More

    ಉದ್ಯಮದಲ್ಲಿ ರಿಸ್ಕಿಗೂ ಒಂದಿಷ್ಟು ಲೆಕ್ಕಾಚಾರವಿರಲಿ..

    ಉದ್ಯಮದಲ್ಲಿ ರಿಸ್ಕಿಗೂ ಒಂದಿಷ್ಟು ಲೆಕ್ಕಾಚಾರವಿರಲಿ..ಉದ್ಯಮದಲ್ಲಿ ಸ್ವಲ್ಪ ಮಟ್ಟಿಗಾದರೂ ರಿಸ್ಕ್ ತೆಗೆದುಕೊಳ್ಳಲೇಬೇಕು. ಆದರೆ, ಜೀವಕ್ಕೆ ಅಪಾಯವಿರುವ ಅಥವಾ ಜೈಲಿಗೆ ಹೋಗಬೇಕಾಗಬಹುದಾದ ರಿಸ್ಕ್​ಗಳನ್ನು ಯಾವತ್ತೂ ತೆಗೆದುಕೊಳ್ಳಲೇಬೇಡಿ. ಒಮ್ಮೆ ಏನಾಯಿತೆಂದರೆ ಬಹಳ ವರ್ಷಗಳ ಹಿಂದೆ ಬೆಂಗಳೂರಿನ ಸುಭಾಷ್ ನಗರ ಗ್ರೌಂಡ್​ನಲ್ಲಿ ಅಂದರೆ ಈಗಿನ ಮೆಜೆಸ್ಟಿಕ್ ಬಸ್​ನಿಲ್ದಾಣ ಇರುವಲ್ಲಿ ಕಾಂಗ್ರೆಸ್ ವಸ್ತುಪ್ರದರ್ಶನ ನಡೀತಿತ್ತು. ಅಲ್ಲಿ ಟೆಂಟ್ ಶೋ ಮಾಡುತ್ತಿದ್ದೆ. ಹೊರಗಡೆ ಮರಕ್ಕೆ ದೊಡ್ಡದಾದ ಶೋ ಬ್ಯಾನರ್ ಕಟ್ಟಿ ಅದಕ್ಕೆ ಸೀರಿಯಲ್ ಸೆಟ್ ಹಾಕಿದ್ದೆ. ಒಮ್ಮೆ ಅದು ಕೆಟ್ಟುಹೋಯಿತು. ರಿಪೇರಿಗೆ ಇಲೆಕ್ಟ್ರೀಷಿಯನ್ ಬರ್ತೀನಿ ಅಂತ ಅಂದವ ಬಂದಿಲ್ಲ. ನನಗೆ ತಾಳ್ಮೆ ಇರಲಿಲ್ಲ. ನಾನೇ ಮರ ಹತ್ತಿದೆ. ಹತ್ತು-ಹದಿನೈದು ಅಡಿ ಎತ್ತರದಲ್ಲಿದ್ದ ಮರದ ಒಂದು ಕೊಂಬೆಯನ್ನು ಎಡಗೈಯಲ್ಲಿ ಹಿಡಿದು ನೇತಾಡುತ್ತ ಬಲಗೈಯಲ್ಲಿ ರಿಪೇರಿ ಮಾಡುತ್ತಿದ್ದಾಗ ‘ಶಾಕ್’ ಹೊಡೀತು ಅಂತ ಕೈಬಿಟ್ಟು ಸೀದಾ ಕೆಳಗೆ ಬಿದ್ದೆ. ಪುಣ್ಯಕ್ಕೆ ದೊಡ್ಡ ಅಪಾಯವೇನೂ ಆಗಲಿಲ್ಲ. ಎತ್ತರದ ಕಟ್ಟಡದ ತುದಿಯಲ್ಲಿ ಕೂತು ಪೇಂಟ್ ಮಾಡೋದು ಅಪಾಯಕಾರಿ. ಎಲ್ಲಾದರೂ ಹಗ್ಗ ಹಿಡಿದುಕೊಂಡವ ಅದನ್ನು ಬಿಟ್ಟುಬಿಟ್ಟರೆ ಅಥವಾ ಹಗ್ಗವೇ ತುಂಡಾದರೆ ಜೀವಕ್ಕೇ ಕುತ್ತು. ‘ಖಜಟಠಛಿ ಡಿಜಟ ್ಝಡಛಿ ಚಿಢ ಠಿಜಛಿ ಠಡಿಟ್ಟಛ ಡಿಜ್ಝಿ್ಝ ಛಜಿಛಿ ಚಿಢ ಠಿಜಛಿ ಠಡಿಟ್ಟಛ’ ಅನ್ನೋ ಮಾತಿನಂತೆ ಇಂತಹ ರಿಸ್ಕ್​ಗಳನ್ನು ತೆಗೆದುಕೊಳ್ಳಲೇಬಾರದು.

    ಈಗ ಬಿಜಿನೆಸ್ ರಿಸ್ಕ್​ಗಳ ಬಗ್ಗೆ ಹೇಳುತ್ತೇನೆ. ಒಮ್ಮೆ ನಾನು ಮತ್ತು ಸ್ನೇಹಿತ ದಿ. ರವಿಶಂಕರ್ ಕಿಣಿ ಯುರೋಪ್​ಗೆ ಹೋಗಿದ್ದೆವು. ಆಗ ಎಲ್ಲ ಯುರೋಪಿಯನ್ ದೇಶಗಳಿಗೆ ‘ಶೆಂಗೆನ್’ ಅಂತ ಒಂದೇ ವೀಸಾ ಇತ್ತು. ಆದರೆ ಸ್ವಿಜರ್​ಲ್ಯಾಂಡಿಗೆ ಪ್ರತ್ಯೇಕ ವೀಸಾ ತೆಗೆದುಕೊಳ್ಳಬೇಕಾಗಿತ್ತು. ಅದನ್ನು ನಾವು ತೆಗೆದುಕೊಂಡಿರಲಿಲ್ಲ. ನಾವು ಯುರೈಲ್ ಮುಖಾಂತರ ಜರ್ಮನಿಯಿಂದ ಇಟಲಿಗೆ ನೇರವಾಗಿ ಹೋಗಬೇಕಾಗಿತ್ತು. ಅದನ್ನು ಬಿಟ್ಟು ಸ್ವಿಜರ್​ಲ್ಯಾಂಡ್ ಮೂಲಕ ದಾಟಿ ಹೋಗುವ ರೈಲನ್ನು ಹತ್ತಿ ಹೋಗೋಣ ಒಂದು ವೇಳೆ ಸ್ವಿಜರ್​ಲ್ಯಾಂಡ್​ನಲ್ಲಿ ಯಾರೂ ನಮ್ಮನ್ನು ಗಮನಿಸದಿದ್ದರೆ ಅಲ್ಲೇ ಆರಾಮಾಗಿ ಸುತ್ತಾಡಿ ವ್ಯಾಪಾರ ಮಾಡಿಕೊಂಡು ಬರೋಣ ಅಂತ ಕಿಣಿ ಸಲಹೆ ಕೊಟ್ಟ. ನಮ್ಮ ರೈಲು ಹೊರಟಿತು. ಸ್ವಿಜರ್​ಲ್ಯಾಂಡಿನಲ್ಲಿ ಅದೆಲ್ಲಿದ್ದರೋ ಹತ್ತಾರು ಶಸ್ತ್ರಸಜ್ಜಿತ ಸಿಬ್ಬಂದಿ ಬಂದು ಟಿಕೆಟ್ ತಪಾಸಣೆ ಮಾಡತೊಡಗಿದರು. ನಮ್ಮ ಹತ್ತಿರ ವೀಸಾ ಇರದಿದ್ದ ಕಾರಣ ನಮ್ಮನ್ನು ಬಂಧಿಸಿದರು. ಎಷ್ಟೇ ಗೋಗರೆದರೂ ಇಂಗ್ಲಿಷ್ ಬಾರದ ಅವರು ಅವರ ಭಾಷೆಯಲ್ಲಿ ಏನೇನೋ ಬೈದು ನಮ್ಮನ್ನು ಲಾಕಪ್​ನಲ್ಲಿ ಕೂರಿಸಿದರು. ಆ ದಿನ ಅವರ ಮುಖ್ಯಾಧಿಕಾರಿ ತಡವಾಗಿ ಬರುವುದೆಂದು ತಿಳಿಯಿತು. ಮುಂದೇನೇನು ಗ್ರಹಚಾರ ಕಾದಿದೆಯೋ ಅಂತ ನಡುಗುತ್ತಿರಬೇಕಾದರೆ ಒಬ್ಬ ಠಾಕುಠೀಕಾದ ಅಧಿಕಾರಿ ಬಂದ. ನಾನು ತಕ್ಷಣ ಜೇಬಿನಿಂದ ಒಂದು ನಾಣ್ಯವನ್ನು ತೆಗೆದು ಮ್ಯಾಜಿಕ್ ತೋರಿಸಿದೆ. ನಾನು ಮ್ಯಾಜೀಶಿಯನ್ ಅಂತ ತಿಳಿದ ಆತ ಖುಷಿ ಪಟ್ಟು ನಮ್ಮನ್ನು ಖುಲಾಸೆಗೊಳಿಸಿ ಆತನ ಮನೆಗೆ ಒಯ್ದ. ಇದಕ್ಕೆ ಕಾರಣ ಆತನ ಮಗನಿಗೆ ಮ್ಯಾಜಿಕ್ ಅಂದ್ರೆ ತುಂಬ ಇಷ್ಟವಂತೆ. ಅವನಿಗೆ ನಾನು ಅದನ್ನು ಕಲಿಸಿಕೊಡಬೇಕಾಗಿತ್ತು. ಸಂತೋಷದಿಂದ ಆತನಿಗೆ ಕೆಲವು ಟ್ರಿಕ್ಸ್ ಹೇಳಿಕೊಟ್ಟೆ. ಭರ್ಜರಿ ಊಟೋಪಚಾರದ ನಂತರ ಉಳಿದುಕೊಳ್ಳಲು ರೂಮನ್ನೂ ಕೊಟ್ಟ. ಮಾರನೇ ದಿನ ಸ್ವತಃ ಬಂದು ಟಿಟಿಸಿ ಎಂಬ ರಮಣೀಯವಾದ ಗುಡ್ಡ, ಸರೋವರಗಳಿದ್ದ ಸ್ಥಳವನ್ನು ತೋರಿಸಿ ಮುಂದೆಂದೂ ಇಂತಹ ಅಪರಾಧ ಮಾಡದಂತೆ ಎಚ್ಚರಿಸಿ ರೈಲು ಹತ್ತಿಸಿ ನಮ್ಮನ್ನು ಬೀಳ್ಕೊಟ್ಟ. ಒಂದು ವೇಳೆ ಆತನ ಮಗನಿಗೆ ಮ್ಯಾಜಿಕ್ ಹುಚ್ಚು ಇರದೇ ಇದ್ದಲ್ಲಿ ನಾವು ಎಷ್ಟು ದಿನ ಕಂಬಿ ಎಣಿಸಬೇಕಾಗಿತ್ತೋ ಏನೋ? ಹೀಗೆ ಕಾನೂನಿಗೆ ವಿರುದ್ಧವಾದ ಯಾವುದೇ ರಿಸ್ಕ್ ತೆಗೆದುಕೊಳ್ಳಬೇಡಿ.

