ನವದೆಹಲಿ: ಬಹುನಿರೀಕ್ಷಿತ ಟಿ20 ವಿಶ್ವಕಪ್ ಟೂರ್ನಿಯನ್ನು ಭಾರತದಿಂದ ಯುಎಇಗೆ ಸ್ಥಳಾಂತರಿಸಲಾಗುವುದು ಎಂದು ಬಿಸಿಸಿಐ ಮುಖ್ಯಸ್ಥ ಸೌರವ್ ಗಂಗೂಲಿ ಹೇಳಿದ್ದಾರೆ. ಇದರೊಂದಿಗೆ ಹಲವು ದಿನಗಳಿಂದ ಟೂರ್ನಿ ಸ್ಥಳಾಂತರದ ಬಗ್ಗೆ ನಡೆಯುತ್ತಿದ್ದ ಚರ್ಚೆಗೆ ತೆರೆ ಎಳೆದಿರುವ ಗಂಗೂಲಿ, ಕೋವಿಡ್-19 ಭೀತಿಯಿಂದಾಗಿ ಆರೋಗ್ಯದ ಹಿತದೃಷ್ಟಿಯಿಂದ ಈ ತೀರ್ಮಾನ ಕೈಗೊಳ್ಳಲಾಗಿದೆ ಎಂದಿದ್ದಾರೆ. ಟೂರ್ನಿ ಸ್ಥಳಾಂತರಿಸುವ ಕುರಿತು ಐಸಿಸಿಗೆ ಅಧಿಕೃತವಾಗಿ ತಿಳಿಸಿದ್ದು, ಟೂರ್ನಿಯ ವಿವರಗಳನ್ನು ಶೀಘ್ರವೇ ತಿಳಿಸಲಾಗುವುದು ಎಂದರು. ಟೂರ್ನಿಯ ಆಯೋಜನಾ ಹಕ್ಕನ್ನು ಬಿಸಿಸಿಐ ತನ್ನ ಬಳಿಯಲ್ಲೇ ಉಳಿಸಿಕೊಂಡಿದೆ.
ಇದನ್ನೂ ಓದಿ: ಟೋಕಿಯೊ ಒಲಿಂಪಿಕ್ಸ್‌ಗೂ ಮುನ್ನವೇ ಭಾರತದ ಕುಸ್ತಿಪಟುಗೆ ಶಾಕ್..
ಅಕ್ಟೋಬರ್ 17 ರಂದು ಟೂರ್ನಿ ಆರಂಭಗೊಳ್ಳುವ ಕುರಿತು ಪ್ರತಿಕ್ರಿಯಿಸಿದ ಸೌರವ್ ಗಂಗೂಲಿ, ಟೂರ್ನಿಯ ಆರಂಭಿಕ ದಿನಾಂಕ ಇದುವರೆಗೂ ಅಂತಿಮವಾಗಿಲ್ಲ ಎಂದು ಸ್ಪಷ್ಟಪಡಿಸಿದರು. ಟೂರ್ನಿ ಆಯೋಜನೆ ಬಗ್ಗೆ 4 ವಾರಗಳಲ್ಲಿ ಉತ್ತರಿಸುವುದಾಗಿ ಬಿಸಿಸಿಐ ಜೂನ್ 1 ರಂದು ನಡೆದ ಸಭೆಯಲ್ಲಿ ಐಸಿಸಿಗೆ ಮನವಿ ಮಾಡಿಕೊಂಡಿತ್ತು. ಕೋವಿಡ್ ಭೀತಿಯಿಂದಾಗಿ ಮುಂದೂಡಿಕೆಯಾಗಿರುವ 14ನೇ ಐಪಿಎಲ್‌ನ ಉಳಿದ 31 ಪಂದ್ಯಗಳನ್ನು ಯುಎಇಯಲ್ಲಿ ಆಯೋಜಿಸಲು ಬಿಸಿಸಿಐ ಈ ಮೊದಲೇ ಪ್ರಕಟಿಸಿತ್ತು. 16 ತಂಡಗಳ ಟಿ20 ವಿಶ್ವಕಪ್ ಟೂರ್ನಿಯನ್ನು 9 ನಗರಗಳಲ್ಲಿ ಆಯೋಜಿಸಲು ಕಷ್ಟವಾಗಲಿದೆ. ಮತ್ತೊಂದೆಡೆ, ಟೂರ್ನಿಗೆ ಅಗತ್ಯ ಸಿದ್ಧತೆ ಕೈಗೊಳ್ಳುತ್ತಿರುವ ಬಿಸಿಸಿಐ, ದುಬೈ, ಶಾರ್ಜಾ ಹಾಗೂ ಅಬುಧಾಬಿಯಲ್ಲಿ ಲಾಜಿಸ್ಟಿಕ್ಸ್ ಸಿದ್ಧತೆಯಲ್ಲಿ ತೊಡಗಿದೆ. ಅಲ್ಲದೆ, ಟೂರ್ನಿಯ ಅರ್ಹತಾ ಸುತ್ತಿನ ಪಂದ್ಯಗಳು ಮಸ್ಕತ್‌ನಲ್ಲಿ ನಡೆಯಲಿವೆ ಎನ್ನಲಾಗಿದೆ.
ಇದನ್ನೂ ಓದಿ: ಬಿಸಿಸಿಐಗೆ ಸಿಕ್ತು ನ್ಯೂಜಿಲೆಂಡ್ ಆಟಗಾರರಿಂದ ಸಿಹಿ ಸುದ್ದಿ..!,
ಮಹಾರಾಷ್ಟ್ರದ ಮುಂಬೈ, ಪುಣೆ ಹಾಗೂ ಗುಜರಾತ್‌ನ ಅಹಮದಾಬಾದ್‌ನಲ್ಲಿ ಟಿ20 ವಿಶ್ವಕಪ್ ಆಯೋಜಿಸಲು ಬಿಸಿಸಿಐ ಯೋಜನೆ ರೂಪಿಸುತ್ತಿದೆ ಎನ್ನಲಾಗಿತ್ತು.ಆದರೆ, ಪಾಕಿಸ್ತಾನ ತಂಡ ಮುಂಬೈ ಹಾಗೂ ಪುಣೆಗೆ ಆಗಮಿಸಲು ಕೆಲವೊಂದು ರಾಜತಾಂತ್ರಿಕ ಸಮಸ್ಯೆ ಎದುರಾದರೆ, ಕೋವಿಡ್-19 ನಿಂದಾಗಿ ಟೂರ್ನಿಯನ್ನು ಸ್ಥಳಾಂತರಿಸಲಾಗುತ್ತಿದೆ ಎಂದು ಗಂಗೂಲಿ ಹೇಳಿದ್ದಾರೆ. ಮ್ಯಾಚೆಂಸ್ಟರ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಅಂತಿಮ ಟೆಸ್ಟ್ ಮುಕ್ತಾಯಗೊಂಡ ಬೆನ್ನಲ್ಲೇ ಐಪಿಎಲ್ ಆಟಗಾರರು ಸೆಪ್ಟೆಂಬರ್ 15 ರಂದು ದುಬೈಗೆ ಆಗಮಿಸಲಿದ್ದಾರೆ. ಬಳಿಕ ಐಪಿಎಲ್ 2ನೇ ಭಾಗ ಹಾಗೂ ಟಿ20 ವಿಶ್ವಕಪ್ ಮುಕ್ತಾಯಗೊಳ್ಳುವವರೆಗೂ ಆಟಗಾರರು ಯುಎಇಯಲ್ಲೇ ಉಳಿಯಲಿದ್ದಾರೆ.
ಅಕ್ಟೋಬರ್ 17 ರಿಂದ ಯುಎಇಯಲ್ಲಿ ಟಿ20 ವಿಶ್ವಕಪ್ ಟೂರ್ನಿ?