ವಿದ್ಯಾರ್ಥಿಗಳು ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿ

ತಿ.ನರಸೀಪುರ: ವಿದ್ಯಾರ್ಥಿಗಳ ಬೌದ್ಧಿಕ ಸಾಮರ್ಥ್ಯ ವಿಕಾಸಗೊಳ್ಳಲು ಪಾಠದೊಂದಿಗೆ ಪಠ್ಯೇತರ ಚಟುವಟಿಕೆಗಳು ಸಹಕಾರಿಯಾಗಲಿದ್ದು, ವಿದ್ಯಾರ್ಥಿನಿಯರು ಅಧ್ಯಯನದ ಜತೆಗೆ ಸಾಂಸ್ಕೃತಿಕ ಮತ್ತು ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸಬೇಕು ಎಂದು ವರುಣ ಶಾಸಕ ಡಾ.ಎಸ್.ಯತೀಂದ್ರ ಹೇಳಿದರು.
ಪಟ್ಟಣದ ಕಬಿನಿ ಕಾಲನಿಯಲ್ಲಿರುವ ಭೈರಾಪುರ ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ 2019-20ನೇ ಸಾಲಿನ ಸಾಂಸ್ಕೃತಿಕ, ಕ್ರೀಡಾ, ರಾಷ್ಟ್ರೀಯ ಸೇವಾ ಯೋಜನೆ, ಯುವ ರೆಡ್ ಕ್ರಾಸ್ ಹಾಗೂ ಸ್ಕೌಟ್ಸ್ ಮತ್ತು ಗೈಡ್ಸ್ ಚಟುವಟಿಕೆಗಳ ಉದ್ಘಾಟನಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ವಿದ್ಯಾರ್ಥಿಗಳಿಗೆ ಸಾಧನೆ ಮಾಡಲು ಶೈಕ್ಷಣಿಕ ಕ್ಷೇತ್ರವೊಂದೇ ಅಲ್ಲ. ಸಾಂಸ್ಕೃತಿಕ ಮತ್ತು ಕ್ರೀಡಾ ಕ್ಷೇತ್ರಗಳಲ್ಲೂ ಸಾಕಷ್ಟು ಅವಕಾಶಗಳಿವೆ. ವಿವಿಧ ಕ್ಷೇತ್ರಗಳನ್ನು ಆಯ್ಕೆ ಮಾಡಿಕೊಂಡು ಸಾಧನೆ ಮಾಡಬೇಕು ಎಂದರು.
ಗ್ರಾಮೀಣ ಮತ್ತು ಪಟ್ಟಣ ಪ್ರದೇಶಗಳ ವಿದ್ಯಾರ್ಥಿನಿಯರಿಗೆ 6-7 ವರ್ಷಗಳಿಂದ ಗುಣಮಟ್ಟದ ಪದವಿ ಶಿಕ್ಷಣ ನೀಡುತ್ತಿರುವ ಭೈರಾಪುರ ಮಹಿಳಾ ಪ್ರಥಮ ದರ್ಜೆ ಕಾಲೇಜಿಗೆ ಉತ್ತಮ ಕಟ್ಟಡವನ್ನು ಮಾಜಿ ಸಿಎಂ ಸಿದ್ದರಾಮಯ್ಯ ಅವರ ಕಾಲದಲ್ಲಿ ಕಲ್ಪಿಸಿದ್ದು, ಕಾಲೇಜಿಗೆ ಮತ್ತಷ್ಟು ಮೂಲಸೌಕರ್ಯವನ್ನು ವಿಸ್ತರಿಸಿ ಸ್ನಾತಕೋತ್ತರ ಕೋರ್ಸುಗಳನ್ನು ತೆರೆಯಲಾಗುವುದು ಎಂದರು.
ಕಾಲೇಜಿನ ಪ್ರಾಂಶುಪಾಲರು ಮತ್ತು ಉಪನ್ಯಾಸಕರು ಯಾವುದೇ ಶೈಕ್ಷಣಿಕ ಸಮಸ್ಯೆಗಳನ್ನು ನನ್ನ ಗಮನಕ್ಕೆ ನೇರವಾಗಿ ತರಬೇಕು. ಸರ್ಕಾರದ ಅನುದಾನವನ್ನು ಕಾಲ ಕಾಲಕ್ಕೆ ಬಿಡುಗಡೆ ಮಾಡಿಸುತ್ತೇನೆ ಎಂದು ಭರವಸೆ ನೀಡಿದರು.
ಮುಖ್ಯ ಭಾಷಣಗಾರರಾಗಿದ್ದ ಸಹ ಪ್ರಾಧ್ಯಾಪಕಿ ಡಾ.ಎಚ್.ಪಿ.ಗೀತಾ ಮಾತನಾಡಿ, ಪ್ರಸ್ತುತ ದಿನಗಳಲ್ಲಿ ಸಾಮಾಜಿಕ ಮಾಧ್ಯಮಗಳು ಶೈಕ್ಷಣಿಕ ಅಭಿವೃದ್ಧಿಗೆ ಪೂರಕವಾಗಿವೆ. ಆದ್ದರಿಂದ ವಿದ್ಯಾರ್ಥಿಗಳು ಏಳಿಗೆಗೆ ಬಳಸಿಕೊಳ್ಳಬೇಕು ಸಲಹೆ ನೀಡಿದರು.
ಪ್ರಾಂಶುಪಾಲ ಡಾ.ವಿ.ವಿ.ಜಗದೀಶ್ ಅಧ್ಯಕ್ಷತೆ ವಹಿಸಿದ್ದರು. ಕ್ರೀಡಾ ಸಮಿತಿ ಸಂಚಾಲಕ ಎಸ್.ಸುನೀಲ್ ಕುಮಾರ್, ಎನ್‌ಎಸ್‌ಎಸ್ ಸಂಚಾಲಕ ಎನ್.ಗುರುಪಾದಸ್ವಾಮಿ, ಸ್ಕೌಟ್ ಅಂಡ್ ಗೈಡ್ಸ್ ಸಂಚಾಲಕಿ ಸಿ.ಭವ್ಯ, ವಿದ್ಯಾರ್ಥಿ ಸಮಿತಿ ಅಧ್ಯಕ್ಷೆ ಎಂ.ರಾಧಿಕ, ರೆಡ್ ಕ್ರಾಸ್ ಸಂಚಾಲಕ ಬಿ.ಎಂ.ರಾಮಮೂರ್ತಿ, ಉಪನ್ಯಾಸಕರಾದ ವಿ.ಪೂರ್ಣಿಮಾ, ಎಂ.ಸುಂದರರಾಜು, ಕುಮಾರ್ ಪಾಟೀಲ್, ಸಿ.ಸಂದೀಪ, ಲಲಿತಾ ಕುಮಾರಿ, ಸುನೀಲ್ ರಾಜೇ ಅರಸು ಇನ್ನಿತರರು ಹಾಜರಿದ್ದರು.

Leave a Reply

Your email address will not be published. Required fields are marked *