ಗಡಿ ಕನ್ನಡಿಗರಿಗೆ ರಾಜ್ಯೋತ್ಸವದಂದು ಸಿಹಿ ಊಟ

ಬೆಳಗಾವಿ: ಕನ್ನಡಿಗರ ಕ್ರಾಂತಿಯ ನೆಲೆಯಾಗಿರುವ ಬೆಳಗಾವಿಯಲ್ಲಿ ಕನ್ನಡದ ವೈಭವ ಮೇಳೈಸಲಿದ್ದು, ಅದ್ದೂರಿಯಾಗಿ ರಾಜ್ಯೋತ್ಸವ ಆಚರಿಸಲು ಜಿಲ್ಲಾಡಳಿತ ಸಕಲ ಸಿದ್ಧತೆ ನಡೆಸುತ್ತಿದೆ. ಮತ್ತೊಂದೆಡೆ ಕನ್ನಡ ಪ್ರೇಮಿಗಳಿಗೆ ಹೋಳಿಗೆ ಊಟದ ಸವಿ ಹಂಚಲು ಹುಕ್ಕೇರಿ ಹಿರೇಮಠ ನಿರ್ಧರಿಸಿದೆ.

ರಾಜ್ಯದ ಗಡಿಭಾಗದಲ್ಲಿ ಮಹಾರಾಷ್ಟ್ರ ಏಕೀಕರಣ ಸಮಿತಿ(ಎಂಇಎಸ್) ಉಪಟಳಕ್ಕೆ ಶಾಶ್ವತವಾಗಿ ಕಡಿವಾಣ ಹಾಕುವ ಮತ್ತು ಕನ್ನಡ ಪರ ಚಟುವಟಿಕೆಗಳನ್ನು ನಿರಂತರವಾಗಿ ನಡೆಸಲು ಮುಂದಾಗಿರುವ ಜಿಲ್ಲಾಡಳಿತಕ್ಕೆ ಕನ್ನಡ ಪರ ಸಂಘಟನೆಗಳು, ಸಂಘ ಸಂಸ್ಥೆಗಳು, ಶಿಕ್ಷಣ ಸಂಸ್ಥೆಗಳು ಹಾಗೂ ಮಠ- ಮಂದಿರಗಳು ಕೈ ಜೋಡಿಸಿವೆ.

ರಾಜ್ಯೋತ್ಸವ ದಿನದಂದು ನಗರದ ಸರ್ದಾರ್ ಮೈದಾನದಲ್ಲಿ ಹುಕ್ಕೇರಿ ಹಿರೇಮಠ, ಜಿಲ್ಲಾಡಳಿತ ಮತ್ತು ಪಾಲಿಕೆ ಸಂಯುಕ್ತಾಶ್ರಯದಲ್ಲಿ ಹೋಳಿಗೆ ಊಟ ಆಯೋಜಿಸಲಾಗಿದೆ. 25 ಸಾವಿರ ಜನರಿಗೆ ಬೇಕಾಗುವಷ್ಟು ಬೇಳೆ ಹೋಳಿಗೆ ತಯಾರಿಸಲಾಗುತ್ತಿದೆ. ಜತೆಗೆ ಅನ್ನ-ಸಾಂಬಾರ ವ್ಯವಸ್ಥೆ ಮಾಡಲಾಗಿದೆ. ಒಟ್ಟಿನಲ್ಲಿ ಅಂದಾಜು 30 ರಿಂದ 35 ಸಾವಿರ ಜನರಿಗೆ ಬೇಕಾಗುಷ್ಟು ಅಡುಗೆ ತಯಾರಿಸುವ ಉದ್ದೇಶ ಇದೆ. ಅಂದಿನ ಜನಸಂಖ್ಯೆ ನೋಡಿಕೊಂಡು ಹೆಚ್ಚುವರಿಗೆ ಅಡುಗೆ ಮಾಡಿಕೊಳ್ಳುವ ಸಿದ್ಧತೆ ಮಾಡಿಕೊಳ್ಳಲಿದ್ದೇವೆ. ಮೆರವಣಿಗೆ ಮಾರ್ಗದ ಉದ್ದಕ್ಕೂ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಪಾಲಿಕೆ ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಕರುನಾಡ ಮಕ್ಕಳಿಗೆ ಶೇ. 25ರಷ್ಟು ರಿಯಾಯಿತಿ ದರದಲ್ಲಿ ಊಟ, ತಿಂಡಿ ವಿತರಿಸಲು ಹೋಟೆಲ್‌ಗಳು ಸಜ್ಜುಗೊಂಡಿವೆ. ವಿವಿಧ ಸಂಘ ಸಂಸ್ಥೆಗಳು ಸಹ ಕನ್ನಡ ಹಬ್ಬದಲ್ಲಿ ಸಿಹಿ ಹಂಚಿ ತಾಯ್ನಡಿನ ಸೇವೆ ಸಲ್ಲಿಸಲು ತಯಾರಿ ನಡೆಸುತ್ತಿವೆ.

ರಾಜ್ಯೋತ್ಸವದ ಮೆರವಣಿಗೆಯಲ್ಲಿ ಪಾಲ್ಗೊಳ್ಳಲು ವಿವಿಧ ಇಲಾಖೆಯ ಸ್ತಬ್ಧಚಿತ್ರಗಳು ನಿರ್ಮಾಣಗೊಂಡಿದ್ದು, ಅಂದು ಎಲ್ಲ ಸ್ತಬ್ಧ ಚಿತ್ರಗಳು ನಗರದ ಬೀದಿಗಳಲ್ಲಿ ಸಾಗುವ ಮೂಲಕ ಕರುನಾಡಿನ ಹಿರಿಮೆಯನ್ನು ತೆರೆದಿಡಲಿವೆ. ಮೆರವಣಿಗೆಯ ಮೆರುಗು ಹೆಚ್ಚಿಸಲು ಈಗಾಗಲೇ ನಗರಕ್ಕೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಕಲಾ ತಂಡಗಳ ಕಲಾವಿದರನ್ನು ಕರೆತರಲು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರಯತ್ನಿಸುತ್ತಿದೆ. ಅಲ್ಲದೆ ಮಂಡ್ಯ, ಮೈಸೂರು, ಕೊಡಗು, ಕರಾವಳಿ, ಕಲಬುರಗಿ, ವಿಜಯಪುರ, ಧಾರವಾಡ, ಬಳ್ಳಾರಿ ಸೇರಿ ವಿವಿಧ ಜಿಲ್ಲೆಗಳ ನಾನಾ ರೀತಿಯ ಸಾಂಸ್ಕೃತಿಕ ಕಲೆಗಳು ಉತ್ಸವದಲ್ಲಿ ಅನಾವರಣಗೊಳ್ಳಲಿವೆ.