ಸಾಗರ: ಸಾಗರದ ಊರಿನ ಇತಿಹಾಸದಲ್ಲಿ ಶತಮಾನ ದಾಟಿದ ಟಿ.ಎಸ್. ನ್ಯಾಯವಾದಿ ಕಾನೂನು ಕಚೇರಿ ದಾಖಲಾಗುತ್ತದೆ. ಇದು ಪರಂಪರೆಯನ್ನು ಉಳಿಸಿಕೊಂಡು ಬಂದಿರುವುದಕ್ಕೆ ಸಾಕ್ಷಿಯಾಗಿದೆ ಎಂದು ಹೈಕೋರ್ಟ್ ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಹೇಳಿದರು.
ಸಾಗರದ ಶೃಂಗೇರಿ ಶಂಕರಮಠದಲ್ಲಿ ಟಿ.ಎಸ್.ವೆಂಕಪ್ಪ ಕುಟುಂಬದಿಂದ ಏರ್ಪಡಿಸಿದ್ದ ಸಾಗರದ ಟಿ.ಎಸ್. ನ್ಯಾಯವಾದಿ ಕಾರ್ಯಾಲಯದ ಶತಮಾನೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಊರಿನಲ್ಲಿ ಅನೇಕ ಮಹತ್ವದ ಸಂಗತಿಗಳು ಇತಿಹಾಸದಲ್ಲಿ ದಾಖಲಾಗುತ್ತವೆ. ಅವುಗಳ ಸಾಲಿಗೆ ಈ ಕಚೇರಿಯ ಮಹತ್ವವೂ ದಾಖಲಾರ್ಹವಾಗಿದೆ ಎಂದರು.
ನ್ಯಾಯಾಧೀಶರ ನಂಬಿಕೆ ಉಳಿಸಿಕೊಂಡು, ಕಕ್ಷಿದಾರರಿಗೆ ನ್ಯಾಯ ಒದಗಿಸಿದ ವಿಶೇಷತೆ ಈ ಕಚೇರಿಯದು. ಈ ಕಚೇರಿಯಲ್ಲಿನ ವಕೀಲರು ಹಣದ ಹಿಂದೆ ಬೀಳದೆ, ಕಕ್ಷಿದಾರರು ಬಂದಾಗ ಅವರಿಗೆ ಊಟ, ವಸತಿ ನೀಡಿದೆ. ಕಕ್ಷಿದಾರರು ನ್ಯಾಯ ಪಡೆದುಕೊಂಡು ಹೋದ ಪರಂಪರೆ ನೋಡಬಹುದು ಎಂದರು.
‘ಶತ ಪ್ರಾಪ್ತಿ’ ಸ್ಮರಣ ಸಂಚಿಕೆ ಬಿಡುಗಡೆ ಮಾಡಿ ಮಾತನಾಡಿದ ಮಾಜಿ ಅಡ್ವೋಕೇಟ್ ಜನರಲ್ ಮತ್ತು ಹಿರಿಯ ವಕೀಲ ಅಶೋಕ ಹಾರ‌್ನಳ್ಳಿ, ಸಮಾಜದಲ್ಲಿ ವಕೀಲ ವೃತ್ತಿ ವಿಭಿನ್ನವಾದುದು. ವೃತ್ತಿಯ ಆರಂಭದಲ್ಲಿ ಸಾಫ್ಟ್‌ವೇರ್ ಇಂಜಿನಿಯರ್‌ಗಳಿಗೆ ಸಿಕ್ಕಂತೆ ಹಣ ತಂದುಕೊಡುವುದಿಲ್ಲ. ದಿಢೀರ್ ಹಣ ಮಾಡುವ ವೃತ್ತಿಯೂ ಇದಲ್ಲ. ಆದರೆ ಜೀವನ ಮಾಡುವ ಪಾಠ ಈ ವೃತ್ತಿಯಲ್ಲಿದೆ ಎಂದು ತಿಳಿಸಿದರು.
1924ರಲ್ಲಿ ಟಿ.ಎಸ್.ವೆಂಕಪ್ಪ ಅವರು ಇಲ್ಲಿ ವಕೀಲರಾಗಿ ದೊಡ್ಡ ಸಾಧನೆ ಮಾಡಿದ್ದಾರೆ. ಪೂರ್ವಜರು ಹಾಕಿಕೊಟ್ಟ ಸನ್ಮಾರ್ಗದಲ್ಲಿ ಇಂದಿಗೂ ಅವರ ಕುಟುಂಬ ಈ ವೃತ್ತಿಯನ್ನು ಮುನ್ನಡೆಸಿಕೊಂಡು ಬಂದಿದೆ. ಪ್ರಸ್ತುತ ವಕೀಲ ವೃತ್ತಿ ವ್ಯಾವಹಾರಿಕವಾಗಿ ಬದಲಾಗಿದೆ. ವಕೀಲರಿಗೂ ಸಾಮಾಜಿಕ ಜವಾಬ್ದಾರಿ ಬೇಕು ಎಂದರು.
ಟಿ.ಎಸ್. ನ್ಯಾಯವಾದಿ ಕಚೇರಿಯ ವಕೀಲ ಟಿ.ಎಸ್.ರಮಣ ಅವರು ಓದಿರುವ ಚಿಪ್ಪಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಶತಮಾನೋತ್ಸವದ ಸ್ಮರಣಾರ್ಥ ನೆನಪಿನ ಕಾಣಿಕೆ ನೀಡಲಾಯಿತು. ಶಾರದಾ ಟಿ.ಎಸ್. ಶಿವರಾಮರಾವ್ ಅವರನ್ನು ಗೌರವಿಸಲಾಯಿತು. ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಶುಭ ಕೋರಿದರು. ಟಿ.ಎಸ್.ವೆಂಕಪ್ಪ ಕುಟುಂಬದ 20ಕ್ಕೂ ಹೆಚ್ಚಿನ ವಕೀಲರಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಚೆನ್ನೈ ಕೊಗ್ನಿಜೆಂಟ್ ಕಂಪನಿ ಮಾಜಿ ಕಾರ್ಯನಿರ್ವಾಹಕ ಉಪಾಧ್ಯಕ್ಷ ಪ್ರದೀಪ್ ಶಿಳಿಗೆ ಇದ್ದರು. ಶ್ರಾವ್ಯಾ ಸಾಗರ್. ಟಿ.ಎಸ್.ರಮಣ. ಉಷಾ ರಮಣ, ಡಾ. ನಿರಂಜನ ಹೆಗಡೆ ಮತ್ತು ಟಿ.ಎಸ್.ಮಹಾಲಕ್ಷ್ಮೀ ಹಾಜರಿದ್ದರು.