ಅದ್ದೂರಿ ದಸರಾ ಆಚರಣೆಗೆ ಸಿದ್ಧತೆ ಮಾಡಿಕೊಳ್ಳಿ

ತಿ.ನರಸೀಪುರ: ತಾಲೂಕಿನಲ್ಲಿ ನಾಡಹಬ್ಬ ದಸರಾ ಮಹೋತ್ಸವವನ್ನು ಅದ್ದೂರಿಯಾಗಿ ಆಚರಿಸಲು ಶಾಸಕರ ಅಧ್ಯಕ್ಷತೆಯಲ್ಲಿ ಸಭೆ ನಡೆಸಿ ಸಿದ್ಧತೆ ಮಾಡಿಕೊಳ್ಳಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಅಧಿಕಾರಿಗಳಿಗೆ ಸೂಚಿಸಿದರು.

ತಿರಮಕೂಡಲಿನ ಆದಿಚುಂಚನಗಿರಿ ಸಮುದಾಯ ಭವನದಲ್ಲಿ ಗ್ರಾಮೀಣ ದಸರಾ ಆಚರಣೆಯ ಪೂರ್ವಭಾವಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಗ್ರಾಮೀಣ ಭಾಗಗಳಲ್ಲಿ ದಸರಾ ಮಹೋತ್ಸವದ ರಂಗು ತರಲು ಪ್ರತಿ ತಾಲೂಕಿಗೆ 50 ಲಕ್ಷ ಅನುದಾನ ಹಾಗೂ ಪುರಸಭೆ, ನಗರಸಭೆಗಳಿಗೆ ತಲಾ 1 ಲಕ್ಷ ರೂ. ಅನುದಾನ ಬಿಡುಗಡೆ ಮಾಡಲಾಗುತ್ತಿದೆ. ಈ ಅನುದಾನವನ್ನು ಸಮರ್ಪಕವಾಗಿ ಬಳಸಿಕೊಂಡು ಅಧಿಕಾರಿಗಳು ಯಾವುದೇ ಲೋಪ ಬಾರದಂತೆ ಕಾರ್ಯಕ್ರಮ ಯಶಸ್ಸಿಗೆ ಪೂರ್ವ ತಯಾರಿ ಮಾಡಿಕೊಳ್ಳಬೇಕು.ಗ್ರಾಮೀಣ ಕ್ರೀಡಾಕೂಟಕ್ಕೆ ಜಿಲ್ಲೆಗೆ 6 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಆಯಾ ತಾಲೂಕಿನ ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಕ್ರಮ ವಹಿಸಬೇಕು ಎಂದರು.
ವರುಣ ವಿಧಾನಸಭಾ ಕ್ಷೇತ್ರಕ್ಕೆ ವಸತಿ ಯೋಜನೆಯಡಿ 3600 ಮನೆಗಳನ್ನು ಮಂಜೂರು ಮಾಡಲಾಗಿದೆ. ದಸರಾ ಮುಗಿದ ನಂತರ ಜಿಲ್ಲೆ ಹಾಗೂ ತಾಲೂಕು ಕೇಂದ್ರಗಳಲ್ಲಿ ಪ್ರಗತಿ ಪರಿಶೀಲನಾ ಸಭೆ ನಡೆಸುವುದಾಗಿ ತಿಳಿಸಿದ ಸಚಿವರು, ಸರ್ಕಾರದ ಅನುದಾನ ಸರಿಯಾಗಿ ಬಳಕೆ ಮಾಡುವಲ್ಲಿ ಅಧಿಕಾರಿಗಳು ವಿಫಲರಾಗುತ್ತಿದ್ದಾರೆ. ಯಾವ ಯಾವ ಅನುದಾನವನ್ನು ಹೇಗೆ ಬಳಸಬೇಕು ಎಂಬುದನ್ನು ಒಂದು ವರ್ಷದ ಆಡಳಿತದ ಅವಧಿಯಲ್ಲಿ ನಿಮಗೆ ತಿಳಿಸಿಕೊಡುವುದಾಗಿ ಹೇಳಿದರು.

ಶಾಸಕ ಅಶ್ವಿನ್‌ಕುಮಾರ್, ಬಿಜೆಪಿ ಜಿಲ್ಲಾಧ್ಯಕ್ಷ ಕೋಟೆ ಶಿವಣ್ಣ, ಮಾಜಿ ಶಾಸಕರಾದ ಡಾ.ಭಾರತೀಶಂಕರ್, ಜಿಪಂ ಅಧ್ಯಕ್ಷೆ ಪರಿಮಳಾ ಶ್ಯಾಮ್, ಸದಸ್ಯರಾದ ಜಯಪಾಲ್ ಭರಣಿ, ಕೈಯಂಬಳ್ಳಿ ನಟರಾಜು, ಉಪವಿಭಾಗಾಧಿಕಾರಿ ವೆಂಕಟರಾಜು, ತಹಸೀಲ್ದಾರ್ ನಾಗಪ್ರಶಾಂತ್, ಇಒ ಜೆರಾಲ್ಡ್ ರಾಜೇಶ್, ಬಿಇಒ ಸ್ವಾಮಿ, ಸಿಡಿಪಿಒ ಬಸವರಾಜು, ಎಇಇಗಳಾದ ಲಕ್ಷ್ಮಣ್‌ರಾವ್, ವಾಜಿದ್ ಖಾನ್, ಕೃಷ್ಣ, ತಾಪಂ ಸದಸ್ಯ ಗಣೇಶ್, ಬಿಜೆಪಿ ಕ್ಷೇತ್ರಾಧ್ಯಕ್ಷ ಪರಶಿವಮೂರ್ತಿ, ಪುರಸಭಾಧಿಕಾರಿ ಅಶೋಕ್, ಲೋಕೇಶ್, ತಾಪಂ, ಪುರಸಭೆ ಸದಸ್ಯರು ಹಾಗೂ ಅಧಿಕಾರಿಗಳು ಹಾಜರಿದ್ದರು.

ಸಭೆಯಲ್ಲಿ ಗೊಂದಲ: ಸಭೆಯಲ್ಲಿ ಸಚಿವರು ಹಾಗೂ ತಾಪಂ ಸದಸ್ಯರ ನಡುವೆ ಮಾತಿನ ಚಕಮಕಿ ನಡೆದು ಕೆಲ ಕಾಲ ಗೊಂದಲ ಏರ್ಪಟ್ಟಿತು. ಸಭೆಯಲ್ಲಿ ತಮಗೆ ಮಾತನಾಡಲು ಅವಕಾಶ ನೀಡುವಂತೆ ತಾಪಂ ಸದಸ್ಯ ರಮೇಶ್ ಮನವಿ ಮಾಡಿದರು. ಇದನ್ನು ಸಚಿವ ವಿ.ಸೋಮಣ್ಣ ತಿರಸ್ಕರಿಸಿದರು. ಇದರಿಂದ ಸಿಟ್ಟಿಗೆದ್ದ ತಾಪಂ ಸದಸ್ಯರು, ಸಚಿವರ ನಡೆಗೆ ಆಕ್ಷೇಪವ್ಯಕ್ತಪಡಿಸಿದರು. ಈ ವೇಳೆ ಮಾತಿನ ಚಕಮಕಿ ಏರ್ಪಟ್ಟಿತು. ಘಟನೆಯಿಂದ ಬೇಸತ್ತು ಸದಸ್ಯ ರಮೇಶ್ ಸಭೆಯಿಂದ ಹೊರ ನಡೆದರು.

Leave a Reply

Your email address will not be published. Required fields are marked *