ವರ್ಷದ ಹಿನ್ನೋಟ|ವಿದೇಶಾಂಗ ನೀತಿಗೆ ಬಲ; ಹೆಚ್ಚಿದ ದೇಶದ ವರ್ಚಸ್ಸು

ವಿದೇಶಾಂಗ ನೀತಿಗೆ ಬಲ ತುಂಬಿದ ಭಾರತ ತನ್ನ ನಿಲುವುಗಳನ್ನು ಜಾಗತಿಕ ವೇದಿಕೆಯಲ್ಲಿ ಪರಿಣಾಮಕಾರಿಯಾಗಿ ಮಂಡಿಸಿತು. ಪ್ರಧಾನಿ ನರೇಂದ್ರ ಮೋದಿ ಪ್ರಮುಖ ಜಾಗತಿಕ ನಾಯಕರನ್ನು ಈ ವರ್ಷ ಒಂದಕ್ಕಿಂತ ಹೆಚ್ಚು ಬಾರಿ ಭೇಟಿಯಾಗಿ ಮಾತುಕತೆ ನಡೆಸಿದ್ದಲ್ಲದೆ, ಮಹತ್ವದ ಒಪ್ಪಂದಗಳಿಗೆ ಅಂಕಿತ ಹಾಕಿದರು. ನೆರೆರಾಷ್ಟ್ರಗಳೊಂದಿಗಿನ ಸ್ನೇಹವನ್ನು ಮತ್ತಷ್ಟು ಬಲಿಷ್ಠ ಪಡಿಸಿಕೊಂಡ ಅಮೆರಿಕ, ಸಾಂಪ್ರದಾಯಿಕ ಶತ್ರುರಾಷ್ಟ್ರಗಳಾದ ಪಾಕಿಸ್ತಾನ ಮತ್ತು ಚೀನಾದ ಕುತಂತ್ರಗಳಿಗೆ ತಕ್ಕ ಎದುರೇಟು ನೀಡಿತು.

ನೆರೆರಾಷ್ಟ್ರಗಳು ಮೊದಲು

ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದಾಗಲೇ ‘ನೆರೆಹೊರೆ ರಾಷ್ಟ್ರಗಳು ಮೊದಲು’ ಎಂಬ ನೀತಿಯನ್ನು ನರೇಂದ್ರ ಮೋದಿ ತಮ್ಮದಾಗಿಸಿಕೊಂಡಿದ್ದರು. ಅಧಿಕಾರಾವಧಿಯ ಕೊನೆಯ ವರ್ಷದಲ್ಲಿಯೂ ಇದು ಪ್ರಮುಖವಾಗಿ ಕಾಣಿಸಿಕೊಂಡಿತು. ಪಾಕಿಸ್ತಾನವೊಂದನ್ನು ಹೊರತುಪಡಿಸಿ ಉಳಿದೆಲ್ಲ ನೆರೆಹೊರೆಯ ರಾಷ್ಟ್ರಗಳ ಪಾಲಿಗೆ ಭಾರತ ಸ್ನೇಹ ರಾಷ್ಟ್ರವಾಗಿಯೇ ಉಳಿಯಿತು. ಬಾಂಗ್ಲಾದೇಶದ ಪಾರದರ್ಶಕ ಚುನಾವಣೆಗೆ ಭಾರತ ಸಹಕಾರ ನೀಡುತ್ತಿದೆ. ಮಾಲ್ದೀವ್ಸ್​ನಲ್ಲಿ ಹೊಸ ಸರ್ಕಾರ ರಚನೆ ಹಾಗೂ ಆ ರಾಷ್ಟ್ರವನ್ನು ಚೀನಾ ಪ್ರಭಾವದಿಂದ ದೂರ ಮಾಡಲು ಯಶಸ್ಸು ಕಂಡ ಮೋದಿ ಸರ್ಕಾರವು, 10 ಸಾವಿರ ಕೋಟಿ ರೂ. ಆರ್ಥಿಕ ನೆರವು ಹಾಗೂ ಇನ್ನೂ ಹೆಚ್ಚಿನ ಪ್ರಮಾಣದ ಸಾಲಕ್ಕೆ ಸಮ್ಮತಿಸಿದೆ. ನೇಪಾಳಕ್ಕೆ ಬಸ್ ಸೇವೆ ಆರಂಭಿಸಲಾಗಿದ್ದು, ರೈಲ್ವೆ ಮಾರ್ಗದ ನಿಟ್ಟಿನಲ್ಲೂ ಭಾರತ ಹೆಜ್ಜೆ ಇರಿಸಿದೆ. ಈ ನಡುವೆ, ಮ್ಯಾನ್ಮಾರ್​ನ ರೋಹಿಂಗ್ಯಾ ಮುಸ್ಲಿಂರು ಮತ್ತು ಬಾಂಗ್ಲಾ ವಲಸಿಗರ ಸಮಸ್ಯೆ ಮುಂದುವರಿದಿದೆ. ಶ್ರೀಲಂಕಾ ಅಧ್ಯಕ್ಷ ಸಿರಿಸೇನಾ ಹತ್ಯೆಗೆ ಭಾರತ ಸಂಚು ರೂಪಿಸಿತ್ತು ಎಂಬ ಸುದ್ದಿ ಹರಡಿತ್ತು. ಆದರೆ ಶ್ರೀಲಂಕಾ ಅಧ್ಯಕ್ಷರೇ ಈ ವರದಿ ಕುರಿತು ಕ್ಷಮೆ ಕೋರಿ ಖುದ್ದು ಪ್ರಧಾನಿ ಮೋದಿ ಜತೆ ಮಾತನಾಡಿ ಪರಿಸ್ಥಿತಿ ಸುಧಾರಿಸುವ ಪ್ರಯತ್ನ ಮಾಡಿದರು.

