ಇಂದೋರ್: ವೇಗಿ ವಾಸುಕಿ ಕೌಶಿಕ್ (10ಕ್ಕೆ 3) ಮತ್ತು ಮಧ್ಯಮ ವೇಗಿ ಮನೋಜ್ ಭಾಂಡಗೆ (19ಕ್ಕೆ 3) ಬಿಗಿ ಬೌಲಿಂಗ್ ಬಲದಿಂದ ಕರ್ನಾಟಕ ತಂಡ ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಟಿ20 ಟೂರ್ನಿಯ ತನ್ನ 5ನೇ ಲೀಗ್ ಪಂದ್ಯದಲ್ಲಿ ತಮಿಳುನಾಡು ವಿರುದ್ಧ 7 ವಿಕೆಟ್ಗಳಿಂದ ಗೆಲುವು ಸಾಧಿಸಿದೆ. ಈ ಮೂಲಕ ಮಯಾಂಕ್ ಅಗರ್ವಾಲ್ ಪಡೆ ನಾಕೌಟ್ ಆಸೆ ಜೀವಂತ ಉಳಿಸಿಕೊಂಡಿದೆ.
ಎಮರಾಲ್ಡ್ ಹೈಸ್ಕೂಲ್ ಗ್ರೌಂಡ್ನಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದ ತಮಿಳುನಾಡು ತಂಡ, ಕರ್ನಾಟಕದ ದಾಳಿ ಎದುರು ರನ್ಗಳಿಸಲು ಪರದಾಡಿ ಭರ್ತಿ 20 ಓವರ್ಗಳಲ್ಲಿ 90 ರನ್ಗಳಿಗೆ ಸರ್ವಪತನ ಕಂಡಿತು. 61 ರನ್ಗಳಿಗೆ 8 ವಿಕೆಟ್ ಕಳೆದುಕೊಂಡು ತತ್ತರಿಸಿದ ತಮಿಳುನಾಡು ತಂಡ ಬಾಲಂಗೋಚಿ ವರುಣ್ ಚಕ್ರವರ್ತಿ (24) ಹೋರಾಟದಿಂದ ಮೊತ್ತ ಹೆಚ್ಚಿಸಿಕೊಂಡಿತು. ಪ್ರತಿಯಾಗಿ ಕರ್ನಾಟಕ ತಂಡ 11.3 ಓವರ್ಗಳಲ್ಲೇ 3 ವಿಕೆಟ್ಗೆ 93 ರನ್ ಗಳಿಸಿ ಜಯಿಸಿತು. ಆರಂಭಿಕರಾದ ಮನೀಷ್ ಪಾಂಡೆ (42) ಮತ್ತು ನಾಯಕ ಮಯಾಂಕ್ ಅಗರ್ವಾಲ್ (30) ಮೊದಲ ವಿಕೆಟ್ಗೆ 76 ರನ್ ಜತೆಯಾಟವಾಡಿ ರಾಜ್ಯದ ಗೆಲುವಿನ ಹಾದಿ ಸುಗಮಗೊಳಿಸಿದರು.
ತಮಿಳುನಾಡು: 20 ಓವರ್ಗಳಲ್ಲಿ 90 (ಇಂದ್ರಜಿತ್ 5, ಶಾರುಖ್ 19, ಶಂಕರ್ 0, ಅಲಿ 15, ವರುಣ್ ಚಕ್ರವರ್ತಿ 24, ಕೌಶಿಕ್ 10ಕ್ಕೆ 3, ಭಾಂಡಗೆ 19ಕ್ಕೆ 3, ವಿದ್ಯಾಧರ್ 20ಕ್ಕೆ 2, ವೈಶಾಕ್ 27ಕ್ಕೆ 1, ಶ್ರೇಯಸ್ 14ಕ್ಕೆ 1), ಕರ್ನಾಟಕ: 11.3 ಓವರ್ಗಳಲ್ಲಿ 3 ವಿಕೆಟ್ಗೆ 93 (ಮನೀಷ್ 42, ಮಯಾಂಕ್ 30, ಶ್ರೀಜಿತ್ 9*, ಸ್ಮರಣ್ 1, ಅಭಿನವ್ 2*, ಗುರುಜಪ್ನೀತ್ 15ಕ್ಕೆ 2). ಪಂದ್ಯಶ್ರೇಷ್ಠ: ಮನೀಷ್ ಪಾಂಡೆ.
*ಕರ್ನಾಟಕಕ್ಕೆ ಮುಂದಿನ ಪಂದ್ಯ
ಯಾವಾಗ: ಮಂಗಳವಾರ
ಎದುರಾಳಿ: ಬರೋಡ
ಆರಂಭ: ಮಧ್ಯಾಹ್ನ 1.30
ನಾಕೌಟ್ ಲೆಕ್ಕಾಚಾರ…
ಭರ್ಜರಿ ಜಯದೊಂದಿಗೆ ಕರ್ನಾಟಕದ ರನ್ರೇಟ್ (2.193) ಕೂಡ ಸುಧಾರಿಸಿದ್ದು, ನಾಕೌಟ್ ಆಸೆ ಜೀವಂತ ಉಳಿದಿದೆ. ಕರ್ನಾಟಕ ಈಗ 5 ಪಂದ್ಯಗಳಲ್ಲಿ 3 ಜಯ, 2 ಸೋಲಿನ ಸಹಿತ 12 ಅಂಕಗಳೊಂದಿಗೆ ಬಿ ಗುಂಪಿನ ಅಂಕಪಟ್ಟಿಯಲ್ಲಿ 4ನೇ ಸ್ಥಾನದಲ್ಲಿದೆ. ಬರೋಡ, ಸೌರಾಷ್ಟ್ರ, ಗುಜರಾತ್ (5 ಪಂದ್ಯಗಳಲ್ಲಿ 4 ಜಯ, 1 ಸೋಲು) ತಲಾ 16 ಅಂಕಗಳೊಂದಿಗೆ ಕ್ರಮವಾಗಿ ಮೊದಲ 3 ಸ್ಥಾನದಲ್ಲಿವೆ. ಕರ್ನಾಟಕ ಕೊನೇ 2 ಪಂದ್ಯಗಳಲ್ಲಿ ತನಗಿಮತ ಮೇಲಿರುವ ಬರೋಡ (ಡಿ.3), ಗುಜರಾತ್ (ಡಿ. 5) ವಿರುದ್ಧವೇ ಆಡಲಿದ್ದು, ಇವೆರಡಲ್ಲೂ ಗೆದ್ದರೆ ನಾಕೌಟ್ ಪ್ರವೇಶಿಸುವ ಅವಕಾಶ ಹೆಚ್ಚಲಿದೆ.
ಚಿನ್ನಸ್ವಾಮಿ ಕ್ರೀಡಾಂಗಣದ ಪ್ರೇಕ್ಷಕರ ಸ್ಟ್ಯಾಂಡ್ಗೆ ಶಾಂತಾ ರಂಗಸ್ವಾಮಿ ಹೆಸರಿಡಲು ಒತ್ತಾಯ