ಪಾಂಡವಪುರ: ಬೇಬಿ ಬೆಟ್ಟದಲ್ಲಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆಯ ಬಗ್ಗೆ ಧ್ವನಿ ಎತ್ತಿದ್ದ ಬೇಬಿ ಮಠದ ಗುರುಸಿದ್ದೇಶ್ವರ ಸ್ವಾಮೀಜಿಗೆ ಗಣಿ ಮಾಲೀಕರ ಹಿಂಬಾಲಕರು ಅವಾಚ್ಯ ಶಬ್ಧಗಳಿಂದ ನಿಂದಿಸಿ ಬೆದರಿಕೆ ಹಾಕಿದ್ದಾರೆ.
ಭಾನುವಾರ ಸಂಜೆ 5 ಗಂಟೆಯಲ್ಲಿ ಪ್ರಸನ್ನ ಎಂಬಾತ ಕೆಲವರನ್ನು ಕರೆದುಕೊಂಡು ರಾಮಯೋಗೇಶ್ವರ ಮಠಕ್ಕೆ ಹೋಗಿ ಅಲ್ಲಿದ್ದ ಗುರುಸಿದ್ದೇಶ್ವರ ಸ್ವಾಮೀಜಿ ಮತ್ತು ಅಲ್ಲಿನ ಸಿಬ್ಬಂದಿಗೆ ಬಾಯಿಗೆ ಬಂದಂತೆ ಬೈದು ಅವ್ಯಾಚ ಶಬ್ಧಗಳಿಂದ ನಿಂದಿಸಿದ್ದಾರೆ
ತಮಗೆ ಬೆದರಿಕೆ ಹಾಕಿದ ಬಗ್ಗೆ ವಿಜಯವಾಣಿ ಪತ್ರಿಕೆಗೆ ಮಾಹಿತಿ ನೀಡಿದ ಸ್ವಾಮೀಜಿ. ಈ ಸಂಬಂಧ ತಹಸೀಲ್ದಾರ್ ಗಮನಕ್ಕೆ ತಂದಿದ್ದೇನೆ. ಮಂಗಳವಾರ ಸಭೆ ಸೇರಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ಶನಿವಾರ ಬೇಬಿ ಪ್ರದೇಶದ ಅಕ್ರಮ ಗಣಿಗಾರಿಕೆ ಮತ್ತು ಸ್ಪೋಟದ ರಭಸಕ್ಕೆ ಮಠದ ಆವರಣದಲ್ಲಿ ನಿರ್ಮಾಣವಾಗುತ್ತಿರುವ ಗದ್ದುಗೆ ಸೆಂಟ್ರಿಂಗ್ ಕಂಬಗಳು ಉರುಳಿ ಬಿದ್ದು, ಗೋಡೆಗಳು ಬಿರುಕು ಬಿಟ್ಟಿದೆ ಎಂದಿದ್ದ ಸ್ವಾಮೀಜಿ, ಗಣಿಗಾರಿಕೆ ನಿಲ್ಲಿಸಬೇಕೆಂದು ಪತ್ರಿಕಾಗೋಷ್ಠಿಯಲ್ಲಿ ಆಗ್ರಹಿಸಿದ್ದರು. ಆ ಹಿನ್ನೆಲೆಯಲ್ಲಿ ಬೆದರಿಕೆ ಹಾಕಲಾಗಿದೆ.
ಗಣಿಗಾರಿಕೆ ಬಗ್ಗೆ ವರದಿ ಮಾಡಿದ್ದ ಹಿನ್ನೆಲೆಯಲ್ಲಿ ಇದೇ ಪ್ರಸನ್ನ “ವಿಜಯವಾಣಿ” ಪತ್ರಿಕೆಯ ತಾಲೂಕು ವರದಿಗಾರ ರಾಜುಗೆ ಬೆದರಿಯೊಡ್ಡಿದ್ದನ್ನು ಇಲ್ಲಿ ಸ್ಮರಿಸಬಹುದು.