ವರ್ಷದ ಹಿನ್ನೋಟ|ಡೇಟಾ ಕಳವಿನ ಆತಂಕ ಚಾಲೆಂಜ್​ಗಳ ಗೋಳಾಟ

ದಿನನಿತ್ಯ ಬದುಕಿನ ಅವಿಭಾಜ್ಯ ಅಂಗವೇ ಆಗಿರುವ ಸಾಮಾಜಿಕ ಜಾಲತಾಣಗಳು ಈ ವರ್ಷವಿಡೀ ಹಲವು ಕಾರಣಗಳಿಂದ ಸುದ್ದಿಯಲ್ಲಿದ್ದವು. ನಾನಾ ಬಗೆಯ ಚ್ಯಾಲೆಂಜ್​ಗಳು, ಹೊಸ ಅಪ್​ಡೇಟ್​ಗಳು ಒದಗಿಸಿದ ಸೌಲಭ್ಯಗಳು, ಲೈವ್ ವಿಡಿಯೋಗಳ ಭರಾಟೆಗಳ ನಡುವೆಯೇ ಬಳಕೆದಾರರ ಮಾಹಿತಿ ಕಳವು ಆತಂಕ ಸೃಷ್ಟಿಸುವ ಜತೆಗೆ, ಸಾಮಾಜಿಕ ಮಾಧ್ಯಮಗಳ ವಿಶ್ವಾಸಾರ್ಹತೆಗೆ ಪೆಟ್ಟು ನೀಡಿತು.

ಡೇಟಾ ಲೀಕ್ ಸದ್ದು

ಪ್ರಮುಖ ಸಾಮಾಜಿಕ ಜಾಲತಾಣವಾಗಿ ಗುರುತಿಸಿಕೊಂಡಿರುವ ಫೇಸ್​ಬುಕ್​ನ ಕೋಟ್ಯಂತರ ಬಳಕೆದಾರರ ಮಾಹಿತಿ ಕಳವಾಗಿದೆ ಎಂಬ ಸಂಗತಿ ಈ ಬಾರಿ ಅಲ್ಲೋಲ-ಕಲ್ಲೋಲ ಸೃಷ್ಟಿಸಿತಲ್ಲದೆ ಫೇಸ್​ಬುಕ್ ಸಂಸ್ಥೆಯ ವರ್ಚಸ್ಸಿಗೂ ಭಾರಿ ಧಕ್ಕೆ ಒದಗಿಸಿತು. ಈ ಪ್ರಮಾದಕ್ಕಾಗಿ ಫೇಸ್​ಬುಕ್ ಸಹ ಸಂಸ್ಥಾಪಕ ಮಾರ್ಕ್ಸ್

ಜುಕರ್​ಬರ್ಗ್ ಕ್ಷಮೆ ಕೇಳಿದರೂ, ಕಳೆದುಕೊಂಡ ವಿಶ್ವಾಸ ಮರಳಿ ಪಡೆಯಲು ಸಾಧ್ಯವಾಗಲಿಲ್ಲ. ಈ ಬೆಳವಣಿಗೆಯಿಂದ ಜನರು ಎಷ್ಟು ಕುಪಿತರಾದರೆಂದರೆ ‘ಫೇಸ್​ಬುಕ್​ನಿಂದ ಹೊರಬನ್ನಿ’ ಎಂದು ಅಭಿಯಾನವನ್ನೇ ನಡೆಸಿ, ಲಕ್ಷಾಂತರ ಜನರು ಫೇಸ್​ಬುಕ್ ಬಳಕೆ ನಿಲ್ಲಿಸಿದರು. ಇದರಿಂದ ಫೇಸ್​ಬುಕ್ ಷೇರುಗಳು ಕೂಡ ಪಾತಾಳ ಕಂಡವು. ಈ ಎಲ್ಲ ಬೆಳವಣಿಗೆಗಳ ಬಗ್ಗೆ ಸ್ಪಷ್ಟನೆ ನೀಡುವಂತೆ ಹಲವು ರಾಷ್ಟ್ರಗಳು ಫೇಸ್​ಬುಕ್ ಸಂಸ್ಥೆಯನ್ನು ಆಗ್ರಹಿಸಿದರು. ಇದರ ಬೆನ್ನಲ್ಲೇ, ಇತರೆ ಸಾಮಾಜಿಕ ಜಾಲತಾಣಗಳಲ್ಲಿನ ಬಳಕೆದಾರರ ಮಾಹಿತಿಯೂ ಸುರಕ್ಷಿತವಾಗಿಲ್ಲ ಎಂಬ ಅನುಮಾನ ಆತಂಕದ ಸ್ವರೂಪ ಪಡೆದುಕೊಂಡು, ಚರ್ಚೆಗೆ ಗ್ರಾಸವಾಯಿತು.

