ವರ್ಷದ ಹಿನ್ನೋಟ|ಸವಾಲು ಸಾಧನೆ ವೇದನೆ…

ಈ ಇಡೀ ವರ್ಷ ಸ್ತ್ರೀಶಕ್ತಿ ಸಾಧನೆಯ ಹೆಗ್ಗುರುತು ಮತ್ತು ಸವಾಲುಗಳೊಂದಿಗೆ ಹೋರಾಟದ ಮೂಲಕ ಗಮನ ಸೆಳೆಯಿತು. ವಾಯುಪಡೆ, ನೌಕಾಪಡೆಯಲ್ಲಿ ಮೊದಲ ಬಾರಿ ವನಿತೆಯರ ಪ್ರಾಬಲ್ಯ ಹೆಚ್ಚಿದರೆ, ದೇಶದ ಹಲವು ಆಯಕಟ್ಟಿನ ಹುದ್ದೆಗಳಿಗೆ ಮಹಿಳೆಯರು ನೇಮಕಗೊಂಡು ಕರ್ತೃತ್ವಶಕ್ತಿ ತೋರಿದರು. ಲೈಂಗಿಕ ಶೋಷಣೆಯಂಥ ಅನಿಷ್ಟ ಪಿಡುಗಿನ ವಿರುದ್ಧ ಗಟ್ಟಿಯಾಗಿ ದನಿ ಮೊಳಗಿಸಿ, ಹೆಣ್ಣಿನ ಸಹನೆಯನ್ನು ಪರೀಕ್ಷಿಸಬೇಡಿ ಎಂಬ ಸಂದೇಶ ರವಾನಿಸಿದರು. ಒಟ್ಟಿನಲ್ಲಿ, ಸಾಧನೆಯ ಗೆಲುವು, ಸಂಘರ್ಷದ ಹಾದಿ, ಹೊಸ ಅಭ್ಯುದಯಗಳಿಗೆ ನಾಂದಿಯಾದ ಮಹಿಳಾ ಜಗತ್ತು ಭವಿಷ್ಯದ ಬಗ್ಗೆ ಮತ್ತಷ್ಟು ಭರವಸೆ ಮೂಡಿಸಿದ್ದು ಸುಳ್ಳಲ್ಲ.

ಮೀಟೂ ಅಭಿಯಾನ, ಮಹಿಳೆಯರ ಶಬರಿಮಲೆ ಪ್ರವೇಶ ಯತ್ನ, ಅಲ್ಪಸಂಖ್ಯಾತ ಮಹಿಳೆಯರ ರಕ್ಷಣೆಗಾಗಿ ಕೇಂದ್ರ ಸರ್ಕಾರ ತಂದ ತ್ರಿವಳಿ ತಲಾಕ್ ನಿಷೇಧ ಮುಂತಾದ ಗಮನಾರ್ಹ ವಿಚಾರಗಳು ವರ್ಷವಿಡೀ ಸದ್ದು ಮಾಡಿದವು. ಜನಸಾಮಾನ್ಯರವರೆಗೂ ತಲುಪಿ ಚರ್ಚೆಗೆ ಕಾರಣವಾದವು. ಮೀಟೂ ಆರೋಪದ ಹಿನ್ನೆಲೆಯಲ್ಲಿ ಕೇಂದ್ರ ಸಚಿವ ಎಂ. ಜೆ. ಅಕ್ಬರ್ ರಾಜೀನಾಮೆ ನೀಡಬೇಕಾಗಿ ಬಂದರೆ, ಅನೇಕ ಸೆಲೆಬ್ರಿಟಿಗಳು ಮೀಟೂ ಆರೋಪಕ್ಕೆ ಗುರಿಯಾದರು. ಈ ಮಧ್ಯೆ, 2012ರ ನಿರ್ಭಯಾ ಪ್ರಕರಣದ ಅಪರಾಧಿಗಳಿಗೆ ನೀಡಿದ್ದ ಗಲ್ಲುಶಿಕ್ಷೆಯನ್ನು ಸುಪ್ರೀಂಕೋರ್ಟ್ ಮತ್ತೆ ಎತ್ತಿ್ತ ಹಿಡಿಯಿತು. ಈ ಮೂಲಕ, ದೇಶವೇ ಒಂದಾಗಿ ಪ್ರತಿಭಟಿಸಿದ್ದ ಪ್ರಕರಣವೊಂದಕ್ಕೆ ನ್ಯಾಯಪ್ರಾಪ್ತಿಯಾಯಿತು.

