ವರ್ಷದ ಹಿನ್ನೋಟ|ನೆನಪುಗಳನ್ನು ಬಿಟ್ಟು ಹೋದವರು…

ಹಲವು ರಂಗದ ಗಣ್ಯರು, ಖ್ಯಾತನಾಮರು ಈ ವರ್ಷ ಇಹಲೋಕ ತ್ಯಜಿಸಿದರೂ, ತಮ್ಮ ಕೊಡುಗೆ, ನೆನಪುಗಳನ್ನು ಬಿಟ್ಟು ಹೋದರು. ಅಂಥ ಕೆಲ ವ್ಯಕ್ತಿತ್ವಗಳ ಮಾಹಿತಿ ಇಲ್ಲಿದೆ.

ಶ್ರೀ ಜಯೇಂದ್ರ ಸರಸ್ವತಿ(18.07.1935-28.02.2018)

ದೇಶದ ಪ್ರಮುಖ ಮಠಗಳಲ್ಲೊಂದಾದ ಕಂಚಿ ಕಾಮಕೋಟಿ ಪೀಠದ ಶಂಕರಾಚಾರ್ಯ ಶ್ರೀ ಜಯೇಂದ್ರ ಸರಸ್ವತಿ ಸ್ವಾಮೀಜಿ ಫೆ.28ರಂದು ದೈವಾಧೀನರಾದರು. ಅವರು ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದರು. ಮಠದ 69ನೇ ಪೀಠಾಧಿಪತಿಗಳಾಗಿದ್ದ ಶ್ರೀಗಳಿಗೆ 82 ವರ್ಷ ವಯಸ್ಸಾಗಿತ್ತು. ಮೌಲ್ಯಯುತ ಚಿಂತನೆ, ಸೇವಾ ಮನೋಭಾವದ ಮೂಲಕ ಲಕ್ಷಾಂತರ ಭಕ್ತರ ಮನಸ್ಸುಗಳಲ್ಲಿ ನೆಲೆ ನಿಂತ ಕಂಚಿ ಶ್ರೀಗಳು ಹಿಂದೂಗಳ ಮತಾಂತರ ತಡೆಯಲು ಸಾಕಷ್ಟು ಶ್ರಮಿಸಿದ್ದರು ಮತ್ತು ಧಾರ್ವಿುಕ ಸುಧಾರಣೆಗಳನ್ನು ತರುವಲ್ಲಿ ಮುಂಚೂಣಿಯಲ್ಲಿದ್ದವರು.

ತರುಣ್ ಸಾಗರ್ ಮಹಾರಾಜ್ (26.06.1967-01.09.2018)

‘ಕಡವೇ ಪ್ರವಚನ’ ಖ್ಯಾತಿಯ ಕ್ರಾಂತಿಕಾರಿ ಸಂತ ತರುಣ್ ಸಾಗರ್ ಮಹಾರಾಜ್ ಅಲ್ಪಕಾಲೀನ ಅಸೌಖ್ಯದ ಬಳಿಕ ಜಿನೈಕ್ಯರಾದರು. ಜೈನಧರ್ಮದ ಸುಧಾರಣೆ ಬಗ್ಗೆ ಅಷ್ಟೇ ಅಲ್ಲದೆ ವ್ಯಕ್ತಿತ್ವ ವಿಕಸನ, ನೈಜ ಆಧ್ಯಾತ್ಮ, ಮೌಲ್ಯಯುತ ಜೀವನ ಸಾಗಿಸುವ ಬಗ್ಗೆ ಪರಿಣಾಮಕಾರಿಯಾಗಿ ಪ್ರವಚನ ನೀಡುತ್ತಿದ್ದರು. ‘ಈ ದೇಶದ ರಾಜಕಾರಣಿಗಳು ಸುಧಾರಿಸಿದರೆ ಬಹುತೇಕ ಸಮಸ್ಯೆಗಳು ಕೊನೆಗೊಳ್ಳುತ್ತವೆ’ ಎಂದು ಬಲವಾಗಿ ಹೇಳುತ್ತಿದ್ದ ಅವರು ಈ ನಿಟ್ಟಿನಲ್ಲಿ ಕೆಲ ರಾಜ್ಯಗಳ ವಿಧಾನಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಕೆಂಪುಕೋಟೆಯಿಂದ ನೀಡಿದ ಪ್ರವಚನವಂತೂ ಸಂಚಲನ ಸೃಷ್ಟಿಸಿತು.

