ಬೆಂಗಳೂರು: ಜೀವನದಲ್ಲಿ ನಂಬಿಕೆ ಮುಖ್ಯ. ನಮ್ಮವರು ನಮ್ಮ ಮೇಲೆಯೇ ನಂಬಿಕೆ ಕಳೆದುಕೊಂಡಾಗ ನಾವು ಅನುಭವಿಸುವ ಭಾವ ಹೇಳತೀರದು. ಇಲ್ಲಿ ರವಿ (ಧರ್ಮ ಕೀರ್ತಿರಾಜ್) ಸ್ಥಿತಿಯೂ ಹಾಗೇ. ಮುದ್ದಾದ ಹೆಂಡತಿ ಅಪ್ಸರಾ (ನಿಖಿತಾ) ಜತೆ ರವಿ ಖುಷಿಯಾಗಿ ಜೀವನ ನಡೆಸುತ್ತಿರುತ್ತಾನೆ. ಇಬ್ಬರ ಮಧ್ಯೆ ಮೂರನೆಯವನವನಾಗಿ ವರುಣ್ (ಸುಮನ್ ಶರ್ಮಾ) ಎಂಟ್ರಿಯಾಗುತ್ತದೆ. ಸುಖ ಸಂಸಾರದಲ್ಲಿ ದಂಪತಿಯ ನಡುವೆ ಮತ್ತೊಬ್ಬ ತಲೆ ಹಾಕಿದಾಗ ಎದುರಾಗುವ ಸಮಸ್ಯೆಗಳೇ ಇಲ್ಲಿ ರವಿ ಮತ್ತು ಅಪ್ಸರಾ ನಡುವೆಯೂ ಉಂಟಾಗುತ್ತವೆ. ಅನೈತಿಕ ಸಂಬಂಧ ನೈತಿಕ ಜೀವನವನ್ನು ಹಾಳು ಮಾಡುತ್ತಾ? ಅಥವಾ ಅದೆಲ್ಲವನ್ನೂ ಮೀರಿ ಈ ಜೋಡಿಯ ಪ್ರೀತಿ ಗೆಲ್ಲುತ್ತಾ? ಹಾಗಾದರೆ ಮುಂದೇನು? ಎಂಬುದೇ ‘ಟಕಿಲಾ’ ಸ್ಟೋರಿ.

ನಿರ್ದೇಶಕ ಪ್ರವೀಣ್ ನಾಯಕ್ ‘ಟಕಿಲಾ’ ಮೂಲಕ ಮತ್ತಷ್ಟು ಕಿಕ್ ಕೊಡುವ ಸ್ಟೋರಿ ಹೇಳಬಹುದಿತ್ತು. ಬದಲಾಗಿ ನಂಬಿಕೆ ಹಾಗೂ ಅಪನಂಬಿಕೆ ವಿಚಾರವನ್ನೇ ಪ್ರಧಾನವಾಗಿಟ್ಟುಕೊಂಡಿದ್ದಾರೆ. ಕಥೆಗೆ ಇನ್ನೊಂದಿಷ್ಟು ಟ್ವಿಸ್ಟ್ ನೀಡಿದ್ದರೆ, ಸಿನಿಮಾ ಇನ್ನಷ್ಟು ಆಪ್ತ ಎನಿಸುತ್ತಿತ್ತು. ಮೊದಲರ್ಧ ರವಿ ಮತ್ತು ಆಪ್ಸರಾ ರೊಮ್ಯಾಂಟಿಕ್ ಜೀವನದ ಕ್ಷಣಗಳಿಗೆ ಸೀಮಿತವಾಗಿಸಿದ್ದು, ದ್ವಿತೀಯಾರ್ಧದಲ್ಲಿ ಕಥೆ ತೆರೆದುಕೊಳ್ಳುತ್ತದೆ. ಅಷ್ಟರಲ್ಲಾಗಲೇ ಕ್ಲೈಮ್ಯಾಕ್ಸ್ ಸಮೀಪಿಸಿಬಿಡುತ್ತದೆ. ಅಂತಿಮದಲ್ಲಿ ಜೀವನದ ಬೋಧನೆ ಮಾಡಿದ್ದಾರೆ. ಆದರೆ, ಸಿನಿಮಾ ನೋಡಲು ಸ್ವಲ್ಪ ತಾಳ್ಮೆ ಬಯಸುತ್ತದೆ. ಚಿತ್ರದಲ್ಲಿ ಹಾಸ್ಯ, ಎಮೋಷನ್ ದೃಶ್ಯಗಳನ್ನು ಸೇರ್ಪಡೆ ಮಾಡಿದ್ದರೆ ಮತ್ತಷ್ಟು ಮನರಂಜನಾತ್ಮಕವಾಗಿರುತ್ತಿತ್ತು ಎನಿಸುತ್ತದೆ.
ಧರ್ಮ ಕೀರ್ತಿರಾಜ್ ಸೈಲೆಂಟ್ ಆಗಿ ಪಾತ್ರ ಮುಗಿಸಿದ್ದಾರೆ. ಮತ್ತೊಮ್ಮೆ ತಾವು ಕ್ಯಾಡ್ಬರಿ ಚಾಕೊಲೇಟ್ ಎಂದು ಪ್ರೂವ್ ಮಾಡಿದ್ದಾರೆ. ನಿಖಿತಾ ಸ್ವಾಮಿ ರೊಮ್ಯಾಂಟಿಕ್ ದೃಶ್ಯಗಳಲ್ಲಿ ಗಮನ ಸೆಳೆಯುತ್ತಾರೆ. ಕೆಲವೆಡೆ ಅಭಿನಯ ಕೃತಕ ಎನಿಸಿಬಿಡುತ್ತದೆ. ಸುಮನ್ ಶರ್ಮಾ ಪಾತ್ರ ಕಥೆಯಲ್ಲಿ ಆವರಿಸಿದ್ದು, ಅವರ ಕೆಲವು ದೃಶ್ಯಗಳು ಅನವಶ್ಯಕ ಎನಿಸುತ್ತದೆ. ನಾಗೇಂದ್ರ ಅರಸ್, ಕೋಟೆ ಪ್ರಭಾಕರ್ ಪಾತ್ರಗಳು ಒಂದೆರೆಡು ದೃಶ್ಯಗಳಿಗೆ ಸೀಮಿತವಾಗಿದೆ.