ಜಿಪಂ ಉಪಾಧ್ಯಕ್ಷರಾಗಿ ಸ್ವರೂಪ್ ಅವಿರೋಧ ಆಯ್ಕೆ

ಹಾಸನ: ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷರಾಗಿ ಕಂದಲಿ ಕ್ಷೇತ್ರದ ಜೆಡಿಎಸ್ ಸದಸ್ಯ ಎಚ್.ಪಿ.ಸ್ವರೂಪ್ ಶುಕ್ರವಾರ ಅವಿರೋಧವಾಗಿ ಆಯ್ಕೆಯಾದರು.

ಸುಪ್ರದಿಪ್ತ್ ಯಜಮಾನ್ ಅವರ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಶುಕ್ರವಾರ ಚುನಾವಣೆ ನಡೆಯಿತು. ಎಚ್.ಪಿ. ಸ್ವರೂಪ್ ಒಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಚುನಾವಣಾಧಿಕಾರಿಯಾಗಿದ್ದ ಪ್ರಾದೇಶಿಕ ಆಯುಕ್ತ ಅನಿಲ್‌ಕುಮಾರ್ ಅವರು ಅವಿರೋಧ ಆಯ್ಕೆಯನ್ನು ಘೋಷಿಸಿದರು. ಜಿಲ್ಲಾ ಪಂಚಾಯಿತಿಯ ಒಟ್ಟು 40 ಸದಸ್ಯರ ಪೈಕಿ 27 ಸದಸ್ಯರು ಹಾಜರಿದ್ದರು.
ಜಿ.ಪಂ. ಮುಖ್ಯಕಾರ್ಯನಿರ್ವಹಣಾಧಿಕಾರಿ ಡಾ.ಕೆ.ಎನ್.ವಿಜಯಪ್ರಕಾಶ್ ಇದ್ದರು.

ಜಿಲ್ಲೆಯ ಅಭಿವೃದ್ಧಿಗೆ ಶ್ರಮಿಸುವೆ: ನನ್ನ ಮೇಲೆ ನಂಬಿಕೆಯಿಟ್ಟು ಸಚಿವ ಎಚ್.ಡಿ.ರೇವಣ್ಣ ಹಾಗೂ ಭವಾನಿ ಅವರು ಉತ್ತಮ ಸ್ಥಾನ ಕಲ್ಪಿಸಿದ್ದು, ಜಿಲ್ಲೆಯ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ನೂತನ ಉಪಾಧ್ಯಕ್ಷ ಎಚ್.ಪಿ.ಸ್ವರೂಪ್ ಹೇಳಿದರು.
ಜೆಡಿಎಸ್ ಹಿರಿಯ ನಾಯಕರಾದ ಪಟೇಲ್ ಶಿವರಾಂ, ಕೆ.ಎಂ.ರಾಜೇಗೌಡ ಇತರರ ನೆರವಿನಿಂದ ಈ ಸ್ಥಾನ ದೊರೆತಿದೆ. ಪಕ್ಷದ ಹಿರಿಯರು ಹಾಗೂ ಅಧಿಕಾರಿಗಳ ಸಲಹೆ ಪಡೆದು ಕೆಲಸ ಮಾಡುತ್ತೇನೆ ಎಂದು ಸುದ್ದಿಗಾರರಿಗೆ ಪ್ರತಿಕ್ರಿಯಿಸಿದರು.

ಜಿಲ್ಲಾದ್ಯಂತ ವಿವಿಧ ಸಮಸ್ಯೆಗಳಿವೆ. ತಾಲೂಕುವಾರು ಪ್ರವಾಸ ಮಾಡಿ, ಸದಸ್ಯರೊಂದಿಗೆ ಚರ್ಚಿಸಿ ಪರಿಹಾರ ಕೈಗೊಳ್ಳಲಾಗುವುದು. ಕಾಂಗ್ರೆಸ್ ಸದಸ್ಯರೂ ನನಗೆ ಸಹಕಾರ ನೀಡುತ್ತಾರೆ ಎಂಬ ವಿಶ್ವಾಸವಿದೆ ಎಂದರು.

ಸ್ವರೂಪ್‌ಗೂ ಕಾಡಿದ ಗೌಡರ ಸೋಲು: ದಿವಂಗತ ಮಾಜಿ ಶಾಸಕ ಎಚ್.ಎಸ್.ಪ್ರಕಾಶ್ ಅವರ ಪುತ್ರರಾದ ಎಚ್.ಪಿ.ಸ್ವರೂಪ್ ಜಿ.ಪಂ. ಉಪಾಧ್ಯಕ್ಷರಾಗಿ ಆಯ್ಕೆಯಾದರೂ ಸಂಭ್ರಮ ಕಾಣಿಸಲಿಲ್ಲ.

ಚುನಾವಣೆ ಪ್ರಕ್ರಿಯೆಯಲ್ಲಿ ಭಾಗಿಯಾಗಿದ್ದ ಜೆಡಿಎಸ್ ಹಾಗೂ ಕಾಂಗ್ರೆಸ್ ಸದಸ್ಯರು ನೂತನ ಉಪಾಧ್ಯಕ್ಷರಿಗೆ ಹಸ್ತಲಾಘವ ನೀಡಿ ಶುಭ ಕೋರಿದರು. ಸ್ವರೂಪ್ ಆಯ್ಕೆಗೆ ಸಮ್ಮತಿಸಿದ್ದ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷೆ ಭವಾನಿ ರೇವಣ್ಣ, ಜಿಲ್ಲಾ ಉಸ್ತುವಾರಿ ಸಚಿವ ಎಚ್.ಡಿ.ರೇವಣ್ಣ ಅವರ ಅನುಪಸ್ಥಿತಿ ಹೆಚ್ಚಾಗಿ ಕಾಡಿತು. ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಸೋಲು ಜೆಡಿಎಸ್ ಕಾರ್ಯಕರ್ತರ ನೋವಿಗೆ ಕಾರಣವಾಗಿದೆ.

Leave a Reply

Your email address will not be published. Required fields are marked *