ಪಾಕ್​ಗೆ ಕಠಿಣ ಸಂದೇಶ

ಜಾಗತಿಕ ಮಟ್ಟದಲ್ಲಿ ಪಾಕಿಸ್ತಾನದ ಕುತಂತ್ರಗಳನ್ನು ಬಯಲು ಮಾಡುವಲ್ಲಿ, ಅದರ ಮುಖವಾಡಗಳನ್ನು ಕಿತ್ತೆಸೆಯುವಲ್ಲಿ ಭಾರತ ಸರಣಿ ಯಶಸ್ಸು ಗಳಿಸಿತು. ಆರ್ಥಿಕವಾಗಿ ಮುಗ್ಗರಿಸಿರುವ ಪಾಕಿಸ್ತಾನಕ್ಕೆ ಅಮೆರಿಕದ ಮೂಲಕ ಇನ್ನಷ್ಟು ಶಾಕ್ ಕೊಡಿಸಲು ಭಾರತಕ್ಕೆ ಸಾಧ್ಯವಾಯಿತು. ಭಯೋತ್ಪಾದನೆ ವಿರುದ್ಧ ಹೋರಾಟಕ್ಕೆ ಅಮೆರಿಕ ನೀಡುತ್ತಿದ್ದ ಸುಮಾರು 20 ಸಾವಿರ ಕೋಟಿ ರೂ. ಆರ್ಥಿಕ ನೆರವನ್ನು ಸಂಪೂರ್ಣ ರದ್ದುಗೊಳಿಸಲಾಯಿತು. ಇದರ ಬೆನ್ನಲ್ಲೇ ಮಾತುಕತೆಗೆ ವಿಶ್ವಸಂಸ್ಥೆ ಹಾಗೂ ಅಮೆರಿಕ ಮಧ್ಯಸ್ಥಿಕೆ ವಹಿಸಬೇಕು ಎಂಬ ಪಾಕ್ ಮನವಿ ಕೂಡ ತಿರಸ್ಕೃತಗೊಂಡಿತು. ಈ ಪ್ರಯತ್ನಗಳಿಂದ ಬಸವಳಿದ ಪಾಕಿಸ್ತಾನ ಸರ್ಕಾರ ಮಾತುಕತೆಗೆ ಬರುವಂತೆ ಭಾರತಕ್ಕೆ ದುಂಬಾಲು ಬಿದ್ದಿದ್ದು ವಿಶೇಷ. ಸಾರ್ಕ್ ಶೃಂಗಕ್ಕೆ ಪ್ರಧಾನಿ ಮೋದಿಯನ್ನು ಆಹ್ವಾನಿಸಿ ಪುಸಲಾಯಿಸುವ ಪ್ರಯತ್ನ ಮಾಡಲಾಯಿತು. ಆದರೆ ಇದಕ್ಕೆ ಜಗ್ಗದ ಭಾರತ ಸರ್ಕಾರ, ಭಯೋತ್ಪಾದನೆ ಹಾಗೂ ಮಾತುಕತೆ ಒಟ್ಟಿಗೆ ಸಾಗಲು ಸಾಧ್ಯವೇ ಇಲ್ಲ ಎಂದು ಸ್ಪಷ್ಟಪಡಿಸಿತು.

