ಕೋಲಾರ: ಹೊಳಲಿ ಗ್ರಾಮದ 20 ವರ್ಷದ ಯುವತಿ ಫೆ.24ರಂದು ಮನೆಯಿಂದ ಕಾಣೆಯಾಗಿದ್ದು, ಶ್ರೀಭೀಮಲಿಂಗೇಶ್ವರ ದೇವಾಲಯ ಅಭಿವೃದ್ಧಿ ನೆಪದಲ್ಲಿ ಇತ್ತೀಚೆಗಷ್ಟೇ ಗ್ರಾಮಕ್ಕೆ ಬಂದಿದ್ದ ದತ್ತಾತ್ರೇಯ ಅವಧೂತ ಎಂಬ 45 ವರ್ಷದ ಸ್ವಾಮೀಜಿ ಕರೆದೊಯ್ದಿರುವ ಶಂಕೆ ವ್ಯಕ್ತವಾಗಿದೆ.
ದ್ವಿತೀಯ ಪಿಯುಸಿ ವ್ಯಾಸಂಗ ಮಾಡಿರುವ ಯುವತಿ, ಸ್ವಾಮೀಜಿ ಬಂದ ಮೇಲೆ ದೇವಾಲಯದಲ್ಲಿ ನಡೆಯುತ್ತಿದ್ದ ಧಾರ್ವಿುಕ ಕಾರ್ಯದಲ್ಲಿ ಹೆಚ್ಚಾಗಿ ಭಾಗವಹಿಸುತ್ತಿದ್ದಳು. ಆಕೆ ಇದೀಗ ನಾಪತ್ತೆಯಾಗಿದ್ದಾಳೆ. ಸ್ವಾಮೀಜಿ ಸಹ ಕಾಣೆಯಾಗಿರುವುದು ಅನುಮಾನಕ್ಕೆ ಕಾರಣವಾಗಿದೆ.
ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ಮೂಲದ ಸ್ವಾಮೀಜಿ ಸನ್ಯಾಸ ಸ್ವೀಕರಿಸಿದ ಬಳಿಕ ದತ್ತಾತ್ರೇಯ ಅವಧೂತ ಸ್ವಾಮೀಜಿ ಎಂದು ಹೆಸರು ಬದಲಿಸಿಕೊಂಡಿದ್ದರು. ಕರ್ನಾಟಕ ಸೇರಿ 9 ರಾಜ್ಯಗಳಲ್ಲಿ ಇವರ ಚಟುವಟಿಕೆಯಿದೆ ಎನ್ನಲಾಗಿದೆ.
ಬೆಂಗಳೂರಿನ ವರ್ತರು ಬಳಿ ದೇವಾಲಯದಲ್ಲಿದ್ದ ಸ್ವಾಮೀಜಿಯನ್ನು ಹೊಳಲಿ ಗ್ರಾಮದ ಕೆಲವರು ಕರೆತಂದು ಸಂಕ್ರಾಂತಿ ಹಬ್ಬದಂದು ಭೀಮಲಿಂಗೇಶ್ವರ ದೇವಾಲಯದ ಅಭಿವೃದ್ಧಿ ಜವಾಬ್ದಾರಿ ನೀಡಿದ್ದರು. ತನಗೆ ಧನ, ಜನಬಲ ಇರುವುದಾಗಿ ಸ್ವಾಮೀಜಿ ಹೇಳಿಕೊಂಡಿದ್ದರು. ಗ್ರಾಮದಲ್ಲಿ ಸೇವಾಶ್ರಮ ಸ್ಥಾಪಿಸಿ ಗ್ರಾಮಕ್ಕೆ ಕೀರ್ತಿ ತರುವುದಾಗಿ ನಂಬಿಸಿದ್ದರು ಎನ್ನಲಾಗಿದೆ. ಯುವತಿ ಕುಟುಂಬದವರು ನಾಪತ್ತೆ ದೂರು ನೀಡಿದ್ದು, ಯಾರ ಮೇಲೂ ಅನುಮಾನ ವ್ಯಕ್ತಪಡಿಸಿಲ್ಲ. ಯುವತಿ ಭೀಮಲಿಂಗೇಶ್ವರ ದೇವಾಲಯದ ಸ್ವಾಮೀಜಿ ಜತೆ ಹೋಗಿರುವ ಮಾಹಿತಿ ಇದೆ. ಅವರಿಬ್ಬರಿಗಾಗಿ ಶೋಧಿಸಲಾಗುತ್ತಿದೆ ಎಂದು ಕೋಲಾರ ಎಸ್ಪಿ ಕಾರ್ತಿಕ್ ರೆಡ್ಡಿ ಪ್ರತಿಕ್ರಿಯಿಸಿದ್ದಾರೆ.
ಇಬ್ಬರ ಮೊಬೈಲ್ಗಳೂ ಆಫ್: ನಾಪತ್ತೆಯಾಗಿರುವ ಸ್ವಾಮೀಜಿ ಮತ್ತು ಯುವತಿಯ ಮೊಬೈಲ್ ಫೋನ್ಗಳು ಆಫ್ ಆಗಿವೆ. ಯುವತಿಯ ಸಂಬಂಧಿಕರಿಗೆ ಸ್ವಾಮೀಜಿ ವಿಡಿಯೋ ತುಣುಕು ಕಳುಹಿಸಿದ್ದಾರೆ. ಅದರಲ್ಲಿ ಯುವತಿಯನ್ನು ಮದುವೆಯಾಗಿರುವುದಾಗಿ ಹೇಳಿದ್ದಾರೆ ಎನ್ನಲಾಗಿದೆ.