ಮಕ್ಕಳ ರಕ್ಷಿಸುವ ಕಾರ್ಯಾಚರಣೆಯಲಿ ಸರ್ಕಾರಿ ರಜೆ ನೆಪಬೇಡ

ಕೊಳ್ಳೇಗಾಲ: ಮಕ್ಕಳ ರಕ್ಷಣೆ ಮತ್ತು ಬಾಲ್ಯ ವಿವಾಹ ತಡೆ ಕಾರ್ಯಾಚರಣೆಗೆ ಅಧಿಕಾರಿಗಳು ಸರ್ಕಾರಿ ರಜೆ ನೆಪಮಾಡುವಂತಿಲ್ಲ ಎಂದು ತಹಸೀಲ್ದಾರ್ ರಾಯಪ್ಪ ಹುಣಸಗಿ ನಿರ್ದೇಶಿಸಿದರು.

ತಾಲೂಕು ಕಚೇರಿಯಲ್ಲಿ ಸೋಮವಾರ ಜಿಲ್ಲಾ ಮಕ್ಕಳ ಸಹಾಯವಾಣಿ ವತಿಯಿಂದ ಆಯೋಜಿಸಿದ್ದ ತಾಲೂಕು ಮಟ್ಟದ ಮಕ್ಕಳ ಸಲಹಾ ಸಮಿತಿ ರಚನೆ ಮತ್ತು ಸಮಿತಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ತಾಲೂಕಿನಲ್ಲಿ ಬಾಲ್ಯ ವಿವಾಹ ತಡೆಯುವ ನಿಟ್ಟಿನಲ್ಲಿ ಸಮಿತಿ ವ್ಯಾಪ್ತಿಗೊಳಪಡುವ ಎಲ್ಲ ಇಲಾಖಾಧಿಕಾರಿಗಳು ಮಕ್ಕಳ ಸಹಾಯವಾಣಿ ಸಂಯೋಜಕರೊಂದಿಗೆ ಶ್ರಮಿಸಬೇಕು ಎಂದು ಸೂಚನೆ ನೀಡಿದರು.

ಮಕ್ಕಳ ರಕ್ಷಣೆ ನಮ್ಮೆಲ್ಲರ ಕರ್ತವ್ಯವಾಗಿದ್ದು, ಹಗಲಿರುಳೆನ್ನದೆ ಮಾಹಿತಿ ಆಧರಿಸಿ ಕಾನೂನು ಪ್ರಕಾರ ಕ್ರಮಕ್ಕೆ ಮುಂದಾಗಬೇಕು. ಕಾರ್ಯಾಚರಣೆಯಲ್ಲಿ ನಿರಾಸಕ್ತಿ ತೋರುವವರ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಲಾಗುವುದು. ಪ್ರತಿಯೊಂದು ಇಲಾಖೆಯವರು ಮಕ್ಕಳ ಹಕ್ಕುಗಳ ರಕ್ಷಣೆ ಕುರಿತು ಗೋಡೆ ಬರಹಗಳನ್ನು ಬರೆಸಬೇಕು. ಅಲ್ಲಲ್ಲಿ ಜಾಗೃತಿ ಕಾರ್ಯಕ್ರಮ ನಡೆಸಿ ಜನರಲ್ಲಿ ಅರಿವು ಮೂಡಿಸಬೇಕು. ತೊಂದರೆಯಲ್ಲಿರುವ ಮಕ್ಕಳ ಕುರಿತು ಮಾಹಿತಿ ನೀಡಲು ಮಕ್ಕಳ ಸಹಾಯವಾಣಿ 1098ಕ್ಕೆ ಉಚಿತ ಕರೆ ಮಾಡಲು ದೊಡ್ಡದಾಗಿ ಬರಹ ಬರೆಸಲು ಸಲಹೆ ನೀಡಿದರು.

ಎಸ್‌ಡಿಎ ವಸತಿ ಶಾಲಾ ಮಕ್ಕಳ ಮೇಲೆ ಲೈಂಗಿಕ ಕಿರುಕುಳ:  ಪಟ್ಟಣದ ಸಿದ್ದಯ್ಯನಪುರ ಬಳಿಯ ಸೆವೆಂತ್-ಡೇ ಅಡ್ವೆಂಟಿಸ್ಟ್ ವಾಕ್ ಮತ್ತು ಶ್ರವಣ ನ್ಯೂನತೆಯ ವಸತಿ ಶಾಲೆಯಲ್ಲಿ ಕೆಲ ಮಕ್ಕಳ ಮೇಲೆ ಲೈಂಗಿಕ ಕಿರುಕುಳ ನಡೆದಿದೆ ಎಂದು 4 ತಿಂಗಳ ಹಿಂದೆ ವಿಡಿಯೋ ದಾಖಲೆ ಸಮೇತ ಡಿಸಿ, ಎಸ್ಪಿ ಸೇರಿದಂತೆ ಜಿಲ್ಲಾ ಮಕ್ಕಳ ಸಹಾಯವಾಣಿಗೆ ದೂರು ಬಂದಿದ್ದು, ಇದರ ವಿಚಾರಣೆಯನ್ನು ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ (ವಿಶೇಷ ನ್ಯಾಯಾಂಗ ಪೀಠ) ಆರಂಭಿಸಿದೆಯಾದರೂ ಪಟ್ಟಣ ಠಾಣೆ ಪಿಎಸ್‌ಐ ವೀಣಾನಾಯಕ್ ಸಕಾಲಕ್ಕೆ ವರದಿ ನೀಡಿಲ್ಲ. ಏತನ್ಮಧ್ಯೆ, ಅಮೆರಿಕನ್ ಸೈನ್‌ಲಾಂಗ್ವೇಜ್ ತಜ್ಞರನ್ನು ಕರೆಸುವುದು ವಿಳಂಬವಾಗಿದೆ ಎಂದು ಮಕ್ಕಳ ಸಹಾಯವಾಣಿ ಜಿಲ್ಲಾ ಸಂಯೋಜಕಿ ಲತಾ ಸಭೆ ಗಮನಕ್ಕೆ ತಂದರು.

