ಹವಾಮಾನ ಬದಲಾವಣೆ ತಡೆಯದಿದ್ದರೆ ಖಳನಾಯಕರಾಗುತ್ತೀರಿ: ಪ್ರಧಾನಿ ಮೋದಿಗೆ ಸ್ವೀಡನ್​ ಬಾಲಕಿ ಎಚ್ಚರಿಕೆ

ನವದೆಹಲಿ: ಹವಾಮಾನ ಬದಲಾವಣೆಯಿಂದಾಗುವ ಹಾನಿ ತಡೆಗಟ್ಟುವುದನ್ನು ವಿಶ್ವ ನಾಯಕರು ಗಂಭೀರವಾಗಿ ಪರಿಗಣಿಸುತ್ತಿಲ್ಲ. ಇದರಿಂದ ಬೇಸತ್ತಿರುವ ಸ್ವೀಡನ್​ನ 15 ವರ್ಷದ ಹವಮಾನ ಬದಲಾವಣೆ ತಡೆ ಕಾರ್ಯಕರ್ತೆ ಗ್ರೆಟಾ ಥುಂಬರ್ಗ್​ ನಿರ್ದಾಕ್ಷಿಣ್ಯವಾಗಿ ಕಟುಶಬ್ದಗಳ ಸಂದೇಶ ನೀಡುವ ಮೂಲಕ ವಿಶ್ವನಾಯಕರನ್ನು ಎಚ್ಚರಿಸುವ ಕೆಲಸ ಮಾಡುತ್ತಿದ್ದಾರೆ.

ಇದೀಗ ಥುಂಬರ್ಗ್​ ಈ ವಿಷಯದಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರನ್ನೂ ಎಚ್ಚರಿಸುವ ಕೆಲಸ ಮಾಡಿದ್ದಾರೆ. ಬ್ರೂಟ್​ ಇಂಡಿಯಾ ಎಂಬ ಟ್ವಿಟರ್​ ಖಾತೆಯಲ್ಲಿ ವಿಡಿಯೋ ತುಣಕನ್ನು ಅಳವಡಿಸಿರುವ ಅವರು, ಆತ್ಮೀಯ ಮೋದಿ ಅವರೇ, ಹವಾಮಾನ ಬದಲಾವಣೆಯಿಂದ ಉಂಟಾಗುತ್ತಿರುವ ಸಮಸ್ಯೆಯನ್ನು ತಡೆಗಟ್ಟಲು ಕ್ರಮ ಕೈಗೊಳ್ಳಿ ಎಂದು ಒತ್ತಾಯಿಸಿದ್ದಾರೆ.

ಹವಾಮಾನ ಬದಲಾವಣೆ ತಡೆಗೆ ಕ್ರಮ ಕೈಗೊಳ್ಳುವ ಕುರಿತು ಬಾಯ್ಮಾತಿನ ಮೂಲಕ ಭರವಸೆ ನೀಡಿದರೆ ಸಾಲದು. ಇದನ್ನು ಗಂಭೀರವಾಗಿ ಪರಿಗಣಿಸದೇ ನಿಮ್ಮ ಪಾಡಿಗೆ ನೀವು ಕೆಲಸ ಮಾಡಿಕೊಂಡು, ಸಣ್ಣ ಗೆಲುವುಗಳನ್ನೇ ದೊಡ್ಡ ಗೆಲವೆಂಬಂತೆ ಬೀಗುವುದರಿಂದ ವೈಫಲ್ಯವೇ ಹೆಚ್ಚು. ಇಂತಹ ವೈಫಲ್ಯಗಳಿಂದಾಗಿ ಭವಿಷ್ಯದಲ್ಲಿ ನೀವು ಮಾನವ ಇತಿಹಾಸ ಕಂಡ ಬಹುದೊಡ್ಡ ಖಳನಾಯಕ ಎನಿಸಿಕೊಳ್ಳುವ ಅಪಾಯವಿದೆ. ಇಂತಹ ಕುಖ್ಯಾತಿ ಹೊಂದಲು ನೀವು ಬಯಸುವುದಿಲ್ಲ ಎಂಬುದು ನನಗೆ ಗೊತ್ತಿದೆ ಎಂದು ಥುಂಬರ್ಗ್​ ಸಂದೇಶದಲ್ಲಿ ಪ್ರಧಾನಿ ಮೋದಿಗೆ ತಿಳಿಸಿದ್ದಾರೆ.

ವಿಶ್ವಸಂಸ್ಥೆಯ ಹವಾಮಾನ ಬದಲಾವಣೆ ಶೃಂಗಸಭೆಯಲ್ಲಿ (COP24) ಥುಂಬರ್ಗ್​ ಅವರು ಈ ವಿಚಾರವನ್ನು ಪ್ರಸ್ತಾಪಿಸಿ ವಿಶ್ವದ ಗಮನ ಸೆಳೆದಿದ್ದರು. ನಮ್ಮ ಭವಿಷ್ಯವನ್ನು ಪೋಷಿಸಿ ಎಂದು ನಾವು ಬೇಡಲು ಇಲ್ಲಿಗೆ ಬರಬೇಕಾಗಿದೆ ಎಂದು ವಿಷಾದ ವ್ಯಕ್ತಪಡಿಸಿ, ಈ ಹಿಂದೆಯೂ ನಮ್ಮನ್ನು ನಿರ್ಲಕ್ಷಿಸಲಾಗಿತ್ತು. ಈಗಲೂ ಅದುಮುಂದುವರಿದಿದೆ ಎಂದು ವಿಶ್ವ ನಾಯಕರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದರು. ಇದೇ ವೇಳೆ ವಾಯುಮಾಲಿನ್ಯ ವಿಚಾರವಾಗಿ ತಮ್ಮದೇ ದೇಶದ ವಿರುದ್ಧ ಥುಂಬರ್ಗ್​ ಕಿಡಿಕಾರಿದ್ದರು. (ಏಜೆನ್ಸೀಸ್​)