ರಾಯಚೂರು: ಜಿಲ್ಲೆಯಲ್ಲಿ ಬಿಸಿಲಿನ ತಾಪಮಾನ ಹೆಚ್ಚಾಗಿದ್ದು, ಎಲ್ಲರೂ ಕಣ್ಣುಗಳ ರಕ್ಷಣೆ ಬಗ್ಗೆ ಕಾಳಜಿವಹಿಸಬೇಕು ಎಂದು ಜಿಲ್ಲಾಧಿಕಾರಿ ಕೆ.ನಿತೀಶ್ ಹೇಳಿದರು.
ಇದನ್ನೂ ಓದಿ: ಉಚಿತ ಕಣ್ಣಿನ ತಪಾಸಣೆ ಶಸ್ತ್ರಚಿಕಿತ್ಸಾ ಶಿಬಿರ: 55 ಜನರ ಚಿಕಿತ್ಸೆಗೆ ಕ್ರಮ
ನಗರದ ಒಪೆಕ್ ಆಸ್ಪತ್ರೆಯಲ್ಲಿ ಜಿಲ್ಲಾಡಳಿತ, ಜಿಪಂ, ಜಿಲ್ಲಾ ಆರೋಗ್ಯ ಇಲಾಖೆ, ರಿಮ್ಸ್ ಆಸ್ಪತ್ರೆ, ಶ್ರೀ ವಿವೇಕಾನಂದ ಸೇವಾಶ್ರಮ, ಲಯನ್ಸ್ ಕ್ಲಬ್ ಸಹಯೋಗದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಬೃಹತ್ ಉಚಿತ ಐಒಎಲ್ ನೇತ್ರ ಶಸ್ತ್ರಚಿಕಿತ್ಸಾ ಶಿಬಿರದಲ್ಲಿ ಮಾತನಾಡಿದರು. ಶಿಬಿರದಲ್ಲಿ ಚಿಕಿತ್ಸೆ ಪಡೆದವರು ವೈದ್ಯರ ಸಲಹೆ ಪಾಲಿಸಬೇಕು. ಒಪೆಕ್ ಆಸ್ಪತ್ರೆಯಲ್ಲಿ ಕಳೆದ ಆರು ತಿಂಗಳಲ್ಲಿ ಭಾರಿ ಬದಲಾವಣೆಯಾಗಿದೆ. ಸಾರ್ವಜನಿಕರಿಗೆ ಉತ್ತಮ ಚಿಕಿತ್ಸೆ ಹಾಗೂ ಔಷಧ ನೀಡುವ ಗುರಿ ಹೊಂದಲಾಗಿದೆ. ರಾಜ್ಯ ಸರ್ಕಾರ ಬಜೆಟ್‌ನಲ್ಲಿ ಜಿಲ್ಲೆಗೆ ಕಿದ್ವಾಯಿ ಕ್ಯಾನ್ಸರ್ ಘಟಕ ಘೋಷಿಸಿದ್ದು, ಈಗಾಗಲೇ ಪ್ರಕ್ರಿಯೆ ಆರಂಭವಾಗಿದೆ. ಮುಂದಿನ ದಿನಗಳಲ್ಲಿ ಜನರಿಗೆ ಹೆಚ್ಚಿನ ಚಿಕಿತ್ಸೆ ಸೌಲಭ್ಯ ದೊರೆಯಲಿದೆ ಎಂದು ತಿಳಿಸಿದರು.
ಡಿಎಚ್‌ಒ ಡಾ.ಸುರೇಂದ್ರ ಬಾಬು ಮಾತನಾಡಿ, ಬಡ ಜನರು ಆರೋಗ್ಯ ತಪಾಸಣೆ ಉಚಿತ ಶಿಬಿರಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಧೂಮಪಾನ ಹಾಗೂ ಮದ್ಯಪಾನಗಳಿಂದ ದೂರ ಇರುವ ಮೂಲಕ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದರು. ಕೈಗಾ ನ್ಯೂಕ್ಲಿಯರ್ ಪವರ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿ.ನಿಯಿಂದ ಲೈಫ್‌ಲೈನ್ ಯೋಜನೆಯಡಿ ಡಯಾಲಿಸಿಸ್ ಸಪೋರ್ಟ್ ಇನಿಶಿಯೇಟಿವ್ ಯಂತ್ರ ಉದ್ಘಾಟಿಸಲಾಯಿತು.
ರಿಮ್ಸ್ ಆಸ್ಪತ್ರೆ ನಿರ್ದೇಶಕ ಡಾ.ರಮೇಶ, ಒಪೆಕ್ ಆಸ್ಪತ್ರೆ ವಿಶೇಷಾಧಿಕಾರಿ ಡಾ.ರಮೇಶ ಸಾಗರ್, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ವಿಜಯಶಂಕರ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಗಣೇಶ, ಬೆಂಗಳೂರಿನ ವಿವೇಕಾನಂದ ಸೇವಾಶ್ರಮದ ಅಧ್ಯಕ್ಷ ವೆಂಕಟೇಶ, ಲಯನ್ಸ್ ಕ್ಲಬ್ ಅಧ್ಯಕ್ಷ ವಿ.ಕೆ.ದೇಸಾಯಿ ಇತರರಿದ್ದರು.