ಭಕ್ತರಿಗೆ ಅಗತ್ಯ ಮೂಲ ಸೌಕರ್ಯ ಕಲ್ಪಿಸಲು ಕ್ರಮ

ತಲಕಾಡು: ತಲಕಾಡಿನಲ್ಲಿ 2020ರಲ್ಲಿ ವಿಶ್ವ ಪ್ರಸಿದ್ಧ ‘ಪಂಚಲಿಂಗ ದರ್ಶನ’ ಮಹೋತ್ಸವ ನಡೆಯಲಿರುವ ಹಿನ್ನೆಲೆಯಲ್ಲಿ ದರ್ಶನಕ್ಕೆ ಆಗಮಿಸುವ ಭಕ್ತರಿಗೆ ಅಗತ್ಯ ಮೂಲಸೌಕರ್ಯ ಕಲ್ಪಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಶಾಸಕ ಎಂ.ಅಶ್ವಿನ್‌ಕುಮಾರ್ ತಿಳಿಸಿದರು.

ಸೋಮವಾರ ತಾಲೂಕು ಆಡಳಿತ ಅಧಿಕಾರಿಗಳೊಂದಿಗೆ ತಲಕಾಡಿಗೆ ಭೇಟಿ ನೀಡಿ ಸಾರ್ವಜನಿಕರ ಸಮಸ್ಯೆ ಆಲಿಸಿ ಮಾತನಾಡಿದ ಅವರು, ತಲಕಾಡು ಸುತ್ತಮುತ್ತ ಇರುವ ಪ್ರೇಕ್ಷಣೀಯ ಸ್ಥಳಗಳ ಅಭಿವೃದ್ಧಿಗೆ ಕ್ರಮ ವಹಿಸಲಾಗುವುದು ಎಂದರು.

ತಲಕಾಡು ಹೋಬಳಿಯ ಪಂಚಾಯಿತಿವಾರು ಕುಂದುಕೊರತೆಗಳ ನಿವಾರಣೆಗೆ ಎಲ್ಲ ಇಲಾಖೆಯ ಅಧಿಕಾರಿಗಳನ್ನು ಸ್ಥಳಕ್ಕೆ ಕರೆದುಕೊಂಡು ಬಂದು ಸಭೆ ಮಾಡಿ ಸಾರ್ವಜನಿಕರ ಸಮಸ್ಯೆಗಳ ಪರಿಹಾರಕ್ಕೆ ಮುಂದಾಗಿದ್ದೇನೆ ಎಂದು ತಿಳಿಸಿದರು.

ಪಂಚಾಯಿತಿವಾರು ಸಭೆ ಆಯೋಜಿಸಿ ಕುಡಿಯುವ ನೀರು, ರಸ್ತೆ, ಚರಂಡಿ ನಿರ್ಮಾಣ ಸೇರಿದಂತೆ ಗ್ರಾಮಗಳಿಗೆ ಅಗತ್ಯ ಮೂಲ ಸೌಲಭ್ಯ ಕಲ್ಪಿಸಲು ಹಾಗೂ ಜನರ ಬಳಿಯೇ ಬಂದು ಕೆಲಸ ಮಾಡುವ ಹೊಸ ಪ್ರಯತ್ನಕ್ಕೆ ಕಾರ್ಯಕ್ರಮ ರೂಪಿಸಲಾಗಿದೆ ಎಂದು ಶಾಸಕರು ವಿವರಿಸಿದರು.

ಇದಕ್ಕೂ ಮುನ್ನ ಪ್ರವಾಸಿ ಮಂದಿರದಲ್ಲಿ ಅಧಿಕಾರಿಗಳ ಜತೆ ಸಭೆ ನಡೆಸಿದ ಶಾಸಕರು ಬಳಿಕ ತಲಕಾಡು ಶ್ರೀ ವೈದ್ಯನಾಥೇಶ್ವರ ದೇವಾಲಯಕ್ಕೆ ತೆರಳಿ ಪೂಜೆ ಸಲ್ಲಿಸಿದರು.

ತಹಸೀಲ್ದಾರ್ ನಾಗಪ್ರಶಾಂತ್, ಪಿಡಬ್ಲೂಡಿ ಎಇಇ ಶಿವಶಂಕರ್, ಜೆಇ, ಶಿವಸ್ವಾಮಿ, ಬನ್ನೂರು ನಾಲಾ ಎಇಇ ಶಿವರಾಜು, ತಾ ಪಂ ಸದಸ್ಯೆ ಶಿವಮ್ಮ, ರತ್ನರಾಜು, ಗ್ರಾಪಂ ಉಪಾಧ್ಯಕ್ಷ ಎಚ್.ರಾಜು, ಪಿಡಿಒ ಧರಣೇಶ್, ಎಎಸ್‌ಐ ರಮೇಶ್, ಉಪ ತಹಸೀಲ್ದಾರ್ ನರಸಿಂಹಯ್ಯ, ರಾಜಸ್ವ ನಿರೀಕ್ಷಕ ನಾಗೇಂದ್ರ, ತಿ.ನರಸೀಪುರ ಮೀನುಗಾರಿಕೆ ಸಹಾಯಕ ನಿರ್ದೇಶಕಿ ಭವಾನಿ, ಮುಖಂಡರಾದ ಕುಕ್ಕೂರು ಎಲ್.ಉಮಾಪತಿ, ಯಶೋಧಮ್ಮ, ಟಿ.ಸಿ.ಮಹದೇವ, ರಮೇಶ್, ಹೆಮ್ಮಿಗೆ ಹೊನ್ನ ನಾಯಕ, ಟಿ.ಎಂ.ದಿನೇಶ್, ಬ್ಯಾಂಕ್ ಶ್ರೀನಿವಾಸ್, ಅರಣ್ಯ ಸಮಿತಿ ಅಧ್ಯಕ್ಷ ಸುಂದರ್, ತಲಕಾಡು ಉಪವಲಯ ಅರಣ್ಯಾಧಿಕಾರಿ ಉಮೇಶ್, ಜಿಪಂ ಜೆಇ ದೇವರಾಜು ಹಾಜರಿದ್ದರು.