ಕಿಕಿ ಚಾಲೆಂಜ್ ಗೋಳು

ಈ ವರ್ಷ ಸಾಮಾಜಿಕ ಜಾಲತಾಣದಲ್ಲಿ ಅತ್ಯಂತ ಅಪಾಯಕಾರಿ ಎನಿಸುವಂಥ ಟ್ರೆಂಡ್ ಆಗಿದ್ದು ಕಿಕಿ ಡಾನ್ಸ್ ಮತ್ತು ಫಾಲಿಂಗ್ ಸ್ಟಾರ್. ‘ಕಿಕಿ’ ಚಾಲೆಂಜ್ ಸ್ವೀಕರಿಸಿದವರು ಚಾಲನೆಯಲ್ಲಿರುವ ವಾಹನದಿಂದ ಹೊರಬಂದು ವಾಹನದ ವೇಗಕ್ಕೆ ಹಾಗೂ ಹಾಡಿಗೆ ತಕ್ಕಂತೆ ಹೆಜ್ಜೆ ಹಾಕುವುದಾದರೆ, ‘ಫಾಲಿಂಗ್ ಸ್ಟಾರ್’ನಲ್ಲಿ ಚಾಲೆಂಜ್ ಸ್ವೀಕರಿಸಿದವವರು ನಡೆಯುತ್ತಲೇ ಕೆಳಗೆ ಬಿದ್ದು, ತಮ್ಮ ಅಕ್ಕಪಕ್ಕದಲ್ಲಿ ಬೆಲೆಬಾಳುವ ವಸ್ತುಗಳೊಂದಿಗೆ ಫೋಟೋವನ್ನು ಕ್ಲಿಕ್ಕಿಸಿಕೊಂಡು ಅದನ್ನು ಇನ್​ಸ್ಟಾಗ್ರಾಮ್ಲ್ಲಿ ಅಪ್​ಲೋಡ್ ಮಾಡಬೇಕು. ಇವೆರಡೂ ನೋಡುಗರಿಗೆ ಮಜಾ ನೀಡಿದರೆ, ಚಾಲೆಂಜ್ ಸ್ವೀಕರಿಸಿದವರ ಪೈಕಿ ಕೆಲವರು ಕೈ-ಕಾಲು ಮುರಿದುಕೊಂಡಿದ್ದರೆ, ಕೆಲವರು ಜೀವವನ್ನೇ ಕಳೆದುಕೊಂಡಿದ್ದಾರೆ. ಹಾಗಂತ, ಹುಚ್ಚು ಮನಸುಗಳು ಇಂಥ ಚಾಲೆಂಜ್ ತೆಗೆದುಕೊಳ್ಳುವುದಂತೂ ನಿಲ್ಲಿಸಿಲ್ಲ! ಮೆಕ್ಸಿಕೊ ವಿಮಾನ ನಿಲ್ದಾಣದಲ್ಲಿ ಇಬ್ಬರು ಹೆಣ್ಣುಮಕ್ಕಳು ಚಲಿಸುತ್ತಿದ್ದ ವಿಮಾನದಿಂದ ಕೆಳಗಿಳಿದು ಕಿಕಿ ಡ್ಯಾನ್ಸ್ ಮಾಡಿ ಹೊಗಳಿಕೆ, ತೆಗಳಿಕೆಗೆ ಒಳಗಾಗಿದ್ದಾರೆ. ಇನ್ನು ಮುಂಬೈನಲ್ಲಿ ಚಲಿಸುವ ರೈಲಿನಲ್ಲಿ ಕಿಕಿ ಡ್ಯಾನ್ಸ್ ಮಾಡುವ ‘ಸಾಹಸ’ ತೋರಿದ ಯುವಕನೊಬ್ಬನಿಗೆ ಹಾಗೂ ಅದನ್ನು ಯೂಟ್ಯೂಬ್​ನಲ್ಲಿ ಹರಿಬಿಟ್ಟವರಿಗೆ ಅಲ್ಲಿಯ ಕೋರ್ಟ್, ಮೂರು ದಿನ ರೈಲ್ವೆ ನಿಲ್ದಾಣವನ್ನು ಸ್ವಚ್ಛಗೊಳಿಸುವ ಶಿಕ್ಷೆಯನ್ನೂ ನೀಡಿಯಾಗಿದೆ.

