ಆರ್.ಬಿ.ಹಳ್ಳಿ ದಿವಾಕರ್ ಮಳವಳ್ಳಿ
ತಾಲೂಕಿನ ಕಿರುಗಾವಲು ಹೋಬಳಿ ತಳಗವಾದಿ ಗ್ರಾಮ ಜಾನಪದ ಕಲೆಗಳ ತವರೂರಾಗಿ ಹಲವು ವೈವಿಧ್ಯಗಳಿಂದ ಕೂಡಿದೆ.
ಭೂಲೋಕದ ಸ್ವಸ್ಥಾನ ಮಾರೇಹಳ್ಳಿ ದೇವಸ್ಥಾನಕ್ಕೆ ತೆರಳಲು ಕೋರೆಹಲ್ಲಿನ ನರಸಿಂಹಸ್ವಾಮಿ ವೈಕುಂಠದಿಂದ ಭೂಮಿಗೆ ಇಳಿದು ಬರುವಾಗ ಮೊದಲು ತಳವೂರಿದ ಸ್ಥಳ ತಳಗವಾದಿ. ಈ ಗ್ರಾಮದ ಹೆಸರು ಹಲವು ಪುರಾಣ ಕಥೆಗಳಲ್ಲಿ ಉಲ್ಲೇಖವಾಗಿದೆ. ಗ್ರಾಮ ಪಂಚಾಯಿತಿ ಕೇಂದ್ರಸ್ಥಾನವಾಗಿದ್ದು, 10 ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಇದೆ. ಬಹುಪಾಲು ರೈತ ವರ್ಗವಿದ್ದು ಭತ್ತ, ಕಬ್ಬು, ರೇಷ್ಮೆ, ತೋಟಗಾರಿಕೆ ಬೆಳೆಗಳನ್ನು ಪ್ರಮುಖವಾಗಿ ಬೆಳೆಯುತ್ತಾರೆ. ಗ್ರಾಮದ ಸುತ್ತಲೂ ಮನ ಸೆಳೆಯುವ ಕೆರೆ-ಕಟ್ಟೆಗಳಿವೆ. ಪೂರ್ವಜರು ಕಲಿತ ಜಾನಪದ ಕಲೆಗಳನ್ನು ಕರಗತ ಮಾಡಿಕೊಂಡು ಪೂಜಾಕುಣಿತ, ತಮಟೆ, ದೊಣ್ಣೆವರಸೆ, ಕೋಲಾಟ, ಮಂಗಳವಾದ್ಯ, ಪಟಕುಣಿತ, ಚಿಲಿಪಿಲಿ ಬೊಂಬೆ ಸೇರಿದಂತೆ ಹಲವು ಕಲೆಗಳನ್ನು ಕಲಿತು ಮುನ್ನಡೆಸುತ್ತಿರುವ ಕಲಾವಿದರಿದ್ದಾರೆ.
ಇವುಗಳಲ್ಲಿ ಪೂಜಾ ಕುಣಿತದಲ್ಲಿ ಹೆಸರುವಾಸಿಯಾಗಿದ್ದ ಚೀರು ಕುನ್ನಯ್ಯ, ಪುತ್ರಿ ಸವಿತಾ ಚೀರುಕುನ್ನಯ್ಯ ತಮ್ಮ ತಂದೆಯ ಪೂಜಾ ಕುಣಿತವನ್ನು ಮುಂದುವರಿಸಿದ್ದು, ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೀರ್ತಿ ಗಳಿಸಿದ್ದಾರೆ. ತಳಗವಾದಿ ಜಿಲ್ಲಾ ಪಂಚಾಯಿತಿ ಕ್ಷೇತ್ರವೂ ಆಗಿದೆ.
ಸಹಕಾರ ಕ್ಷೇತ್ರದಲ್ಲಿ ಕೀರ್ತಿ: ತಳಗವಾದಿ ಗ್ರಾಮದಲ್ಲಿರುವ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಒಂದು ಕಾಲಕ್ಕೆ ಉತ್ತಮ ವಹಿವಾಟು ನಡೆಸುವ ಮೂಲಕ ರಾಜ್ಯದಲ್ಲಿ ಮಾದರಿ ಸೊಸೈಟಿ ಎಂಬ ಹೆಗ್ಗಳಿಕೆಯನ್ನು ಪಡೆದು ಸಹಕಾರ ಕ್ಷೇತ್ರದ ಹಲವು ಪ್ರಶಸ್ತಿಗಳನ್ನು ಪಡೆದುಕೊಂಡಿತ್ತು.

