ವಿಜಯವಾಣಿ ಸುದ್ದಿಜಾಲ ಕೋಟ
ಸಾಲಿಗ್ರಾಮ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಪಾರಂಪಳ್ಳಿ ವಿಷ್ಣುಮೂರ್ತಿ ದೇಗುಲ ಸಮೀಪ ಸರ್ಕಾರಿ ಕೆರೆ ದಂಡೆ ಮೇಲಿರುವ ವಿವಾದಿತ ರಸ್ತೆಯನ್ನು ಬ್ರಹ್ಮಾವರ ತಹಸೀಲ್ದಾರ್ ಶ್ರೀಕಾಂತ್ ಎಸ್.ಹೆಗ್ಡೆ ಇತ್ತೀಚೆಗೆ ಪರಿಶೀಲಿಸಿದರು.
ಹಲವಾರು ವರ್ಷಗಳಿಂದ ಬಳಕೆಯಲ್ಲಿದ್ದ ಕಾಲುದಾರಿಯನ್ನು ರಸ್ತೆಯಾಗಿ ಬದಲಾಯಿಸಲಾಗಿದೆ ಎಂದು ಆಕ್ಷೇಪಿಸಿ ರಸ್ತೆಯ ಮಧ್ಯದಲ್ಲಿ ಕಲ್ಲು ಹಾಕಿ ಸಂಚಾರಕ್ಕೆ ತಡೆಯೊಡ್ಡಿದ್ದು, ಈ ಕುರಿತು ರಸ್ತೆಯ ಫಲಾನುಭವಿಗಳು ಆಕ್ಷೇಪ ವ್ಯಕ್ತಪಡಿಸಿರುವುದರ ಜತೆಗೆ ತಹಸೀಲ್ದಾರ್‌ಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಸ್ಥಳಕ್ಕೆ ಭೇಟಿ ನೀಡಿದ ತಹಸೀಲ್ದಾರ್ ಕೆರೆ ಸುತ್ತಮುತ್ತಲಿನ ವ್ಯಾಪ್ತಿ ಪರಿಶೀಲಿಸಿ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ವಾರ್ಡ್ ಸದಸ್ಯರಾದ ಅನುಸೂಯ ಹೇರ್ಳೆ, ಪುನಿತ್ ಪೂಜಾರಿ, ಕೆರೆ ಸಮಿತಿ ಪ್ರಮುಖ ಮಂಜುನಾಥ್ ಉಪಾಧ್ಯಾ ಮತ್ತಿತರರು ಇದ್ದರು. ಕರೆಯು 68 ಸೆಂಟ್ಸ್ ವಿಸ್ತೀರ್ಣ ಹೊಂದಿದ್ದು, ಗುಂಡ್ಮಿ ಸಂಪರ್ಕಿಸುವುದಕ್ಕಾಗಿ ಸುಮಾರು ಇಪ್ಪತ್ತು ಮನೆಗಳು ಈ ಕಾಲುದಾರಿಯನ್ನೇ ರಸ್ತೆಯಾಗಿ ಮಾರ್ಪಾಡುಗೊಳಿಸಿದ್ದರು. ಇದನ್ನು ಆಕ್ಷೇಪಿಸಿ ಕೆರೆ ಅಭಿವೃದ್ಧಿ ಸಮಿತಿ ರಸ್ತೆ ತೆರವುಗೊಳಿಸವಂತೆ ಆಗ್ರಹಿಸಿತ್ತು.
ಕೆರೆ ದಂಡೆಯ ಮೇಲೆ ನಿರ್ಮಾಣಗೊಂಡ ರಸ್ತೆಗೆ ಆಕ್ಷೇಪ ವ್ಯಕ್ತವಾದ ಹಿನ್ನೆಲೆಯಲ್ಲಿ ಎರಡು ಕಡೆಯ ಪ್ರಮುಖರು ಜತೆಸೇರಿ ಮಾತುಕತೆ ಮೂಲಕ ಪರಿಹರಿಸಿಕೊಳ್ಳಬೇಕು. ರಸ್ತೆಯಿಂದ ಕುಟುಂಬಗಳಿಗೆ ಸಹಾಯವಾಗುವುದಿದ್ದರೆ ಚರ್ಚೆ ನಡೆಸಿ. ಇಲ್ಲದಿದ್ದರೆ ಇಡೀ ಕೆರೆಯನ್ನೇ ಸರ್ವೇ ನಡೆಸಿ ಕೆರೆ ಒತ್ತುವರಿ ತೆರವುಗೊಳಿಸುತ್ತೇನೆ.
-ಶ್ರೀಕಾಂತ್ ಎಸ್.ಹೆಗ್ಡೆ ತಹಸೀಲ್ದಾರ್