Monday, 19th November 2018  

Vijayavani

ರಾಜಧಾನಿಯಲ್ಲಿ ಹಸಿರು ಕ್ರಾಂತಿ-ಸಿಎಂ ಎಚ್​ಡಿಕೆ, ಡಿಸಿಎಂ ಪರಮೇಶ್ವರ್​ಗೆ ಡೆಡ್​​ಲೈನ್-ಕೂಡಲೇ ಸ್ಥಳಕ್ಕೆ ಬರುವಂತೆ ರೈತರ ಪಟ್ಟು        ಸೈಟ್ ಕೇಳ್ತಿಲ್ಲ, BMW ಕಾರೂ ಕೇಳ್ತಿಲ್ಲ-ನಾವು ಕೇಳ್ತಿರೋದು ಬೆಳೆದ ಬೆಲೆಗೆ ಬೆಲೆಯಷ್ಟೇ-ಸಚಿವ ಕಾಶಂಪೂರ್​​ಗೆ ಮನವಿ ಸಲ್ಲಿಕೆ        ರೈತರು, ಹೆಣ್ಮಕ್ಕಳ ವಿಚಾರದಲ್ಲಿ ಗೌರವ ಇದೆ-ನನ್ನ ಹೇಳಿಕೆಯಲ್ಲಿ ಯಾವುದೇ ದುರುದ್ದೇಶ ಇಲ್ಲ-ಸಿಎಂ ಹೇಳಿಕೆ ಬಿಡುಗಡೆ        ಸಿಎಂ ಕೂಡಲೇ ಕ್ಷಮೆ ಕೇಳಬೇಕು-ನಾಳಿನ ಕೋರ್​​​ ಕಮಿಟಿ ಸಭೆಯಲ್ಲಿ ಹೋರಾಟದ ನಿರ್ಧಾರ-ಸರ್ಕಾರದ ವಿರುದ್ಧ ಗುಡುಗಿದ ಬಿಜೆಪಿ        ₹3,300 ಕೋಟಿ, 132 ಕಿ.ಮೀ. ದೂರ-ಗುರಗಾಂವ್​​ನಲ್ಲಿ ಎಕ್ಸ್​​ಪ್ರೆಸ್​​ ಹೈವೇ ಲೋಕಾರ್ಪಣೆಗೊಳಿಸಿದ ಪ್ರಧಾನಿ        ರೈಲು ಬರುವ ವೇಳೆ ಹಳಿ ಮಧ್ಯೆ ಮಲಗಿದ ಭೂಪ-ಪ್ರಾಣದ ಹಂಗು ತೊರೆದು ಹುಚ್ಚು ಸಾಹಸ-ಹೈದ್ರಾಬಾದ್​ನಲ್ಲೊಂದು ಮಿರ‍್ಯಾಕಲ್       
Breaking News

ಕಹಿ ಕ್ಷಣಗಳನ್ನು ಮರೆತುಬಿಡಿ

Sunday, 22.01.2017, 4:00 AM       No Comments

ಕ್ಷಣವನ್ನು ಆನಂದಿಸಿ. ನಿನ್ನೆಯ ಕಹಿಕ್ಷಣದ ಬಗ್ಗೆ ಚಿಂತಿಸುತ್ತ

ಕೂರಬೇಡಿ. ನಾಳೆಯೆಂಬುದು ಇನ್ನೂ ಕೆಟ್ಟದಾಗಬಹುದು. ಬದುಕಿನ ಸಣ್ಣಪುಟ್ಟ ಖುಷಿಗಳನ್ನು ಸವಿಯಲು ಕಲಿಯಬೇಕು. ಅಂಥವು ಬೇಕಾದಷ್ಟಿರುತ್ತವೆ. ಸಮುದ್ರದ ಅಲೆಗಳ ಜತೆಗೆ ತೇಲುವುದು ಅಪಾರ ಖುಷಿಕೊಡುವ ಒಂದು ಕಲೆ. ಹೆಣಗಳು ಎಂದಿಗೂ ಮುಳುಗುವುದಿಲ್ಲ; ಮುಳುಗುವುದು ಜೀವಂತ ಮನುಷ್ಯ ಮಾತ್ರ. ಏಕೆಂದರೆ ಆತ ಸಮುದ್ರದೊಂದಿಗೆ ಹೋರಾಡುತ್ತಾನೆ. ಜೀವನಸಮುದ್ರದಲ್ಲೂ ನಾವು ತೇಲಾಡಬೇಕಲ್ಲದೆ ಹೋರಾಡಕೂಡದು. ಇದೊಂದು ಮಹತ್ತ್ವದ ಪಾಠ.

