Monday, 19th November 2018  

Vijayavani

ರಾಜಧಾನಿಯಲ್ಲಿ ಹಸಿರು ಕ್ರಾಂತಿ-ಸಿಎಂ ಎಚ್​ಡಿಕೆ, ಡಿಸಿಎಂ ಪರಮೇಶ್ವರ್​ಗೆ ಡೆಡ್​​ಲೈನ್-ಕೂಡಲೇ ಸ್ಥಳಕ್ಕೆ ಬರುವಂತೆ ರೈತರ ಪಟ್ಟು        ಸೈಟ್ ಕೇಳ್ತಿಲ್ಲ, BMW ಕಾರೂ ಕೇಳ್ತಿಲ್ಲ-ನಾವು ಕೇಳ್ತಿರೋದು ಬೆಳೆದ ಬೆಲೆಗೆ ಬೆಲೆಯಷ್ಟೇ-ಸಚಿವ ಕಾಶಂಪೂರ್​​ಗೆ ಮನವಿ ಸಲ್ಲಿಕೆ        ರೈತರು, ಹೆಣ್ಮಕ್ಕಳ ವಿಚಾರದಲ್ಲಿ ಗೌರವ ಇದೆ-ನನ್ನ ಹೇಳಿಕೆಯಲ್ಲಿ ಯಾವುದೇ ದುರುದ್ದೇಶ ಇಲ್ಲ-ಸಿಎಂ ಹೇಳಿಕೆ ಬಿಡುಗಡೆ        ಸಿಎಂ ಕೂಡಲೇ ಕ್ಷಮೆ ಕೇಳಬೇಕು-ನಾಳಿನ ಕೋರ್​​​ ಕಮಿಟಿ ಸಭೆಯಲ್ಲಿ ಹೋರಾಟದ ನಿರ್ಧಾರ-ಸರ್ಕಾರದ ವಿರುದ್ಧ ಗುಡುಗಿದ ಬಿಜೆಪಿ        ₹3,300 ಕೋಟಿ, 132 ಕಿ.ಮೀ. ದೂರ-ಗುರಗಾಂವ್​​ನಲ್ಲಿ ಎಕ್ಸ್​​ಪ್ರೆಸ್​​ ಹೈವೇ ಲೋಕಾರ್ಪಣೆಗೊಳಿಸಿದ ಪ್ರಧಾನಿ        ರೈಲು ಬರುವ ವೇಳೆ ಹಳಿ ಮಧ್ಯೆ ಮಲಗಿದ ಭೂಪ-ಪ್ರಾಣದ ಹಂಗು ತೊರೆದು ಹುಚ್ಚು ಸಾಹಸ-ಹೈದ್ರಾಬಾದ್​ನಲ್ಲೊಂದು ಮಿರ‍್ಯಾಕಲ್       
Breaking News

ಬದುಕಿನಲ್ಲಿ ಪ್ರೀತಿ ತುಂಬಿ…

Sunday, 25.12.2016, 4:00 AM       No Comments

| ಸ್ವಾಮಿ ಸುಖಬೋಧಾನಂದ

  •   ‘ಅಪರಿಪೂರ್ಣತೆಯಲ್ಲಿ ಸೌಂದರ್ಯವನ್ನು ನೋಡಿ’ ಎಂಬ ನಿಮ್ಮ ಮಾತಿನ ಅರ್ಥವೇನು?

ಹಸಿರು ಎಲೆಯಲ್ಲೂ ಒಂದು ಸೌಂದರ್ಯವಿದೆ, ಹಣ್ಣೆಲೆಯಲ್ಲೂ ಒಂದು ಸೌಂದರ್ಯವಿದೆ. ಹಸಿರೆಲೆಯಲ್ಲೂ ಸೌಂದರ್ಯಕ್ಕೇ ಅಂಟಿಕೊಂಡಿರುವುದು ವಿವೇಕವಲ್ಲ. ವಸಂತದಲ್ಲೂ ಚೆಲುವಿದೆ. ಗ್ರೀಷ್ಮದಲ್ಲೂ ಚೆಲುವಿದೆ. ಏನು ಇದೆಯೋ ಅದರಲ್ಲೇ ಚೆಲುವನ್ನು ಕಾಣುವುದು ಒಂದು ವಿಶಿಷ್ಟ ಕಲೆ. ಕರಾಟೆ, ಜೂಡೋದಂಥ ಕದನ ಕಲೆಗಳಲ್ಲಿ ಬೀಳುವುದೂ ಒಂದು ಪಟ್ಟು. ಹಾಗೆ ಬೀಳುವುದರಲ್ಲೂ ಖುಷಿ ಇರುತ್ತದೆ. ಅಂಥ ಕಲೆಗಳನ್ನು ಕಲಿತುಕೊಳ್ಳಬೇಕು.