ಚೀನಾ ಜತೆ ರಕ್ಷಣಾತ್ಮಕ ತಂತ್ರ

ಚೀನಾವನ್ನು ಗೆಳೆಯ ಎಂದು ಅಪ್ಪಿಕೊಳ್ಳುವ ಹಾಗೂ ಇಲ್ಲ, ಶತ್ರು ಎಂದು ಒಪ್ಪಿಕೊಳ್ಳುವಂತೂ ಇಲ್ಲ ಎನ್ನುವ ದಶಕಗಳ ರಾಜತಾಂತ್ರಿಕ ನೀತಿ ಮುಂದುವರಿದಿದೆ. ವಿಷಯಾಧಾರಿತವಾಗಿ ಭಾರತ ಹಾಗೂ ಚೀನಾ ಒಂದೇ ವೇದಿಕೆ ಹಂಚಿಕೊಳ್ಳುತ್ತಿವೆ. ಬ್ರಿಕ್ಸ್, ಶಾಂಘೈ ಸಹಕಾರ ಒಕ್ಕೂಟ ಹಾಗೂ ಜಿ-20 ವೇದಿಕೆ ಮೂಲಕ ಚೀನಾ ಅಧ್ಯಕ್ಷರ ಜತೆ ದ್ವಿಪಕ್ಷೀಯ ಮಾತುಕತೆ ನಡೆಸಿದರೂ, ವುಹಾನ್ ಅನೌಪಚಾರಿಕ ಮಾತುಕತೆಯು ವರ್ಷದ ಹೈಲೈಟ್ಸ್ ಆಗಿದೆ. ಮೋದಿ-ಜಿನ್​ಪಿಂಗ್ ನಡುವಿನ ಈ ಮಾತುಕತೆ ಭವಿಷ್ಯದ ಹೊಸ ಸಾಧ್ಯತೆಗಳ ಬಗ್ಗೆ ಚರ್ಚೆ ಹುಟ್ಟುಹಾಕಿದೆ. ಇದರ ಬೆನ್ನಲ್ಲೇ ಡೋಕ್ಲಾಂ ಗಡಿ ತಂಟೆಗೆ ತೆರೆ ಬಿದ್ದಿದ್ದು, ಎರಡೂ ಸೇನೆ ಹಾಗೂ ಸರ್ಕಾರಗಳ ನಡುವೆ ನಿರಂತರ ಮಾತುಕತೆ ಆರಂಭವಾಗಿದೆ. ಅಮೆರಿಕ ಹಾಗೂ ಚೀನಾ ನಡುವಿನ ವಾಣಿಜ್ಯ ಸಮರದ ಲಾಭ ಪಡೆಯುವ ಉದ್ದೇಶದಿಂದ ಭಾರತವು ಈ ರಕ್ಷಣಾತ್ಮಕ ತಂತ್ರಕ್ಕೆ ಮೊರೆ ಹೋಗಿದೆ. ಅದಲ್ಲದೆ ಚೀನಾ-ಪಾಕಿಸ್ತಾನ ಗೆಳೆತನವನ್ನು ನಿಯಂತ್ರಿಸಲು ಇದು ಅನಿವಾರ್ಯ ಎಂದೂ ಹೇಳಲಾಗುತ್ತಿದೆ. ಇದರ ಮುಂದುವರಿದ ಭಾಗವಾಗಿ 2019ರಲ್ಲಿ ಜಿನ್​ಪಿಂಗ್ ಅವರು ಭಾರತಕ್ಕೆ ಆಗಮಿಸುತ್ತಿದ್ದಾರೆ. ಇಷ್ಟಾಗಿಯೂ ಎನ್​ಎಸ್​ಜಿ ಸೇರ್ಪಡೆ ಹಾಗೂ ಅಜರ್ ಮಸೂದ್​ನನ್ನು ಜಾಗತಿಕ ಉಗ್ರ ಎಂದು ಘೋಷಿಸುವ ಪ್ರಕ್ರಿಯೆಗೆ ಚೀನಾ ಅಡ್ಡಗಾಲು ಹಾಕುವುದು ಮುಂದುವರಿದಿದೆ.

ರಷ್ಯಾ, ಚೀನಾ ಜತೆ ಅನೌಪಚಾರಿಕ ಸಭೆ

ಅಮೆರಿಕ ಜತೆಗಿನ ಬಾಂಧವ್ಯವೃದ್ಧಿಯಿಂದ ರಷ್ಯಾ ಹಾಗೂ ಚೀನಾ ದೇಶಗಳು ಭಾರತದಿಂದ ದೂರವಾಗುತ್ತಿವೆ ಎಂಬ ಭಾವನೆ ನೆಲೆಸಿತ್ತು. ಆದರೆ ಉಭಯ ದೇಶಗಳಿಗೆ ವ್ಯಾವಹಾರಿಕವಾಗಿ ಇದು ಅಸಾಧ್ಯ ಕೂಡ. ಹೀಗಾಗಿ ಚೀನಾ ಹಾಗೂ ರಷ್ಯಾ ಆಡಳಿತ ಮುಖ್ಯಸ್ಥರ ಜತೆಗೆ ಅನೌಪಚಾರಿಕ ಮಾತುಕತೆಗೆ ಪ್ರಧಾನಿ ಮೋದಿ ಮುಂದಾದರು. ಉಭಯ ದೇಶಗಳ ನಡುವಿನ ಸಮಸ್ಯೆ ಹಾಗೂ ರಚನಾತ್ಮಕ ಒಪ್ಪಂದಗಳ ಕುರಿತು ವೈಯಕ್ತಿಕ ನೆಲೆಗಟ್ಟಿನಲ್ಲಿ ರ್ಚಚಿಸಿ ಪರಿಹಾರ ಕಂಡುಕೊಳ್ಳುವ ಪ್ರಯತ್ನ ಮಾಡಿದರು. ವ್ಲಾದಿಮಿರ್ ಪುತಿನ್ ಹಾಗೂ ಕ್ಸಿ ಜಿನ್ ಪಿಂಗ್ ಅವರು ಮೋದಿಯ ಈ ಪ್ರಯತ್ನವನ್ನು ಶ್ಲಾಘಿಸಿದರು.

ಶೃಂಗಗಳಲ್ಲಿ ಮೋದಿ ಮೇನಿಯಾ

ವಿಶ್ವ ಆರ್ಥಿಕ ಶೃಂಗದಲ್ಲಿ ಪ್ರಧಾನಿ ನರೇಂದ್ರ ಮೋದಿ ದಿಕ್ಸೂಚಿ ಭಾಷಣ ಮಾಡಿದರು. ಭಾರತದ ಪ್ರಧಾನಿಯೊಬ್ಬರಿಗೆ ದೊರೆತ ಮೊದಲ ಗೌರವ ಇದಾಗಿದೆ. ಆ ಬಳಿಕ ಸಿಂಗಾಪುರದಲ್ಲಿ ನಡೆದ ವಿಶ್ವ ಫಿನ್​ಟೆಕ್ ಸಮ್ಮೇಳನ ಹಾಗೂ ಶಾಂಘ್ರಿಲಾ ವೇದಿಕೆಯಲ್ಲೂ ಮೊದಲ ಬಾರಿಗೆ ಭಾರತದ ಪ್ರಧಾನಿಯೊಬ್ಬರು ಮಾತನಾಡಿದರು. ಈ ಮೂರು ಭಾಷಣಗಳು ಜಾಗತಿಕ ಮಟ್ಟದಲ್ಲಿ ದೊಡ್ಡ ಪ್ರಮಾಣದಲ್ಲಿ ಚರ್ಚೆಯಾದವು.

ಟ್ರಂಪ್​ಗೆ ಪ್ರೀತಿಯ ಗೆಳೆಯ!

ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ನಡುವಿನ ಸ್ನೇಹವನ್ನು ಅಮೆರಿಕ ಪತ್ರಿಕೆಗಳು ಕೂಡ ಬಣ್ಣಿಸುತ್ತಿವೆ. ಇದಕ್ಕೆ ಇಂಬು ನೀಡುವಂತೆ ಖುದ್ದು ಟ್ರಂಪ್ ಅವರೇ, ‘ಮೋದಿ ನನ್ನ ಪ್ರೀತಿಯ ಗೆಳೆಯ’ ಎಂದಿದ್ದಾರೆ. ಆದರೆ ವ್ಯಾವಹಾರಿಕವಾಗಿ ತುಂಬ ಕಠಿಣ ವ್ಯಕ್ತಿ ಎಂದು ಕೂಡ ಹೇಳಿರುವುದು ವಿಶೇಷ.‘

ಆರ್ಥಿಕ ಅಪರಾಧಗಳ ಸದ್ದು!

2018ರ ಆರಂಭದಿಂದ ಅಂತ್ಯದವರೆಗೂ ಆರ್ಥಿಕ ಅಪರಾಧ ವಂಚಕರ ಸುದ್ದಿಯೇ ದೊಡ್ಡ ಸದ್ದು ಮಾಡಿತು. ವರ್ಷಾರಂಭದಲ್ಲಿ ಪಿಎನ್​ಬಿ ಹಗರಣದ ಆರೋಪಿ ನೀರವ್ ಮೋದಿ ಹಾಗೂ ಮೆಹುಲ್ ಚೋಕ್ಸಿ ದೇಶದಿಂದ ಪರಾರಿಯಾದರೆ, ವರ್ಷಾಂತ್ಯದವರೆಗೂ ಇದೇ ವಿಚಾರಗಳು ರಾಜಕೀಯ, ಆರ್ಥಿಕ ವೇದಿಕೆಗಳಲ್ಲಿನ ಪ್ರಮುಖ ಚರ್ಚೆಯಾಯಿತು. ಆದರೆ ವರ್ಷಾಂತ್ಯಕ್ಕೆ ಕ್ರಿಶ್ಚಿಯನ್ ಮಿಶೆಲ್ ಹಸ್ತಾಂತರ ವಾಗಿರುವುದು ಹಾಗೂ ವಿಜಯ್ ಮಲ್ಯ ಹಸ್ತಾಂತರಕ್ಕೆ ಲಂಡನ್ ಕೋರ್ಟ್ ಅನುಮತಿ ನೀಡಿರುವುದು ಉಳಿದ ವರಲ್ಲಿ ನಡುಕ ಹುಟ್ಟಿಸಿದೆ.

ವಿದೇಶ ಪ್ರವಾಸಗಳ ಪ್ರಮುಖಾಂಶಗಳು

# ಆರ್ಥಿಕ ವಂಚನೆ ವಿರುದ್ಧದ ಹೋರಾಟಕ್ಕೆ ಸಿಂಗಾಪುರ, ಸ್ವಿಜರ್ಲೆಂಡ್, ಸ್ವೀಡನ್ ಹಾಗೂ ಜಿ-20 ದೇಶಗಳ ಜತೆಗೆ ಒಪ್ಪಂದಕ್ಕೆ ಸಹಿ.

# ಇರಾನ್, ಜಪಾನ್, ಮಾಲ್ದೀವ್ಸ್ ದೇಶಗಳ ಜತೆ ಕರೆನ್ಸಿ ಸ್ವಾ್ಯಪಿಂಗ್​ಗೆ ಒಪ್ಪಿಗೆ.

ತಜ್ಞರು ಏನಂತಾರೆ?

ಅಂತಾರಾಷ್ಟ್ರೀಯ ವಿದ್ಯಮಾನ ಮತ್ತು ವಿದೇಶಾಂಗ ವ್ಯವಹಾರಗಳ ಪರಿಣಿತರು ಹೇಳುವಂತೆ ‘ಭಾರತ ಬದಲಾಗುತ್ತಿದೆ. ಮೊದಲ ಬಾರಿ ಅದು ಬಲಿಷ್ಠ ವಿದೇಶ ನೀತಿಯನ್ನು ರೂಪಿಸಿಕೊಳ್ಳುತ್ತಿದ್ದು, ಎಚ್ಚರಿಕೆಯ ಜಾಣನಡೆ ಇರಿಸುತ್ತಿದೆ. ಅದು ಸವಾಲುಗಳನ್ನು ಗುರುತಿಸಿಕೊಂಡಿದ್ದು, ಮುಂಬರುವ ದಿನಗಳಲ್ಲಿ ಅವುಗಳಿಗೆ ಸೂಕ್ತ ಪರಿಹಾರ ಕಂಡುಕೊಂಡು, ಪ್ರಬಲ ಶಕ್ತಿಯಾಗಿ ಹೊಮ್ಮುತ್ತದೆ’. ವಿಶೇಷವೆಂದರೆ, ಅಮೆರಿಕ ಮತ್ತು ಚೀನಾದ ಪತ್ರಿಕೆಗಳು ಭಾರತೀಯ ವಿದೇಶಾಂಗ ನೀತಿಯನ್ನು ವಿಮಶಿಸಿ ಇತ್ತೀಚಿನ ದಿನಗಳಲ್ಲಿ ಲೇಖನಗಳನ್ನು ಪ್ರಕಟಿಸಿವೆ.

# ಹೊಸ ಯೋಜನೆಗಳ ಪರ್ವ

ಹಲವು ಮಹತ್ವದ ಜನಪರ ಯೋಜನೆಗಳ ಮೂಲಕ ಗಮನ ಸೆಳೆದ ಕೇಂದ್ರ ಸರ್ಕಾರ 2018ರಲ್ಲಿ ದೇಶದ ಅತಿ ದೊಡ್ಡ ಆರೋಗ್ಯ ರಕ್ಷಣೆ/ವಿಮೆ ಯೋಜನೆಯನ್ನು ಘೋಷಿಸಿತು. ಜತೆಗೆ, ಗ್ರಾಮೀಣ ಭಾರತಕ್ಕೆ ಪೂರಕವಾದ, ಮೂಲಸೌಕರ್ಯ ವೃದ್ಧಿಯಂಥ ಮಹತ್ವದ ಯೋಜನೆಗಳು ಈ ವರ್ಷ ಜಾರಿಗೆ ಬಂದವು.

# ಆಯುಷ್ಮಾನ್ ಭಾರತ: ಸ್ವಾತಂತ್ರೊ್ಯೕತ್ಸವ ಭಾಷಣದಲ್ಲಿ ಮಹತ್ವದ ಘೋಷಣೆಗಳನ್ನು ಮಾಡಿ, ಅದನ್ನು ಅನುಷ್ಠಾನದ ರೂಪದಲ್ಲಿ ತಂದಿರುವ ಪ್ರಧಾನಿ ನರೇಂದ್ರ ಮೋದಿ ಈ ವರ್ಷದ ಸ್ವಾತಂತ್ರ್ಯ ದಿನದಂದು ಕೆಂಪುಕೋಟೆಯಿಂದ ‘ಆಯುಷ್ಮಾನ್ ಭಾರತ’ ಎಂಬ ಆರೋಗ್ಯ ರಕ್ಷಣೆ ಯೋಜನೆಯನ್ನು ಘೋಷಿಸಿದರು. ಬಡ ಮತ್ತು ಕೆಳ ಮಧ್ಯಮವರ್ಗದ ಕುಟುಂಬಗಳಿಗೆ ಪ್ರತಿ ವರ್ಷ 5 ಲಕ್ಷ ರೂ. ಕವರೇಜ್​ನ ಆರೋಗ್ಯ ವಿಮೆ ಒದಗಿಸುವ ಈ ಯೋಜನೆಯನ್ನು ಸೆ.23ರಂದು ‘ಪ್ರಧಾನಮಂತ್ರಿ ಜನ ಆರೋಗ್ಯ ಅಭಿಯಾನ’ ಎಂಬ ಶೀರ್ಷಿಕೆಯಲ್ಲಿ ಉದ್ಘಾಟಿಸಲಾಯಿತು.

# ಸೋಲಾರ್ ಚರಕ ಮಿಷನ್: ಗ್ರಾಮೀಣ ಪ್ರದೇಶದಲ್ಲಿ ಸಾಂಪ್ರದಾಯಿಕ ಕುಲಕಸುಬುಗಳಿಗೆ ಪ್ರೋತ್ಸಾಹ ನೀಡಲು ಮತ್ತು ಆ ಮೂಲಕ ಉದ್ಯೋಗಸೃಷ್ಟಿ ಮಾಡುವ ದಿಶೆಯಲ್ಲಿ ಜೂನ್ 27ರಂದು ರಾಷ್ಟ್ರಪತಿ ರಾಮನಾಥ ಕೋವಿಂದ ಸೋಲಾರ್ ಚರಕ ಮಿಷನ್ ಅನ್ನು ಉದ್ಘಾಟಿಸಿದರು. 50 ಕ್ಲಸ್ಟರ್​ಗಳನ್ನು ಗುರುತಿಸಿ, 550 ಕೋಟಿ ರೂ. ಸಬ್ಸಿಡಿ ಒದಗಿಸಲಾಗಿದೆ. ಪ್ರತಿ ಕ್ಲಸ್ಟರ್​ನಲ್ಲಿ ಕನಿಷ್ಠ 400ರಿಂದ 2000 ಜನರಿಗೆ ಉದ್ಯೋಗಾವಕಾಶ ದೊರೆಯುತ್ತಿದೆ.

# ಸಂಪರ್ಕ ಪೋರ್ಟಲ್: ಉದ್ಯೋಗದ ಹುಡುಕಾಟದಲ್ಲಿರುವವರಿಗೆ ಸಣ್ಣ ಮತ್ತು ಮಧ್ಯಮ ಉದ್ಯಮ(ಎಂಎಸ್​ಎಂಇ) ಸಚಿವಾಲಯವನ್ನು ಸಂರ್ಪಸಲು ಡಿಜಿಟಲ್ ಮಾಧ್ಯಮ ರೂಪಿಸಲಾಗಿದ್ದು, ಸಂಪರ್ಕ ವೆಬ್​ಪೋರ್ಟಲ್ ಮೂಲಕ ಸಣ್ಣ ಉದ್ದಿಮೆ ಆರಂಭಿಸಲು ಮತ್ತು ಈ ರಂಗದಲ್ಲಿರುವ ಉದ್ಯೋಗಾವಕಾಶಗಳ ಕುರಿತು ಮಾಹಿತಿ ಕಲ್ಪಿಸಲಾಗುತ್ತಿದೆ.

# ಸಮಗ್ರ ಶಿಕ್ಷಾ (ಶಿಕ್ಷಣ) ಅಭಿಯಾನ: ಶಾಲಾಮಟ್ಟದಲ್ಲಿ ಶಿಕ್ಷಣದ ಗುಣಮಟ್ಟವನ್ನು ಹೆಚ್ಚಿಸಲು, ವಿದ್ಯಾರ್ಥಿಗಳಲ್ಲಿ ಹೊಸ ಕೌಶಲಗಳನ್ನು ರೂಪಿಸಲು ಮೇ 24ರಂದು ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ ಈ ಹೊಸ ಯೋಜನೆಯನ್ನು ಆರಂಭಿಸಿದೆ. ಡಿಜಿಟಲ್ ಕಲಿಕೆ ಮತ್ತು ವೃತ್ತಿಕೌಶಲಕ್ಕೆ ಆದ್ಯತೆ ನೀಡಲಾಗಿದೆ. ಶಾಲೆಯಲ್ಲಿ ಗ್ರಂಥಾಲಯ ಸ್ಥಾಪನೆ ಅಥವಾ ಅದನ್ನು ಮೇಲ್ದರ್ಜೆಗೆ ಏರಿಸಲು ವಾರ್ಷಿಕ ಅನುದಾನವನ್ನು 5 ಸಾವಿರದಿಂದ 20 ಸಾವಿರ ರೂ.ಗೆ ಹೆಚ್ಚಿಸಲಾಗಿದೆ.

# ಅಟಲ್ ಭೂಜಲ ಯೋಜನಾ: ಅಂತರ್ಜಲ ಮಟ್ಟ ಹೆಚ್ಚಳದ ನಿಟ್ಟಿನಲ್ಲಿ ಪೂರಕ ಕ್ರಮಗಳನ್ನು ಕೈಗೊಳ್ಳಲು ಈ ಯೋಜನೆ ರೂಪಿಸಲಾಗಿದ್ದು, 6 ಸಾವಿರ ಕೋಟಿ ರೂ.ಗಳನ್ನು ಒದಗಿಸಲಾಗಿದೆ.

ವಿಸ್ತರಣೆ

ಕೇಂದ್ರ ಸರ್ಕಾರದ ಮಹತ್ವದ ಯೋಜನೆಗಳಾದ ಜನಧನ, ಸ್ವಚ್ಛ ಭಾರತ, ಡಿಜಿಟಲ್ ಇಂಡಿಯಾ, ಮೇಕ್ ಇನ್ ಇಂಡಿಯಾ, ದೀನದಯಾಳ ಗ್ರಾಮೀಣ ಕೌಶಲ ಯೋಜನಾ, ಸಂಸದರ ಆದರ್ಶ ಗ್ರಾಮ ಯೋಜನೆಗಳು ವಿಸ್ತರಣೆಯಾಗಿ, ಈ ವರ್ಷದಲ್ಲೂ ಮುಂದುವರಿದವು. ಅ.2ರಂದು ಸ್ವಚ್ಛ ಭಾರತ ಯೋಜನೆಯ ಎರಡನೇ ಹಂತವನ್ನು ಆರಂಭಿಸಲಾಯಿತು.

ಬ್ಯಾಂಕ್​ಗಳ ವಿಲೀನ, ಎನ್​ಪಿಎ ಆತಂಕ

ಹಿಂದಿನ ಆರ್ಥಿಕ ಸಾಲಿನಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಹೈದರಾಬಾದ್, ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಸೇರಿದಂತೆ ಹಲವು ಬ್ಯಾಂಕುಗಳನ್ನು ಕೇಂದ್ರ ಸರ್ಕಾರ ಎಸ್​ಬಿಐನಲ್ಲಿ ವಿಲೀನ ಮಾಡಿತ್ತು. ಪ್ರಸಕ್ತ ಆರ್ಥಿಕ ವರ್ಷದಲ್ಲಿ ವಿಜಯಾ ಬ್ಯಾಂಕ್, ದೇನಾ ಬ್ಯಾಂಕ್ ಹಾಗೂ ಬ್ಯಾಂಕ್ ಆಫ್ ಬರೋಡಾಗಳನ್ನು ವಿಲೀನ ಮಾಡಲು ನಿರ್ಧರಿಸಿದೆ. ಮುಂದಿನ ಆರ್ಥಿಕ ವರ್ಷದಿಂದ ಇದು ಅನುಷ್ಠಾನಕ್ಕೆ ಬರುವ ಸಾಧ್ಯತೆಯಿದೆ. ಈ ವಿಲೀನದಿಂದ ಎಸ್​ಬಿಐ ನಂತರದ ಅತಿ ದೊಡ್ಡ ಬ್ಯಾಂಕಿಂಗ್ ಸಮೂಹವಾಗಿ ಇದು ರೂಪುಗೊಳ್ಳಲಿದೆ. ಏತನ್ಮಧ್ಯೆ ಸಾರ್ವಜನಿಕ ಸ್ವಾಮ್ಯದ ಬ್ಯಾಂಕ್​ಗಳ ಅನುತ್ಪಾದಕ ಸಾಲದ ಮೊತ್ತವು 12 ಲಕ್ಷ ಕೋಟಿ ರೂ. ತಲುಪಿದೆ. ಹೀಗಾಗಿ ಬ್ಯಾಂಕ್​ಗಳ ರಕ್ಷಣೆಗಾಗಿ ಕೇಂದ್ರ ಸರ್ಕಾರವು 2 ಲಕ್ಷ ಕೋಟಿ ರೂ.ಗಳ ಹೂಡಿಕೆ ಹಣ ನೀಡಲು ನಿರ್ಧರಿಸಿದೆ.

59 ನಿಮಿಷಗಳಲ್ಲಿ 1 ಕೋಟಿ ರೂ. ಸಾಲ

ಜಿಎಸ್​ಟಿ ಹಾಗೂ ನೋಟು ಅಮಾನ್ಯೀಕರಣದ ಅನುಷ್ಠಾನದ ಬಳಿಕ ಸಣ್ಣ ಹಾಗೂ ಮಧ್ಯಮ ಕೈಗಾರಿಕೆಗಳಿಗೆ ಭಾರಿ ಹೊಡೆತ ಬಿದ್ದಿತ್ತು. ಹೀಗಾಗಿ ಸುಲಭವಾಗಿ ಸಾಲ ನೀಡುವ ಯೋಜನೆಗೆ ಕೇಂದ್ರ ಸರ್ಕಾರ ಚಾಲನೆ ನೀಡಿದೆ. 1 ಕೋಟಿ ರೂ.ವರೆಗಿನ ಸಾಲಕ್ಕೆ ಕೇವಲ 59 ನಿಮಿಷಗಳಲ್ಲಿ ಒಪ್ಪಿಗೆ ನೀಡುವ ಯೋಜನೆ ಇದಾಗಿದೆ.

ಓಡಿ ಸುಸ್ತಾದ ಷೇರುಪೇಟೆ ಗೂಳಿ!

ಪಿಎನ್​ಬಿ ಹಗರಣ ಹಾಗೂ ಸರ್ಕಾರಿ ಸ್ವಾಮ್ಯದ ಬ್ಯಾಂಕ್​ಗಳ ಎನ್​ಪಿಎ ಗೋಳಿನ ಹೊರತಾಗಿಯೂ ಷೇರು ಮಾರುಕಟ್ಟೆಯ ಗೂಳಿ ವರ್ಷದ ಮೊದಲಾರ್ಧದಲ್ಲಿ ದಾಖಲೆ ಓಟ ಕಂಡಿತು. ಆದರೆ ರೂಪಾಯಿ ಮೌಲ್ಯ ಕಳೆದುಕೊಂಡಿದ್ದು ಹಾಗೂ ಜಾಗತಿಕ ಅನಿಶ್ಚಿತತೆ ಕಾರಣದಿಂದ 38 ಸಾವಿರ ತಲುಪಿದ್ದ ಸೆನ್ಸೆಕ್ಸ್ ಸೂಚ್ಯಂಕವು 35 ಸಾವಿರದ ಆಸುಪಾಸಿನಲ್ಲಿದೆ. ಅದೇ 11 ಸಾವಿರ ದಾಟಿದ್ದ ನಿಫ್ಟಿ ಸೂಚ್ಯಂಕವು 10 ಸಾವಿರದಿಂದ 11 ಸಾವಿರದ ಗಡಿಯೊಳಗೆ ಗಿರಕಿ ಹೊಡೆಯುತ್ತಿದೆ.

ಜಿಡಿಪಿ ಚೇತರಿಕೆ

ಜಿಎಸ್​ಟಿ ಹಾಗೂ ನೋಟು ಅಮಾನ್ಯೀಕರಣ ತಾತ್ಕಾಲಿಕ ಪರಿಣಾಮಗಳಿಂದ ಭಾರತದ ಜಿಡಿಪಿ ಶೇ.6ಕ್ಕೆ ಕುಸಿದಿತ್ತು. ಆದರೆ ಮತ್ತೆ ಪ್ರಸಕ್ತ ಆರ್ಥಿಕ ವರ್ಷದಲ್ಲಿ 8ರ ಗಡಿ ದಾಟಿ ಚೇತರಿಕೆಯ ಹಾದಿಯಲ್ಲಿದೆ. ಹಾಗೆಯೇ ವಿಶ್ವದ ಪ್ರಮುಖ ಆರ್ಥಿಕತೆಯಲ್ಲಿ ಅತಿ ವೇಗವಾಗಿ ಬೆಳವಣಿಗೆ ಪ್ರಮಾಣ ಹೊಂದಿರುವ ರಾಷ್ಟ್ರ ಎಂಬ ಹೆಗ್ಗಳಿಕೆಯಲ್ಲಿ ಭಾರತ ಸಾಗಿದೆ. ಫೆಬ್ರವರಿಯಲ್ಲಿ ಘೋಷಿಸಿದ ಮಾಹಿತಿ ಪ್ರಕಾರ ಶೇ.7.2 ಜಿಡಿಪಿಯಿದ್ದರೆ ಆಗಸ್ಟ್​ನಲ್ಲಿ ಇದು ಶೇ.8.2ನ್ನು ತಲುಪಿತ್ತು. ಆದರೆ ನವೆಂಬರ್ ಅಂಕಿಅಂಶವು ಮತ್ತೆ ಶೇ.7.1ಕ್ಕೆ ಇಳಿದಿದೆ.

ಉದ್ಯಮಸ್ನೇಹಿ ಪಟ್ಟಿಯಲ್ಲಿ ಜಿಗಿತ

ಉದ್ಯಮ ಸ್ನೇಹಿ ಪಟ್ಟಿಯಲ್ಲಿ 23 ಸ್ಥಾನ ಜಿಗಿತ ಕಂಡಿರುವ ಭಾರತವು ಸದ್ಯ 77ನೇ ಸ್ಥಾನದಲ್ಲಿದೆ. ಕಳೆದ ವರ್ಷದಲ್ಲಿ ಭಾರತವು 100ನೇ ಸ್ಥಾನದಲ್ಲಿತ್ತು. ಯುಪಿಎ ಸರ್ಕಾರವು ಅಧಿಕಾರದಿಂದ ಇಳಿಯುವಾಗ ಭಾರತವು 142ನೇ ಸ್ಥಾನದಲ್ಲಿತ್ತು.

ತೈಲಬೆಲೆ ಕಂಟಕ

ವರ್ಷದ ಆರಂಭದಲ್ಲಿ ಪ್ರತಿ ಬ್ಯಾರೆಲ್ ಕಚ್ಚಾತೈಲಕ್ಕೆ 66 ಡಾಲರ್ ಬೆಲೆಯಿತ್ತು. ಆದರೆ ಸೆಪ್ಟೆಂಬರ್-ಅಕ್ಟೋಬರ್ ವೇಳೆಗೆ 85 ಡಾಲರ್ ಆಸುಪಾಸು ತಲುಪಿತು. ಇದಕ್ಕೆ ತುಪ್ಪ ಸುರಿಯುವಂತೆ ಇರಾನ್ ಮೇಲೆ ಅಮೆರಿಕ ನಿರ್ಬಂಧದ ಆದೇಶ ಹೊರಡಿಸಿತು. ಆಗ ಕಂಗೆಟ್ಟ ಭಾರತ, ಚೀನಾ ದೇಶಗಳು ತೈಲ ಉತ್ಪಾದನೆ ಹೆಚ್ಚಳಕ್ಕೆ ಒಪೆಕ್ ಮೇಲೆ ಒತ್ತಡ ಹೇರಿದವು. ಹಾಗೆಯೇ ಅಮೆರಿಕ ತೈಲ ಉತ್ಪಾದನೆ, ರಫ್ತು ಪ್ರಮಾಣ ಹೆಚ್ಚಿಸಿತು. ಪರಿಣಾಮವಾಗಿ ಕಳೆದ 17 ತಿಂಗಳಿನ ಕಡಿಮೆ ಪ್ರಮಾಣಕ್ಕೆ ತೈಲ ಬೆಲೆ ಬಂದಿದೆ. ಸದ್ಯಕ್ಕೆ 45 ಡಾಲರ್​ಗೆ ಬಂದಿದೆ.

ರೂಪಾಯಿ ಮೌಲ್ಯದ ಕಳವಳ

2018ರ ಆರಂಭದಲ್ಲಿ ಡಾಲರ್ ಎದುರು ರೂಪಾಯಿ ಮೌಲ್ಯವು 63 ಇತ್ತು. ಆದರೆ ಅಕ್ಟೋಬರ್ ಹಾಗೂ ನವೆಂಬರ್ ವೇಳೆಗೆ ದಾಖಲೆಯ ಕುಸಿತ ಕಂಡು ಇದೇ ಮೊದಲ ಬಾರಿಗೆ 74ರ ಗಡಿಯನ್ನು ಕೂಡ ದಾಟಿತು. ತೈಲಬೆಲೆ ಹೆಚ್ಚಳವೇ ಇದಕ್ಕೆ ಪ್ರಮುಖ ಕಾರಣವಾಗಿತ್ತು. ಈಗ ಮತ್ತೆ 70ರ ಗಡಿಗೆ ಬಂದು ನಿಂತಿದೆ. ಆದರೆ ವರ್ಷದ ಆರಂಭದ ಮಟ್ಟ ತಲುಪಲು ಸಾಧ್ಯವಾಗಿಲ್ಲ.

ರಫ್ತು ಪ್ರಮಾಣ ಕುಸಿತ

15 ದೇಶಗಳಲ್ಲಿ ಟ್ರೇಡ್ ಪ್ರಮೋಶನ್ ಘಟಕ ಸ್ಥಾಪನೆಗೆ ನಿರ್ಧಾರ, ಇಂಡಿಯನ್ ಟ್ರೇಡ್ ಪೋರ್ಟಲ್​ಗೆ ಚಾಲನೆ ನೀಡಿದಾಗ್ಯೂ ಕಳೆದ ನವೆಂಬರ್​ನ ದಾಖಲೆಗಳನ್ನು ಗಮನಿಸಿದರೆ ರಫ್ತಿನ ಪ್ರಮಾಣ ಶೇ.0.8 ಕುಸಿತವಾಗಿದೆ. ವಾಣಿಜ್ಯ ವಹಿವಾಟು ಕೊರತೆ 1.17 ಲಕ್ಷ ಕೋಟಿ ರೂ.ಗಳಿಗೆ ತಲುಪಿದೆ.

ನಿರ್ವಹಣೆ: ನಾಗರಾಜ ಇಳೆಗುಂಡಿ

ವಿಜಯವಾಣಿ ಟೀಂ: ರವೀಂದ್ರ ಎಸ್.ದೇಶಮುಖ್, ರಾಜೀವ್ ಹೆಗಡೆ
ವಿನ್ಯಾಸ: ಅಶ್ವತ್ಥ ಕೃಷ್ಣ