ಭದ್ರಾ ಹಿನ್ನೀರಿನಲ್ಲಿ ಮುಳುಗಿದ್ದ ಇಬ್ಬರ ಶವ ಪತ್ತೆ

ಎನ್.ಆರ್.ಪುರ: ತಾಲೂಕಿನ ಮೆಣಸೂರು ಗ್ರಾಪಂನ ಲಿಂಗಾಪುರ ಗ್ರಾಮ ವ್ಯಾಪ್ತಿಯ ಭದ್ರಾ ಹಿನ್ನೀರಲ್ಲಿ ಶನಿವಾರ ನೀರಲ್ಲಿ ಮುಳುಗಿ ಮೃತಪಟ್ಟ ಇಬ್ಬರು ಯುವಕರ ಶವಗಳನ್ನು ಭಾನುವಾರ ಹೊರತೆಗೆಯಲಾಯಿತು.

ಮೃತರನ್ನು ಎನ್.ಆರ್.ಪುರದ ಸಂತೋಷ್(19), ಆಂಧ್ರ ಪ್ರದೇಶ ಮೂಲದ ಡಮ್ಮಾರ್(24) ಎಂದು ಗುರುತಿಸಲಾಗಿದೆ. ಇಲ್ಲಿನ ಡಿಸಿಎಂಸಿ ಪ್ರೌಢಶಾಲೆಯಲ್ಲಿ ಕಾವಲುಗಾರನಾಗಿದ್ದ ಸಂತೋಷ ಶನಿವಾರ ಸಂಜೆ ತನ್ನ ಸಹೋದರ ವಿಕ್ರಮ್ ಸಂಬಂಧಿಕರಾದ ಡಮ್ಮಾರ್, ಪ್ರಕಾಶ್ ಅವರೊಂದಿಗೆ ಲಿಂಗಾಪುರ ಗ್ರಾಮದ ಭದ್ರಾ ಹಿನ್ನೀರಿಗೆ ತೆರಳಿದ್ದಾರೆ. ಸಂತೋಷ್ ಹಾಗೂ ಡಮ್ಮಾರ್ ನೀರಿಗೆ ಇಳಿದಿದ್ದಾರೆ. ಈಜು ಬಾರದಿದ್ದರೂ ನೀರಿನಲ್ಲಿ ಮುಂದಕ್ಕೆ ಹೋಗಿದ್ದಾರೆ. ಹಿನ್ನೀರಿನಲ್ಲಿ ಆಳ ಹೆಚ್ಚಾಗಿರುವುದನ್ನು ತಿಳಿದು ಮುಳುಗುವ ಭೀತಿಯಲ್ಲಿ ಸಹಾಯಕ್ಕಾಗಿ ಕೂಗಿದ್ದಾರೆ. ಆದರೆ ಸ್ಥಳದಲ್ಲಿ ಈಜು ಬಾರದವರು ಇರಲಿಲ್ಲ. ಇಬ್ಬರೂ ನೀರಿನಲ್ಲಿ ಮುಳುಗಿ ಮೃತಪಟ್ಟರು.

ಪೊಲೀಸರು, ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ರಾತ್ರಿ ಪೂರ್ತಿ ಹುಡುಕಾಟ ನಡೆಸಿದರೂ ಮೃತದೇಹ ಪತ್ತೆಯಾಗಲಿಲ್ಲ. ಭಾನುವಾರ ಮಾಕೋಡಿನ ಮುಳುಗು ತಜ್ಞ ಜೋಸ್ ಹುಡುಕಾಟ ನಡೆಸಿ ಸಂತೋಷ್ ಹಾಗೂ ಡಮ್ಮಾರ್ ಅವರ ಮೃತದೇಹವನ್ನು ಹೊರಗೆ ತಂದರು.

ಸ್ಥಳಕ್ಕೆ ಕೊಪ್ಪ ಡಿವೈಎಸ್​ಪಿ ರವೀಂದ್ರನಾಥ್ ಜಾಗೀರ್​ದಾರ್, ಸಿಪಿಐ ಜೆ.ಮಂಜು, ಪಿಎಸ್​ಐ ನಾಗವ್ವ ಪಾಟೀಲ್ ಭೇಟಿ ನೀಡಿದ್ದರು. ಎನ್.ಆರ್.ಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.