More

    ಡಿ.14ರಿಂದ ತಲಕಾಡು ಪಂಚಲಿಂಗ ದರ್ಶನ

    ತಲಕಾಡು: ಡಿಸೆಂಬರ್ 14ರಿಂದ ಹತ್ತು ದಿನಗಳ ಕಾಲ ತಲಕಾಡಿನಲ್ಲಿ ನಡೆಯಲಿರುವ ವಿಶ್ವಪ್ರಸಿದ್ಧ ಪಂಚಲಿಂಗ ದರ್ಶನ ಮಹೋತ್ಸವವನ್ನು ಅಚ್ಚುಕಟ್ಟಾಗಿ ನೆರವೇರಿಸಲು ಜಿಲ್ಲಾಡಳಿತ ವತಿಯಿಂದ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಹೇಳಿದರು.

    ತಲಕಾಡಿನ ಶಿವಪಾರ್ವತಿ ಕಲ್ಯಾಣ ಮಂಟಪದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು. ಕ್ಷೇತ್ರದ ಜನಪ್ರತಿನಿಧಿಗಳು ಹಾಗೂ ಸಾರ್ವಜನಿಕರ ಸಲಹೆ, ಸೂಚನೆ ಆಧರಿಸಿ ಪಂಚಲಿಂಗ ದರ್ಶನ ಮಹೋತ್ಸವ ಯಶಸ್ವಿಗೆ ಜಿಲ್ಲಾಡಳಿತ ಕ್ರಿಯಾಯೋಜನೆ ರೂಪಿಸಿ ಅನುಮೋದನೆಗಾಗಿ ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದರು.

    ಗ್ರಾಮಗಳ ಸಂಪರ್ಕ ರಸ್ತೆಗಳ ಅಭಿವೃದ್ಧಿ, ವಿದ್ಯುತ್ ದೀಪಗಳ ಅಳವಡಿಕೆ, ಶೌಚಗೃಹಗಳ ನಿರ್ಮಾಣ, ನದಿಪಾತ್ರದ ಸೋಪಾನ ಕಟ್ಟೆ ಅಭಿವೃದ್ಧಿ, ನದಿ ನೀರಿಗಿಳಿಯುವ ಭಕ್ತರ ಸುರಕ್ಷತೆಗೆ ಹೆಚ್ಚಿನ ಒತ್ತು ನೀಡಲಾಗುವುದು. ತಲಕಾಡಿನಲ್ಲಿ ಕೈಗೊಳ್ಳಬೇಕಿರುವ ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಆಯಾ ಇಲಾಖೆಯ ಅಧಿಕಾರಿಗಳು ಸಮಗ್ರ ಕ್ರಿಯಾಯೋಜನೆ ತಯಾರಿಸಲು ಸೂಚಿಸಿದರು.

    ಶಾಸಕ ಎಂ.ಅಶ್ವಿನ್‌ಕುಮಾರ್ ಮಾತನಾಡಿ, ಈ ಬಾರಿಯ ಪಂಚಲಿಂಗ ದರ್ಶನ ಮಹೋತ್ಸವಕ್ಕೆ ಪೂರಕವಾಗಿ ತಲಕಾಡನ್ನು ಮತ್ತಷ್ಟು ಆಕರ್ಷಕ ಪ್ರವಾಸಿ ತಾಣವನ್ನಾಗಿ ರೂಪಿಸಲಾಗುವುದು. ಗ್ರಾ.ಪಂ. ದರ್ಜೆಯಿಂದ ಪಟ್ಟಣ ಪಂಚಾಯಿತಿಗೆ ಮೇಲ್ದರ್ಜೆಗೇರಲು ಹಾಗೂ ಶಾಶ್ವತ ಅಭಿವೃದ್ಧಿ ಕೆಲಸಗಳಿಗೆ ಹೆಚ್ಚಿನ ಒತ್ತು ನೀಡಲಾಗುವುದು ಎಂದು ಹೇಳಿದರು.

    ಸಂಚಾರಕ್ಕೆ ಅನುವು ಮಾಡಿಕೊಡಿ: ಕಾವೇರಿಪುರ ಹಾಗೂ ತಡಿಮಾಲಂಗಿ ಸಂಪರ್ಕ ಸೇತುವೆಯನ್ನು ವಾಹನ ಸಂಚಾರಕ್ಕೆ ಶೀಘ್ರ ಅನುವು ಮಾಡಿಕೊಡಬೇಕು. ತಲಕಾಡಿಗೆ ಸಮಗ್ರ ಒಳಚರಂಡಿ (ಯುಜಿಡಿ) ಯೋಜನೆ ಅನುಷ್ಠಾನ, ಚರಂಡಿ ನೀರು ಮಾಧವಮಂತ್ರಿ ನಾಲೆಗೆ ಸೇರ್ಪಡೆಯಾಗದಂತೆ ಕ್ರಮ, ಗ್ರಾಮದ ಒಳಗಡೆ ಬಸ್ ನಿಲ್ದಾಣ, ದೇಗುಲಗಳ ಬಳಿ ವಾಹನ ನಿಲುಗಡೆಗೆ ಸೂಕ್ತ ಸ್ಥಳ, ಹಳೇತಲಕಾಡಿನ ಮುಖ್ಯರಸ್ತೆ ಅಭಿವೃದ್ಧಿ, ನದಿಮೂಲದಿಂದ ನಿರಂತರ ಕುಡಿಯುವ ನೀರು ಸರಬರಾಜು, ಪಟ್ಟಣದಲ್ಲಿ ಹೈಮಾಸ್ಟ್ ದೀಪಗಳ ಅಳವಡಿಕೆ ಹಾಗೂ ಶಾಶ್ವತ ವಿದ್ಯುತ್ ದೀಪಗಳ ಸೌಕರ್ಯವನ್ನು ಕಲ್ಪಿಸಬೇಕೆಂದು ಸಾರ್ವಜನಿಕರು ಒತ್ತಾಯಿಸಿದರು.

