ಚಳ್ಳಕೆರೆಯಲ್ಲಿ ಜನಸಂಪರ್ಕ ಸಭೆ

ಚಳ್ಳಕೆರೆ: ಕೈ ಮುಗಿದು ಬೇಡುತ್ತೇವೆ, ನಮಗೆ ಸಕಾಲಕ್ಕೆ ಪಿಂಚಣಿ ದೊರೆಯುವಂತೆ ಮಾಡಿ ಎಂದು ತಾಲೂಕಿನ ಗುಡಿಹಳ್ಳಿಯಲ್ಲಿ ನಡೆದ ಜನಸಂಪರ್ಕ ಸಭೆಯಲ್ಲಿ ವಯೋವೃದ್ಧರು ಅಳಲು ತೋಡಿಕೊಂಡರು.

ಇದಕ್ಕೆ ಪ್ರತಿಕ್ರಿಯಿಸಿದ ತಹಸೀಲ್ದಾರ್ ಎಂ. ಮಲ್ಲಿಕಾರ್ಜುನ್, ಪಿಂಚಣಿ ವಿಳಂಬವಾಗುತ್ತಿರುವುದು ನನ್ನ ಗಮನಕ್ಕೆ ಬಂದಿಲ್ಲ. ಕೂಡಲೇ ಕ್ರಮ ಕೈಗೊಂಡು ಪ್ರತಿ ತಿಂಗಳು ಪಿಂಚಣಿ ಸಿಗುವಂತೆ ಮಾಡುತ್ತೇನೆ ಎಂದು ಭರವಸೆ ನೀಡಿದರು.

ಬೇಸಿಗೆಯಲ್ಲಿ ಜಾನುವಾರುಗಳ ಪೋಷಣೆಗೆ ಗೋಶಾಲೆ ತೆರೆಯಬೇಕೆಂದು ಗ್ರಾಮಸ್ಥರ ಬೇಡಿಕೆಗೆ ಪ್ರತಿಕ್ರಿಯಿಸಿದ ತಹಸೀಲ್ದಾರ್, ಈಗಾಗಲೇ ತಾಲೂಕಿನಲ್ಲಿ 8 ಮೇವು ಬ್ಯಾಂಕ್, 6 ಕಡೆ ಗೋಶಾಲೆ ಆರಂಭಿಸಲು ಕ್ರಮ ಕೈಗೊಂಡಿದ್ದೇವೆ. ಒಂದು ವಾರದಲ್ಲಿ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ತಿಳಿಸಿದರು.

ಕಂದಾಯ ಇಲಾಖೆಯಿಂದ ಅಕ್ರಮ-ಸಕ್ರಮ ಯೋಜನೆಯಡಿ ರೈತರಿಗೆ ಭೂ ಒಡೆತನ ಸಿಗುತ್ತಿಲ್ಲ ಎಂಬ ದೂರಿಗೆ ಉತ್ತರಿಸಿದ ಅವರು, ಕಳೆದ ವಿಧಾನಸಭೆ ಚುನಾವಣೆ ವೇಳೆ ಬಗರ್‌ಹುಕುಂ ಸಮಿತಿಯನ್ನು ತಾತ್ಕಾಲಿಕವಾಗಿ ರದ್ದುಪಡಿಸಲಾಯಿತು. ಮತ್ತೆ ಶಾಸಕರ ಗಮನಕ್ಕೆ ತಂದು ಹೊಸ ಕಮಿಟಿ ರಚಿಸಿ ಅರ್ಹ ಸಾಗುವಳಿದಾರರಿಗೆ ಹಕ್ಕುಪತ್ರ ಕೊಡುವ ಕೆಲಸ ಮಾಡುವುದಾಗಿ ತಿಳಿಸಿದರು.

ಆರು ವರ್ಷದಿಂದ ಸರ್ಕಾರಿ ಶಾಲಾ ಮಕ್ಕಳಿಗೆ ಸಮರ್ಪಕವಾಗಿ ವಿದ್ಯಾರ್ಥಿ ವೇತನ ಬರುತ್ತಿಲ್ಲ ಎಂದು ಎಸ್‌ಡಿಎಂಸಿ ಅಧ್ಯಕ್ಷ ನಾಗರಾಜ ಹೇಳಿದರು.
ಮುಖ್ಯಶಿಕ್ಷಕರು ದಾಖಲಾತಿ ನಿರ್ವಹಣೆ ಮಾಡುತ್ತಿದ್ದಾರೆ. ಆಧಾರ್ ನಂಬರ್ ಮತ್ತು ಬ್ಯಾಂಕ್ ಖಾತೆ ಮಾಹಿತಿ ಇಲ್ಲದ ಮಕ್ಕಳಿಗೆ ವಿದ್ಯಾರ್ಥಿ ವೇತನ ತಲುಪಿಸುವುದು ವಿಳಂಬವಾಗಿದೆ. ಇದನ್ನು ಕೂಡಲೇ ಸರಿಪಡಿಸುವುದಾಗಿ ಬಿಇಒ ತಿಳಿಸಿದರು.
ಗ್ರಾಮಕ್ಕೆ ಪಶು ಆರೋಗ್ಯ ಇಲಾಖೆ ಬೇಕು. ಸಮೀಪದ ಮೈಲನಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ವೈದ್ಯರ ನೇಮಕವಾಗಬೇಕೆಂದು ಗ್ರಾಮಸ್ಥ ಎಚ್. ತಿಮ್ಮಣ್ಣ ಅಧಿಕಾರಿಗಳನ್ನು ಒತ್ತಾಯಿಸಿದರು.

ಗ್ರಾಪಂ ಅಧ್ಯಕ್ಷೆ ಲಲಿತಮ್ಮ, ಸದಸ್ಯರಾದ ರವಿಕುಮಾರ್, ಶಿವಣ್ಣ, ವೀರೇಶ್, ತಾಪಂ ಸದಸ್ಯರಾದ ಕಾಲುವೇಹಳ್ಳಿ ಶ್ರೀನಿವಾಸ್, ಸಾಕಮ್ಮ, ಬಿಇಒ ಸಿ.ಎಸ್. ವೆಂಕಟೇಶ್, ಸಿಡಿಪಿಓ ಗಿರಿಜಾಂಬ, ತೋಟಗಾರಿಕೆ ವಿರೂಪಾಕ್ಷಪ್ಪ, ಕೃಷಿ ಇಲಾಖೆ ಕಿರಣ್ ಕುಮಾರ್, ಆಹಾರ ಇಲಾಖೆ ರಂಗಸ್ವಾಮಿ, ಪಿಎಸ್‌ಐ ಮೋಹನ್ ಕುಮಾರ್ ಮತ್ತಿತರರಿದ್ದರು.