15 ವರ್ಷಗಳ ಹಿಂದೆಯೇ ಗ್ರಾಮದಲ್ಲಿ ಐದಂತಸ್ತಿನ ಬಹುಮಹಡಿ ವಾಣಿಜ್ಯ ಸಂಕೀರ್ಣ ನಿರ್ಮಿಸಿ ಶಾಪಿಂಗ್ ಮಾಲ್ ತೆರೆಯಲಾಗಿತ್ತು. ಸಂಘದಲ್ಲಿ ರಿಯಾಯಿತಿ ದರದಲ್ಲಿ ಕೃಷಿ ಪರಿಕರಗಳು, ರಸಗೊಬ್ಬರ, ದಿನಸಿ ಸಾಮಗ್ರಿಗಳನ್ನು ರಿಯಾಯಿತಿ ದರದಲ್ಲಿ ಮಾರಾಟ ಮಾಡುವ ಮೂಲಕ ಸುತ್ತಲಿನ ಹತ್ತಾರು ಗ್ರಾಮಗಳು ಸೇರಿದಂತೆ ಹೊರ ತಾಲೂಕುಗಳಿಂದಲೂ ಗ್ರಾಹಕರ ಗಮನ ಸೆಳೆದಿತ್ತು. ದಿನವಹಿ ಲಕ್ಷಾಂತರ ರೂ.ಇಲ್ಲಿನ ಸೊಸೈಟಿಯಲ್ಲಿ ವಹಿವಾಟು ನಡೆಯುತ್ತಿತ್ತು. ಸುತ್ತಲ ಗ್ರಾಮಗಳಿಗೆ ಪ್ರಮುಖ ವಾಣಿಜ್ಯ ಕೇಂದ್ರವಾಗಿತ್ತು. ಪ್ರಸ್ತುತ ಸೊಸೈಟಿ ವಹಿವಾಟು ಸ್ಥಗಿತಗೊಂಡಿದೆ.
ದೇವಾಲಯಗಳ ಬೀಡು: ಶತಮಾನಗಳ ಇತಿಹಾಸವನ್ನು ಸಾರುವ ಹತ್ತಾರು ದೇವಸ್ಥಾನಗಳು, ಶಿಲಾ ಶಾಸನಗಳು ಊರಿನ ಪ್ರಮುಖ ದ್ವಾರದಲ್ಲೇ ಇವೆ. ಉಮಾಮಹೇಶ್ವರಿ, ಹಿರಿಯಮ್ಮ, ಚೌಡಮ್ಮ, ಅಂತರಳ್ಳಿಯಪ್ಪ, ಈಶ್ವರ, ಬಸವೇಶ್ವರ, ಪಟ್ಟಲದಮ್ಮ, ಮೂಗಮಸಣಮ್ಮ, ಮಂಚಮ್ಮ, ಕಬ್ಬಾಳಮ್ಮ, ಮಳವಳ್ಳಮ್ಮ, ಕುಂಟುಬೋರಪ್ಪ, ಮೂಕನಬಸಪ್ಪ, ಮಾರಮ್ಮನ ದೇವಸ್ಥಾನಗಳಿವೆ. ವರ್ಷದಲ್ಲಿ ಎರಡು ಬಾರಿ ಪಟ್ಟಲದಮ್ಮ ಮತ್ತು ಬಸವೇಶ್ವರ ಕೊಂಡೋತ್ಸವ ಮತ್ತು 9 ವರ್ಷಕ್ಕೊಮ್ಮೆ ಉಮಾಮಹೇಶ್ವರಿ ಕೊಂಡೋತ್ಸವ ನಡೆಯುತ್ತದೆ.
ಶೈಕ್ಷಣಿಕವಾಗಿ ಅಭಿವೃದ್ಧಿ: ಗ್ರಾಮದಲ್ಲಿ ಹಲವು ಖಾಸಗಿ ಶಿಕ್ಷಣ ಸಂಸ್ಥೆಗಳಿದ್ದರೂ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆ ಹಾಗೂ ಪದವಿಪೂರ್ವ ಕಾಲೇಜಿನಲ್ಲಿ ನೂರಾರು ಮಕ್ಕಳು ಅಧ್ಯಯನ ಮಾಡುತ್ತಿದ್ದಾರೆ. ಗ್ರಾಮದ ಯುವಕರು ವಿದ್ಯಾರ್ಥಿಗಳ ಸಂಘ ರಚಿಸಿಕೊಂಡು ಸರ್ಕಾರಿ ಶಾಲೆಯ ಅಭಿವೃದ್ಧಿಗೆ ಸದಾ ಸಹಕಾರ ನೀಡುತ್ತಿದ್ದಾರೆ.
ಹೈನುಗಾರಿಕೆಯಲ್ಲೂ ಮುಂಚೂಣಿ: ಬಹುಪಾಲು ಕುಟುಂಬಗಳು ಕೃಷಿಯ ಜತೆಗೆ ಹೈನುಗಾರಿಕೆ ಅವಲಂಬಿಸಿವೆ. ನಿತ್ಯ ಎರಡು ಸಾವಿರಕ್ಕೂ ಅಧಿಕ ಲೀಟರ್ ಹಾಲು ಉತ್ಪಾದನೆಯಾಗುತ್ತಿದೆ.
