತಮುತ್ತ ನಡೆಯುವ ಘಟನೆಗಳ ಸಾಮಾನ್ಯ ಜ್ಞಾನ ಹೊಂದಿರಬೇಕು. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಪಾಸಾಗುವುದು ಸವಾಲು. ಅದನ್ನು ಸಮಚಿತ್ತದಿಂದ ಎದುರಿಸಬೇಕು. ಕಾಲೇಜು ಹಾಗೂ ಅಂತರ ಕಾಲೇಜು ಮಟ್ಟದಲ್ಲಿ ಹಲವು ಸ್ಪರ್ಧೆ, ಕಾರ್ಯಾಗಾರ, ವಿಚಾರ ಸಂಕಿರಣ, ಸಮಯ ನಿರ್ವಹಣೆ ಮೊದಲಾದ ಪರೀಕ್ಷೆಗಳು ಎದುರಾಗುತ್ತವೆ. ಆಗ ಇಲ್ಲಿ ನೀಡಿದ ತರಬೇತಿ ನೆರವಿಗೆ ಬರುವುದು ಎಂದು ಹೇಳಿದರು.
ಬಿಜಿಎಸ್ ಚರಕ ವಿಜ್ಞಾನ ವಿದ್ಯಾಲಯದ ವಿಜ್ಞಾನ ವಿಭಾಗದ ಮುಖ್ಯಸ್ಥ ಸಂಜಯ್ ಮಿರ್ಜಿ ಮಾತನಾಡಿ, ಜೀವನದಲ್ಲಿ ಗುರಿ ಮುಟ್ಟಬಲ್ಲೆ ಎಂಬ ಆತ್ಮವಿಶ್ವಾಸವಿರಬೇಕು. ಆಗ ವಿದ್ಯಾರ್ಥಿ ಪರೀಕ್ಷೆಯನ್ನು ಸುಲಲಿತವಾಗಿ ಎದುರಿಸಲು ಸಾಧ್ಯ. ಸ್ಪರ್ಧಾತ್ಮಕ ಪರೀಕ್ಷೆಗಳ ವಿಷಯಗಳ ಕುರಿತು ಹೆಚ್ಚಿನ ಕಾಳಜಿಯನ್ನು ವಿದ್ಯಾರ್ಥಿಗಳು ಹೊಂದಿರಬೇಕು. ಇದಕ್ಕಾಗಿ ಪದವಿ ವ್ಯಾಸಂಗದ ವೇಳೆಯಲ್ಲಿ ವಿದ್ಯಾರ್ಥಿಗಳು ತಯಾರಿ ಮಾಡಿಕೊಳ್ಳಬೇಕು ಎಂದರು.
ಬಿಜಿಎಸ್ ಕಾಲೇಜಿನ ಪ್ರಾಚಾರ್ಯ ಕೆ.ಸಿ.ನಾಗೇಶ್ ಮಾತನಾಡಿ, ವಿದ್ಯಾರ್ಥಿಗಳು ಕ್ರಿಯಾಶೀಲತೆ ಬೆಳೆಸಿಕೊಂಡು ಸಮಾಜದ ಒಳಿತಿಗಾಗಿ ಪರಿಶ್ರಮಿಸಬೇಕು. ಒಂದೇ ಸಮವಸ್ತ್ರ ಧರಿಸಿ ಕಲಿತ ವಿದ್ಯಾರ್ಥಿಗಳಲ್ಲಿ ಸೌಹಾರ್ದ ಭಾವನೆ ಬೆಳೆಯುತ್ತದೆ. ದೇಶದ ಉನ್ನತಿಗೆ ಯುವಪೀಳಿಗೆ ವಿವೇಚನೆಯಿಂದ ಕಾರ್ಯನಿರ್ವಹಿಸಬೇಕು ಎಂದು ಕಿವಿಮಾತು ಹೇಳಿದರು.
ಅಂತರ ರಾಜ್ಯಗಳಿಂದ ನಿಯೋಜನೆಗೊಂಡ ಪ್ರೊಫೆಸರ್‌ಗಳಾದ ಲಕ್ಷ್ಮಣ್, ಚೇತನ್ ಗೌಡ, ಶ್ರೇಷ್ಠದಾಸ್, ಸೌಮ್ಯ, ದೀಪಾ ಮತ್ತು ಪ್ರಾಧಾಪಕರಾದ ಆಶಾ, ಕಾವ್ಯಾ, ರಂಜಿತಾ, ನಂದಿನಿ, ರೇಷ್ಮಾ, ಶುಭಾ, ಪ್ರಾರ್ಥನಾ, ಸಂಕೇತ್, ಶಿವಕುಮಾರ್, ಧನ್ಯಕುಮಾರ್, ಆದಿತ್ಯ, ಆತ್ಮೀಯಾ ಇದ್ದರು.