ಪ್ರಬಲ ಇಚ್ಛಾಶಕ್ತಿಗೆ ಸಲಾಂ

ಭಾರತೀಯ ನೌಕಾಪಡೆಯ ಮಹಿಳಾಧಿಕಾರಿಗಳು ಹೊಸ ವಿಕ್ರಮವನ್ನೇ ಸೃಷ್ಟಿಸಿದರು. 2017ರ ಸೆಪ್ಟೆಂಬರ್​ನಲ್ಲಿ ಗೋವಾದ ಸಮುದ್ರ ಕಿನಾರೆಯಿಂದ ಆರಂಭಗೊಂಡಿದ್ದ ಐತಿಹಾಸಿಕ ಸಾಗರ ಯಾತ್ರೆ ‘ನಾವಿಕ ಸಾಗರ ಪರಿಕ್ರಮ’ 2018ರ ಮೇ 21ರಂದು ಯಶಸ್ವಿಯಾಗಿ ಪರಿಪೂರ್ಣಗೊಂಡಿತು. ಐಎನ್​ಎಸ್​ವಿ ತಾರಿಣಿ ನೌಕೆಯಲ್ಲಿ ಲೆಫ್ಟಿನೆಂಟ್ ಕಮಾಂಡರ್ ವರ್ತಿಕಾ ಜೋಶಿ ನೇತೃತ್ವದ ತಂಡದಲ್ಲಿ ಲೆ. ಕಮಾಂಡರ್ ಪ್ರತಿಭಾ ಜಾಮ್ವಾಲ್, ಲೆ.ಕಮಾಂಡರ್ ಪಿ. ಸ್ವಾತಿ, ಲೆ. ಐಶ್ವರ್ಯಾ ಬೊಡಪಟ್ಟಿ, ಲೆ. ಎಸ್. ವಿಜಯಾದೇವಿ, ಲೆ. ಪಾಯಲ್ ಗುಪ್ತಾ ಇದ್ದರು. ಇವರೆಲ್ಲರೂ ಭಾರತೀಯ ನೌಕಾಪಡೆಯ ಅಧಿಕಾರಿಗಳು. 55 ಅಡಿ ಉದ್ದದ ಸಾಮಾನ್ಯ ನೌಕೆಯಲ್ಲಿ ಸತತ 8 ತಿಂಗಳು ಪಯಣಿಸಿದ ತಂಡದ ಸದಸ್ಯರು 5 ದೇಶಗಳಿಗೆ ಭೇಟಿ ನೀಡಿದರು. ನಾಲ್ಕು ಖಂಡಗಳನ್ನು ಹಾದು, 3 ಸಾಗರಗಳು, ಭೂಮಧ್ಯ ರೇಖೆಯನ್ನು 2 ಬಾರಿ ದಾಟಿದ ಐತಿಹಾಸಿಕ ಸಾಧನೆ ಮಾಡಿದರು. ಈ ಯಶಸ್ಸಿಗೆ ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರಪತಿ ರಾಮನಾಥ ಕೋವಿಂದ ಸೇರಿದಂತೆ ಇಡೀ ದೇಶದಿಂದ ಅಭಿನಂದನೆಗಳ ಮಹಾಪೂರವೇ ಹರಿದುಬಂತು. 2018ರ ಮಾರ್ಚ್ 8, ಅಂತಾರಾಷ್ಟ್ರೀಯ ಮಹಿಳಾ ದಿನದಂದು ಐಎನ್​ಎಸ್ ತಾರಿಣಿ ನೌಕೆಯ ಎಲ್ಲ ಸದಸ್ಯರಿಗೆ ಪ್ರಧಾನಿ ಮೋದಿ ‘ನಾರಿಶಕ್ತಿ ಪುರಸ್ಕಾರ’ ಪ್ರಕಟಿಸಿ, ಅಭಿನಂದಿಸಿದರು.

ನಾರಿ ಆನ್​ಲೈನ್ ಪೋರ್ಟಲ್

ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಮನೇಕಾ ಗಾಂಧಿ ‘ನಾರಿ’ (ಎನ್​ಎಆರ್​ಐ) ಎನ್ನುವ ಆನ್​ಲೈನ್ ಪೋರ್ಟಲ್​ಗೆ ಜನವರಿ 2ರಂದು ಚಾಲನೆ ನೀಡಿದರು. ಮಹಿಳೆಯರಿಗಾಗಿ ಕೇಂದ್ರ ಸರ್ಕಾರ ರೂಪಿಸಿರುವ ಯೋಜನೆಗಳು ಹಾಗೂ ವಿವಿಧ 350 ಕಾರ್ಯಕ್ರಮಗಳ ಬಗ್ಗೆ ಇದರಲ್ಲಿ ಸಂಪೂರ್ಣ ಮಾಹಿತಿ ಲಭ್ಯ. ವೆಬ್​ಸೈಟ್ nari.nic.in

ಲಿಮ್ಕಾ ದಾಖಲೆಗೆ ಮಹಿಳಾ ರೈಲ್ವೆ ಸ್ಟೇಷನ್

ಮುಂಬೈನ ಮಾತುಂಗಾ ರೈಲ್ವೆ ಸ್ಟೇಷನ್ ಜನವರಿಯಲ್ಲಿ ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್​ಗೆ ಸೇರ್ಪಡೆಯಾಯಿತು. ಈ ಕೇಂದ್ರದಲ್ಲಿರುವ ಸಿಬ್ಬಂದಿ ಎಲ್ಲರೂ ಮಹಿಳೆಯರು. ಸಂಪೂರ್ಣ ಮಹಿಳಾ ಸಿಬ್ಬಂದಿಯನ್ನೇ ಒಳಗೊಂಡಿರುವ ದೇಶದ ಮೊದಲ ರೈಲ್ವೆ ನಿಲ್ದಾಣ ಇದಾಗಿದೆ.

ವಸತಿನಿಲಯದಲ್ಲೇ ಅತ್ಯಾಚಾರ

ಬಿಹಾರದ ವಸತಿನಿಲಯಗಳಲ್ಲಿ ಅಪ್ರಾಪ್ತ ಬಾಲಕಿಯರ ಮೇಲೆ ನಿಲಯದ ಅಧಿಕಾರಿಗಳೇ ಸಾಮೂಹಿಕವಾಗಿ ಅತ್ಯಾಚಾರ ನಡೆಸಿದ ಪ್ರಕರಣ ಬೆಳಕಿಗೆ ಬಂತು. ನ್ಯಾಯಾಲಯ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡು ವಿಚಾರಣೆ ನಡೆಸುತ್ತಿದೆ.

ಸಜೆಯಾದ ಹೆರಿಗೆ ರಜೆ?

ಮಹಿಳೆಯರ ವೃತ್ತಿಜೀವನಕ್ಕೆ ಉತ್ತೇಜನ ನೀಡುವ ಉದ್ದೇಶದಿಂದ ಕೇಂದ್ರ ಸರ್ಕಾರ 2017ರಲ್ಲಿ ವೇತನಸಹಿತ ಹೆರಿಗೆರಜೆಯನ್ನು 12 ವಾರಗಳಿಂದ 26 ವಾರಗಳಿಗೆ ಏರಿಕೆ ಮಾಡಿತು. ಆದರೆ, ಇದರಿಂದ ನಷ್ಟವೇ ಹೆಚ್ಚಾಗಿದ್ದು, ದೇಶಾದ್ಯಂತ 18 ಲಕ್ಷ ಮಹಿಳೆಯರು ಉದ್ಯೋಗ ಕಳೆದುಕೊಳ್ಳುವ ಅಪಾಯ ಎದುರಿಸು ತ್ತಿ್ತ್ದಾರೆ ಎಂದು ‘ಟೀಮ್ ಲೀಸ್’ ಸಂಸ್ಥೆ ಜೂನ್ ತಿಂಗಳಲ್ಲಿ ನಡೆಸಿದ ಸಮೀಕ್ಷೆಯಿಂದ ತಿಳಿದುಬಂತು. ಹೆರಿಗೆ ರಜೆ ಹೆಚ್ಚಳದಿಂದ ಮಹಿಳಾ ಉದ್ಯೋಗಿಗಳ ನೇಮಕಕ್ಕೂ ಹಿನ್ನಡೆಯಾಗಿದೆ.

ಏಪ್ರಿಲ್ 21: ಮಕ್ಕಳ ಅತ್ಯಾಚಾರಿಗಳಿಗೆ ಗಲ್ಲು ಸುಗ್ರೀವಾಜ್ಞೆ

ಅಪ್ರಾಪ್ತ ಮಕ್ಕಳ ಅತ್ಯಾಚಾರಿಗಳಿಗೆ ಗಲ್ಲು ಶಿಕ್ಷೆ ವಿಧಿಸುವ ಸುಗ್ರೀವಾಜ್ಞೆಗೆ ಕೇಂದ್ರ ಸಂಪುಟ ಒಪ್ಪಿಗೆ ನೀಡಿತು. ಅದರ ಪ್ರಕಾರ, 12 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳ ಮೇಲೆ ಅತ್ಯಾಚಾರ ನಡೆಸಿದರೆ ಗಲ್ಲು ಶಿಕ್ಷೆ ಆಗಬೇಕು. 16ರ ವಯೋಮಾನಕ್ಕಿಂತ ಕೆಳಗಿನ ಹೆಣ್ಣು ಮಕ್ಕಳ ಅತ್ಯಾಚಾರಿಗಳಿಗೆ ಹಿಂದೆ ವಿಧಿಸುತ್ತಿದ್ದ 10 ವರ್ಷಗಳ ಕನಿಷ್ಠ ಶಿಕ್ಷೆಯನ್ನು 20 ವರ್ಷಗಳಿಗೆ ಹೆಚ್ಚಿಸಲಾಯಿತು. ಜಮ್ಮು ಕಾಶ್ಮೀರದ ಕಥುವಾ ಪ್ರದೇಶದಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣದ ಬಳಿಕ ದೇಶದೆಲ್ಲೆಡೆ ತೀವ್ರ ಪ್ರತಿಭಟನೆ ನಡೆದವು. ಸುಗ್ರೀವಾಜ್ಞೆ ಮೂಲಕ ಕಾಯ್ದೆಗೆ ತಿದ್ದುಪಡಿ ತರುವ ಕೇಂದ್ರ ಸರ್ಕಾರದ ಪ್ರಸ್ತಾಪಕ್ಕೆ ರಾಷ್ಟ್ರಪತಿ ರಾಮನಾಥ ಕೋವಿಂದ್ ಏ.22ರಂದು ಅಂಕಿತ ಹಾಕಿದರು.

ಮಾರ್ಚ್ 8: ಸುವಿಧಾ ಯೋಜನೆ

ಅಂತಾರಾಷ್ಟ್ರೀಯ ಮಹಿಳಾ ದಿನದ ಕೊಡುಗೆಯಾಗಿ ಕೇಂದ್ರ ಸರ್ಕಾರ ಸುವಿಧಾ ಯೋಜನೆಯನ್ನು ಘೊಷಿಸಿತು. ಕೇವಲ 2.50 ರೂಪಾಯಿಗೆ ಸ್ಯಾನಿಟರಿ ನ್ಯಾಪ್ಕಿನ್​ಗಳನ್ನು ಒದಗಿಸುವ ಯೋಜನೆ ಇದು. ಪರಿಸರಕ್ಕೂ ಪೂರಕವಾಗಿರುವ ಸುವಿಧಾ ನ್ಯಾಪ್ಕಿನ್​ಗಳು ಮಣ್ಣಿನಲ್ಲಿ ಸಂಪೂರ್ಣವಾಗಿ ಕರಗುತ್ತವೆ. ದೇಶದ ಎಲ್ಲ ಜನೌಷಧಿ ಕೇಂದ್ರಗಳಲ್ಲಿ ಇವು ಲಭ್ಯ.

ಅಕ್ಟೋಬರ್ 20: ಸರ್ಜಾ vs ಶ್ರುತಿ

ನಟಿ ಶ್ರುತಿ ಹರಿಹರನ್ ಹಿರಿಯ ನಟ ಅರ್ಜುನ್ ಸರ್ಜಾ ಮೇಲೆ ಮಾಡಿದ ಮೀಟೂ ಆರೋಪ ವಿವಾದಗಳ ಸರಮಾಲೆಯನ್ನೇ ಸೃಷ್ಟಿಸಿತು. ಶ್ರುತಿ ಹರಿಹರನ್ ಸರ್ಜಾ ವಿರುದ್ಧ ಪ್ರಕರಣ ದಾಖಲಿಸಿದರೆ, ಶ್ರುತಿ ವಿರುದ್ಧ ಸರ್ಜಾ 5 ಕೋಟಿ ರೂ. ಮಾನನಷ್ಟ ಮೊಕದ್ದಮೆ ಹೂಡಿದರು.