ಡಬ್​ಸ್ಮ್ಯಾಶ್​ ಎಂಬ ಮೋಹ

ಜಾಲತಾಣಗಳ ಪೈಕಿ ಬಹುದೊಡ್ಡ ಪಾಲು ಹೊಂದಿರುವುದು ಫೇಸ್​ಬುಕ್. ಇದರ ಬಳಕೆದಾರರ ಸಂಖ್ಯೆ 343 ಕೋಟಿಗೆ ಏರಿಕೆಯಾಗಿದೆ. ಫೇಸ್​ಬುಕ್ ಬಳಕೆದಾರರು ಜಗತ್ತಿನಲ್ಲಿ ಇದ್ದಾರೆ. 2017ಕ್ಕೆ ಹೋಲಿಸಿದರೆ, ಈ ವರ್ಷ ಬಳಕೆದಾರರ ಸಂಖ್ಯೆ ಶೇಕಡ 10ರಷ್ಟು ಹೆಚ್ಚಾಗಿದೆ . ಈ ವರ್ಷ ವಿಶ್ವದಲ್ಲಿ ಪ್ರತಿದಿನ ಸರಾಸರಿ 30 ಕೋಟಿ ಫೋಟೋಗಳು ಅಪ್​ಲೋಡ್ ಆಗಿರುವುದೇ ಇದಕ್ಕೆ ಸಾಕ್ಷಿ. ಆದರೆ ಈ ವರ್ಷ ಆಘಾತಕಾರಿ ಎನ್ನುವ ಹೊಸ ಟ್ರೆಂಡ್ ಶುರುವಾಗಿದ್ದು, ಆತ್ಮಹತ್ಯೆ ಮತ್ತು ಕೊಲೆಗಳನ್ನು ‘ಫೇಸ್​ಬುಕ್ ಲೈವ್’ ಮಾಡುತ್ತಿರುವುದು! ಎಷ್ಟು ಮಂದಿ ಈ ಕೃತ್ಯ ಎಸಗಿದ್ದಾರೆ ಎಂಬ ನಿಖರ ಮಾಹಿತಿ ಎಲ್ಲಿಯೂ ಲಭ್ಯವಿಲ್ಲವಾದರೂ ಕಳೆದ ವರ್ಷಕ್ಕಿಂತ ಅತ್ಯಧಿಕ ಪ್ರಮಾಣದಲ್ಲಿ ಈ ಬಾರಿ ‘ಲೈವ್ ಆತ್ಮಹತ್ಯೆ’ ನಡೆದಿದ್ದು, ಕೆಲವು ಕೊಲೆ ಪ್ರಕರಣಗಳ ನೇರಪ್ರಸಾರವೂ ನಡೆದಿದೆ. ತಾವು ‘ಡೆತ್​ನೋಟ್’ ಬರೆದಿಟ್ಟರೆ ಅದು ಸಂಬಂಧಿಸಿದವರ ಕೈ ಸೇರುವ ಭರವಸೆ ಇಲ್ಲ ಎನ್ನುವ ಕಾರಣಕ್ಕೆ ಸಾಕ್ಷ್ಯಾಧಾರದ ರೂಪದಲ್ಲಿ ‘ಲೈವ್’ ಮಾಡುತ್ತಿರುವುದಾಗಿ ಕೆಲವರು ಸಾವಿಗೂ ಮುನ್ನ ನೀಡಿರುವ ಹೇಳಿಕೆಯಿಂದ ವ್ಯಕ್ತವಾಗಿದೆ.

ಕಾನೂನು ಕೂಡ ತಮ್ಮನ್ನು ಏನೂ ಮಾಡಲು ಸಾಧ್ಯವಿಲ್ಲ ಎಂಬ ಹುಂಬುತನದಿಂದ ಇನ್ನು ಕೆಲವರು ಕೊಲೆ ಮಾಡುವುದನ್ನೂ ಲೈವ್ ಮೂಲಕ ತೋರಿಸುವ ‘ಧೈರ್ಯ’ ತೋರಿದ್ದಾರೆ! ಮತ್ತೆ ಹಲವರು ಎಲ್ಲೋ ನಡೆಯುತ್ತಿರುವ ಹಿಂಸಾತ್ಮಕ ಕೃತ್ಯಗಳನ್ನು ‘ಲೈವ್’ ಮೂಲಕ ತೋರಿಸಿದ್ದಾರೆ.

ಬಹಳ ಫೇಮಸ್ ಆದ ಟ್ರೆಂಡ್​ಗಳಲ್ಲಿ ಒಂದು ಡಬ್​ಸ್ಮಾ್ಶಶ್. ತಮ್ಮಿಷ್ಟದ ನಟ-ನಟಿಯರ ಚಿತ್ರಗಳ ಹಾಡು, ಸಂಭಾಷಣೆಗಳಿಗೆ ಅಭಿನಯಿಸಿ, ಆ ವೀಡಿಯೋ ಪೋಸ್ಟ್ ಮಾಡುವ ಟ್ರೆಂಡ್ ಇದು. ಅಭಿಮಾನಿಗಳ ದಂಡನ್ನು ಸೃಷ್ಟಿಸಿಕೊಳ್ಳಲು ಇದೊಂದು ತಂತ್ರವೂ ಆಗಿದೆ. ಇದು ಎಷ್ಟು ಜನಪ್ರಿಯ ಆಯಿತೆಂದರೆ ಜನಸಾಮಾನ್ಯರು ಮಾತ್ರವಲ್ಲದೇ ಸಿನಿಮಾ, ಕಿರುತೆರೆ ನಟ-ನಟಿಯರೂ ಡಬ್​ಸ್ಮಾ್ಯಶ್ ಮಾಡಿ ಫೇಸ್​ಬುಕ್, ಯೂಟ್ಯೂಬ್​ಗಳಲ್ಲಿ ಹರಿಬಿಟ್ಟಿದ್ದಾರೆ, ಬಿಡುತ್ತಿದ್ದಾರೆ. ಇದರ ಜನಪ್ರಿಯತೆ ಕಂಡು ‘ಪ್ಲೇಸ್ಟೋರ್’ನಲ್ಲಿ ಹಲವಾರು ಹೊಸ ಆಪ್​ಗಳೂ ಲಭ್ಯವಾಗಿವೆ.

ಬೀಗಬೇಡ… ನೋಡಿದೀನಿ…!