ಹೋರಾಟವೂ ಬದುಕಿನ ಒಂದು ಅಂಗವೆನ್ನುವುದು ನಿಜ. ಆದರೆ ಈ ಹೋರಾಟದ ಬದುಕಿನಲ್ಲೂ ರಿಲ್ಯಾಕ್ಸ್ ಆಗಿರುವುದೇ ಜೀವನ ವಿವೇಕದ ಕಲೆ. ಜುಡೋ ಕುಸ್ತಿಯಲ್ಲಿ, ಕುಸ್ತಿಪಟುಗಳು ಹೇಗೆ ವಿನಮ್ರರಾಗಿ, ರಿಲ್ಯಾಕ್ಸ್ ಆಗಿರುತ್ತಾರೆಂಬುದನ್ನು ಪರಿಶೀಲಿಸಿ. ಅದೇ ರೀತಿಯಲ್ಲಿ ರಿಲ್ಯಾಕ್ಸ್ ಮಾಡಲು ಕಲಿಯಿರಿ. ಜುಡೋದ ಅರ್ಥ ಸೌಮ್ಯತೆಯ ಮಾರ್ಗವೆಂದು. ಹೋರಾಡುವಾಗಲೂ ಜಾಗೃತಿ ಮತ್ತು ರಿಲ್ಯಾಕ್ಸ್ ಆಗಿರುವುದು ಗೆಲುವಿನ ಗುಟ್ಟು. ಉದಾಹರಣೆಗೆ ನೀವು ದಾರಿಯಲ್ಲಿ ಒಂದು ಹಾವನ್ನು ಕಂಡಾಗ ಉದ್ವೇಗಭರಿತರಾದರೆ, ಆ ಹಾವಿನ ಮೇಲೇ ಕಾಲಿಟ್ಟು ತೊಂದರೆಗೊಳಗಾಗುವ ಸಾಧ್ಯತೆ ಇದೆ. ಆದರೆ ಉದ್ವೇಗಕ್ಕೊಳಗಾಗದೆ ಶಾಂತಮನಸ್ಕರಾಗಿದ್ದರೆ, ಹಾವನ್ನು ತಪ್ಪಿಸಿಕೊಂಡು ಮುನ್ನಡೆಯಬಹುದು. ಹಾವು ತಾನಾಗಿಯೇ ದೂರ ಸರಿಯಬಹುದು. ಅನಿವಾರ್ಯವಾದಾಗ ಹೋರಾಡಲೇಬೇಕು. ಅವಶ್ಯವಾಗಿ ಹೋರಾಡಿ. ಆದರೆ ಆ ಹೋರಾಟದಲ್ಲಿ ಉದ್ವಿಗ್ನತೆ ಇರದಿರಲಿ.

ನಿಮ್ಮನ್ನು ಯಾರಾದರೂ ಟೀಕಿಸಿದರೆ, ಆಗ ಶರೀರವನ್ನು ರಿಲ್ಯಾಕ್ಸ್ ಆಗಿರಿಸಿಕೊಳ್ಳಿ. ಆತ ಏನು ಹೇಳುತ್ತಿದ್ದಾನೆಂದು ಗಮನವಿಟ್ಟು ಕೇಳಿ. ಹೀಗೆ ಮಾಡುವುದರಿಂದ ಮನಸ್ಸು ಸಮಾಧಾನದಲ್ಲಿರುತ್ತದೆ. ಆಗ ಶರೀರವೂ ಪ್ರತಿಕ್ರಿಯಿಸುವುದಿಲ್ಲ. ಬಿಗಿತವುಳ್ಳ ಶರೀರ ಮನಸ್ಸಿನಲ್ಲಿಯೂ ಬಿಗಿತವುಂಟುಮಾಡುತ್ತದೆ. ಬಿಗಿದ ಮನಸ್ಸು ಶರೀರವನ್ನೂ ಬಿಗಿಯಾಗಿಸುತ್ತದೆ. ತಿನ್ನುವುದಿರಲಿ, ನಡೆಯುವುದಿರಲಿ, ಸ್ನಾನವಿರಲಿ ಇನ್ನಾವುದೇ ಚಟುವಟಿಕೆ ಇರಲಿ, ಎಲ್ಲ ಕ್ಷಣಗಳಲ್ಲೂ ರಿಲ್ಯಾಕ್ಸ್ ಆಗಿರುವುದು ನಿಮ್ಮ ಜೀವನ ಶೈಲಿಯಾಗಿರಲಿ. ಓರ್ವ ಮಹಿಳೆ ಒಬ್ಬ ತಾವೋ ಸಾಧುವನ್ನು ಭೇಟಿಯಾಗಿ ‘ಅತ್ತೆ ನನಗೆ ಭಾರಿ ಹಿಂಸೆ ಕೊಡುತ್ತಿದ್ದಾಳೆ, ನನ್ನ ಬದುಕನ್ನು ನರಕ ಮಾಡಿದ್ದಾಳೆ. ಅವಳನ್ನು ಸಾಯಿಸಲು ಒಂದಿಷ್ಟು ವಿಷ ನೀಡುತ್ತೀರಾ?’ ಎಂದು ಕೇಳಿದಳು. ಸಾಧು ‘ಆಗಲಿ’ ಎಂದು ಒಂದು ಔಷಧ ನೀಡಿ ಹೀಗೆಂದ: ‘ಇದು ಪರಿಣಾಮಕಾರಿಯಾಗಬೇಕಾದರೆ ಒಂದು ಷರತ್ತಿದೆ. ಅದನ್ನು ನೀಡುವಾಗ ಅತ್ಯಂತ ಪ್ರೀತಿಯಿಂದ, ಕರುಣೆಯಿಂದ ನೀಡಬೇಕು. ಹಾಗೆ ಮಾಡಿದರೆ ಆಕೆ ಸತ್ತ ಮೇಲೆ ನಿನ್ನ ಬಗ್ಗೆ ಯಾರೂ ಸಂದೇಹ ಪಡುವುದಿಲ್ಲ. ನಾನು ಹೇಳಿದ ರೀತಿಯಲ್ಲಿಯೇ ಔಷಧ ನೀಡಿದರೆ ಎರಡು ತಿಂಗಳಲ್ಲಿ ಆಕೆ ಸಾಯುವಳು.’