ಅ.20: ದಾರಿ ತಪ್ಪಿದ ಕಳವಳ

ವಿಶ್ವಾದ್ಯಾಂತ ಸಾವಿರಾರು ಜನರು ಮೀಟೂ ಅಭಿಯಾನವನ್ನು ಬೆಂಬಲಿಸಿ, ತಮಗಾದ ಕಹಿ ಅನುಭವಗಳನ್ನು ಸಾರ್ವಜನಿಕವಾಗಿ ಹಂಚಿಕೊಂಡಿರುವ ಮಧ್ಯೆಯೇ, ಈ ಅಭಿಯಾನ ದಾರಿ ತಪ್ಪುತ್ತಿದೆ ಎಂದು ಮೀಟೂ ಸಂಸ್ಥಾಪಕಿ ತರಾನಾ ಬರ್ಕ್ ಕಳವಳ ವ್ಯಕ್ತಪಡಿಸಿದರು.

ಅಕ್ಟೋಬರ್ 1: ಮೀಟೂ ಧ್ವನಿ-ಪ್ರತಿಧ್ವನಿ

2016ರಲ್ಲಿ ಅಮೆರಿಕದ ಸಾಮಾಜಿಕ ಹೋರಾಟಗಾರ್ತಿ ತರಾನಾ ಬರ್ಕ್ ಆರಂಭಿಸಿದ್ದ ಮೀಟೂ ಚಳವಳಿ 2018ರಲ್ಲಿ ಮತ್ತಷ್ಟು ಚುರುಕುಗೊಂಡಿತು. ನೊಬೆಲ್ ಸಾಹಿತ್ಯ ಪುರಸ್ಕಾರ ಆಯ್ಕೆ ಸಮಿತಿಯಲ್ಲಿ ಸದಸ್ಯರಾಗಿದ್ದ ಜೇನ್ ಕ್ಲೌಡ್ ಅರ್ನಾಲ್ಟ್ ವಿರುದ್ಧ ಲೈಂಗಿಕ ಕಿರುಕುಳ, ಅತ್ಯಾಚಾರ ಆರೋಪ ಕೇಳಿ ಬಂದು, ಆಯ್ಕೆ ಸಮಿತಿ ಕೂಡ ರದ್ದಾಗಿ, ಇದೇ ಮೊದಲ ಬಾರಿಗೆ ಪ್ರಶಸ್ತಿ ಆಯ್ಕೆಯನ್ನು ಮುಂದೂಡಲಾಯಿತು. ಇನ್ನು ಭಾರತದಲ್ಲಿ, ಬಾಲಿವುಡ್ ನಟರಾದ ನಾನಾ ಪಾಟೇಕರ್, ಅಲೋಕ್​ನಾಥ್, ವಿಕಾಸ್ ಬೆಹ್ಲ್, ಹೃತಿಕ್ ರೋಶನ್, ಸುಭಾಷ್ ಘಾಯ್, ಕೈಲಾಶ್ ಖೇರ್ ಮುಂತಾದವರ ಮೇಲೆಯೂ ಮೀಟೂ ಆರೋಪ ಕೇಳಿಬಂತು. ನಟಿ ತನುಶ್ರೀ ದತ್ತಾ, ಕಂಗನಾ ರಾಣಾವತ್ ಆರೋಪ ಮಾಡಿದ ಪ್ರಮುಖರು.

ಅಕ್ಟೋಬರ್ 17: ಅಕ್ಬರ್ ರಾಜೀನಾಮೆ

ಮೀಟೂ ಅಭಿಯಾನದ ಅಡಿಯಲ್ಲಿ 12 ಪತ್ರಕರ್ತೆಯರು ವಿದೇಶಾಂಗ ಇಲಾಖೆ ರಾಜ್ಯ ಸಚಿವ ಎಂ. ಜೆ. ಅಕ್ಬರ್ ವಿರುದ್ಧ ಆರೋಪ ಮಾಡಿದರು. ಈ ಆರೋಪಕ್ಕೀಡಾದ ಹತ್ತು ದಿನಗಳ ಬಳಿಕ ಎಂ.ಜೆ. ಅಕ್ಬರ್ ರಾಜೀನಾಮೆ ನೀಡಿದರು.

ಸೆಪ್ಟೆಂಬರ್ 28: ಶಬರಿಮಲೆ ಪ್ರಕರಣ ಸುಪ್ರೀಂ ಆದೇಶ

ಕೇರಳದ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಾಲಯಕ್ಕೆ ಎಲ್ಲ ವಯೋಮಾನದ ಮಹಿಳೆಯರ ಪ್ರವೇಶಕ್ಕೆ ಸುಪ್ರೀಂಕೋರ್ಟ್​ನ ಸಾಂವಿಧಾನಿಕ ಪೀಠ ಅನುಮತಿ ನೀಡಿ ತೀರ್ಪು ಪ್ರಕಟಿಸಿತು. ‘ದೇವಾಲಯಕ್ಕೆ 10-50 ವರ್ಷ ವಯೋಮಾನದ ಮಹಿಳೆಯರನ್ನು ನಿಷೇಧಿಸುವುದು ಸಂವಿಧಾನದ ಮೂಲತತ್ತ್ವಗಳ ಉಲ್ಲಂಘನೆ’ ಎಂದು ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಹೇಳಿದರು. ಈ ತೀರ್ಪನ್ನು ಮರುಪರಿಶೀಲನೆ ಮಾಡಬೇಕೆಂದು ಅಕ್ಟೋಬರ್ 8ರಂದು ರಾಷ್ಟ್ರೀಯ ಅಯ್ಯಪ್ಪ ಭಕ್ತರ ಸಂಘ ಸುಪ್ರೀಂಗೆ ಅರ್ಜಿ ಸಲ್ಲಿಸಿತು.

ನವೆಂಬರ್ 13: ಮರು ಪರಿಶೀಲನೆ

ಶಬರಿಮಲೆ ವಿವಾದಕ್ಕೆ ಸಂಬಂಧಿಸಿದ ತೀರ್ಪು ಮರು ಪರಿಶೀಲನೆಗೆ ಸುಪ್ರೀಂಕೋರ್ಟ್ ಒಪ್ಪಿಗೆ ನೀಡಿತು. ಎಲ್ಲ ವಯೋಮಾನದ ಮಹಿಳೆಯರಿಗೂ ದೇಗುಲ ಪ್ರವೇಶಕ್ಕೆ ಅವಕಾಶ ಕಲ್ಪಿಸುವ ತೀರ್ಪನ್ನು ವಿರೋಧಿಸಿ ಸಲ್ಲಿಕೆಯಾಗಿರುವ ಅರ್ಜಿಗಳ ವಿಚಾರಣೆಯನ್ನು 2019 ಜನವರಿ 22ರಂದು ನಡೆಸುವುದಾಗಿ ತಿಳಿಸಿತು. ಮುಖ್ಯ ನ್ಯಾಯಮೂರ್ತಿ ರಂಜನ್ ಗೋಗೊಯ್ ನೇತೃತ್ವದಲ್ಲಿ ನ್ಯಾಯಮೂರ್ತಿಗಳಾದ ಎನ್. ನಾರಿಮನ್, ಎ. ಎಂ. ಖಾನ್ವಿಲ್ಕರ್, ಡಿ. ವೈ. ಚಂದ್ರಚೂಡ್ ಮತ್ತು ಇಂದೂ ಮಲ್ಹೋತ್ರಾ ಅವರನ್ನು ಒಳಗೊಂಡ ಪೀಠದಿಂದ 49 ಪುನರ್ ಪರಿಶೀಲನಾ ಅರ್ಜಿಗಳ ವಿಚಾರಣೆ ನಡೆಯಲಿದೆ.

