ಪ್ಯಾರಿಸ್: ಜನಪ್ರಿಯತೆ, ಶ್ರೀಮಂತಿಕೆ ಮತ್ತು ನಿರ್ವಹಣೆ&ದಾಖಲೆಗಳ ಲೆಕ್ಕಾಚಾರದಲ್ಲೂ ಕ್ರಿಕೆಟ್ ಸದ್ಯ ಭಾರತದ ನಂ. 1 ಕ್ರೀಡೆ ಎನಿಸಿದೆ. ಆದರೂ ಇದು ಇಷ್ಟು ಸಮಯ ಒಲಿಂಪಿಕ್ಸ್ ಕ್ರೀಡೆಯಾಗಿರಲಿಲ್ಲ. ಹೀಗಾಗಿ ಭಾರತದ ಇತರ ಕ್ರೀಡಾಪಟುಗಳಂತೆ ಕ್ರಿಕೆಟಿಗರಿಗೆ ಒಲಿಂಪಿಕ್ಸ್ ಪದಕದ ಕನಸು ಕಾಣುವ ಅವಕಾಶವಿರಲಿಲ್ಲ. ಆದರೆ ಮುಂದಿನ 2028ರ ಲಾಸ್ ಏಂಜಲಿಸ್ ಒಲಿಂಪಿಕ್ಸ್ನಲ್ಲಿ ಟಿ20 ಕ್ರಿಕೆಟ್ನಲ್ಲೂ ಪದಕ ಸ್ಪರ್ಧೆ ಇರಲಿದೆ. ಇತ್ತೀಚೆಗೆ ಅಮೆರಿಕದ ಜಂಟಿ ಆತಿಥ್ಯದಲ್ಲೇ ನಡೆದ ಟಿ20 ವಿಶ್ವಕಪ್ನಲ್ಲಿ ಪ್ರಶಸ್ತಿ ಗೆದ್ದು ಬೀಗಿರುವ ಭಾರತ, 4 ವರ್ಷಗಳ ಬಳಿಕ ಪುರುಷರ ಮತ್ತು ಮಹಿಳಾ ವಿಭಾಗದಲ್ಲಿ ಅವಳಿ ಚಿನ್ನದ ಪದಕ ಗೆಲುವಿನ ಗುರಿ ಇಡಬಹುದಾಗಿದೆ. ಇದಕ್ಕಾಗಿ ಬಲಿಷ್ಠ ತಂಡ ಕಟ್ಟುವ ನಿಟ್ಟಿನಲ್ಲಿ ಬಿಸಿಸಿಐ ಶ್ರಮಿಸಬೇಕಾಗಿದೆ.
ಭಾರತ ಟಿ20 ತಂಡದ ಹಾಲಿ ಉಪನಾಯಕ ಶುಭಮಾನ್ ಗಿಲ್, 2028ರ ಒಲಿಂಪಿಕ್ಸ್ ವೇಳೆಗೆ ನಾಯಕತ್ವ ಪಡೆಯುವ ಸಾಧ್ಯತೆ ಇದೆ. ರಿಷಭ್ ಪಂತ್, ಯಶಸ್ವಿ ಜೈಸ್ವಾಲ್, ಅಭಿಷೇಕ್ ಶರ್ಮ ಆ ವೇಳೆಗೆ ಪ್ರಮುಖ ಆಟಗಾರರಾಗಬಹುದು. ಇನ್ನು ಫಿಟ್ನೆಸ್ ಅವಕಾಶ ಮಾಡಿಕೊಟ್ಟರೆ ಬುಮ್ರಾ, ಹಾರ್ದಿಕ್ ಪಾಂಡ್ಯ ಕೂಡ ಒಲಿಂಪಿಕ್ಸ್ನಲ್ಲಿ ಕಣಕ್ಕಿಳಿಯಬಹುದಾಗಿದೆ.
ಅಂದಹಾಗೆ ಒಲಿಂಪಿಕ್ಸ್ಗೆ ಕ್ರಿಕೆಟ್ ಹೊಸ ಸೇರ್ಪಡೆಯಲ್ಲ. 1900ರಲ್ಲಿ ಮೊದಲ ಮತ್ತು ಏಕೈಕ ಬಾರಿ ಒಲಿಂಪಿಕ್ಸ್ನಲ್ಲಿ ಕ್ರಿಕೆಟ್ ಸ್ಪರ್ಧೆ ಇತ್ತು. ಇದೀಗ 128 ವರ್ಷಗಳ ಬಳಿಕ ಕ್ರಿಕೆಟ್ ತನ್ನ ಚುಟುಕು ಮಾದರಿಯ ಮೂಲಕ ಒಲಿಂಪಿಕ್ಸ್ಗೆ ಮರಳುತ್ತಿದೆ.
ಭಾರತಕ್ಕೆ ಒಲಿಂಪಿಕ್ಸ್ ತರುವ ದಿನ ದೂರವಿಲ್ಲ; ಇಂಡಿಯಾ ಹೌಸ್ ಉದ್ಘಾಟನೆಯಲ್ಲಿ ಕನಸು ಬಿತ್ತಿದ ನೀತಾ ಅಂಬಾನಿ