ಪ.ಪಂಗಡದ ಮೀಸಲಾತಿ ಶೇ.7.5ಕ್ಕೆ ಹೆಚ್ಚಿಸಿ

ತಲಕಾಡು: ಪರಿಶಿಷ್ಟ ಪಂಗಡದ ಮೀಸಲಾತಿಯನ್ನು ಶೇ.7.5ಗೆ ಹೆಚ್ಚಿಸಬೇಕು ಎಂದು ಆಗ್ರಹಿಸಿ ತಲಕಾಡಿನಲ್ಲಿ ನಾಯಕ ಜನಾಂಗದವರು ಸೋಮವಾರ ಪ್ರತಿಭಟನಾ ಮೆರವಣಿಗೆ ನಡೆಸಿದರು.

ಬೆಳಗ್ಗೆ ಮುಖ್ಯಸರ್ಕಲ್ ಗ್ರಾಮದೇವತೆ ಶ್ರೀ ಬಂಡರಸಮ್ಮ ದೇಗುಲದಿಂದ ಪ್ರತಿಭಟನಾ ಮೆರವಣಿಗೆ ಹೊರಟ ನಾಯಕ ಜನಾಂಗದ ಮುಖಂಡರು ಘೋಷಣೆ ಕೂಗುತ್ತ ಮುಡುಕುತೊರೆ ಮುಖ್ಯರಸ್ತೆಯ ಸೆಸ್ಕ್ ಸರ್ಕಲ್ ಮೂಲಕ ನಾಡಕಚೇರಿ ಬಳಿ ತೆರಳಿ ಪ್ರತಿಭಟನೆ ನಡೆಸಿದರು. ಬಳಿಕ ರಾಜಸ್ವ ನಿರೀಕ್ಷಕ ನಾಗೇಂದ್ರ ಅವರಿಗೆ ಮನವಿ ಸಲ್ಲಿಸಿದರು.

ಜಿಲ್ಲಾ ಪಂಚಾಯಿತಿ ಸದಸ್ಯ ಟಿ.ಎಚ್. ಮಂಜುನಾಥ್ ಮಾತನಾಡಿ, 1956ರಲ್ಲಿ ಪರಿಶಿಷ್ಟ ಪಂಗಡಕ್ಕೆ ಸರ್ಕಾರ ಶೇ.3 ಮೀಸಲಾತಿ ಸೌಲಭ್ಯ ನೀಡಿದ್ದು, ಇಂದಿಗೂ ಅಷ್ಟೇ ಇದೆ. ಆದರೀಗ ರಾಜ್ಯದಲ್ಲಿ ಜನಾಂಗದ ಜನಸಂಖ್ಯೆ 42 ಲಕ್ಷ ದಾಟಿದ್ದು, ಮೀಸಲಾತಿ ಪ್ರಮಾಣ ಹೆಚ್ಚಿಸಿಲ್ಲ. ಕೂಡಲೇ ಮೀಸಲಾತಿಯನ್ನು ಶೇ.7.5ಕ್ಕೆ ಹೆಚ್ಚಿಸಬೇಕು ಎಂದು ಆಗ್ರಹಿಸಿದರು.

ನಾಡಕಚೇರಿಯಲ್ಲಿ ಪರಿಶಿಷ್ಟ ಪಂಗಡದವರಿಗೆ ಜಾತಿ ಪ್ರಮಾಣ ಪತ್ರ ನೀಡಲು ಅಧಿಕಾರಿಗಳು ವಿಳಂಬ ಮಾಡುತ್ತಿದ್ದಾರೆ. ತಲಕಾಡು ಗ್ರಾ.ಪಂ.ವ್ಯಾಪ್ತಿಯಲ್ಲಿ ಒಟಿಸಿ ಸರ್ವೇ ನಡೆಸಿದ್ದು, ಕೆಲವರು ಮಾತ್ರ ಜಾತಿ-ಆದಾಯ ಪ್ರಮಾಣ ಪತ್ರ ನಮೂದು ಮಾಡಿಸಿಕೊಂಡಿದ್ದಾರೆ. ಮಾಹಿತಿ ಕೊರತೆಯಿಂದ ಅನೇಕರು ನಮೂದು ಮಾಡಿಸಿಕೊಂಡಿಲ್ಲ ಎಂದು ಆರೋಪಿಸಿದರು.

ಪ್ರತಿಭಟನೆಯಲ್ಲಿ ನಾಯಕ ಜನಾಂಗದ ಮುಖಂಡ ಜೆ.ರಾಜು, ತಾ.ಪಂ.ಸದಸ್ಯೆ ಶಿವಮ್ಮ, ಗ್ರಾಪಂ ಮಾಜಿ ಅಧ್ಯಕ್ಷ ಮಲ್ಲಯ್ಯ, ಮಲ್ಲಾಣಿ, ಮೋಹನ್, ಯಶೋಧಮ್ಮ, ಮಾಜಿ ಉಪಾಧ್ಯಕ್ಷ ಟಿ.ಸಿ.ಕುಮಾರನಾಯಕ, ತಾಪಂ ಮಾಜಿ ಸದಸ್ಯ ನರಸಿಂಹ ಮಾದನಾಯಕ, ಮುಖಂಡರಾದ ಸತೀಶ, ಟಿ.ಎಂ.ವಿಜಯಕುಮಾರ್, ರಘು, ನಾಗ, ಲೋಕ, ಬಾಯಿಗೋವಿಂದ, ಟಿ.ಸಿ.ಮಹದೇವ, ಸುಂದರನಾಯಕ, ರೈತ ಸಂಘದ ಅಧ್ಯಕ್ಷ ಟಿ.ಎಂ.ದಿನೇಶ್, ರಂಗಸ್ವಾಮಿ, ಕೃಷ್ಣ, ನರಸಿಂಹ, ಹೆಮ್ಮಿಗೆ ಹೊನ್ನನಾಯಕ, ಗ್ರಾಮ ಅರಣ್ಯ ಸಮಿತಿ ಅಧ್ಯಕ್ಷ ಸುಂದರ, ಮೇದನಿ ಸಿದ್ದರಾಜು ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *