ಹನೂರು: ಗೋದಾಮನ್ನು ನಿರ್ಮಿಸಿಕೊಂಡಿದ್ದರೂ ವ್ಯಾಪಾರ, ವಹಿವಾಟು ನಡೆಸದೆ ಇರುವವರ ವಿರುದ್ಧ ಕ್ರಮಕೈಗೊಳ್ಳುವಂತೆ ಶಾಸಕ ಎಂ.ಆರ್.ಮಂಜುನಾಥ್ ಸೂಚಿಸಿದರು.
ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆ ಆವರಣದಲ್ಲಿ ಶನಿವಾರ ಶುದ್ಧ ಕುಡಿಯುವ ನೀರಿನ ಘಟಕ, ಶೌಚಗೃಹ, ಚರಂಡಿ ನಿರ್ಮಾಣ ಹಾಗೂ ಇತರ ಅಗತ್ಯ ಮೂಲಸೌಕರ್ಯದ ವಿವಿಧ ಕಾಮಗಾರಿಗೆ ಶನಿವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.
ಹನೂರು ಕ್ಷೇತ್ರ ಕೃಷಿ ಅವಲಂಬಿತ ಪ್ರದೇಶ. ಇಲ್ಲಿ ಹೆಚ್ಚಿನ ರೈತರು ವ್ಯವಸಾಯವನ್ನೇ ನಂಬಿ ಜೀವನ ನಡೆಸುತ್ತಿದ್ದಾರೆ. ಹಾಗಾಗಿ ಬೆಳೆಗಳಿಗೆ ನಿಗದಿತ ಬೆಲೆಯನ್ನು ದೊರಕಿಸಿ ಕೊಡುವುದು ಎಲ್ಲರ ಕರ್ತವ್ಯ. ಹಾಗಾಗಿ ಮಾರುಕಟ್ಟೆಯನ್ನು ಸ್ಥಾಪಿಸಲಾಗಿದೆ. ಆದರೆ ಇಲ್ಲಿ ಕುಡಿಯುವ ನೀರು, ಶೌಚಗೃಹ, ಚರಂಡಿ, ಇನ್ನಿತರ ಕೆಲ ಅಗತ್ಯ ಮೂಲಸೌಕರ್ಯವಿಲ್ಲದ ಪರಿಣಾಮ ವ್ಯಾಪಾರ ವಹಿವಾಟು ಹೆಚ್ಚಾಗಿ ನಡೆಯುತ್ತಿರಲಿಲ್ಲ. ಇದರಿಂದ ರೈತರಿಗೆ ತೊಂದರೆಯಾಗಿತ್ತು. ಅಗತ್ಯ ಮೂಲ ಸೌಕರ್ಯವನ್ನು ಒದಗಿಸುವಂತೆ ರೈತರು ಮನವಿ ಮಾಡಿದ್ದರು. ಈ ಹಿನ್ನೆಲೆ ಶುದ್ಧ ಕುಡಿಯುವ ನೀರಿನ ಘಟಕ, ಶೌಚಗೃಹ, ಚರಂಡಿ ನಿರ್ಮಾಣ ಹಾಗೂ ಪ್ರಾಂಗಣ ರಿಪೇರಿ ಕಾರ್ಯಕ್ಕೆ ಭೂಮಿಪೂಜೆಯನ್ನು ನೆರವೇರಿಸಲಾಗುತ್ತಿದೆ. ಇದರಿಂದ ರೈತರಿಗೆ ಅನುಕೂಲವಾಗಲಿದೆ ಎಂದು ಹೇಳಿದರು.
ಮುಂದಿನ ದಿನಗಳಲ್ಲಿ ಇನ್ನಷ್ಟು ಅಗತ್ಯ ಸೌಕರ್ಯವನ್ನು ಒದಗಿಸಿ ಮಾರುಕಟ್ಟೆಯನ್ನು ಅಭಿವೃದ್ಧಿಪಡಿಸಲಾಗುವುದು. ಇನ್ನು ಮಾರುಕಟ್ಟೆಯಲ್ಲಿ ಕೆಲವರು ಗೋದಾಮನ್ನು ನಿರ್ಮಿಸಿಕೊಂಡಿದ್ದಾರೆ. ಆದರೆ ವಹಿವಾಟು ನಡೆಸುತ್ತಿಲ್ಲ. ಇದರಿಂದ ಮಾರುಕಟ್ಟೆ ಅಭಿವೃದ್ಧಿಗೆ ತೊಡಕಾಗಿ ಪರಿಣಮಿಸಿದೆ. ಆದ್ದರಿಂದ ಪ್ರತಿಯೊಬ್ಬರೂ ಈ ಬಗ್ಗೆ ಮನದಟ್ಟು ಮಾಡಿಕೊಂಡು ವ್ಯಾಪಾರ- ವಹಿವಾಟನ್ನು ನಡೆಸಬೇಕು. ಇಲ್ಲವಾದಲ್ಲಿ ಸಂಬಂಧಪಟ್ಟವರ ವಿರುದ್ಧ ಕಾನೂನು ಕ್ರಮಕೈಗೊಳ್ಳುವಂತೆ ಎಪಿಎಂಸಿ ಕಾರ್ಯದರ್ಶಿ ನಾಗೇಶ್ ಅವರಿಗೆ ಸೂಚಿಸಿದರು.
ಫಲಾನುಭವಿಗೆ ಹಸು ವಿತರಣೆ: ಬಳಿಕ ಪಟ್ಟಣದ ಪಶು ಆಸ್ಪತ್ರೆ ಆವರಣದಲ್ಲಿ ಶಾಸಕರು ಅಲೆಮಾರಿ ಸಮುದಾಯದ ಫಲಾನುಭವಿಗಳಿಗೆ 1 ಲಕ್ಷ ರೂ. ವೆಚ್ಚದಲ್ಲಿ ಹಸುಗಳನ್ನು ವಿತರಿಸಿದರು. ಪರಿಶಿಷ್ಟ ಜಾತಿ, ಪಂಗಡಗಳ ಅಲೆಮಾರಿ ಅಭಿವೃದ್ಧಿ ಇಲಾಖೆ ವತಿಯಿಂದ ನೀಡಲಾಗುತ್ತಿರುವ ಹಸುಗಳ ಪ್ರಯೋಜನ ಪಡೆದುಕೊಂಡು ಹೈನುಗಾರಿಕೆಯಲ್ಲಿ ಅಭಿವೃದ್ಧಿ ಹೊಂದಿ ಆರ್ಥಿಕವಾಗಿ ಸದೃಢರಾಗಬೇಕು ಎಂದು ಶಾಸಕ ಎಂ.ಆರ್.ಮಂಜುನಾಥ್ ತಿಳಿಸಿದರು.
ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಮಾಮ್ತಾಜ್‌ಬಾನು, ಸದಸ್ಯ ಮಹೇಶ್‌ನಾಯ್ಕ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಕೇಶವಮೂರ್ತಿ, ಪಶು ಇಲಾಖೆ ಸಹಾಯಕ ನಿರ್ದೇಶಕ ಡಾ. ಸಿದ್ದರಾಜು, ಮುಖಂಡರಾದ ಮಂಜೇಶ್, ರಾಜುಗೌಡ, ವಿಜಯಕುಮಾರ್, ಉದ್ದನೂರು ಗಿರೀಶ್ ಇತರರು ಇದ್ದರು.
