ಸ್ವಾತಂತ್ರ್ಯೋತ್ಸವಕ್ಕೆ ‘ಸೈರಾ ನರಸಿಂಹರೆಡ್ಡಿ’ ಚಿತ್ರದಿಂದ ಬಂಪರ್​ ಗಿಫ್ಟ್​: ಮೇಕಿಂಗ್​ ವಿಡಿಯೋ ಬಿಡುಗಡೆ, ಕಿಚ್ಚನ ಲುಕ್​ಗೆ ಕನ್ನಡಿಗರು ಫಿದಾ!

ಹೈದರಾಬಾದ್​: ಮೆಗಾಸ್ಟಾರ್​ ಚಿರಂಜೀವಿ ಅಭಿನಯದ ಟಾಲಿವುಡ್​ನ ಬಹುನಿರೀಕ್ಷಿತ ಹಾಗೂ ಬಿಗ್​ ಬಜೆಟ್​ ಚಿತ್ರವಾದ ‘ಸೈರಾ ನರಸಿಂಹರೆಡ್ಡಿ’ಯ ಮೇಕಿಂಗ್​ ವಿಡಿಯೋ ಬಿಡುಗಡೆಯಾಗಿದ್ದು, ಸ್ವಾತಂತ್ರ್ಯ ಹೋರಾಟ ಆಧಾರಿತ ಚಿತ್ರವಾಗಿರುವುದರಿಂದ ಸಿನಿರಸಿಕರಿಗೆ ಚಿತ್ರತಂಡ ಸ್ವಾತಂತ್ರ್ಯೋತ್ಸವದ ಉಡುಗೊರೆಯನ್ನು ನೀಡಿದೆ.

ಸೈರಾ ನರಸಿಂಹರೆಡ್ಡಿ ಚಿತ್ರವನ್ನು ಕೊನಿದೆಲಾ ಪ್ರೊಡಕ್ಸನ್​ ಅಡಿಯಲ್ಲಿ ನಟ ರಾಮ್​ ಚರಣ್ ನಿರ್ಮಾಣ ಮಾಡುತ್ತಿದ್ದಾರೆ.​ ಟಾಲಿವುಡ್​ ಮಟ್ಟಿಗೆ ಬಿಗ್​ ಬಜೆಟ್​​ ಚಿತ್ರವಾಗಿದ್ದು, ಚಿತ್ರ ಬಜೆಟ್​ 200 ಕೋಟಿ ರೂ. ಎಂದು ಅಂದಾಜಿಸಲಾಗಿದೆ. ಚಿತ್ರದಲ್ಲಿ ಬಾಲಿವುಡ್​ ದಿಗ್ಗಜ ಅಮಿತಾಭ್​ ಬಚ್ಚನ್​, ನಟಿ ನಯನತಾರ, ಕಿಚ್ಚ ಸುದೀಪ್​, ತಮ್ಮನ್ನಾ, ವಿಜಯ್​ ಸೇತುಪತಿ ಹಾಗೂ ಜಗಪತಿಬಾಬುರಂತಹ ಬಹುತಾರಾಗಣವೇ ಇದೆ. ಚಿತ್ರವನ್ನು ಸುರೇಂದ್ರ ರೆಡ್ಡಿ ನಿರ್ದೇಶನ ಮಾಡಿದ್ದಾರೆ.

ನಾಳೆ ದೇಶದೆಲ್ಲಡೆ ಸ್ವಾತಂತ್ರ್ಯೋತ್ಸವ ಸಂಭ್ರಮಾಚರಣೆ ಇರುವುದರಿಂದ ಒಂದು ದಿನ ಮುನ್ನವೇ ಚಿತ್ರತಂಡ ಅಭಿಮಾನಿಗಳಿಗೆ ಮೇಕಿಂಗ್​ ವಿಡಿಯೋದ ಉಡುಗೊರೆಯನ್ನು ನೀಡಿದೆ. ಮೇಕಿಂಗ್​ ವಿಡಿಯೋ 1 ನಿಮಿಷ 47 ಸೆಕೆಂಡ್​ ಉದ್ದವಿದ್ದು, ಚಿತ್ರೀಕರಣದ ಸನ್ನಿವೇಶಗಳನ್ನು ಪೋಣಿಸಿ ಮೇಕಿಂಗ್​ ವಿಡಿಯೋ ತಯಾರಿಸಲಾಗಿದೆ. ಅಲ್ಲದೆ, ಪ್ರಮುಖ ಪಾತ್ರಗಳ ಅನಾವರಣ ವಿಡಿಯೋದಲ್ಲಿದೆ.

ವಿಡಿಯೋದಲ್ಲಿರುವ ಸನ್ನಿವೇಶಗಳು ಶ್ರೀಮಂತಿಕೆಯಿಂದ ಕೂಡಿದೆ. ಅಮಿತಾಭ್​ ಬಚ್ಚನ್​, ಕಿಚ್ಚ ಸುದೀಪ್​, ವಿಜಯ್​ ಸೇತುಪತಿ, ತಮನ್ನಾ, ನಯನತಾರ ಹಾಗೂ ಜಗಪತಿಬಾಬು ಅವರ ಪಾತ್ರಗಳು ಹಾಗೂ ವೇಶಭೂಷಣಗಳು ಮನಸೆಳೆಯಲಿದೆ. ಅಲ್ಲದೆ, ಸಾಹಸ ದೃಶ್ಯಗಳು ರೋಚಕವಾಗಿದೆ. ತೆಲುಗು ಸ್ವಾತಂತ್ರ್ಯ ಹೋರಾಟಗಾರ ಉಯ್ಯಾಲವಾಡ ನರಸಿಂಹ ರೆಡ್ಡಿ ಜೀವನ ಆಧಾರಿತ ಚಿತ್ರವಾಗಿದ್ದು, ಚಿತ್ರದಲ್ಲಿ ನರಸಿಂಹ ರೆಡ್ಡಿಯಾಗಿ ಮೆಗಾಸ್ಟಾರ್​ ಚಿರಂಜೀವಿ ಮಿಂಚಿದ್ದಾರೆ. ಮೇಕಿಂಗ್​ ವಿಡಿಯೋ ಮಧ್ಯದಲ್ಲಿ ಪವನ್​ ಕಲ್ಯಾಣ್​ ಆಗಮನವು ಕುತೂಹಲ ಮೂಡಿಸಿದೆ.

ಕೊನಿದೆಲಾ ಕಂಪನಿ ತನ್ನ ಟ್ವಿಟರ್​ನಲ್ಲಿ ವಿಡಿಯೋ ಶೇರ್​ ಮಾಡಿದ್ದು, ಚಿತ್ರವನ್ನು ಪೂರ್ಣಗೊಳಿಸಲು ಎರಡು ವರ್ಷ ತೆಗೆದುಕೊಂಡಿತು. ಆಗಸ್ಟ್​ 20ರಂದು ಚಿತ್ರದ ಟೀಸರ್​ ಬಿಡಗಡೆಯಾಗಲಿದೆ ಎಂದು ಅಭಿಮಾನಿಗಳಿಗೆ ಸಿಹಿ ಸುದ್ದಿಯನ್ನು ನೀಡಿದೆ. ಅಕ್ಟೋಬರ್​ 2ರ ಗಾಂಧಿ ಜಯಂತಿ ದಿನದಂದು ವಿಶ್ವಾದ್ಯಂತ ಚಿತ್ರವು ತೆರೆಕಾಣಲಿದೆ. ಸದ್ಯ ಯೂಟ್ಯೂಬ್​ನಲ್ಲಿ ಬಿಡುಗಡೆಯಾಗಿರುವ ಮೇಕಿಂಗ್​ ವಿಡಿಯೋ ಭಾರಿ ಸದ್ದು ಮಾಡುತ್ತಿದೆ. (ಏಜೆನ್ಸೀಸ್​)

Leave a Reply

Your email address will not be published. Required fields are marked *