ಕಾರ್ಖಾನೆ, ಹೋಟೆಲ್‌ಗಳಲ್ಲಿ ಬಾಲಕಾರ್ಮಿಕರು ಪತ್ತೆಯಾದರೆ ಕ್ರಮ ಕೈಗೊಳ್ಳಿ

2 Min Read
Take action if child labor is found in factories, hotels
ಹುನಗುಂದ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ವಿಶ್ವ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನ ಅಂಗವಾಗಿ ಕಾನೂನು ಅರಿವು ಮತ್ತು ನೆರವು ಕಾರ್ಯಕ್ರಮವನ್ನು ಪ್ರಧಾನ ದಿವಾಣಿ ನ್ಯಾಯಾಧೀಶ ಬಾಳಾಸಾಹೇಬ ವಡವಡೆ ಉದ್ಘಾಟಿಸಿ ಮಾತನಾಡಿದರು. ಮಾಧವ ದೇಶಪಾಂಡೆ, ಪಿಎಸ್. ಕಠಾಣಿ, ಸುರೇಶ ಎಚ್.ಎಸ್. ಇದ್ದರು.

ಹುನಗುಂದ: ಹದಿನಾಲ್ಕು ವರ್ಷದೊಳಗಿನ ಮಕ್ಕಳನ್ನು ಯಾವುದೇ ಕಾರ್ಖಾನೆ, ಹೋಟೆಲ್ ಅಥವಾ ಅಂಗಡಿಗಳಲ್ಲಿ ಕೆಲಸಕ್ಕೆ ನೇಮಿಸಿಕೊಂಡಿದ್ದು ಕಂಡು ಬಂದಲ್ಲಿ ಅಂತಹವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಬೇಕೆಂದು ಪ್ರಧಾನ ದಿವಾಣಿ ನ್ಯಾಯಾಧೀಶ ಬಾಳಾಸಾಹೇಬ ವಡವಡೆ ಹೇಳಿದರು.

ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮಂಗಳವಾರ ನಡೆದ ತಾಲೂಕು ಕಾನೂನು ಸೇವಾ ಸಮಿತಿ, ತಾಲೂಕು ಆಡಳಿತ, ವಕೀಲರ ಸಂಘ, ಕಾರ್ಮಿಕ ಇಲಾಖೆ, ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಪೋಲಿಸ್ ಇಲಾಖೆ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಅವರ ಆಶ್ರಯದಲ್ಲಿ ವಿಶ್ವ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನ ಅಂಗವಾಗಿ ಕಾನೂನು ಅರಿವು ಮತ್ತು ನೆರವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಬಾಲಕಾರ್ಮಿಕರು ಶಿಕ್ಷಣದಿಂದ ವಂಚಿತವಾಗಬಾರದು. ಅವರನ್ನು ಮನವೊಲಿಸಿ ಶಾಲೆಗೆ ಕಳುಹಿಸಬೇಕು. ವಿದ್ಯಾರ್ಥಿಗಳಿಗೆ ಸರ್ಕಾರವು ಉಚಿತ ಸೈಕಲ್, ವಿದ್ಯಾವೇತನ, ಪಠ್ಯಪುಸ್ತಕ, ಸಮವಸ, ಬಿಸಿಯೂಟ ಸೇರಿ ಹಲವಾರು ಯೋಜನೆಗಳನ್ನು ರೂಪಿಸಿದೆ. ಅವುಗಳ ಪ್ರಯೋಜನ ಪಡೆದುಕೊಳ್ಳಬೇಕೆಂದು ತಿಳಿಸಿದರು.

ಕಾನೂನಿನ ಪ್ರಕಾರ ಮದುವೆಗೆ ಹುಡುಗಿಗೆ 18 ವರ್ಷ, ಹುಡುಗನಿಗೆ 21 ವರ್ಷ ಕಡ್ಡಾಯವಾಗಿ ಆಗಿರಬೇಕು. ಆದರೂ ಕಾನೂನು ಮೀರಿಯೂ ಗ್ರಾಮೀಣ ಪ್ರದೇಶದಲ್ಲಿ ಬಾಲ್ಯವಿವಾಹ ನಡೆಯುತ್ತಿವೆ. ಅಂತಹ ಸಂದರ್ಭ ಅಧಿಕಾರಿಗಳಿಗೆ ಮಾಹಿತಿಯನ್ನು ವಿದ್ಯಾರ್ಥಿಗಳು ನೀಡಬೇಕು. ಡ್ರೈವಿಂಗ್ ಲೈಸೆನ್ಸ್, ಹೆಲ್ಮೆಟ್, ಇನ್ಶೂರೆನ್ಸ್ ಇದ್ದರೆ ಮಾತ್ರ ವಾಹನ ಚಾಲನೆ ಮಾಡಬೇಕು ಎಂದರು.

ಸರ್ಕಾರಿ ವಕೀಲ ಮಾಧವ ಬಿ. ದೇಶಪಾಂಡೆ ಮಾತನಾಡಿ, ರೇಲ್ವೆ ನಿಲ್ದಾಣ, ಬೀಡಿ, ಸಿಮೆಂಟ್, ಪಟಾಕಿ ತಯಾರಿಕೆ ಕಾರ್ಖಾನೆ, ಹೋಟೆಲ್, ಬಾರ್, ಕಟ್ಟಡ ನಿರ್ಮಾಣ, ಗ್ಯಾರೇಜ್‌ಗಳು, ಮತ್ತಿತರ ಪ್ರದೇಶಗಳಲ್ಲಿ ಬಾಲಕಾರ್ಮಿಕರು ಹೆಚ್ಚು ಕೆಲಸ ಮಾಡುತ್ತಿರುತ್ತಾರೆ. ಈ ಬಗ್ಗೆ ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಅನಿರೀಕ್ಷಿತ ಭೇಟಿ ನೀಡಿ ತಪಾಸಣೆ ಕೈಗೊಂಡು ಕ್ರಮ ಕೈಗೊಳ್ಳಬೇಕು ಎಂದರು.

See also  ಶ್ರೀಶೈಲಕ್ಕೆ ನೇರ ಸಾರಿಗೆ ಬಸ್

ವಕೀಲರ ಸಂಘದ ಅಧ್ಯಕ್ಷ ಪಿ.ಎಸ್. ಕಠಾಣಿ, ಜಿಲ್ಲಾ ಕಾರ್ಮಿಕ ಅಧಿಕಾರಿ ರಮೇಶ ಸುಂಬಡ ಮಾತನಾಡಿದರು. ಸಿಡಿಪಿಒ ವೆಂಕಪ್ಪ ಗಿರಿತಿಮ್ಮಣ್ಣವರ, ಕಾರ್ಮಿಕ ನಿರೀಕ್ಷಕ ರಾಜಶೇಖರ ಕುರಡಿಕೇರಿ, ಜಿಲ್ಲಾ ಬಾಲಕಾರ್ಮಿಕ ಯೋಜನಾ ನಿರ್ದೇಶಕ ಸುಧಾಕರ ಬಡಿಗೇರ, ವಕೀಲರ ಸಂಘದ ಉಪಾಧ್ಯಕ್ಷ ಪಿ.ಬಿ. ಹುಲ್ಲಾಳ, ಪ್ರಾಚಾರ್ಯ ಡಾ. ಸುರೇಶ ಎಚ್. ಎಸ್. ಉಪಸ್ಥಿತರಿದ್ದರು.

Share This Article