ಜಾತ್ರೆ ಸುಗಮಗೊಳಿಸಲು ಕ್ರಮ ವಹಿಸಿ

ಹಾಸನ: ಹಾಸನಾಂಬ ದರ್ಶನೋತ್ಸವಕ್ಕೂ ಮುನ್ನ ಎಲ್ಲ ಸಿದ್ಧತಾ ಕಾರ್ಯಗಳನ್ನು ಅಚ್ಚುಕಟ್ಟಾಗಿ ಯೋಜಿಸಿಕೊಳ್ಳುವ ಮೂಲಕ ಜಾತ್ರೆ ಸುಗಮವಾಗಿ ಜರುಗಲು ಕ್ರಮ ವಹಿಸಬೇಕು ಎಂದು ಜಿಲ್ಲಾಧಿಕಾರಿ ಆರ್.ಗಿರೀಶ್ ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಬುಧವಾರ ಹಾಸನಾಂಬ ದರ್ಶನೋತ್ಸವ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಅ. 13ರೊಳಗೆ ನಗರದೊಳಗಿನ ಎಲ್ಲ ರಸ್ತೆ ಕಾಮಗಾರಿಗಳನ್ನು ಸಂಬಂಧಿಸಿದ ಇಲಾಖೆಗಳು ಪೂರ್ಣಗೊಳಿಸಬೇಕು. ವಾಹನಗಳ ಸಂಚಾರಕ್ಕೆ ಯಾವುದೇ ಅಡಚಣೆಯಾಗುವ ಸ್ಥಿತಿ ಎಲ್ಲಿಯೂ ಕಾಣಿಸಬಾರದು. ಅಗತ್ಯವಿರುವ ಕಡೆಗಳಲ್ಲಿ ಲೋಕೋಪಯೋಗಿ ಇಲಾಖೆ ಗುಂಡಿಗಳನ್ನು ಮುಚ್ಚಬೇಕು ಎಂದು ನಿರ್ದೇಶಿಸಿದರು.
ದೇವಿ ದರ್ಶನಕ್ಕೆ ಸರದಿ ಸಾಲಿನಲ್ಲಿ ಸಾಗುವ ಭಕ್ತಾದಿಗಳಿಗೆ ಕೆಲ ಕಾಲ ಕುಳಿತು ಸಾಲಿನಲ್ಲಿ ಸಾಗಲು ಸಹಕಾರಿಯಾಗುವಂತೆ ಅಲ್ಲಲ್ಲಿ ಬೆಂಚ್ ವ್ಯವಸ್ಥೆ ಮಾಡಬೇಕು. ಸಚಿವರು ಮತ್ತಿತರ ಗಣ್ಯರಿಗೆ ಜಾತ್ರಾ ಮಹೋತ್ಸವ ಆಹ್ವಾನ ಪತ್ರಿಕೆಗಳನ್ನು ತಲುಪಿಸಲು ಕ್ರಮವಹಿಸಬೇಕು ಎಂದರು.

ದರ್ಶನ ಪಡೆದ ಗಣ್ಯರು ಕುಳಿತುಕೊಳ್ಳಲು ಸಿದ್ದೇಶ್ವರ ದೇವಸ್ಥಾನದ ಆವರಣದಲ್ಲಿ ವ್ಯವಸ್ಥೆ ಕಲ್ಪಿಸಬೇಕು. ಸಾರ್ವಜನಿಕರು ಹಾಗೂ ಭಕ್ತರಿಗೆ ಅನುಕೂಲವಾಗುವಂತೆ ದೇವಸ್ಥಾನದ ಆವರಣದಲ್ಲಿ ಸಹಾಯ ಕೇಂದ್ರ ತೆರೆಯಬೇಕು ಎಂದು ಸೂಚಿಸಿದರು.

ಪ್ರಭಾರ ಅಪರ ಜಿಲ್ಲಾಧಿಕಾರಿ ಡಾ. ಎಚ್.ಎಲ್.ನಾಗರಾಜ್, ಲೋಕೊಪಯೋಗಿ ಇಲಾಖೆ ಕಾರ್ಯಪಾಲಕ ಅಭಿಯಂತರ ಸಿ.ಎಸ್.ಮಂಜು, ಮುಜರಾಯಿ ತಹಸೀಲ್ದಾರ್ ಶಾರದಾಂಬಾ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪನಿರ್ದೇಶಕಿ ಸವಿತಾ, ಪೌರಾಯುಕ್ತ ಕೃಷ್ಣಮೂರ್ತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಸತೀಶ್‌ಕುಮಾರ್, ಡಿವೈಎಸ್ಪಿ ಪುಟ್ಟಸ್ವಾಮಿಗೌಡ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿದೇಶಕ ಬಿ.ಎ.ಜಗದೀಶ್, ತಹಸೀಲ್ದಾರ್ ಮೇಘನಾ ಇದ್ದರು.

 

Leave a Reply

Your email address will not be published. Required fields are marked *