ಕುದ್ರೋಳಿ ಸ್ವರ್ಣ ಲೇಪಿತ ಶಿಖರ ಪ್ರತಿಷ್ಠಾಪನೆ

ಮಂಗಳೂರು: ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರ ಬ್ರಹ್ಮಕಲಶೋತ್ಸವ ಅಂಗವಾಗಿ ಶುಕ್ರವಾರ ಬೆಳಗ್ಗೆ ಸ್ವರ್ಣ ಲೇಪಿತ ಶಿಖರ ಪ್ರತಿಷ್ಠಾಪನೆ ಹಾಗೂ ಚಂಡಿಕಾಹೋಮ ನೆರವೇರಿತು.

ಬೆಳಗ್ಗೆ 5ರಿಂದ ಮಹಾಗಣಪತಿ ಹೋಮ, 8.15ಕ್ಕೆ ಗರ್ಭಗುಡಿಯ ಶಿಖರ ಪ್ರತಿಷ್ಠಾಪನೆ, ತ್ರಿಕಾಲ ಗುರುಪೂಜೆ, ತ್ರಿಕಾಲ ಅಂಕುರ ಪೂಜೆ, ಚಂಡಿಕಾ ಹೋಮ, ಜಲೋದ್ಧಾರ ಕ್ರಿಯ, ವಾಹನ ಬಿಂಬ ಶುದ್ಧಿ ನಡೆಯಿತು. ಸಂಜೆ 6ರಿಂದ ದೀಪಾರಾಧನಾ, ತತ್ವಕಲಶ ಪೂಜೆ, ತತ್ವಹೋಮ, ಕಲಶಾಭಿಷೇಕ, ಮಹಾಪೂಜೆ ನಡೆಯಿತು.

ಕುದ್ರೋಳಿ ಕ್ಷೇತ್ರ ಅಧ್ಯಕ್ಷ ಎಚ್.ಎಸ್.ಸಾಯಿರಾಂ, ಕಾರ್ಯದರ್ಶಿ ಬಿ.ಮಾಧವ ಸುವರ್ಣ, ಕೋಶಾಧಿಕಾರಿ ಪದ್ಮರಾಜ್ ಆರ್, ಕ್ಷೇತ್ರ ಅಭಿವೃದ್ಧಿ ಕಮಿತಿ ಉಪಾಧ್ಯಕ್ಷೆ ಊರ್ಮಿಳಾ ರಮೇಶ್ ಕುಮಾರ್, ಸದಸ್ಯರಾದ ಬಿ.ಜಿ.ಸುವರ್ಣ, ದೇವೇಂದ್ರ ಪೂಜಾರಿ, ಡಾ.ಅನುಸೂಯಾ ಬಿ.ಟಿ.ಸಾಲ್ಯಾನ್, ಶೇಖರ್ ಪೂಜಾರಿ ಉಪಸ್ಥಿತರಿದ್ದರು. ಸಂಸದ ನಳಿನ್ ಕುಮಾರ್ ಕಟೀಲು, ಶಾಸಕ ಉಮಾನಾಥ ಕೋಟ್ಯಾನ್, ಮಾಜಿ ಸಚಿವ ವಿನಯ ಕುಮಾರ್ ಸೊರಕೆ, ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್ ಭೇಟಿ ನೀಡಿ ದೇವರ ದರ್ಶನ ಪಡೆದರು.

ಮೇಲ್ಛಾವಣಿ ಏರಿದ ಪೂಜಾರಿ: ಶಿವಗಿರಿ ಮಠದ ಶ್ರೀಸುಗುದಾನಂದ ತಂತ್ರಿ ಮತ್ತು ಅರ್ಚಕ ಲಕ್ಷ್ಮಣ ಶಾಂತಿ ಪೌರೋಹಿತ್ಯದಲ್ಲಿ ಬೆಳಗ್ಗೆ ಧಾರ್ಮಿಕ ವಿಧಿ ವಿಧಾನಗಳು ನಡೆದವು. ಬಳಿಕ ಶಾಂತಿ ವರ್ಗದವರು ಸ್ವರ್ಣ ಲೇಪಿತ ಶಿಖರವನ್ನು ಗರ್ಭಗುಡಿಯ ಮೇಲ್ಛಾವಣಿಗೆ ಹಿಡಿದುಕೊಂಡು ತೆರಳುತ್ತಿದ್ದಂತೆ ಬ್ಯಾಂಡ್, ವಾದ್ಯ ತಂಡಗಳು ಮೊಳಗಿದವು. ತಂತ್ರಿ, ಶಾಂತಿಗಳು ಅಟ್ಟಣಿಗೆ ಸಹಾಯದೊಂದಿಗೆ ಮೇಲ್ಛಾವಣಿ ಏರುತ್ತಿದ್ದಂತೆ ಜನಾರ್ದನ ಪೂಜಾರಿ ಮೇಲ್ಛಾವಣಿ ಹತ್ತುವ ಇಂಗಿತ ವ್ಯಕ್ತಪಡಿಸಿ, 25 ಅಡಿ ಏರಿ ಅಚ್ಚರಿ ಮೂಡಿಸಿದರು. ಪದ್ಮರಾಜ್, ಮಾಧವ ಸುವರ್ಣ ಸಹಕರಿಸಿದರು.