    ಹಾಗೆನೇ ರಾಸ್ ಫ್ರೈಟಾಸ್ ಎಂಬ ಅಮೇರಿಕನ್ ವ್ಯಾಪಾರಿ, ‘ಇಂಡಿಯನ್ನರು ಒಳ್ಳೆಯ ಸ್ಯಾಂಪಲನ್ನು ತೋರಿಸಿ ಕಳಪೆ ವಸ್ತುಗಳನ್ನು ಪೂರೈಕೆ ಮಾಡುತ್ತಾರೆ. ಆ ಕಾರಣದಿಂದ ಮೊದಲು ಪೂರೈಕೆ ಮಾಡಿ, ನಂತರ ಹಣ ಪಾವತಿಸುತ್ತೇನೆ’ ಅಂತ ಕೆಣಕಿದ್ದಕ್ಕೆ, ನಾವು ನೂರಕ್ಕೆ ನೂರು ಸಾಚಾ ಎಂಬುದನ್ನು ಸಾಬೀತುಪಡಿಸಲು ಇಪ್ಪತೆôದು ಲಕ್ಷದ ಅತ್ಯುತ್ತಮ ಮ್ಯಾಜಿಕ್ ಉಪಕರಣಗಳನ್ನು ಸಾಲವಾಗಿ ಕಳುಹಿಸಿಕೊಟ್ಟೆ. ಇದು ನಡೆದು ಇಪ್ಪತೆôದು ವರ್ಷಗಳು ಕಳೆದವು. ಈವರೆಗೂ ಆತನಿಂದ ಒಂದು ಪೈಸೆ ಕೂಡ ಬಂದಿಲ್ಲ. ನಾನು ಅಮೆರಿಕಕ್ಕೆ ಹೋಗಿದ್ದಾಗ ಆತನ ವಿಳಾಸ ಪತ್ತೆ ಹಚ್ಚಲು ಹೋಗಿದ್ದೆ. ಆದರೆ ಆತ ದೇಶವನ್ನೇ ಬಿಟ್ಟು ನಾಪತ್ತೆಯಾಗಿದ್ದಾನೆಂದು ತಿಳಿದುಬಂತು. ಅವನಿಗೆ ವಸ್ತುಗಳ ಪೂರೈಕೆಗೆ ಬಂಡವಾಳಕ್ಕಾಗಿ ನನ್ನಲ್ಲಿದ್ದ ಹತ್ತು ಲಕ್ಷ ಸಾಕಾಗದೆ ಬ್ಯಾಂಕ್ ಸಾಲ, ಕಿಣಿಯಿಂದ ಕೈಸಾಲವನ್ನೂ ತೆಗೆದುಕೊಂಡಿದ್ದೆ. ನಾನು ಇದ್ದ ಎಲ್ಲ ದುಡ್ಡನ್ನು ಖರ್ಚು ಮಾಡಿ ಕೈ ಖಾಲಿ ಮಾಡಿಕೊಂಡಿದ್ದೆ. ಹೀಗೆ ನನ್ನ ಕಷ್ಟದ ದುಡಿಮೆ ಖದೀಮನ ಪಾಲಾಯಿತು. ಆದ್ದರಿಂದ don’t put all your eggs in one basket ಎಂಬ ಮಾತಿನಂತೆ ಎಲ್ಲ ದುಡ್ಡನ್ನು ಒಂದೇ ಕಡೆ ಹೂಡಿಟ್ಟು ರಿಸ್ಕ್ ತೆಗೆದುಕೊಳ್ಳಬೇಡಿ.

    ಇತ್ತೀಚಿನ ದಿನಗಳಲ್ಲಿ ಜನರು ವಿವಿಧ ರೀತಿಗಳಲ್ಲಿ ಮೋಸ ಹೋಗುವುದನ್ನು ನೀವು ಓದಿರಬಹುದು. ಮೋಸ ಹೋಗುವವರು ಇರುವವರೆಗೆ ಮೋಸ ಮಾಡುವವರೂ ಇರುತ್ತಾರೆ. ಇದಕ್ಕೆ ಜನರಲ್ಲಿರುವ ಅತಿಯಾದ ಲೋಭವೇ ಕಾರಣ. ವಂಚಕನೊಬ್ಬ, ‘ನಿಮಗೆ ವಿದೇಶೀ ಲಾಟರಿಯಲ್ಲಿ ಹತ್ತು ಕೋಟಿ ಬಂದಿದೆ’ ಎಂಬುದಾಗಿ ಒಂದು ಮೆಸೇಜನ್ನು ನಿಮಗೆ ಕಳುಹಿಸುತ್ತಾನೆ. ಇದಕ್ಕೆ ನೀವು ಸ್ಪಂದಿಸಿ ಆತನೊಟ್ಟಿಗೆ ವ್ಯವಹಾರಕ್ಕೆ ಇಳಿದರೆ ಈ ದುಡ್ಡನ್ನು ನಿಮ್ಮ ಖಾತೆಗೆ ವರ್ಗಾಯಿಸಲು ಆರ್​ಬಿಐ ಕಮಿಶನ್ ಅಲ್ಲದೆ ಆ ಖರ್ಚು, ಈ ಖರ್ಚು ಅಂತ ಕೆಲವು ಲಕ್ಷ ಪಾವತಿಸಬೇಕೆಂದು ಹೇಳಿ ಆತ ತಿಳಿಸಿದ ಬ್ಯಾಂಕ್ ಖಾತೆಗೆ ಅದನ್ನು ಕೂಡಲೇ ಪಾವತಿಸಬೇಕೆಂದೂ ಆಗ ತಕ್ಷಣವೇ ಹತ್ತು ಕೋಟಿ ನಿಮ್ಮ ಖಾತೆಗೆ ವರ್ಗಾವಣೆಯಾಗುತ್ತದೆಂದೂ ಮೊಣಕೈಗೆ ಜೇನುತುಪ್ಪ ಹಚ್ಚುತ್ತಾನೆ. ಕೋಟಿ ಬರುವಾಗ ಲಕ್ಷ ಯಾವ ಲೆಕ್ಕ ಎಂಬ ಭ್ರಮೆಯಿಂದ ಕೂಡಿಟ್ಟ ಹಣವನ್ನೋ, ಸಾಲ ಮಾಡಿಯೋ ಪಾವತಿಸಿದಿರೆಂದಾದರೆ ನಿಮ್ಮ ಗತಿ ಅಧೋಗತಿಯೇ. ಆತ ಇನ್ನೆಂದೂ ನಿಮ್ಮ ಸಂಪರ್ಕಕ್ಕೇ ಸಿಗುವುದಿಲ್ಲ. ಆದ್ದರಿಂದ ದುಡ್ಡಿನ ವಿಚಾರ ಬಂದಾಗ ಪ್ರತಿ ಹೆಜ್ಜೆಯಲ್ಲೂ ಎಚ್ಚರಿಕೆಯಿಂದ ಇರಬೇಕು.

    ಯಾರಾದರೂ ನಿಮಗೆ ಒಳ್ಳೆಯ ಬಿಜಿನೆಸ್ ಕೊಡುತ್ತೇನೆ ಅಂತ ಹೇಳಿ ನಂಬಿಸಿದರೆ ತಕ್ಷಣ ನಂಬಬೇಡಿ. ನನ್ನ ಬಳಿ ಪೈ ಅಂತ ಒಬ್ಬ ಮೋಲ್ಡಿಂಗ್ ಡೈ ಮೇಕರ್ ಇದ್ದ. ಒಂದಿನ ಆತ ‘ನನಗೆ ದೊಡ್ಡ ಕಂಪನಿಯಿಂದ ಬಿಜಿನೆಸ್ ಆಫರ್ ಬಂದಿದೆ, ಅದನ್ನು ಮಾಡೋಣ ಅಂದುಕೊಂಡಿದ್ದೇನೆ. ಅದೇನೆಂದರೆ ಆ ಕಂಪನಿಯಿಂದ ನನಗೆ ದೊಡ್ಡ ಪ್ರಮಾಣದಲ್ಲಿ ಡೈಗಳಿಗೆ ಆರ್ಡರ್ ಬರುತ್ತದೆ. ಅದನ್ನು ಮೋಲ್ಡಿಂಗ್ ಕೂಡ ನಾನೇ ಮಾಡಬೇಕು. ಒಂದು ಕಾಂಪೊನೆಂಟ್​ಗೆ ನನಗೆ ಒಂದು ರೂಪಾಯಿ ಖರ್ಚಾದರೆ ಅವರು ಹತ್ತು ರೂಪಾಯಿ ಕೊಡುತ್ತಾರೆ. ಅವರು ಐದು ಸಾವಿರ ಕಾಂಪೊನೆಂಟ್ ತೆಗೆದುಕೊಂಡರೆ ನನ್ನ ಡೈ ಮೇಲಿನ ಖರ್ಚು ತುಂಬುತ್ತದೆ. ಆಮೇಲಿನ ಆರ್ಡರುಗಳಿಂದ ನನಗೆ ಸಕತ್ ಲಾಭ ಬರುತ್ತದೆ’ ಅಂತ ಏನೇನೋ ಲೆಕ್ಕಾಚಾರ ಹೇಳಿದಾಗ ನನಗೆ ಈ ವ್ಯವಹಾರದಲ್ಲಿ ಯಾಕೋ ಅನುಮಾನ ಬಂತು. ಆ ಕಂಪನಿ ಮಾಲೀಕಕರನ್ನು ಭೇಟಿಯಾಗಲು ಪೈ ಜತೆ ಅಲ್ಲಿಗೆ ಹೋದೆ. ಕುತ್ತಿಗೆಗೆ ಮಣಭಾರದ ಚೈನು, ಬೆರಳು ತುಂಬ ಉಂಗುರ, ಕೈಗೆ ಭರ್ಜರಿ ಬ್ರಾಸ್ಲೆಟ್ ತೊಟ್ಟ ಯಜಮಾನ ಜೋರಾಗಿಯೇ ಇದ್ದ. ಬೇಕೆಂದೇ ನಾವು ಅಲ್ಲಿ ಎರಡು ಗಂಟೆ ಕಳೆದೆವು. ಆ ಸಮಯದಲ್ಲಿ ನಾನು ಗಮನಿಸಿದ್ದೇನೆಂದರೆ ಸಾಲಗಾರರು ಬಂದು ದುಡ್ಡಿಗಾಗಿ ಆತನನ್ನು ಪೀಡಿಸುತ್ತಿದ್ದರು, ಯಾರದಾದರೂ ಫೋನ್ ಬಂದರೆ ಆತ ಕರೆಯನ್ನು ಸ್ವೀಕರಿಸುತ್ತಿದ್ದಿಲ್ಲ ಇತ್ಯಾದಿತ್ಯಾದಿ. ತಕ್ಷಣ ಪೈಗೆ ‘ಈ ಪಾರ್ಟಿ ಸರಿ ಇಲ್ಲ’ ಅಂತ ಹೇಳಿ ಹೊರಟೆವು. ಹೊರಗೆ ಐಷಾರಾಮಿ ಕಾರು. ಇದೆಲ್ಲ ಮಿಕಗಳನ್ನು ಬಲೆಗೆ ಕೆಡವಲು ಅವಶ್ಯ. ಯಾಕೆಂದರೆ ಅವರು ‘ತುಂಬ ಸಾಲಿಡ್ ಪಾರ್ಟಿ’ ಅಂತ ನಂಬಿಕೆ ನಿಮಗೆ ಬರಬೇಕಲ್ಲ. ಇಂಥವರ ವೇಷಭೂಷಣ, ದೌಲತ್ತು ನೋಡಿ, ಮುಂದೆ ಅವರಿಂದ ಬರಬಹುದಾದ (??) ದೊಡ್ಡ ಆರ್ಡರುಗಳು, ಹೇರಳ ಹಣದ ಆಸೆಯಿಂದ ನೀವೇ ಬಂಡವಾಳ ಹಾಕಿ ಅವರ ಆರ್ಡರುಗಳಿಗೆ ಕೈಹಚ್ಚಿದಿರೋ ನೀವೂ ನಿಮ್ಮ ದುಡ್ಡಿಗೆ ಅವರ ಮುಂದೆ ಕೈಚಾಚುವಂತಾಗುವುದು ಖಂಡಿತ. ಸ್ವಲ್ಪ ಕಾಲದಲ್ಲೇ ಎಲ್ಲರಿಗೂ ಮೋಸ ಮಾಡಿ ಆ ಸಂಸ್ಥೆ ಮುಚ್ಚಿಹೋಗಿದ್ದು ತಿಳಿದ ಪೈ ‘ಆಜೀವ ಪರ್ಯಂತ ನಿಮಗೆ ಋಣಿ ಆಗಿರುತ್ತೇನೆ’ ಎಂಬ ಮೆಸೇಜ್ ನನಗೆ ಕಳಿಸಿದ್ದರು.

    (ಲೇಖಕರು ಖ್ಯಾತ ಜಾದೂಗಾರರು, ಬರಹಗಾರರು)

    ಗರ್ಭಿಣಿಯರು ಕರೊನಾ ಲಸಿಕೆ ತೆಗೆದುಕೊಳ್ಳಬಹುದೇ?; ಕೇಂದ್ರ ಸರ್ಕಾರದ ಸ್ಪಷ್ಟನೆ ಹೀಗಿದೆ…

    ಕೋವಿಡ್​ನಿಂದಾದ ಸಾವುಗಳ ಪೈಕಿ 3ನೇ ಸ್ಥಾನದಲ್ಲಿ ಭಾರತ; ಇದುವರೆಗೆ ಸತ್ತವರ ಸಂಖ್ಯೆ 4 ಲಕ್ಷಕ್ಕೂ ಅಧಿಕ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts