ಈ ಬೀಚ್​ನಲ್ಲಿ ಸೆಲ್ಫಿ ತೆಗೆದುಕೊಳ್ಳುವವರಿಗೆ ಮರಣ ದಂಡನೆಯಂತೆ; ಅದಕ್ಕೆ ಕಾರಣ ಗೊತ್ತಾ?

ಬ್ಯಾಂಕಾಕ್​: ಥಾಯ್​ಲೆಂಡ್​ನ ಫುಕೆಟ್​ ನಲ್ಲಿರುವ ಮಾಯ್ ಖಾವೊ ಬೀಚ್ನಲ್ಲಿ ಫೋಟೋ ಅಥವಾ ಸೆಲ್ಫಿ ತೆಗೆದುಕೊಂಡರೆ ನಿಮಗೆ ಜೈಲು ಶಿಕ್ಷೆ ಮತ್ತು ದಂಡ ವಿಧಿಸಬಹುದು. ಕೆಲವೊಂದು ಗಂಭೀರ ಪ್ರಕರಣಗಳಲ್ಲಿ ಮರಣದಂಡನೆ ಶಿಕ್ಷೆಯನ್ನು ವಿಧಿಸಬಹುದಾಗಿದೆ.

ಫುಕೆಟ್​ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೊಂದಿಕೊಂಡಂತೆ ಮಾಯ್​ ಖಾವೋ ಬೀಚ್ ಇದ್ದು, ವಿಮಾನಗಳು ಇಳಿಯುವಾಗ ಅವುಗಳೊಂದಿಗೆ ಫೋಟೋ ತೆಗೆಸಿಕೊಳ್ಳಲು ಪ್ರವಾಸಿಗರು ಮುಗಿಬೀಳುತ್ತಾರೆ. ಈ ಹಿನ್ನೆಲೆಯಲ್ಲಿ ಈ ಬೀಚ್​ ಸಾಕಷ್ಟು ಪ್ರಖ್ಯಾತವಾಗಿದ್ದು, ಪ್ರತೀ ವರ್ಷ ಲಕ್ಷಾಂತರ ಪ್ರವಾಸಿಗರು ಭೇಟಿ ನೀಡುತ್ತಾರೆ.

ಆದರೆ, ಪ್ರವಾಸಿಗರು ಹೀಗೆ ಫೋಟೋ ತೆಗೆದುಕೊಳ್ಳುವುದರಿಂದ ಪೈಲಟ್​ಗಳ ಏಕಾಗ್ರತೆಗೆ ಭಂಗ ಉಂಟಾಗುತ್ತಿದೆ. ಇದರಿಂದ ವಿಮಾನ ಪತನವಾಗುವ ಸಾಧ್ಯತೆ ಇರುತ್ತದೆ. ಈ ಹಿನ್ನೆಲೆಯಲ್ಲಿ ವಿಮಾನ ನಿಲ್ದಾಣದ ಸಮೀಪದ ಮಾಯ್​ ಖಾವೋ ಬೀಚ್​ ಪ್ರದೇಶವನ್ನು ಸಂರಕ್ಷಿತ ಪ್ರದೇಶ ಎಂದು ಗುರುತಿಸಲಾಗಿದ್ದು, ಇಲ್ಲಿ ಫೋಟೋ ತೆಗೆಯುವುದು, ಸೆಲ್ಫಿ ತೆಗೆದುಕೊಳ್ಳುವುದು, ಡ್ರೋನ್​ ಹಾರಿಸುವುದು, ಫ್ಲಾಷ್​ ಲೈಟ್​ಗಳನ್ನು ಬಳಸುವುದನ್ನು ನಿಷೇಧಿಸಲು ತೀರ್ಮಾನಿಸಲಾಗಿದೆ.

ಶೀಘ್ರದಲ್ಲೇ ಹೊಸ ನಿಯಮಾವಳಿಗಳು ಜಾರಿಗೆ ಬರಲಿವೆ. ಆ ನಂತರ ಲ್ಯಾಂಡ್​ ಆಗುತ್ತಿರುವ ವಿಮಾನದೊಂದಿಗೆ ಫೋಟೋ ತೆಗೆದುಕೊಂಡರೆ ಅವರಿಗೆ ಜೈಲು ಶಿಕ್ಷೆ ಮತ್ತು ದಂಡ ವಿಧಿಸಲಾಗುವುದು. ಗಂಭೀರ ಪ್ರಕರಣಗಳಲ್ಲಿ ಮರಣ ದಂಡನೆಯನ್ನೂ ವಿಧಿಸಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. (ಏಜೆನ್ಸೀಸ್​)