ಇಂದು ಶಯ್ಯ ಪೂಜೆ: ಶನಿವಾರ ಬೆಳಗ್ಗಿನಿಂದ ಧಾರ್ಮಿಕ ಕಾರ್ಯಕ್ರಮ ಆರಂಭವಾಗಲಿದ್ದು, ಸಂಜೆ 6ರಿಂದ ದೀಪಾರಾಧನೆ, ಖಂಡಬ್ರಹ್ಮಕಲಶ ಪೂಜೆ, ಶಿರತತ್ವ ಕಲಶಪೂಜೆ, ಅಧಿವಾಸ ಪೂಜೆ, ಪಾಲಿಕ ಬಲಿ, ಶಯ್ಯಪೂಜೆ, ಧಾನ್ಯಾಧಿವಾಸ ಅಧಿವಾಸ ಪೂಜೆ, ಕುಂಡ ಶುದ್ಧಿ, ಮಹಾಪೂಜೆ ನಡೆಯಲಿದೆ.

ನಾಳೆ ಬ್ರಹ್ಮಕಲಶೋತ್ಸವ: ಫೆ.17ರಂದು ಬೆಳಗ್ಗೆ 7.35ಕ್ಕೆ ರಾಜಗೋಪುರ ಶಿಖರ ಪ್ರತಿಷ್ಠಾಪನೆ, ಕಲಶಾಭಿಷೇಕ, ಅಧಿವಾಸಂ, ವೀರಕಾಂಡ ಪೀಠ ಪೂಜೆ, ಬೆಳಗ್ಗೆ ಗಂಟೆ 8.05ಕ್ಕೆ ವಾಹನ ಪ್ರತಿಷ್ಠಾಪನೆ, ಕಲಶಾಭಿಷೇಕ, ಧ್ವಜಾರೋಹಣ. ಮಧ್ಯಾಹ್ನ ಗಂಟೆ 12.15ಕ್ಕೆ ವೃಷಭ ಲಗ್ನ ಸುಮುಹೂರ್ತದಲ್ಲಿ ಬ್ರಹ್ಮಕಲಶಾಭಿಷೇಕ, ವಿಶೇಷ ಪೂಜೆ, ನೈವೇದ್ಯ ಪೂಜೆ, ಪ್ರಸನ್ನಪೂಜೆ, ಮಹಾಮಂಗಳಾರತಿ, ಅನ್ನಸಂತರ್ಪಣೆ ನಡೆಯಲಿದೆ.

ಇಂದು ಶಿವಗಿರಿ ಮಠಾಧಿಪತಿ ಆಗಮನ: ಶ್ರೀ ಕ್ಷೇತ್ರಕ್ಕೆ ಕೇರಳ ಶಿವಗಿರಿ ಮಠಾಧಿಪತಿ ಬ್ರಹ್ಮಶ್ರೀ ವಿಷುದಾನಂದ ಸ್ವಾಮೀಜಿ ಶನಿವಾರ ಬೆಳಗ್ಗೆ 8.30ಕ್ಕೆ ಮಂಗಳೂರಿಗೆ ಆಗಮಿಸಲಿದ್ದಾರೆ. ಬೆಳಗ್ಗೆ 9ಕ್ಕೆ ಪೀಠಾಧಿಪತಿಯವರನ್ನು ಶ್ರೀ ಕ್ಷೇತ್ರಕ್ಕೆ ಪೂರ್ಣಕುಂಭ ಸ್ವಾಗತದೊಂದಿಗೆ ಬರಮಾಡಿಕೊಳ್ಳಲು ನಿರ್ಧರಿಸಲಾಗಿದೆ. ಪೀಠಾಧಿಪತಿಗಳು ಎರಡು ದಿನಗಳ ಕಾಲ ಶ್ರೀ ಕ್ಷೇತ್ರದಲ್ಲಿ ತಂಗಲಿದ್ದು, ಭಕ್ತರರನ್ನು ಹರಸುವರು ಎಂದು ಶ್ರೀ ಕ್ಷೇತ್ರದ ಪ್ರಕಟಣೆ ತಿಳಿಸಿದೆ.