ಮಗು ಮುಗ್ಧವಾಗಿರುವಾಗ ಒಂದು ತೆರನ ಚೆಲುವಿದ್ದರೆ, ಅದು ತುಂಟನಾದಾಗ ಮತ್ತೊಂದು ತೆರನ ಸೊಗಸಿರುತ್ತದೆ. ಪ್ರಕೃತಿಯ ಜತೆಗೇ ಪ್ರವಹಿಸುತ್ತಾ ಬದುಕಿನ ಉತ್ತಮ ಮಾರ್ಗಗಳನ್ನು ಕಂಡುಕೊಳ್ಳಿ.

  • ಕಳೆದ ರಾತ್ರಿ ಕನಸಿನಲ್ಲಿ ನಾನೊಂದು ಭೂತವನ್ನು ನೋಡಿದೆ. ನನಗೆ ಭೂತಗಳಲ್ಲಿ ನಂಬಿಕೆಯಿಲ್ಲ. ಈ ಕುರಿತು ಒಂದಿಷ್ಟು ಬೆಳಕು ಚೆಲ್ಲುವಿರಾ?

ಕತ್ತಲೆಯಲ್ಲಿ ಹಗ್ಗವು ಹಾವಾಗಿ ಕಾಣಿಸುತ್ತದೆ. ಹಾವು ಸುಳ್ಳಾದರೂ ನಿಜವಾಗಿಯೇ ಕಾಣಿಸುತ್ತೆ. ಅಂಥ ಮಿಥ್ಯೆಯ ಶಾಕ್​ನಿಂದ ಕೆಲವರು ಸಾಯಲೂ ಬಹುದು. ಮಿಥ್ಯೆಗೂ ಶಕ್ತಿ ಇದೆ. ನಿಮಗೆ ಭೂತಗಳ ಬಗ್ಗೆ ಭಯವಿದೆ. ಅದನ್ನು ನಂಬದಿರುವುದೂ ಆ ಭಯದ ಒಂದು ರೂಪವೇ. ಎಲ್ಲವೂ ಭಯದ ಶಕ್ತಿಯಿಂದ ನಡೆಯುವಂತೆ ಕಾಣಿಸುತ್ತದೆ.

ಜನರು ಏಕಾಕಿತನದ ಭಯದ ಕಾರಣ ಮದುವೆಯಾಗುತ್ತಾರೆ. ದೇವರನ್ನೂ ಭಯದಿಂದಲೇ ಪೂಜಿಸುತ್ತಾರೆ. ಆದ್ದರಿಂದಲೇ ‘ದೇವರಿಗೆ ಹೆದರುವ’ ಎಂಬ ಮಾತಿದೆ. ‘ದೇವರನ್ನು ಪ್ರೀತಿಸುವ’ ಎಂಬ ಮಾತು ಇಲ್ಲ. ಭಯವನ್ನು ದೂರವಿಡಬೇಕಾದರೆ ಬದುಕಿನ ಎಲ್ಲ ಚಟುವಟಿಕೆಗಳಲ್ಲಿಯೂ ಪ್ರೀತಿ ಹಾಗೂ ನಂಬಿಕೆಯನ್ನು ತಂದುಕೊಳ್ಳಿ. ಆಗ ಭಯ ಮಾಯವಾಗಿ ಭೂತವನ್ನು ನೋಡುವ ಬದಲು ಎಲ್ಲೆಲ್ಲೂ ಭಗವಂತನ ನರ್ತನವನ್ನು ನೋಡುವಿರಿ. ಭಯ, ಸಂಶಯಗಳಿಂದ ಪೀಡಿತವಾಗಿರುವ ಮನಸ್ಸೇ ನಿಜವಾದ ಭೂತ.

  • ಸತ್ಯ ಹೇಳುವುದೇ ಸರಿಯೇ? ಸುಳ್ಳು ಹೇಳುವುದು ಯಾವಾಗಲೂ ತಪ್ಪೇ?

ಪ್ರತಿಯೊಬ್ಬ ಮನುಷ್ಯನೊಳಗೂ ಒಬ್ಬ ಚಿಂತಕನೂ ಇದ್ದಾನೆ. ಕರ್ತೃವೂ ಇದ್ದಾನೆ. ನೀವು ಸುಳ್ಳು ಹೇಳಿದಾಗ ನಿಮ್ಮೊಳಗೆ ಕರ್ತೃವೂ ಸುಳ್ಳಾಡುತ್ತಾನೆ. ನಿಮ್ಮೊಳಗಿನ ಚಿಂತಕ ಎಚ್ಚರಿಕೆ ನೀಡಿದಾಗ, ಕರ್ತೃ ‘ಬಾಯಿ ಮುಚ್ಚು’ ಎನ್ನುತ್ತಾನೆ. ಇದರಿಂದ ಇವರಿಬ್ಬರ ನಡುವೆ ಬಿರುಕುಂಟಾಗುತ್ತದೆ. ಕಾಲ ಕ್ರಮೇಣ ಅದು ವಿಸ್ತಾರವಾಗುತ್ತದೆ. ಕರ್ತೃ ಏನನ್ನಾದರೂ ಮಾಡ ಹೊರಡುತ್ತಾನೆ. ಅಂತಹ ಸನ್ನಿವೇಶದಲ್ಲಿ ನಿಮ್ಮ ವ್ಯಕ್ತಿತ್ವ ಅಖಂಡವಾಗುವುದಿಲ್ಲ.

ನೀವು ಸತ್ಯವನ್ನೇ ಹೇಳಿದಾಗ ನಿಮ್ಮೊಳಗಿನ ಚಿಂತಕ ಹಾಗೂ ಕತೃಗಳ ನಡುವೆ ಬಿರುಕುಂಟಾಗುವುದಿಲ್ಲ. ಹಾಗಾಗಿ ನಿಮ್ಮ ವ್ಯಕ್ತಿತ್ವ ಅಖಂಡವಾಗುತ್ತದೆ. ವಿವೇಕ ಇರುವುದು ಸತ್ಯವನ್ನು ಬೋಧಿಸುವುದಲ್ಲಲ್ಲ. ಆಚರಿಸುವುದರಲ್ಲಿ. ಆಚರಣೆಯಿಲ್ಲದವರು ಬೋಧಿಸುವ ಸತ್ಯ ಸುಳ್ಳಾಗುತ್ತದೆ. ಸತ್ಯವು ನಿಮ್ಮ ಆಚರಣೆಯ ರೂಪ ತಳೆದಾಗ ನಿಮ್ಮ ಸಾನ್ನಿಧ್ಯವು ಸ್ಪೂರ್ತಿಯ ಸೆಲೆಯಾಗುತ್ತದೆ.

  • ನಿಜವಾದ ವೈರಾಗ್ಯವೆಂದರೇನು?

ಜಗತ್ತನ್ನು ಯಾರೂ ತ್ಯಜಿಸಲಾಗುವುದಿಲ್ಲ. ಎಲ್ಲಿ ಹೋದರೂ ಅಲ್ಲಿ ಜಗತ್ತು ಇದ್ದೇ ಇರುತ್ತದೆ. ಆದರೆ ಈ ಬಾಹ್ಯ ಪ್ರಪಂಚ ನಮ್ಮಲ್ಲಿ ನರಕವನ್ನು ಸೃಷ್ಟಿಸುವುದಿಲ್ಲ. ಅದು ಸೃಷ್ಟಿಯಾಗುವುದು ನಮ್ಮದೇ ಆದ ಇಷ್ಟ- ಅನಿಷ್ಟಗಳಿಂದ, ಸಿದ್ಧಾಂತಗಳಿಂದ ಹಾಗೂ ಜನರನ್ನು ಮೆಚ್ಚಿಸಬೇಕೆಂಬ, ಜನರ ಮುಂದೆ ಚೆನ್ನಾಗಿ ಕಾಣಿಸಬೇಕೆಂಬ ಮನಸ್ಸಿನ ಆಟಗಳಿಂದ.

ಯಾರೋ ಗೌತಮ ಬುದ್ಧನನ್ನು ಹೀಗೆ ಕೇಳಿದರು: ‘‘ನೀವು ಸದಾ ಸಂತೋಷವಾಗಿರುವುದರ ರಹಸ್ಯವೇನು?’’

‘‘ನಾನು ನನ್ನ ಮುಂದಿರುವುದನ್ನು ಯಥಾವತ್ತಾಗಿ ಪ್ರತಿಫಲಿಸುವ ಕನ್ನಡಿಯಷ್ಟೆ. ಪ್ರತಿಫಲಿತ ವಸ್ತುವಿನೊಡನೆ ಗುರುತಿಸಿಕೊಳ್ಳುವುದಿಲ್ಲ’’ ಎಂದ ಬುದ್ಧ.

  • ಜೀವನದ ಸಾಧ್ಯತೆಗಳನ್ನು ಹೇಗೆ ಅತ್ಯುನ್ನತ ಮಟ್ಟದಲ್ಲಿ ಸಾಧಿಸಬಹುದು?

ಯಾವುದನ್ನೇ ಮಾಡಿ, ಅದರಲ್ಲಿ ಸಮಗ್ರವಾಗಿರಿ. ಪ್ರತಿಕ್ಷಣವನ್ನೂ ಸೂರೆಮಾಡಿ. ಭೂತ, ಭವಿಷ್ಯತ್​ಗಳಲ್ಲಿರುತ್ತಾ ಬದುಕನ್ನು ಕಳೆದುಕೊಳ್ಳಬೇಡಿ. ಒಂದು ಹಕ್ಕಿಯನ್ನು ನೋಡುವುದಾದರೂ, ಸಮಗ್ರ ವ್ಯಕ್ತಿತ್ವವನ್ನು ತೊಡಗಿಸಿಕೊಂಡು ನೋಡಿದರೆ ಆ ದರ್ಶನದಲ್ಲಿ ನಿಮ್ಮ ಅಸ್ತಿತ್ವ ಮಾಯವಾಗುತ್ತದೆ. ಹಾಗೆಯೇ ಸಮಗ್ರ ಪ್ರಜ್ಞೆಯಿಂದ ಸಂಗೀತ ಕೇಳಿದರೆ ನೀವು ಮಾಯವಾಗುವಿರಿ. ಸಾಮಾನ್ಯವಾಗಿ ನಮ್ಮ ಅಹಂ ಪದೇಪದೆ ಎದ್ದು ಜೀವನಲಯವನ್ನು ತಪ್ಪಿಸುತ್ತಿರುತ್ತದೆ. ಆದರೆ, ನೀವು ಸಮಗ್ರತೆಯನ್ನು ಸಾಧಿಸಿದರೆ ಅದು ಮಾಯವಾಗಿರುತ್ತದೆ.

ಜೀವನದ ಪ್ರತಿ ಸನ್ನಿವೇಶವೂ ನೀವು ಸಮಗ್ರತೆಯನ್ನು ಸಾಧಿಸಿ, ಮಾಯವಾಗುವುದಕ್ಕೆ ಅವಕಾಶ. ಚಿಂತಿಸುವುದು, ಲೆಕ್ಕ ಹಾಕುವುದು, ಚಾಣಕ್ಷತನ ತೋರುವುದು- ಇವೆಲ್ಲ ಮನಸ್ಸಿನ ಹಳೆಯ ಚಾಳಿಗಳು. ಅಂಥ ಕ್ಷಣಗಳಲ್ಲಿ ನೀವು ಸಂತೋಷವಾಗಿರುವುದಿಲ್ಲ. ಸಮಗ್ರ ಪ್ರಜ್ಞೆ ಹೊಂದಿರುವುದಿಲ್ಲ. ಈ ಹಳೆಯ ಚಾಳಿಯನ್ನು ಕೈಬಿಟ್ಟು ಸಮಗ್ರವಾಗಿರಲು ಕಲಿಯಿರಿ. ಈ ಕ್ಷಣದಲ್ಲಿ ನಿಮ್ಮನ್ನು ನೀವೇ ಕಳೆದುಕೊಂಡರೆ, ಒಂದು ವಿಭಿನ್ನ ಸಾನ್ನಿಧ್ಯ ಉಂಟಾಗುತ್ತದೆ. ಆಗ ವಿಭಿನ್ನ ಶಕ್ತಿ ಮೂಲದಿಂದ ತೊಡಗಿಕೊಳ್ಳಲು ಸಾಧ್ಯವಾಗುತ್ತದೆ. ತನ್ಮೂಲಕ ನೀವು ಜೀವನದ ಸಾಧ್ಯತೆಗಳನ್ನು ಅತ್ಯುನ್ನತ ಮಟ್ಟದಲ್ಲಿ ಸಾಧಿಸಬಹುದು.