ಲಕ್ಷ್ಮೀವರ ತೀರ್ಥರು(08.06.1964-19.07.2018)

ಅಷ್ಟಮಠಗಳಲ್ಲೊಂದಾದ ಶಿರೂರು ಮಠದ ಯತಿ ಪರಂಪರೆಯಲ್ಲಿ 30ನೆಯವರಾದ ಶ್ರೀ ಲಕ್ಷ್ಮೀವರ ತೀರ್ಥ ಶ್ರೀಪಾದರು ಅಲ್ಪಕಾಲೀನ ಅಸೌಖ್ಯದಿಂದ ಹರಿಪಾದ ಸೇರಿದರು. ವೈವಿಧ್ಯಮಯ ವ್ಯಕ್ತಿತ್ವದವರಾಗಿದ್ದ ಸ್ವಾಮೀಜಿ, ಸಂಗೀತ, ಸಾಹಿತ್ಯದ ಜತೆಗೆ ಉತ್ತಮ ಈಜುಪಟು ಆಗಿದ್ದರು. ಶಿವಮಣಿ ಜತೆ ಡ್ರಮ್ ವಾದನದಲ್ಲಿ ಭಾಗಿಯಾಗಿದ್ದರಲ್ಲದೆ, 2ನೇ ಪರ್ಯಾಯದಲ್ಲಿ ಕೃಷ್ಣ ದೇವರಿಗೆ 365 ಬಗೆಯ ಅಲಂಕಾರ ಮಾಡಿದ್ದರು. ಪ್ರಥಮ ಪರ್ಯಾಯವನ್ನು 1978-80ರವರೆಗೆ, ಎರಡನೇ ಪರ್ಯಾಯವನ್ನು 1996-98, ತೃತೀಯ ಪರ್ಯಾಯ 2012-14ರವರೆಗೆ ನಡೆಸಿದ್ದರು.

ಜಾಫರ್ ಷರೀಫ್ (03.11.1933-25.11.2018)

ಕರ್ನಾಟಕದ ಪಾಲಿಗೆ ರೈಲ್ವೆ ಷರೀಫ್ ಎನಿಸಿಕೊಂಡ ಹಿರಿಯ ರಾಜಕಾರಣಿ, ಕೇಂದ್ರದ ಮಾಜಿ ಸಚಿವ ಸಿ.ಕೆ. ಜಾಫರ್ ಷರೀಫ್ ತೀವ್ರ ಉಸಿರಾಟ ಸಮಸ್ಯೆಯಿಂದ ಕೊನೆಯುಸಿರೆಳೆದರು. ಏಳು ಬಾರಿ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರ ಪ್ರತಿನಿಧಿಸಿದ್ದ ಅವರು, ನರಸಿಂಹ ರಾವ್ ಸರ್ಕಾರದಲ್ಲಿ ರೈಲ್ವೆ ಸಚಿವರಾಗಿ ಕರ್ನಾಟಕಕ್ಕೆ ನೀಡಿದ ಕೊಡುಗೆ ಚರಿತ್ರಾರ್ಹ. ರಾಜ್ಯ ಕಾಂಗ್ರೆಸ್​ನ ಅಲ್ಪಸಂಖ್ಯಾತ ನಾಯಕರಾಗಿ ಸರಿಸುಮಾರು ನಾಲ್ಕು ದಶಕಗಳ ನೇತೃತ್ವ ವಹಿಸಿದ್ದ ಜಾಫರ್ ಷರೀಫ್, ಹತ್ತಾರು ನಾಯಕರನ್ನು ಬೆಳೆಸಿದರು. ಕೇಂದ್ರದಲ್ಲೂ ಪ್ರಭಾವಿಯಾಗಿ ಕಾಣಿಸಿಕೊಂಡು ಕೇಂದ್ರ ಮಂತ್ರಿಮಂಡಲದಲ್ಲಿ ಮಹತ್ವದ ರೈಲ್ವೆ ಖಾತೆಯನ್ನೇ ಪಡೆದು ಸೈ ಎನಿಸಿಕೊಂಡರು.

