ಸಿಎಸ್​ಕೆಗೆ ಏಳನೇ ಜಯ, ಪ್ಲೇಆಫ್ ಸನಿಹ

ಕೋಲ್ಕತ: ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಐಪಿಎಲ್-12ರಲ್ಲಿ ಗೆಲುವಿನ ಓಟ ಮುಂದುವರಿಸಿದ್ದು, ಕೋಲ್ಕತ ನೈಟ್​ರೈಡರ್ಸ್ ತಂಡದ ವಿರುದ್ಧ ‘ಜಯದ ಡಬಲ್’ ಸಂಭ್ರಮ ಕಂಡಿದೆ. ಧೋನಿ ಪಡೆ ಹಾಲಿ ಆವೃತ್ತಿಯಲ್ಲಿ ಡೆಲ್ಲಿ ನಂತರ ಕೆಕೆಆರ್ ಎದುರು ಲೀಗ್ ಹಂತದ ಎರಡೂ ಮುಖಾಮುಖಿಯಲ್ಲೂ ಗೆದ್ದ 2ನೇ ತಂಡವೆನಿಸಿದೆ. ಇಮ್ರಾನ್ ತಾಹಿರ್(27ಕ್ಕೆ 4) ಮಾರಕ ಸ್ಪಿನ್ ಹಾಗೂ ಸುರೇಶ್ ರೈನಾ (58 *ರನ್, 42 ಎಸೆತ, 7 ಬೌಂಡರಿ, 1 ಸಿಕ್ಸರ್) ಜವಾಬ್ದಾರಿಯುತ ಬ್ಯಾಟಿಂಗ್​ನಿಂದ ಸಿಎಸ್​ಕೆ 5 ವಿಕೆಟ್​ಗಳ ಜಯ ಸಾಧಿಸಿ, ಒಟ್ಟಾರೆ 7ನೇ ಜಯದೊಂದಿಗೆ ಪ್ಲೇಆಫ್ ಹಾದಿಯನ್ನು ಬಲಪಡಿಸಿಕೊಂಡಿದೆ.

ಈಡನ್ ಗಾರ್ಡನ್ಸ್​ನಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್​ಗೆ ಇಳಿದ ಕೆಕೆಆರ್, ಕ್ರಿಸ್ ಲ್ಯಾನ್ (82 ರನ್, 51 ಎಸೆತ, 7 ಬೌಂಡರಿ, 6 ಸಿಕ್ಸರ್) ಬಿರುಸಿನ ಆಟದ ನೆರವಿನಿಂದ 8 ವಿಕೆಟ್​ಗೆ 161 ರನ್ ಪೇರಿಸಿತು. ಈ ಸವಾಲು ಬೆನ್ನಟ್ಟಿದ ಸಿಎಸ್​ಕೆ, ಏರಿಳಿತಗಳ ನಿರ್ವಹಣೆಯೊಂದಿಗೆ 19.4 ಓವರ್​ಗಳಲ್ಲಿ 5 ವಿಕೆಟ್​ಗೆ 162ರನ್ ಪೇರಿಸಿ ಜಯಿಸಿತು. ತಂಡದ ಮೊತ್ತ 121ರನ್ ಆಗಿದ್ದಾಗ ಎಂಎಸ್ ಧೋನಿ(16) ಔಟಾಗಿದ್ದರಿಂದ ಸಿಎಸ್​ಕೆ ಸೋಲಿನ ಭೀತಿ ಎದುರಿಸಿತು. ಆಗ ಅಗತ್ಯವಿದ್ದ 41 ರನ್​ಗಳನ್ನು ರವೀಂದ್ರ ಜಡೇಜಾ(31*ರನ್, 17ಎಸೆತ, 5ಬೌಂಡರಿ) ಸಾಹಸದಿಂದ ಸಿಎಸ್​ಕೆ ಗಳಿಸಿತು. ಕೊನೇ 2 ಓವರ್​ಗಳಲ್ಲಿ ಗೆಲುವಿಗೆ 24 ರನ್ ಅಗತ್ಯವಿದ್ದಾಗ ಇನಿಂಗ್ಸ್​ನ 19ನೇ

ಓವರ್ ಎಸೆದ ಹ್ಯಾರಿ ಗುರ್ನಿಗೆ ಜಡೇಜಾ ಹ್ಯಾಟ್ರಿಕ್ ಬೌಂಡರಿ ಬಾರಿಸಿ ಗೆಲುವು ಖಚಿತಪಡಿಸಿದರು. ಕೊನೇ 6 ಎಸೆತಗಳಲ್ಲಿ ಅಗತ್ಯವಿದ್ದ 8 ರನ್​ಗಳನ್ನು ಸಿಎಸ್​ಕೆ 4 ಎಸೆತಗಳಲ್ಲೇ ಕಸಿಯಿತು. -ಏಜೆನ್ಸೀಸ್

ಲ್ಯಾನ್ ಅಬ್ಬರ, ತಾಹಿರ್ ಮಾರಕ

ಬಿರುಸಿನ ಆಟದ ಮೂಲಕ ಕೆಕೆಆರ್​ಗೆ ಕ್ರಿಸ್ ಲ್ಯಾನ್ ಬಲ ನೀಡಿದರೆ, ಸ್ಪಿನ್ನರ್ ಇಮ್ರಾನ್ ತಾಹಿರ್ ಮಾರಕ ದಾಳಿ ಮೂಲಕ ಕೆಕೆಆರ್ ಬೃಹತ್ ಮೊತ್ತ ಪೇರಿಸದಂತೆ ತಡೆದರು. ಹಾಲಿ ಆವೃತ್ತಿಯಲ್ಲಿ 2ನೇ ಅರ್ಧಶತಕ ಸಿಡಿಸಿದ ಲ್ಯಾನ್ ಏಕಾಂಗಿ ಹೋರಾಟದ ಮೂಲಕ ಕೆಕೆಆರ್ ಮೊತ್ತವನ್ನು 160ಕ್ಕೇರಿಸಿದರು. ಆರಂಭಿಕ ಸುನೀಲ್ ನಾರಾಯಣ್(2) ಸ್ಪಿನ್ನರ್ ಮಿಚೆಲ್ ಸ್ಯಾಂಟ್ನರ್​ಗೆ ವಿಕೆಟ್ ಒಪ್ಪಿಸಿದರು. ನಿತೀಶ್ ರಾಣಾ(21), ಕನ್ನಡಿಗ ರಾಬಿನ್ ಉತ್ತಪ್ಪಗೆ(0) ಕಡಿವಾಣ ಹೇರಿದ ತಾಹಿರ್, ಕೆಕೆಆರ್ ಮೊತ್ತ 14 ಓವರ್​ಗಳಲ್ಲಿ 122ಕ್ಕೇರಿಸಿದ್ದ ಲ್ಯಾನ್​ರನ್ನು ಡಗೌಟ್ ಸೇರಿಸಿದರು. ಬೆನ್ನಲ್ಲೇ ಅಪಾಯಕಾರಿ ಆಲ್ರೌಂಡರ್ ಆಂಡ್ರೆ ರಸೆಲ್​ರನ್ನು 10ರನ್​ಗೆ ಔಟ್ ಮಾಡಿ ತಾಹಿರ್ ದೊಡ್ಡ ಬ್ರೇಕ್ ನೀಡಿದರು. ರಸೆಲ್ ಲಾಂಗ್​ಆನ್​ನಲ್ಲಿ ಬದಲಿ ಫೀಲ್ಡರ್ ಧ್ರುವ ಶೋರೆ ಹಿಡಿದ ಆಕರ್ಷಕ ಕ್ಯಾಚ್​ಗೆ ಔಟಾದರು. ಬಳಿಕ ಕೆಕೆಆರ್ ದಿಢೀರ್ ಕುಸಿತ ಕಂಡಿತು.

ರೈನಾ-ಜಡ್ಡು ಗೆಲುವಿನಾಟ

ಚೆನ್ನೈ ಗೆಲುವಿನಲ್ಲಿ ಸುರೇಶ್ ರೈನಾ ಹಾಗೂ ರವೀಂದ್ರ ಜಡೇಜಾ ಜವಾಬ್ದಾರಿಯುತ ಬ್ಯಾಟಿಂಗ್ ಪ್ರಮುಖ ಪಾತ್ರವಹಿಸಿತು. ಕಳಪೆ ಫಾಮ್ರ್ ಮುಂದುವರಿಸಿದ ಶೇನ್ ವ್ಯಾಟ್ಸನ್(6), ಫಾಫ್ ಡು ಪ್ಲೆಸಿಸ್(24), ಅಂಬಟಿ ರಾಯುಡು(5) ತಂಡದ ಮೊತ್ತ 61 ರನ್ ಆಗುವುದರೊಳಗೆ ಔಟಾದರು. ಬಳಿಕ ಕೇದಾರ್ ಜಾಧವ್(20), ರೈನಾ ಜತೆ ಬಿರುಸಿನ ಆಟವಾಡಿ ಔಟಾದರೆ, ಧೋನಿ(16) ತಂಡದ ಮೊತ್ತವನ್ನು 120ಕ್ಕೇರಿಸಿ ಸ್ಪಿನ್ನರ್ ಸುನೀಲ್ ನಾರಾಯಣ್ ಎಸೆತದಲ್ಲಿ ಎಲ್​ಬಿ ಬಲೆಗೆ ಬಿದ್ದರು. ಈ ನಡುವೆ ರೈನಾ ತಾಳ್ಮೆಯಿಂದ ಹೋರಾಟ ಮುಂದುವರಿಸಿದರೆ, ಜಡೇಜಾ ಬಿರುಸಿನ ಬ್ಯಾಟಿಂಗ್ ಮೂಲಕ ಚೆನ್ನೈ ಗೆಲುವಿಗೆ ನೆರವಾದರು.