ಜೂನ್ 23: ವಿಸ್ತಾರವಾದ ಬೇಟಿ ಬಚಾವೋ

ಕೇಂದ್ರ ಸರ್ಕಾರದ ಬೇಟಿ ಬಚಾವೋ ಬೇಟಿ ಪಢಾವೋ ಯೋಜನೆಗೆ ರಾಜ್ಯದ ಯಾದಗಿರಿ, ಹಾವೇರಿ, ಗದಗ, ದಕ್ಷಿಣ ಕನ್ನಡ ಜಿಲ್ಲೆ ಆಯ್ಕೆಯಾದವು. ಲಿಂಗಾನುಪಾತದಲ್ಲಿನ ಅಂತರ ತೀವ್ರವಾಗಿ ಹೆಚ್ಚುತ್ತಿರುವ ಕಾರಣದಿಂದ ಈ ಜಿಲ್ಲೆಗಳನ್ನು ಆಯ್ಕೆ ಮಾಡಲಾಗಿದೆ. ಸಮಾಜದಲ್ಲಿರುವ ಲಿಂಗ ಅಸಮಾನತೆಯನ್ನು ತಡೆಗಟ್ಟುವ ಉದ್ದೇಶದಿಂದ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಮಹತ್ವದ ಯೋಜನೆ ಇದಾಗಿದೆ.

ತ್ರಿವಳಿ ತಲಾಕ್ ಮಸೂದೆ ಮತ್ತೆ ಮಂಡನೆ

ತ್ರಿವಳಿ ತಲಾಕ್ ಮಸೂದೆಗೆ ರಾಜ್ಯಸಭೆಯಲ್ಲಿ ಅನುಮೋದನೆ ದೊರೆಯದ ಹಿನ್ನೆಲೆಯಲ್ಲಿ ಪ್ರಧಾನಮಂತ್ರಿ್ರ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಈ ಕುರಿತು ಸುಗ್ರೀವಾಜ್ಞೆ ಹೊರಡಿಸಲು ಸೆಪ್ಟೆಂಬರ್ 19ರಂದು ತೀರ್ವನಿಸಲಾಯಿತು. ತ್ರಿ್ರಳಿ ತಲಾಕ್ ತಿದ್ದುಪಡಿ ಮಸೂದೆಗೆ ಲೋಕಸಭೆಯಲ್ಲಿ ಅನುಮೋದನೆ ದೊರೆತಿದೆ. ಆದರೆ, ರಾಜ್ಯಸಭೆಯಲ್ಲಿ ಅನುಮೋದನೆ ದೊರೆತಿಲ್ಲ. ಇದರಿಂದಾಗಿ ತ್ರಿವಳಿ ತಲಾಕ್ ತಿದ್ದುಪಡಿ ಮಸೂದೆ ಕಾಯ್ದೆಯಾಗಿ ಜಾರಿಗೆ ಬರಲು ಸಾಧ್ಯವಾಗಿರಲಿಲ್ಲ. ಸುಗ್ರೀವಾಜ್ಞೆಗೆ 6 ತಿಂಗಳೊಳಗೆ ಸಂಸತ್ತಿನಲ್ಲಿ ಅನುಮೋದನೆ ಪಡೆಯಬೇಕು. ಹೀಗಾಗಿ, ಪ್ರಸ್ತುತ ಚಳಿಗಾಲದ ಅಧಿವೇಶನದಲ್ಲಿ ಮಸೂದೆಯನ್ನು ಪುನಃ ಮಂಡಿಸಲಾಗಿದೆ. ಇದಕ್ಕೂ ಮುನ್ನ, ಆಗಸ್ಟ್​ನಲ್ಲಿ ಮಸೂದೆಯಲ್ಲಿ ಕೆಲ ತಿದ್ದುಪಡಿಗಳನ್ನು ಮಾಡಲಾಗಿದೆ.

ಸಾಧನೆಯ ಮಿಂಚು

# ಇಂದೂ ಮಲ್ಹೋತ್ರಾ: ಬೆಂಗಳೂರು ಮೂಲದ ಇವರು ಸುಪ್ರೀಂ ಕೋರ್ಟ್ ಬಾರ್​ನಿಂದ ನ್ಯಾಯಮೂರ್ತಿಯಾದ ಮೊದಲ ಮಹಿಳೆ ಎಂಬ ಖ್ಯಾತಿಗೆ ಪಾತ್ರರಾದರು. ಏ.26ರಂದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಇಂದೂ ಏ.27ರಂದು ಮೊದಲ ಕಲಾಪವನ್ನು ಮುಖ್ಯ ನ್ಯಾಯಮೂರ್ತಿ ಅವರನ್ನೊಳಗೊಂಡ ತ್ರಿ ಸದಸ್ಯ ಪೀಠದೊಂದಿಗೆ ಆರಂಭಿಸಿದರು.