ಒಂದು ತಿಂಗಳು ಕಳೆಯಿತು. ಆ ಮಹಿಳೆ ಮರಳಿ ಸಾಧುವಿದ್ದಲ್ಲಿಗೆ ಬಂದು ‘ನನಗೀಗ ಅತ್ತೆ ಸಾಯುವುದು ಬೇಕಾಗಿಲ್ಲ. ಅವಳೀಗ ತುಂಬಾ ಬದಲಾಗಿದ್ದಾಳೆ. ಈಗ ಅವಳು ನನ್ನನ್ನು ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದಾಳೆ’ ಎಂದಳು. ಆಗ ಸಾಧು ಹೀಗೆಂದ: ‘ಔಷಧಕ್ಕಿಂತಲೂ ನೀನು ತೋರಿಸಿದ ಪ್ರೀತಿ ಕೆಲಸಮಾಡಿದೆ, ಅಷ್ಟೆ’. ನೀವು ಏನೇ ಮಾಡಿ, ಅದರಲ್ಲಿ ಪ್ರೀತಿಯ ಚೈತನ್ಯ ಹರಿಯುವಂತೆ ಮಾಡಿ. ಪ್ರೀತಿಯ ಪವಾಡವನ್ನು ನೋಡಿ. ಅದು ನಿಮ್ಮನ್ನೂ ಉದ್ಧರಿಸುತ್ತದೆ, ಅನ್ಯರನ್ನೂ ಉದ್ಧರಿಸುತ್ತದೆ. ಪ್ರೀತಿಯ ಚೈತನ್ಯವೇ ಭಗವಂತ. ದೇವರು ಒಂದು ವಸ್ತುವಲ್ಲ, ಶುದ್ಧ ಸೌಜನ್ಯದ ತತ್ತ್ವ. ಪ್ರೀತಿ ವ್ಯಾಪಾರವಾಗಬಾರದು. ಯಾವುದನ್ನೋ ಪಡೆಯುವ ಉಪಕರಣವಾಗಿ ಪ್ರೀತಿಯನ್ನು ಪರಿಗಣಿಸಬಾರದು. ಪ್ರೀತಿಸುತ್ತಾ ಇರಿ. ಕ್ರಮೇಣ ಅದು ನಿಮ್ಮೊಳಗೇ ಹೇಗೆ ಸ್ವರ್ಗಸದೃಶ ಸ್ಥಿತಿಯನ್ನು ಸೃಷ್ಟಿಸುತ್ತದೆ ಎನ್ನುವುದನ್ನು ಕಾಣುವಿರಿ. ಪ್ರೀತಿ ಪಡೆದರೂ ಬದಲಾಗದವರಿದ್ದರೆ, ಆಗ ಪ್ರತಿಯೊಂದು ಆತ್ಮಕ್ಕೂ ತನ್ನದೇ ಆದ ಪಯಣವಿದೆ ಎಂದು ತಿಳಿಯಿರಿ. ಎಂದಾದರೊಂದು ದಿನ ಅವರ ಪಯಣ ಮುಗಿಯಲೇಬೇಕು.

(ಲೇಖಕರು ಅಂತಾರಾಷ್ಟ್ರೀಯ ಮ್ಯಾನೇಜ್​ವೆುಂಟ್ ಗುರುಗಳು)

Leave a Reply

Your email address will not be published. Required fields are marked *

Back To Top