ಕೆರೂರ: ಮಹಿಳೆಯರ ಮೇಲೆ ನಡೆಯುತ್ತಿರುವ ಲೈಂಗಿಕ ದೌರ್ಜನ್ಯ, ಬಾಲ್ಯ ವಿವಾಹ ಹಾಗೂ ಭ್ರೂಣ ಹತ್ಯೆ ಪ್ರಕರಣ ತಡೆಗೆ ಕೈಗೊಂಡಿರುವ ಕ್ರಮಗಳ ಕುರಿತು ರಾಜ್ಯದ ಎಲ್ಲ ಜಿಲ್ಲಾಧಿಕಾರಿಗಳು ಹಾಗೂ ಪೊಲೀಸ್ ಇಲಾಖೆಗಳಿಗೆ ಸಮಗ್ರ ಮಾಹಿತಿ ಕೇಳಿದ್ದೇನೆ ಎಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮೀ ಚೌಧರಿ ಹೇಳಿದರು.
ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರಕ್ಕೆ ಸೋಮವಾರ ಭೇಟಿ ನೀಡಿ ಆಸ್ಪತ್ರೆಯಲ್ಲಿನ ವ್ಯವಸ್ಥೆ ಕುರಿತು ಅವರು ಪರಿಶೀಲನೆ ನಡೆಸಿದ ಅವರು, ಮಹಿಳೆಯರ ಸುರಕ್ಷತೆ ಕುರಿತು ಪೊಲೀಸ್ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯವರು ಹಾಸ್ಟೆಲ್, ಕಾಲೇಜು, ಆಸ್ಪತ್ರೆಗಳಲ್ಲಿ ಸಿಸಿಟಿವಿ ಹಾಗೂ ಇನ್ನಿತರ ಭದ್ರತೆಯ ಕುರಿತು ನಿಗಾ ವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ನಂತರ ಆಸ್ಪತ್ರೆಯ ವಿವಿಧ ಕೊಠಡಿಗಳಿಗೆ ತೆರಳಿ ಸ್ವಚ್ಛತೆ ಹಾಗೂ ಸೌಲಭ್ಯಗಳ ಕುರಿತು ರೋಗಿಗಳ ಬಳಿ ಮಾಹಿತಿ ಪಡೆದರು. ಆಸ್ಪತ್ರೆಯಲ್ಲಿನ ಗ್ರೂಪ್ ‘ಡಿ’ ಸಿಬ್ಬಂದಿ ಸಮಸ್ಯೆ ಆಲಿಸಿದ ಅವರು ವೇತನವನ್ನು ಪ್ರತಿ ತಿಂಗಳೂ ನೀಡುವಂತೆ ಸಂಬಂಧಪಟ್ಟ ಅಧಿಕಾರಿಗಳ ಹಾಗೂ ಸರ್ಕಾರದ ಗಮನಕ್ಕೆ ತರುತ್ತೇನೆ ಎಂದರು.
ಜಿಲ್ಲಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಪ್ರಭಾಕರ ಕವಿತಾಳ, ತಹಸೀಲ್ದಾರ್ ಜಿ.ಬಿ. ಮಜ್ಜಿಗೆ, ಟಿಎಚ್‌ಒ ಮಲ್ಲಿಕಾರ್ಜುನ ಪಾಟೀಲ, ಆಸ್ಪತ್ರೆ ವೈದ್ಯಾಧಿಕಾರಿ ಡಾ. ಕಿರಣ ಪತ್ತಾರ, ಡಾ. ಸವಿತಾ ಶೆಟ್ಟರ, ಡಾ. ತೋಹಿದ್ ಖಾಜಿ, ಡಾ. ಶಿವಪ್ಪ ನಾಯಕ, ಸಿಬ್ಬಂದಿ ರವಿ ಬೋರಣ್ಣವರ, ವಿಶ್ವನಾಥ ಮೇಲಗಿರಿ, ಶಿವು ಕಿತ್ತಲಿ, ಅಪ್ಪು ಅಪ್ಪನ್ನವರ, ಸುಮಂಗಲಾ ಬಿ., ಹಿರಿಯರಾದ ಮನೋಹರ ಮಾನ್ವಿ, ಮಹೇಶ ಮುಗಳಿ, ಪಿತಾಂಬ್ರಪ್ಪ ಹವೇಲಿ, ಜಯಶ್ರೀ ದಾಸಮನಿ ಇದ್ದರು.