ಈ ಬಗ್ಗೆ ಪ್ರತಿಕ್ರಿಯಿಸಿದ ಬಿಇಒ ಚಂದ್ರಪಾಟೀಲ್, ಮೈಸೂರಿನ ಶಾಲೆಯೊಂದರಿಂದ ಕರೆಸಲು ಪ್ರಯತ್ನಿಸಲಾಗಿದೆ ಎಂದರು. ಇದನ್ನೊಪ್ಪದ ತಹಸೀಲ್ದಾರ್, ತನಿಖೆ ವಿಳಂಬವಾದಷ್ಟು ಮಕ್ಕಳು ತಮಗಾದ ತೊಂದರೆಯನ್ನು ಹೇಳಿಕೊಳ್ಳಲು ಸಮಸ್ಯೆಯಾಗಬಹುದು. ಮುಂದಿನ ಸಭೆಯೊಳಗೆ ಈ ಎಲ್ಲ ಪ್ರಕ್ರಿಯೆ ಮುಕ್ತಾಯ ಕಾಣುವ ನಿಟ್ಟಿನಲ್ಲಿ ಸಂಬಂಧಿಸಿದ ಅಧಿಕಾರಿಗಳು ಕ್ರಮವಹಿಸಬೇಕು ಎಂದು ಖಡಕ್ ಸೂಚನೆ ನೀಡಿದರು.

2 ವರ್ಷದ ಬಳಿಕ ಸಮಿತಿ ರಚನೆ: ಮಕ್ಕಳ ಸಹಾಯವಾಣಿಗೆ ಜಿಲ್ಲಾ ಮಟ್ಟದ ಸಲಹಾ ಸಮಿತಿ ರಚನೆಗೊಂಡು ಸಕ್ರಿಯವಾಗಿ ಕಾರ್ಯ ನಿರ್ವಹಿಸುತ್ತಿದೆ. ಇದೇ ರೀತಿ ತಾಲೂಕು ಮಟ್ಟದಲ್ಲಿಯೂ ಸಮಿತಿ ರಚಿಸಿ ಪ್ರತಿ 3 ತಿಂಗಳಿಗೆ ಮಕ್ಕಳ ರಕ್ಷಣೆ ಕುರಿತು ಸಭೆ ನಡೆಸಬೇಕಿದೆ. ಆದರೆ, ಕಳೆದ 2017ರಿಂದ ಇಲ್ಲಿನ ತಾಲೂಕು ಸಮಿತಿ ನಿಷ್ಕ್ರಿಯಗೊಂಡಿದ್ದು, ಅಲ್ಲಿಂದೀಚೆಗೆ ಒಂದೂ ಸಭೆ ನಡೆಯದಿರುವುದು ಸಭೆಯಲ್ಲಿ ಬೆಳಕಿಗೆ ಬಂದಿತು. ಈ ಬಗ್ಗೆ ಅಸಮಾಧಾನಗೊಂಡ ತಾಲೂಕು ಸಮಿತಿ ಅಧ್ಯಕ್ಷರೂ ಆದ ತಹಸೀಲ್ದಾರ್ ರಾಯಪ್ಪ ಹುಣಸಗಿ, ಮುಂದೆ 3 ತಿಂಗಳಿಗೊಮ್ಮೆ ತಪ್ಪದೆ ಸಭೆ ನಡೆಸಲು ಸಮಿತಿ ಸದಸ್ಯರಿಗೆ ಸೂಚಿಸಿದರು.

ಕೆಎಸ್‌ಆರ್‌ಟಿಸಿ ಡಿಪೋ ವ್ಯವಸ್ಥಾಪಕ ಸುಬ್ರಹ್ಮಣ್ಯ, ತಾಲೂಕು ಆರೋಗ್ಯ ನಿರೀಕ್ಷಕ ಮಂಚಯ್ಯ, ಸಿಡಿಪಿಒ ಕಚೇರಿ ನೌಕರ ಗಿರೀಶ್, ನಗರಸಭೆ ಆಯುಕ್ತ ನಾಗಶೆಟ್ಟಿ, ಬಿಸಿಎಂ ಇಲಾಖೆ ವಿಸ್ತರಣಾಧಿಕಾರಿ ಗುರುಸ್ವಾಮಿ, ಎಎಸ್‌ಐ ಪ್ರಭುಸ್ವಾಮಿ, ಮಹಿಳಾ ಪೇದೆ ರತ್ನಮ್ಮ, ಮಕ್ಕಳ ಸಹಾಯವಾಣಿ ಸಂಯೋಜಕರಾದ ಸಿ.ಎಸ್.ನಾಗರಾಜು, ಶಿವಕುಮಾರ್, ಸ್ವಾತಿ ಇದ್ದರು.