ಸೀನಿಯರ್ ಬುಷ್ (12.06.1924-30.11.2018)

ಅಮೆರಿಕ ಇತಿಹಾಸದ ವಿಭಿನ್ನ ಕಾಲಘಟ್ಟಗಳಲ್ಲಿ ನಿಭಾಯಿಸಿದ ವಿಶಿಷ್ಟ ಹೊಣೆಗಾರಿಕೆಗಳಿಂದಾಗಿ ತಮ್ಮದೇ ಆದ ಛಾಪು ಮೂಡಿಸಿದ್ದ, ‘ಸೀನಿಯರ್ ಬುಷ್’ ಎಂದೇ ಹೆಸರಾಗಿದ್ದ ಜಾರ್ಜ್ ಹರ್ಬರ್ಟ್ ವಾಕರ್ ಬುಷ್ 94ನೇ ವಯಸ್ಸಿನಲ್ಲಿ ನಿಧನರಾದರು. ಎರಡನೇ ಮಹಾಯುದ್ಧದ ವೇಳೆ ಪೈಲಟ್ ಆಗಿ ಸೇವೆ ಸಲ್ಲಿಸಿ ‘ವಿಶ್ವಯುದ್ಧದ ಹೀರೋ’ ಎಂದೇ ಕರೆಸಿಕೊಂಡಿದ್ದ ಬುಷ್, ತರುವಾಯದಲ್ಲಿ ಅಮೆರಿಕದ ಟೆಕ್ಸಾಸ್ ಸಂಸ್ಥಾನದಲ್ಲಿ ತೈಲೋದ್ಯಮಿಯಾಗಿ ಗುರುತಿಸಿಕೊಂಡಿದ್ದರು.1 989-1993ರ ಅವಧಿಯಲ್ಲಿ ಅಮೆರಿಕದ 41ನೇ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದರು.

ಸೋಮನಾಥ ಚಟರ್ಜಿ (25.07.1929-13.08.2018)

ಕಮ್ಯುನಿಸ್ಟ್ ಪಕ್ಷದ ಹಿರಿಯ ನಾಯಕ ಸೋಮನಾಥ ಚಟರ್ಜಿ ಆ.13ರಂದು ಕೊನೆಯುಸಿರೆಳೆದರು. ಸರಳ ವ್ಯಕ್ತಿತ್ವದ ಸೋಮನಾಥ ಚಟರ್ಜಿ ಎಲ್ಲರೊಂದಿಗೂ ಬೆರೆಯುವ ಸ್ನೇಹಜೀವಿಯಾಗಿದ್ದರು. ಅಪಾರ ರಾಜಕೀಯ ಅನುಭವ, ಪಾಂಡಿತ್ಯ ಹೊಂದಿದ್ದ ಅವರು ರಾಷ್ಟ್ರ ರಾಜನೀತಿಗೆ ಮಹತ್ವದ ಕೊಡುಗೆ ನೀಡಿದರು. ಎಲ್ಲ ಪಕ್ಷದವರೊಂದಿಗೆ, ಭಿನ್ನ ಸಿದ್ಧಾಂತದವರೊಂದಿಗೆ,ವಿವಿಧ ನಾಯಕರೊಂದಿಗೆ ಉತ್ತಮ ಸಂಬಂಧ, ಬಾಂಧವ್ಯ ಇರಿಸಿಕೊಂಡಿದ್ದರು. ಈ ವ್ಯಕ್ತಿತ್ವದ ಕಾರಣದಿಂದಲೇ ಅವರು ಲೋಕಸಭಾ ಸ್ಪೀಕರ್ ಹುದ್ದೆವರೆಗೂ ತಲುಪಿದರು.