# ಅಭಿಲಾಷಾ ಕುಮಾರಿ: ಮಣಿಪುರ ಹೈಕೋರ್ಟಿನ ಮೊದಲ ಮಹಿಳಾ ಮುಖ್ಯ ನ್ಯಾಯಮೂರ್ತಿಯಾಗಿ ಫೆ.9ರಿಂದ 22ರವರೆಗೆ ಕಾರ್ಯನಿರ್ವಹಿಸಿ ನಿವೃತ್ತರಾದರು. ಇದಕ್ಕೂ ಮುನ್ನ 2006ರಿಂದ 2018ರವರೆಗೆ ಗುಜರಾತ್ ಹೈಕೋರ್ಟ್ ನ್ಯಾಯಾಧಿಶೆಯಾಗಿ, ಗುಜರಾತ್ ಮಾನವ ಹಕ್ಕು ಆಯೋಗದ ಅಧ್ಯಕ್ಷೆಯಾಗಿ ಕಾರ್ಯನಿರ್ವಹಿಸಿದರು. ಅಭಿಲಾಷಾ ಹಿಮಾಚಲ ಪ್ರದೇಶದ ಮಾಜಿ ಮುಖ್ಯಮಂತ್ರಿ ವೀರಭದ್ರ ಸಿಂಗ್ ಅವರ ಪುತ್ರಿಯೂ ಹೌದು.

# ಅವನಿ ಚತುರ್ವೆದಿ: ಮಧ್ಯಪ್ರದೇಶದ ರೇವಾ ಜಿಲ್ಲೆಯ ಅವನಿ ಯುದ್ಧವಿಮಾನದ ಮೊದಲ ಮಹಿಳಾ ಪೈಲಟ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. 2016 ಜೂನ್​ನಲ್ಲಿ ಇವರನ್ನು ವಾಯುಪಡೆಯ ಯುದ್ಧವಿಮಾನ ವಿಭಾಗಕ್ಕೆ ನಿಯೋಜಿಸಲಾಯಿತು. ಅವನಿ 2018 ಅಕ್ಟೋಬರ್ 7ರಂದು ಯುದ್ಧವಿಮಾನದ ಮಹಿಳಾ ಪೈಲಟ್ ಆಗಿ ಕಾರ್ಯ ಆರಂಭಿಸಿದರು. ಅಂದಹಾಗೆ, ಇವರ ತರಬೇತಿಯ ಮೂರನೇ ಹಂತವನ್ನು ಪೂರ್ಣಗೊಳಿಸಿದ್ದು ಕರ್ನಾಟಕದ ಬೀದರ್​ನಲ್ಲಿ.

# ಉಷಾ ಅನಂತ್​ಸುಬ್ರಮಣಿಯನ್: ಅಲಹಾಬಾದ್ ಬ್ಯಾಂಕ್​ನ ಕಾರ್ಯನಿರ್ವಾಹಕ ನಿರ್ದೇಶಕಿ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆಗಿರುವ ಉಷಾ ಇಂಡಿಯನ್ ಬ್ಯಾಂಕ್ ಅಸೋಸಿಯೇಷನ್ (ಐಬಿಎ)ನ ಮೊದಲ ಮಹಿಳಾ ಅಧ್ಯಕ್ಷೆಯಾಗಿದ್ದಾರೆ (2017-18).

# ಪ್ರಿಯಾಂಕಾ ಚೋಪ್ರಾ: ನಟಿ ಪ್ರಿಯಾಂಕಾ ಯುನಿಸೆಫ್ ಗುಡ್​ವಿಲ್​ನ ರಾಯಭಾರಿಯಾಗಿದ್ದು, ಈ ಬಾರಿ ಮದರ್ ತೆರೇಸಾ ಮೆಮೋರಿಯಲ್ ಪ್ರಶಸ್ತಿಗೆ ಭಾಜನರಾದರು.

ವಿಜಯವಾಣಿ ಟೀಂ: ರವೀಂದ್ರ ಎಸ್. ದೇಶಮುಖ್, ಸುಮನಾ ಲಕ್ಷ್ಮೀಶ ವಿನ್ಯಾಸ: ಅಶ್ವತ್ಥ ಕೃಷ್ಣ