ವಿಜಯವಾಣಿ ಸುದ್ದಿಜಾಲ ಆನೇಕಲ್
ವಿದ್ಯಾರ್ಥಿಗಳು ವಿದ್ಯೆಯ ಜತೆಯಲ್ಲಿ ಸಂಸ್ಕೃತಿ, ಸಂಪ್ರದಾಯ ಮತ್ತು ಸಂಸ್ಕಾರವನ್ನು ಬೆಳಸಿಕೊಳ್ಳಬೇಕು ಎಂದು ನಿವೃತ್ತ ಪ್ರಾಂಶುಪಾಲ ಜಿ.ಕೆ.ರಾಮರಾವ್ ಹೇಳಿದರು.
ತಾಲೂಕಿನ ಅತ್ತಿಬೆಲೆಯ ನಂಜುಂಡೇಶ್ವರ ಸಮುದಾಯ ಭವನದಲ್ಲಿ ಗಾಯತ್ರಿ ವಿಪ್ರವೃಂದದ ವತಿಯಿಂದ ಹಮ್ಮಿಕೊಂಡಿದ್ದ ಶಂಕರ ಜಯಂತಿ, ಶಾರದಾ ಪೂಜೆ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದರು.
ವಿದ್ಯಾರ್ಥಿಗಳು ಕೀಳರಿಮೆ ಬೆಳೆಸಿಕೊಳ್ಳಬೇಡಿ. ಸಾಮಾನ್ಯ ಕುಟುಂಬದಲ್ಲಿ ಜನಿಸಿ, ಅಸಾಮಾನ್ಯಸಾಧನೆ ಮಾಡಿದ ಮಹನೀಯರ ಉದಾಹರಣೆಗಳಿವೆ. ಇಂದು ನಮ್ಮೆಲ್ಲರಿಗೂ ಪರಿಚಿತರಾಗಿರುವಂತಹ ಇನ್ಫೋಸಿಯಸ್ ನಾರಾಯಣ ಮೂರ್ತಿ, ವಿಆರ್‌ಎಲ್ ಸಮೂಹದ ವಿಜಯ್ ಸಂಕೇಶ್ವರ, ಎಪಿಜೆ ಅಬ್ದುಲ್ ಕಲಾಂ ಅವರಂತಹಾ ಮಹನೀಯರೂ ಸಾಮಾನ್ಯ ಕುಟುಂಬದಿಂದ ಬಂದಂತವರು. ಭವ್ಯ ಭಾರತದ ಭವಿಷ್ಯ ವಿದ್ಯಾರ್ಥಿಗಳ ಕೈಯಲ್ಲಿದೆ. ಅದಕ್ಕಾಗಿ ಅವರು ಕೌಶಲವನ್ನು ಬೆಳಸಿಕೊಳ್ಳಬೇಕು. ಪ್ರತಿಭೆಗಳಿಗೆ ಪುರಸ್ಕಾರ ಸಿಕ್ಕೇ ಸಿಗುತ್ತದೆ. ವಿದ್ಯಾರ್ಥಿ ಜೀವನದಲ್ಲಿ ಕೇವಲ ಅಂಕಗಳಿಕೆ ಮುಖ್ಯವಲ್ಲ. ವಿದ್ಯೆಯ ಜತೆಯಲ್ಲಿ ತಂದೆ-ತಾಯಿ, ಗುರು-ಹಿರಿಯರನ್ನು ಗೌರವಿಸಬೇಕು. ಯಾವುದೇ ಪದವಿ, ಅಧಿಕಾರ, ಹಣ-ಅಂತಸ್ತು ಬಂದರೂ ನಮ್ಮ ಸಂಪ್ರದಾಯಗಳನ್ನು ಮರೆಯ ಬಾರದು ಎಂದರು.
ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿಯಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಸಂಘದ ವತಿಯಿಂದ ಗೌರವಿಸಲಾಯಿತು.
ಸಂಘದ ಕಾರ್ಯದರ್ಶಿ ಗುರುರಾಜ್ ಕಳ್ಳಿಹಾಳ್, ಕೊಶಾಧ್ಯಕ್ಷ ದತ್ತಾತ್ರಯ ನಾಡಿಗೇರ್, ನಾಗೇಂದ ಶಾಸ್ತ್ರೀ, ರವಿಕುಮಾರ್ ಇದ್ದರು.