ವಿವಿಧೆಡೆ ಪರಿಶೀಲನೆ: ಸಭೆ ಬಳಿಕ ಮಾಧವಮಂತ್ರಿ ನಾಲೆಗೆ ತ್ಯಾಜ್ಯದ ನೀರು ಹಾಗೂ ಪ್ಲಾಸ್ಟಿಕ್ ಬಾಟಲಿಗಳು ಸೇರ್ಪಡೆಯಾಗುತ್ತಿರುವ ಸ್ಥಳಕ್ಕೆ ತೆರಳಿ ಪರಿಶೀಲಿಸಿದ ಶಾಸಕ ಅಶ್ವಿನ್‌ಕುಮಾರ್, ಕಲುಷಿತ ನೀರು ನಾಲೆ ಸೇರದಂತೆ ಅಗತ್ಯ ಕ್ರಮ ಕೈಗೊಳ್ಳುವಂತೆ ಪಿಡಿಒ ಧರಣೇಶ್‌ಗೆ ಸೂಚಿಸಿದರು. ಅಗತ್ಯವಿದ್ದರೆ ಯೋಜನೆ ಅನುಷ್ಠಾನಕ್ಕೆ ಶಾಸಕರ ನಿಧಿಯಿಂದ 5 ಲಕ್ಷ ರೂ. ಅನುದಾನ ನೀಡುವುದಾಗಿ ಭರವಸೆ ನೀಡಿದರು.

ಬಳಿಕ ನಿಸರ್ಗಧಾಮದ ಬಳಿ ತೆರಳಿ ಕಾವೇರಿಗೆ ನದಿಗೆ ಅಡ್ಡಲಾಗಿ 50 ಕೋಟಿ ರೂ.ವೆಚ್ಚದಲ್ಲಿ ನಿರ್ಮಿಸುತ್ತಿರುವ ಸೇತುವೆ ಕಾಮಗಾರಿ ಪರಿಶೀಲಿಸಿದರು. ಇಲ್ಲಿನ ನದಿಪಾತ್ರಕ್ಕೆ ಆಗಮಿಸುವ ಪ್ರವಾಸಿಗರಿಗೆ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲು 17 ಲಕ್ಷ ರೂ. ವೆಚ್ಚದಲ್ಲಿ ಓವರ್‌ಹೆಡ್ ಟ್ಯಾಂಕ್ ನಿರ್ಮಿಸಿ ಎರಡು ವರ್ಷಗಳಾಗಿದ್ದು, ಇನ್ನೂ ಉದ್ಘಾಟನೆ ಭಾಗ್ಯ ಕಂಡಿಲ್ಲ. ಶೌಚಗೃಹಗಳು ನಿರ್ವಹಣೆ ಇಲ್ಲದೆ ದುಸ್ಥಿತಿಯಲ್ಲಿವೆ ಎಂದು ವ್ಯಾಪಾರಸ್ಥರು ದೂರಿನ ಸುರಿಮಳೆಗೈದರು. ಈ ಬಗ್ಗೆ ಕ್ರಮ ವಹಿಸುವುದಾಗಿ ಶಾಸಕರು ಭರವಸೆ ನೀಡಿದರು.

ಹಳೇತಲಕಾಡಿಗೆ ಭೇಟಿ ನೀಡಿ ಸಾರ್ವಜನಿಕರ ಮನವಿ ಆಲಿಸಿದ ಶಾಸಕರು, ಸಮುದಾಯ ಆರೋಗ್ಯ ಕೇಂದ್ರಕ್ಕೆ ತೆರಳಿ ಕುಂದು ಕೊರತೆ ಪರಿಶೀಲಿಸಿದರು.ನದಿಮೂಲದ ಸ್ವಜಲಧಾರ ಘಟಕದಿಂದ ಇಲ್ಲಿನ ಓವರ್ ಹೆಡ್‌ಟ್ಯಾಂಕ್‌ಗೆ ನೀರು ತಲುಪಿಲ್ಲ. ನನೆಗುದಿಗೆ ಬಿದ್ದಿರುವ ಹಳೇತಲಕಾಡು ಊರೊಳಗಿನ ಮುಖ್ಯರಸ್ತೆ ನಿರ್ಮಾಣ ಕಾಮಗಾರಿಯನ್ನು ಶೀಘ್ರ ಕೈಗೆತ್ತಿಕೊಳ್ಳುವಂತೆ ಜನತೆ ಮನವಿ ಮಾಡಿದರು.

Leave a Reply

Your email address will not be published. Required fields are marked *