    ತಲಕಾಡು ಟೌನ್ ಪಂಚಾಯಿತಿಯಾಗಿ ಮೇಲ್ದರ್ಜೆಗೇರಿಸಬೇಕು. ನದಿ ಸ್ನಾನಘಟ್ಟಗಳ ಅಭಿವೃದ್ಧಿ, ದೇಗುಲಗಳ ಬಳಿ ಪ್ರವಾಸಿಗರಿಗೆ ತಂಗುದಾಣ, ನವಗ್ರಹ ಗುಡಿಯಿಂದ ಹಳೇತಲಕಾಡಿನ ದ್ವಾರಗಣಪತಿ ಗುಡಿಯ ನಾಲೆಯ ಉದ್ದಕ್ಕೂ ರಕ್ಷಣಾ ತಡೆಗೋಡೆ ನಿರ್ಮಾಣ, ಊರೊಳಗಡೆ ಸಂಪರ್ಕಿಸುವ ನಾಲಾ ದಂಡೆಗಳ ಮೇಲೆ ಬೈಪಾಸ್ ರಸ್ತೆ ಅಭಿವೃದ್ಧಿ, ಮುಖ್ಯರಸ್ತೆ ಅಂಚಿನಲ್ಲಿ ಎಸ್‌ಎಸ್ ರೈಲಿಂಗ್ಸ್ ಅಳವಡಿಕೆ, ಫುಟ್‌ಪಾತ್ ನಿರ್ಮಾಣ ಸೇರಿದಂತೆ ಹಲವು ಅಭಿವೃದ್ಧಿ ಕಾರ್ಯಗಳನ್ನು ಕೈಗೆತ್ತಿಕೊಳ್ಳಬೇಕೆಂಬ ಬೇಡಿಕೆಯನ್ನು ಜನರು ಸಭೆಯ ಮುಂದಿಟ್ಟರು.

    ದೇವಾಲಯಕ್ಕೆ ಡಿಸಿ ಭೇಟಿ: ಪೂರ್ವಭಾವಿ ಸಭೆಗೆ ಮುನ್ನ ಹಳೇತಲಕಾಡಿನ ಶ್ರೀ ವೈದ್ಯನಾಥೇಶ್ವರ ದೇವಾಲಯಕ್ಕೆ ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಭೇಟಿ ನೀಡಿದರು. ಈ ವೇಳೆ ಅವರನ್ನು ಮಂಗಳವಾದ್ಯ ಸಮೇತ ಬರಮಾಡಿಕೊಳ್ಳಲಾಯಿತು. ಇಲ್ಲಿ ವಿಶೇಷ ಪೂಜೆ ಸಲ್ಲಿಸಿದ ನಂತರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಿಷ್ಯಂತ್ ಜತೆ ವಿಜಯಪುರದ ಶ್ರೀ ಅರ್ಕೇಶ್ವರಸ್ವಾಮಿ ಹಾಗೂ ಮುಡುಕುತೊರೆ ಶ್ರೀ ಭ್ರಮರಾಂಬ ಮಲ್ಲಿಕಾರ್ಜುನಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿದರು.

    ಉಪವಿಭಾಗಾಧಿಕಾರಿ ಡಾ.ಎಂ.ಸಿ.ವೆಂಕಟರಾಜು, ಜಿಲ್ಲಾ ಪಂಚಾಯಿತಿ ಸದಸ್ಯ ಟಿ.ಎಚ್.ಮಂಜುನಾಥ್, ಲೋಕೋಪಯೋಗಿ ಇಲಾಖೆಯ ಇಇ ವಿನಯ್ ಕುಮಾರ್, ಎಇಇ ಶಿವರಾಜು, ತಾಪಂ ಅಧ್ಯಕ್ಷ ಉಮೇಶ್, ಗ್ರಾಪಂ ಅಧ್ಯಕ್ಷೆ ಕವಿತಾ ವಿಜಯಕುಮಾರ್, ದೇಗುಲದ ಇಒ ರಾಜಶೇಖರ್, ತಾಪಂ ಇಒ ಜೆರಾಲ್ಡ್ ರಾಜೇಶ್, ತಹಸೀಲ್ದಾರ್ ನಾಗೇಶ್, ಸರ್ಕಲ್ ಇನ್ಸ್‌ಪೆಕ್ಟರ್ ಎಂ.ಆರ್.ಲವ, ಪಿಎಸ್‌ಐ ಬಿ.ಬಸವರಾಜು ಇತರರು ಭಾಗವಹಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts