ಸರ್ಕಾರಿ ಕಾರ್ಯಕ್ರಮಗಳು ಗ್ರಾಮಸಭೆ ಮಟ್ಟದಲ್ಲಿಯೇ ಅನುಷ್ಠಾನವಾಗಲಿ

ತಿ.ನರಸೀಪುರ : ಸರ್ಕಾರ ರೈತರು ಸೇರಿದಂತೆ ಜನಸಾಮಾನ್ಯರಿಗೆ ರೂಪಿಸುವ ಕಾರ್ಯಕ್ರಮಗಳು ಗ್ರಾಮಸಭೆಗಳ ಮಟ್ಟದಲ್ಲಿಯೇ ಅನುಷ್ಠಾನಗೊಂಡು ಅರ್ಹರನ್ನು ತಲುಪಬೇಕು ಎಂದು ಸೋಮನಾಥಪುರ ಜಿಲ್ಲಾ ಪಂಚಾಯಿತಿ ಕ್ಷೇತ್ರದ ಸದಸ್ಯ ಎಸ್.ವಿ.ಜಯಪಾಲ ಭರಣಿ ಹೇಳಿದರು.

ತಾಲೂಕಿನ ಬನ್ನೂರು ಪಟ್ಟಣದಲ್ಲಿರುವ ಎಪಿಎಂಸಿ ಉಪ ಮಾರುಕಟ್ಟೆ ಆವರಣದಲ್ಲಿ ಕೃಷಿ ಇಲಾಖೆ ವತಿಯಿಂದ ಸಮಗ್ರ ಕೃಷಿ ಅಭಿಯಾನದಡಿ ಹಮ್ಮಿಕೊಂಡಿದ್ದ ಹೋಬಳಿ ಮಟ್ಟದ ಕೃಷಿ ಅಭಿಯಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಕೃಷಿಯಲ್ಲಿ ಸಮಗ್ರತೆಯನ್ನು ಅಳವಡಿಸಲು ಹಾಗೂ ರೈತರಲ್ಲಿ ಜಾಗೃತಿ ಮೂಡಿಸಲು ಸರ್ಕಾರ ಆರಂಭಿಸಿರುವ ಕೃಷಿ ಅಭಿಯಾನ ಯಶಸ್ವಿಯಾಗಬೇಕಾದರೆ ರೈತರು ಮತ್ತು ಅಧಿಕಾರಿಗಳ ನಡುವೆ ಸಮನ್ವಯತೆ ಇರಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ತಾಪಂ ಅಧ್ಯಕ್ಷ ಆರ್.ಚಲುವರಾಜು ಮಾತನಾಡಿ, ಅಧಿಕಾರಿಗಳು ರೈತರ ಬಗ್ಗೆ ಕಾಳಜಿ ವಹಿಸಿ ಶ್ರಮಿಸಿದರೆ ಅವರ ಬದುಕನ್ನು ಹಸನುಗೊಳಿಸಬಹುದು ಎಂದರು.

ಸಮಗ್ರ ಕೃಷಿ ಬಗ್ಗೆ ಉಪನ್ಯಾಸ ನೀಡಿದ ನಿವೃತ್ತ ಪ್ರಾಧ್ಯಾಪಕ ಸೋಮೇಗೌಡ ಅವರು ರೈತರೊಂದಿಗೆ ಸಂವಾದ ನಡೆಸಿ ಪ್ರಶ್ನೆಗಳಿಗೆ ಉತ್ತರಿಸಿದರು. ಕೃಷಿ ಅಭಿಯಾನ ಮಾಹಿತಿಯುಳ್ಳ ಕರಪತ್ರಗಳನ್ನು ತಾಪಂ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಕುಕ್ಕೂರು ಗಣೇಶ್ ಬಿಡುಗಡೆ ಮಾಡಿದರು. ಕೃಷಿ ಯಂತ್ರೋಕರಣಗಳು ಸೇರಿದಂತೆ ಕೀಟನಾಶಕ, ರಸಗೊಬ್ಬರ, ತೋಟಗಾರಿಕೆ ಹಾಗೂ ರೇಷ್ಮೆ ಇಲಾಖೆಯ ಸೌಲಭ್ಯಗಳ ಬಗ್ಗೆ ವಸ್ತುಪ್ರದರ್ಶನ ಆಯೋಜಿಸಲಾಗಿತ್ತು.

ತಾಪಂ ಸದಸ್ಯರಾದ ಶ್ರೀನಿವಾಸಗೌಡ, ಎಚ್.ಜವರಯ್ಯ, ಚಿಕ್ಕತಾಯಮ್ಮ, ಕೆ.ನಾಗಮಣಿ, ಎಪಿಎಂಸಿ ನಿರ್ದೇಶಕರಾದ ಕೃಷ್ಣೇಗೌಡ, ಎನ್.ಆರ್.ರಾಜೇಶ, ಹಸಿರು ಸೇನೆ ಅಧ್ಯಕ್ಷ ಹುಚ್ಚೇಗೌಡ, ಬನ್ನೂರು ನಾರಾಯಣ, ಕೃಷಿ ಇಲಾಖೆ ಉಪ ನಿರ್ದೇಶಕ ಸೋಮಶೇಖರ್, ಸಹಾಯಕ ಕೃಷಿ ನಿರ್ದೇಶಕಿ ಸುಂದರಮ್ಮ, ಸಹಾಯಕ ರೇಷ್ಮೆ ನಿರ್ದೇಶಕ ಕೃಷ್ಣ, ಕೃಷಿ ಅಧಿಕಾರಿಗಳಾದ ಎಸ್.ಎನ್.ಪ್ರಿಯದರ್ಶಿನಿ, ಎಚ್.ಎಸ್.ಸುಧಾ, ಶಿವರಾಜು, ಆತ್ಮ ಯೋಜನೆಯ ಶಿವಣ್ಣ ಸೇರಿದಂತೆ ರೈತ ಮುಖಂಡರು, ರೈತರು, ಅನುವುಗಾರರು ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಜರಿದ್ದರು.

Leave a Reply

Your email address will not be published. Required fields are marked *