  • ಬದಲಾವಣೆಯನ್ನು ಒಪ್ಪಿಕೊಳ್ಳಬೇಕೆ ಅಥವಾ ವಿರೋಧಿಸಬೇಕೆ?

-ಹಿನ್ನೆಲೆಯಲ್ಲಿ ಒಂದು ಸ್ಥಿರವಾದುದಿದ್ದರೆ ಮಾತ್ರ ಬದಲಾವಣೆಯನ್ನು ಕಾಣಬಹುದು. ಬೆಳಕಿದ್ದರೆ ಮಾತ್ರ ಕತ್ತಲೆಯ ಗ್ರಹಿಕೆ ಸಾಧ್ಯ. ಆದ್ದರಿಂದ ಯಾವುದೇ ಬದಲಾವಣೆ ಆದಾಗ, ಅದನ್ನೂ, ಅದರ ಜತೆಗೇ ಬದಲಾಗದಿರುವುದನ್ನೂ ನೋಡಲು ಕಲಿಯಿರಿ. ಇಲ್ಲಿ ಒಪ್ಪಿಗೆ ಅಥವಾ ವಿರೋಧಗಳ ಪ್ರಶ್ನೆಯಿಲ್ಲ. ಇಲ್ಲಿ ನಿಮ್ಮ ಮುಂದಿರುವುದು ‘ಏನು’ ಎಂದು ನೋಡುವ ಹಾಗೂ ಅದರೊಂದಿಗೆ ಪ್ರವಹಿಸುವ ಬುದ್ಧಿವಂತಿಕೆಯ ಸವಾಲು. ನೀವು ಸದಾ ಏನು ಇದೆಯೋ ಅದರಲ್ಲಿ ಆರಾಮವಾಗಿರಬೇಕು. ವರ್ತಮಾನವನ್ನು ಆನಂದಿಸುವುದರಲ್ಲಿ ಅದು ಸಾಧ್ಯ. ಪ್ರಶ್ನೆ ಇದು. ನೀವು ಸ್ವೀಕಾರ, ವಿರೋಧಗಳ ಗೊಂದಲದಲ್ಲಿ ಕಳೆದು ಹೋಗದೆ ವರ್ತಮಾನವನ್ನು ಆನಂದಿಸಬಲ್ಲಿರಾ? ಯೋಗ ಶಬ್ದಕ್ಕೆ ಒಂದಾಗುವುದು, ಒಟ್ಟಾಗಿರುವುದು ಎಂಬ ಸುಂದರ ಅರ್ಥವಿದೆ.

  • ಸಂಬಂಧಗಳಲ್ಲಿ ಸಂಘರ್ಷಗಳೇಕೆ…?

ಮೊದಲು ಸಂಘರ್ಷದಲ್ಲೇ ಸಂತೋಷಪಡಲು ಕಲಿಯಿರಿ. ಸಂಘರ್ಷದಲ್ಲೇ ಸಂತೋಷ ಪಡುವುದು ಹೇಗೆ ಎಂದು ನೀವು ಕೇಳಬಹುದು. ಅದಕ್ಕೆ ನಾನೊಂದು ಪ್ರಶ್ನೆ ಕೇಳುತ್ತೇನೆ. ಅತ್ಯಂತ ಶ್ರಮದಾಯಕವಾದ, ಬೆವರು ಸುರಿಸುವ ವ್ಯಾಯಾಮದಿಂಧ ನಾವು ಖುಷಿ ಪಡುವುದಿಲ್ಲವೆ? ನಿಮಗೆ ಖುಷಿಯಾಗಲು ಕಾರಣವೇನೆಂದರೆ ನೀವು ಅದರಿಂದ ಖುಷಿ ಪಡಲು ನಿರ್ಧರಿಸಿದ್ದೀರಿ. ಆದ್ದರಿಂದ ಅದು ಶ್ರಮದಾಯಕವಾದರೂ ಖುಷಿ ಪಡುತ್ತೀರಿ. ಅದೇ ರೀತಿಯಲ್ಲಿ ಸಂಘರ್ಷಗಳಲ್ಲೇ ಸಂತೋಷ ಪಡಲು ನಿರ್ಧರಿಸಿ.

(ಲೇಖಕರು ಅಂತಾರಾಷ್ಟ್ರೀಯ ಮ್ಯಾನೇಜ್​ವೆುಂಟ್ ಗುರುಗಳು)

Leave a Reply

Your email address will not be published. Required fields are marked *

Back To Top