ಚಳ್ಳಕೆರೆ: ಯಜ್ಞ, ತಪಸ್ಸು ಮತ್ತು ದಾನದಿಂದ ಮಾತ್ರ ಮಾನವನ ಜೀವನವನ್ನು ಸಾರ್ಥಕ ಮಾಡಿಕೊಳ್ಳಲು ಸಾಧ್ಯ ಎಂದು ನರಹರಿ ಸದ್ಗುರು ಪೀಠದ ಪೀಠಾಧ್ಯಕ್ಷ ಡಾ.ವೈ.ರಾಜರಾಮ ಸ್ವಾಮೀಜಿ ಹೇಳಿದರು.
ನಗರದ ಪಾವಗಡ ರಸ್ತೆಯಲ್ಲಿನ ಶ್ರೀ ಸಾಯಿ ಮಂದಿರದಲ್ಲಿ ಗುರುವಾರ ತಡರಾತ್ರಿ ಹಮ್ಮಿಕೊಂಡಿದ್ದ ಧಾರ್ವಿುಕ ದೇವತಾರಾಧನಾ ಮಾಹಿತಿ ಒಳಗೊಂಡ ಹೊಸ ವರ್ಷದ ಕ್ಯಾಲೆಂಡರ್ ಬಿಡುಗಡೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.
ಯಜ್ಞ ಎನ್ನುವುದನ್ನು ಕಠಿಣವಾಗಿ ಅರ್ಥೈಸಿಕೊಳ್ಳಬಾರದು. ಒಳ್ಳೆ ಕಾರ್ಯವನ್ನು ಮಾಡಲು ಪ್ರತಿಜ್ಞೆ ಮಾಡುವುದು ಎಂದರ್ಥ. ತಪಸ್ಸು ಮನವರಿಕೆಯಲ್ಲಿ ಕಾರ್ಯವನ್ನು ಸಿದ್ಧಿಸಿಕೊಳ್ಳಲು ಮನಸ್ಸನ್ನು ಕೇಂದ್ರೀಕರಿಸಿಕೊಳ್ಳುವುದು. ತಿಳಿದ ವಿಚಾರ ಮತ್ತು ತನ್ನಲ್ಲಿ ಇರುವ ಸಂಪನ್ಮೂಲವನ್ನು ಇತರರ ಕಷ್ಟಕ್ಕೆ ಸ್ವಲ್ಪ ದಾನ ಮಾಡುವ ಕಾರ್ಯದಿಂದ ಬದುಕಿಗೆ ಭಗವಂತನ ಅನುಗ್ರಹ ಸಿಗುತ್ತದೆ ಎಂದು ತಿಳಿಸಿದರು.
ತಾಲೂಕಿನಲ್ಲಿ ಸಾಯಿಮಂದಿರ ಸ್ಥಾಪಿಸುವ ಮೂಲಕ ಶಿರಡಿ ