ಹಳಿಯಾಳ: ರಾಜ್ಯಾದ್ಯಂತ ಸಕ್ಕರೆ ಕಾರ್ಖಾನೆಗಳು ಸಕ್ಕರೆ ಇಳುವರಿಯಲ್ಲಿ ಕಡಿಮೆ ತೋರಿಸುವ ಮೂಲಕ ರೈತರನ್ನು ದರದಲ್ಲಿ ವ್ಯವಸ್ಥಿತವಾಗಿ ವಂಚಿಸುತ್ತಿವೆ ಎಂದು ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರ ಶಾಂತಕುಮಾರ ಆಕ್ರೋಶ ವ್ಯಕ್ತಪಡಿಸಿದರು.
ಪಟ್ಟಣದ ಮರಾಠಾ ಭವನದಲ್ಲಿ ಭಾನುವಾರ ಧಾರವಾಡ ಹಾಗೂ ಉತ್ತರ ಕನ್ನಡ ಜಿಲ್ಲಾ ಕಬ್ಬು ಬೆಳೆಗಾರ ಸಂಘಟನೆಗಳು ಹಮ್ಮಿಕೊಂಡಿದ್ದ ಕಬ್ಬು ಬೆಳೆಗಾರ ರೈತರ ಬೃಹತ್ ಜಾಗೃತ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು. ಗುಜರಾತ ರಾಜ್ಯದಲ್ಲಿ ಇದೇ ಸಕ್ಕರೆ ಇಳುವರಿಗೆ ಕಳೆದ ವರ್ಷ ಟನ್ ಕಬ್ಬಿಗೆ 4,500 ರೂ. ದರ ನೀಡಲಾಗಿದೆ. ಆದರೆ, ಕರ್ನಾಟಕದಲ್ಲಿ ಸಕ್ಕರೆ ಇಳುವರಿ ಆಧಾರದಲ್ಲಿ ಕಬ್ಬಿನ ದರ ನೀಡುವ ಪದ್ಧತಿ ಜಾರಿಗೆ ಬಂದ ಮೇಲೆ ಸಕ್ಕರೆ ಕಾರ್ಖಾನೆಗಳು ರೈತರಿಗೆ ವ್ಯವಸ್ಥಿತ ವಂಚನೆ ಮಾಡುತ್ತಿವೆ ಎಂದು ಕಿಡಿಕಾರಿದರು.
ಹಳಿಯಾಳದ ಇಐಡಿ ಪ್ಯಾರಿ ಕಾರ್ಖಾನೆ 2021-22ನೇ ಸಾಲಿನ ಕಬ್ಬು ಕಟಾವು ಸಾಗಾಣಿಕೆ ವೆಚ್ಚ ಹೆಚ್ಚುವರಿ ಕಡಿತ ಮಾಡಿ ರೈತರಿಗೆ ವಂಚನೆ ಮಾಡಿರುವ ಬಗ್ಗೆ ತಜ್ಞರ ತನಿಖಾ ವರದಿ ಆಧರಿಸಿ ಸಕ್ಕರೆ ಕಬ್ಬು ಅಭಿವೃದ್ಧಿ ಆಯುಕ್ತರ ಆದೇಶದಂತೆ ರೈತರಿಗೆ ಪ್ರತಿ ಟನ್ಗೆ 119 ರೂ. ಬಾಕಿ ಅಂದರೆ ಒಟ್ಟು 26 ಕೋಟಿ ರೂ.ಗಳಿಗೂ ಅಧಿಕ ಹಣ ಪಾವತಿಸುವಂತೆ ಆದೇಶಿಸಿದ್ದರೂ ಕಾರ್ಖಾನೆ ಆದೇಶ ಪಾಲಿಸದೆ ರೈತ ವಿರೋಧಿ ಧೋರಣೆ ಅನುಸರಿಸುತ್ತಿದೆ ಎಂದು ವಾಗ್ದಾಳಿ ನಡೆಸಿದರು.
ಪ್ರಸಕ್ತ ವರ್ಷ ಹಳಿಯಾಳದ ಕಾರ್ಖಾನೆಯು 2022-23ರ ಕಬ್ಬಿನ ಉಪ ಉತ್ಪನ್ನಗಳ ಲಾಭ ಟನ್ಗೆ 256 ರೈತರಿಗೆ ಕೂಡಲೇ ಪಾವತಿಸಿ ಕಾರ್ಖಾನೆ ಆರಂಭಿಸಬೇಕು. ಸಕ್ಕರೆ ಇಳುವರಿ ಕಡಿಮೆ ತೋರಿಸಿ ಪ್ರತಿವರ್ಷ ರೈತರಿಗೆ ದರದಲ್ಲಿ ವಂಚಿಸುತ್ತಿರುವ ಬಗ್ಗೆ ಹಾಗೂ ತೂಕದಲ್ಲಿ ಮೋಸ ಮಾಡುತ್ತಿರುವ ಬಗ್ಗೆಯೂ ತನಿಖೆ ಆಗಬೇಕು ಮತ್ತು ರಾಜ್ಯ ಸರ್ಕಾರ ಘೊಷಣೆ ಮಾಡಿರುವಂತೆ ಕಾರ್ಖಾನೆ ಮುಂದೆ ಎಪಿಎಂಸಿ ವತಿಯಿಂದ ತೂಕದ ಯಂತ್ರ ನಿರ್ಮಾಣ ಮಾಡಬೇಕು ಎಂದು ಒತ್ತಾಯಿಸಿದರು.
ಕಬ್ಬು ಕಟಾವು ಹಾಗೂ ಸಾಗಾಣಿಕೆ ವೆಚ್ಚದ ಹೆಸರಲ್ಲಿ ಕಾರ್ಖಾನೆಯವರು ಕಾನೂನು ಬಾಹಿರವಾಗಿ ರೈತರಿಂದ ಹೆಚ್ಚು ಹಣ ಸುಲಿಗೆ ಮಾಡುತ್ತಿದ್ದಾರೆ. ಲಗಾಣಿ ವಸೂಲಿ ನಿಲ್ಲಿಸಬೇಕು. ರೈತರ ಕಬ್ಬು ಕಾರ್ಖಾನೆ ತಲುಪಿದ ತಕ್ಷಣ ಕಬ್ಬನ್ನು ತೂಕ ಮಾಡಿದ, ಕಬ್ಬಿನ ಹಣ ಬ್ಯಾಂಕಿಗೆ ಜಮಾ ಅದ ತಕ್ಷಣ ರೈತರಿಗೆ ಎಸ್ಎಂಎಸ್ ಮೂಲಕ ಸಂದೇಶ ರವಾನಿಸಬೇಕು ಎಂದು ಸಭೆಯಲ್ಲಿ ಠರಾಯಿಸಲಾಯಿತು.
ಕಬ್ಬು ವಿದ್ಯುತ್ ಸರ್ಕ್ಯೂಟ್ನಿಂದ ಬೆಂಕಿ ಬಿದ್ದು ಸುಟ್ಟು ಹಾನಿಯಾದಾಗ ಕಾರ್ಖಾನೆಯವರು ಯಾವುದೇ ಮಾನದಂಡವಿಲ್ಲದೆ ಕಬ್ಬಿನ ಹಣದಲ್ಲಿ 25 ಪರ್ಸೆಂಟ್ ಕಡಿತ ಮಾಡುತ್ತಿರುವುದನ್ನು ನಿಲ್ಲಿಸಿ ಸರ್ಕಾರ ನಿಗದಿ ಮಾಡಿರುವ ಎಫ್.ಆರ್.ಪಿ ಹಣ ಪೂರ್ತಿ ಕೊಡಬೇಕು ಎಂದರು.
ಬ್ಯಾಂಕ್ಗಳು ಸಾಲ ವಸೂಲಾತಿಗಾಗಿ ಕೃಷಿ ಸಾಲಕ್ಕೆ ರೈತರ ಜಮೀನು ವಶಪಡಿಸಿಕೊಳ್ಳುವ ಸರ್ಪೆಸಿ ಕಾನೂನು ರದ್ದು ಮಾಡಬೇಕು ಎಂದು ಸಭೆಯಲ್ಲಿ ಆಗ್ರಹಿಸಲಾಯಿತು.
ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧ್ಯಕ್ಷ ಸಂದೀಪಕುಮಾರ ಬೊಬಾಟಿ ಮಾತನಾಡಿದರು. ಧಾರವಾಡ ಜಿಲ್ಲಾಧ್ಯಕ್ಷ ಮಹೇಶ ಬೆಳಗಾಂವ್ಕರ, ಪ್ರಮುಖರಾದ ನಾಗೇಂದ್ರ ಜಿವೋಜಿ, ಅತ್ತಹಳ್ಳಿ ದೇವರಾಜ್, ನಿಜಗುಣ ಕೆಲಗೇರಿ, ಚೂನಪ್ಪಾ ಪೂಜಾರಿ, ಪರಶುರಾಮ ಎತ್ತಿನಗುಡ್ಡ, ಶಂಕರ ಕಾಜಗಾರ, ಎಂ.ವಿ. ಘಾಡಿ, ಉಳುವಪ್ಪ ಬಳಗೇರ, ಅಶೋಕ ಮೇಟಿ, ಇತರರಿದ್ದರು.
ಮಾಜಿ ಶಾಸಕ ಸುನೀಲ ಹೆಗಡೆ ಆಗಮಿಸಿ ರೈತರಿಗೆ ಬೆಂಬಲ ಸೂಚಿಸಿ ರೈತರ ನ್ಯಾಯಯುತ ಬೇಡಿಕೆ ಬಗೆಹರಿಸಲು ಪ್ರಯತ್ನಿಸಲಾಗುವುದು ಎಂದು ಭರವಸೆ ನೀಡಿದರು.