ಹಗರಿಬೊಮ್ಮನಹಳ್ಳಿ: ವಿದ್ಯಾರ್ಥಿಗಳು ಇತಿಹಾಸವನ್ನು ತಿಳಿದುಕೊಂಡು ಕರ್ನಾಟಕ ದರ್ಶನ ಕಾರ್ಯಕ್ರಮದಡಿ ಕೈಗೊಂಡಿರುವ ಸೌಲಭ್ಯವನ್ನು ಸದ್ಬಳಕೆಮಾಡಿಕೊಳ್ಳಿ ಎಂದು ಶಾಸಕ ಕೆ.ನೇಮಿರಾಜ್ ನಾಯ್ಕ ಹೇಳಿದರು.
ಇದನ್ನೂ ಓದಿ:ಇತಿಹಾಸ ಪ್ರಸಿದ್ಧ ಪಾಲಿಬೆಟ್ಟ ಉರುಸ್‌ಗೆ ಚಾಲನೆ
ತಾಲೂಕಿನ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಸರ್ಕಾರದಿಂದ ಕರ್ನಾಟಕ ದರ್ಶನ ಕಾರ್ಯಕ್ರಮದಡಿ ಕೈಗೊಂಡಿರುವ ಶೈಕ್ಷಣಿಕ ಪ್ರವಾಸಕ್ಕೆ ಶಾಸಕ ಕೆ.ನೇಮಿರಾಜ ನಾಯ್ಕ ಬುಧವಾರ ಚಾಲನೆ ನೀಡಿ ಮಾತನಾಡಿದರು. ಐತಿಹಾಸಿಕ ಅರಮನೆ, ಕೋಟೆ, ದೇಗುಲಗಳನ್ನು ವೀಕ್ಷಿಸಿ ತಿಳಿದುಕೊಂಡ ಮಾಹಿತಿ ಮನಸ್ಸಿನಲ್ಲಿ ಉಳಿಯಲು ಸಾಧ್ಯ. ಮುಂದಿನ ದಿನಗಳಲ್ಲಿ ಎಸ್ಸಿ, ಎಸ್ಟಿ ವಿದ್ಯಾರ್ಥಿಗಳ ಜತೆಗೆ ಒಬಿಸಿ ವಿದ್ಯಾರ್ಥಿಗಳಿಗೂ ಈ ಅವಕಾಶ ಕಲ್ಪಿಸುವಂತೆ ಸರ್ಕಾರದ ಗಮನಕ್ಕೆ ತರುತ್ತೇನೆ ಎಂದರು.
ಕ್ಷೇತ್ರಶಿಕ್ಷಣಾಧಿಕಾರಿ ಮೈಲೇಶ್ ಬೇವೂರು ಮಾತನಾಡಿ, ಪ್ರೌಢಶಾಲೆಯ 148 ವಿದ್ಯಾರ್ಥಿಗಳಿಗೆ ಚಿತ್ರದುರ್ಗ, ಮೈಸೂರು, ಬೇಲೂರು, ಹಳೇಬೀಡು ಸೇರಿ ವಿವಿಧೆಡೆ 5ದಿನಗಳ ಪ್ರವಾಸ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ರಾಜ್ಯ ಸರ್ಕಾರಿ ನೌಕರ ಸಂಘದ ಅಧ್ಯಕ್ಷ ಎಂ.ಪಿ.ಎಂ.ಮಂಜುನಾಥ, ದೈಹಿಕ ಶಿಕ್ಷಣಾಧಿಕಾರಿ ಸೋಮಪ್ಪ, ಪ್ರೌಢಶಾಲಾ ಸಂಘದ ಅಧ್ಯಕ್ಷ ರವಿಚಂದ್ರ ನಾಯ್ಕ, ಶಿಕ್ಷಣ ಸಂಯೋಜಕರಾದ ಶಿವಲಿಂಗ ಸ್ವಾಮಿ, ಗುರುಬಸವರಾಜ, ಶಿಕ್ಷಕರಾದ ಹಾಲಪ್ಪ, ಶಿವತನಯ್ಯ, ಮಲ್ಲಪ್ಪ, ಪ್ರಮುಖರಾದ ಸರ್ದಾರ ಯಮನೂರ ಇತರರಿದ್ದರು.