ಯಾಸೀನ್ ಹೇಳಿಕೆಯಲ್ಲಿ ಹುರುಳಿಲ್ಲ

ಮಾಜಿ ಶಾಸಕ ಜಿ.ಹಂಪಯ್ಯ ನಾಯಕ ಹೇಳಿಕೆ

ಸಿರವಾರ: ಸೈಯದ್ ಯಾಸೀನ್ ನೀಡಿದ ಹೇಳಿಕೆಯಲ್ಲಿ ಯಾವುದೇ ಹುರುಳಿಲ್ಲ ಎಂದು ಮಾಜಿ ಶಾಸಕ ಜಿ.ಹಂಪಯ್ಯ ನಾಯಕ ಹೇಳಿದ್ದಾರೆ.

ಕಳೆದ ವಿಧಾನಸಭೆ ಚುನಾವಣೆಯಲ್ಲಿ ಜನರು ಬದಲಾವಣೆ ಬಯಸಿ ನನ್ನನ್ನು ಸೋಲಿಸಿದ್ದಾರೆ. ಆದರೆ ಸೈಯದ್ ಯಾಸೀನ್ ಅವರು ನನ್ನ ಸೋಲಿಗೆ ಎನ್.ಎಸ್.ಭೋಸರಾಜು ಕಾರಣ ಎಂದು ಹೇಳುತ್ತಿರುವುದೇಕೆ ಎಂಬುದು ಗೊತ್ತಾಗುತ್ತಿಲ್ಲ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಎನ್.ಎಸ್.ಭೋಸರಾಜು ನನ್ನ ರಾಜಕೀಯ ಗುರು ಅವರು ನನ್ನನ್ನು ಯಾಕೆ ಸೋಲಿಸುತ್ತಾರೆ. ಯಾಸೀನ್ ದೊಡ್ಡವರು. ಇಂಥ ಸಣ್ಣತನದ ಹೇಳಿಕೆ ನೀಡಬಾರದು. ಅನೇಕ ಮುಖಂಡರು ಎನ್.ಎಸ್.ಭೋಸರಾಜು ಗರಡಿಯಲ್ಲಿ ಬೆಳೆದಿದ್ದಾರೆ. ಜಿಲ್ಲೆಯಲ್ಲಿ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ. ನನ್ನ ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಮಾರ್ಗದರ್ಶನ ನೀಡಿದ್ದಾರೆ. ನಮ್ಮ ಸೋಲಿಗೆ ಬೇರೆಯವರ ಕಡೆ ಬೊಟ್ಟು ಮಾಡುವುದು ಸರಿಯಲ್ಲ ಎಂದರು.

ಹಾಲಿ ಶಾಸಕರು ಹಿಂದಿನ ಸರ್ಕಾರದಲ್ಲಿ ಮಂಜೂರಾದ ಕಾಮಗಾರಿಗಳಿಗೆ ಭೂಮಿ ಪೂಜೆ ಮಾಡುತ್ತಿದ್ದಾರೆ. ಯಾವುದೇ ಕಾಮಗಾರಿಗಳ ಉದ್ಘಾಟನೆ, ಭೂಮಿ ಪೂಜೆ ಶಾಸಕರು, ಜನಪ್ರತಿನಿಧಿಗಳು ಮಾಡಬೇಕು. ಆದರೆ, ಮಾನ್ವಿ ಕ್ಷೇತ್ರದಲ್ಲಿ ಶಾಸಕರ ಸಹೋದರರು ಮಾಡುತ್ತಿದ್ದು, ಶಿಷ್ಟಾಚಾರದ ಉಲ್ಲಂಘನೆ ಮಾಡಲಾಗುತ್ತಿದೆ ಎಂದು ದೂರಿದರು. ಚುಕ್ಕಿ ಉಮಾಪತಿ ಸಾಹುಕಾರ್, ದೇವಣ್ಣ ನವಲಕಲ್, ಶಿವಶರಣರ ಅರಕೇರಿ, ನಾಗರಾಜಗೌಡ, ನಾಗರಾಜ ಚಿನ್ನಾನಿ, ತಿಪ್ಪಣ್ಣ, ಹಸೇನ್ ಅಲಿ, ಇರ್ಫಾನ್ ಬಡೇಗರ್, ಮುಸ್ತಾಫ್, ಎಂ.ಮಲ್ಲಪ್ಪ ಇತರರಿದ್ದರು.