ಶನಿವಾರಸಂತೆ: ಪುರುಷರಿಗೆ ಸರಿ ಸಮಾನರಾಗಿ ಸಾಧನೆ ಮಾಡಿರುವ ಮಹಿಳೆಯರನ್ನು ವಿದ್ಯಾರ್ಥಿನಿಯರು ಆದರ್ಶವಾಗಿ ತೆಗೆದುಕೊಳ್ಳಬೇಕೆಂದು ಶನಿವಾರಸಂತೆ ಮಹಿಳಾ ಸಮಾಜದ ಮಾಜಿ ಅಧ್ಯಕ್ಷೆ ದೇವಾಂಬಿಕ ಮಹೇಶ್ ಹೇಳಿದರು.
ಭಾರತಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಈಗ ಮಹಿಳೆಯರು ಸಾಮಾಜಿಕ, ರಾಜಕೀಯ, ಶೈಕ್ಷಣಿಕ, ವಿಜ್ಞಾನ, ಕ್ರೀಡೆ ಪ್ರತಿಯೊಂದು ಕ್ಷೇತ್ರದಲ್ಲೂ ಸಾಧನೆ ಮಾಡುತ್ತಿದ್ದಾರೆ ಎಂದು ವಿವರಿಸಿದರು.
ಪ್ರಾಂಶುಪಾಲ ಇ.ಎಂ.ದಯಾನಂದ್ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಉಪನ್ಯಾಸಕರಾದ ಟಿ.ಜೆ.ಶೋಭಾ, ಬಿ.ಎಂ.ಪೊನ್ನಪ್ಪ, ಎಚ್.ಎಂ.ವಿವೇಕ್, ವೇದಕುಮಾರ್, ಕೆ.ವಿ.ಚಲನ ಇತರರು ಇದ್ದರು.