ಹ್ಯಾಷ್​ಟ್ಯಾಗ್​ನೊಂದಿಗೆ ‘ಬೀಗಬೇಡ’ ಶಬ್ದ ಸೇರಿಸಿ ವಾಕ್ಯಗಳನ್ನು ರಚಿಸುವುದು ದೊಡ್ಡ ಟ್ರೆಂಡ್ ಆಗಿ ಕಾಣಿಸಿಕೊಂಡಿತು. ಹಾಸ್ಯನಟ ಪ್ರಾಣೇಶ್ ಗಂಗಾವತಿ ಕಾರ್ಯಕ್ರಮವೊಂದರಲ್ಲಿ ‘ಬೀಗಬೇಡ’ ಎಂಬ ಪದವನ್ನು ಕಾಯಿನ್ ಮಾಡಿದ್ದು, ಅಲ್ಲಿಂದ ಇದು ಶುರುವಾಯಿತು. ಅದರಲ್ಲಿಯೂ ಉತ್ತರ ಕರ್ನಾಟಕದವರ ಸಂದೇಶಗಳಲ್ಲಿ ‘ಬೀಗಬೇಡ’ ಶಬ್ದ ಹೆಚ್ಚಾಗಿ ಕಂಡುಬರುತ್ತದೆ. ಉದಾ: ‘ಸ್ಟೈಲ್ ಎಂದು ಹರಿದ ಪ್ಯಾಂಟನ್ನು ಹಾಕಿಕೊಂಡು ಬೀಗಬೇಡ. ರೋಡ್​ನಲ್ಲಿ ಅರೆಬೆತ್ತಲಾಗಿ ಅಲೆದಾಡೋರನ್ನು ನಾನು ನೋಡಿದ್ದೀನಿ’, ‘ಗೆಲವು ನಂದೆ ಎಂದು ಬೀಗಬೇಡ.. ಸೋತವರಿಬ್ಬರು ಸೇರಿ ಸರ್ಕಾರ ಮಾಡೋದನ್ನೂ ನಾನು ಕಂಡಿದ್ದೀನಿ’. ‘ಬರೀ ಡ್ರೖೆ ಫೂ›ಟ್ಸ್ ತಿನ್ನುತ್ತೇನೆಂದು ಬೀಗಬೇಡ.. ಚಿತ್ರಾನ್ನದಲ್ಲಿ ಕಡಲೇಬೀಜ ಆರಿಸಿಕೊಂಡು ತಿನ್ನೋದನ್ನ ನೋಡಿದ್ದೀನಿ’… ಇತ್ಯಾದಿ.

ಸೀರೆಯಲ್ಲೂ ಜಾಲತಾಣ ಮೋಡಿ

ಜಾಲತಾಣದ ಮೋಡಿ ಈ ಬಾರಿ ಕಂಪ್ಯೂಟರ್, ಮೊಬೈಲ್ ಪರದೆಯಾಚೆಯೂ ಬಂದು ನೀರೆಯರ ಸೀರೆ ಏರಿದ್ದು ಇದೀಗ ಸಕತ್ ವೈರಲ್ ಆಗಿದೆ. ಫೇಸ್ಬುಕ್, ಇಂಸ್ಟಾಗ್ರಾಂ, ಟ್ವಿಟ್ಟರ್ ಇವೆಲ್ಲ ಸೀರೆಗಳು ನೀರೆಯರನ್ನು ಏರಿ ಬೀಗುತ್ತಿವೆ. ಜತೆಗೆ, ಗೂಗಲ್ ಸೀರೆ, ಸ್ಮೈಲಿ ಸೀರೆಯನ್ನುಟ್ಟು ಯುವತಿಯರು, ಮಹಿಳೆಯರು ಮಿಂಚುತ್ತಿದ್ದರೆ, ವಾಟ್ಸ್​ಆಪ್ ಚಿಹ್ನೆ ಇರುವ ಸೀರೆಯನ್ನು ಮುಗಿಬಿದ್ದು ಖರೀದಿಸಿದ್ದಾರೆ.

ಬ್ಯಾನ್ ಆದವು 857 ವೆಬ್​ಸೈಟ್!

ಈ ವರ್ಷಾಂತ್ಯದಲ್ಲಿ ಯೂಟ್ಯೂಬ್ ವೀಕ್ಷಿಸುವ ಭಾರತೀಯರ ಸಂಖ್ಯೆ 23 ಕೋಟಿ ದಾಟಿದೆ. ಈ ಪೈಕಿ 18 ವರ್ಷ ಮೇಲ್ಪಟ್ಟವರು ಶೇಕಡ 85ರಷ್ಟು ಮಂದಿಯಾದರೆ ಉಳಿದವರು ಅಪ್ರಾಪ್ತರು. 2014ರಲ್ಲಿ ಕೇವಲ 16ರಷ್ಟಿದ್ದ ಯೂಟ್ಯೂಬ್ ಚಾನೆಲ್​ಗಳ ಸಂಖ್ಯೆಹೆಚ್ಚುತ್ತಿರುವ ಬೇಡಿಕೆಯಿಂದಾಗಿ ಈಗ 300ರ ಗಡಿ ದಾಟಿದೆ ಎಂದು ವರದಿಯೊಂದು ಹೇಳಿದೆ. ಈ ಪೈಕಿ ಹೆಚ್ಚಿನವರು ಅಶ್ಲೀಲ ಜಾಲತಾಣಗಳ ಮೊರೆ ಹೋಗುತ್ತಿದ್ದು, ಇದರಿಂದಾಗಿ ಅತ್ಯಾಚಾರ ಹಾಗೂ ಕೊಲೆ ಪ್ರಕರಣಗಳು ಹೆಚ್ಚುತ್ತಿರುವುದನ್ನು ಮನಗಂಡ ಕೇಂದ್ರ ಸರ್ಕಾರ ಈ ವರ್ಷ 857ವೆಬ್​ಸೈಟ್​ಗಳನ್ನು ಬ್ಯಾನ್ ಮಾಡಿದೆ. ಇನ್ನು ಉಳಿದ ಅಶ್ಲೀಲ ವೆಬ್​ಸೈಟ್​ಗಳನ್ನೂ ಬ್ಯಾನ್ ಮಾಡಲು ಕ್ರಮ ತೆಗೆದುಕೊಳ್ಳುತ್ತಿದೆ.

ವಾಟ್ಸ್​ಆಪ್ ಸೃಷ್ಟಿಸಿದ ಕೋಲಾಹಲ

ವಾಟ್ಸ್​ಆಪ್ ವದಂತಿ 30ಕ್ಕೂ ಅಧಿಕ ಅಮಾಯಕರನ್ನು ಬಲಿ ಪಡೆಯಿತು. ‘ಮಕ್ಕಳ ಕಳ್ಳರು’ ಬಂದಿದ್ದಾರೆಂಬ ವದಂತಿ ಕ್ಷಣ ಮಾತ್ರದಲ್ಲಿ ಭಾರತದ ಮೂಲೆಮೂಲೆಗಳಲ್ಲಿರುವ ಲಕ್ಷಾಂತರ ಮಂದಿಯ ವಾಟ್ಸ್​ಆಪ್​ನಲ್ಲಿ ಹರಿದಾಡಿದ ಕಾರಣ, ಅನುಮಾನ ಬಂದವರನ್ನೆಲ್ಲ ಅಮಾನುಷವಾಗಿ ಹತ್ಯೆ ಮಾಡಿರುವ ಘಟನೆಗಳು ನಡೆದಿವೆ. ಇದಕ್ಕೆ ಮಾನಸಿಕ ಅಸ್ವಸ್ಥರೇ ಹೆಚ್ಚು ಬಲಿಯಾದರೆ, ದಾರಿಯಲ್ಲಿ ಸುಮ್ಮನೆ ಹೋಗುವವರು ಸೇರಿದಂತೆ ಸಾಫ್ಟ್​ವೇರ್ ಇಂಜಿನಿಯರ್ ಒಬ್ಬರು ಕೂಡ ಈ ವದಂತಿಯಿಂದಾಗಿ ಜೀವ ಕಳೆದುಕೊಂಡರು.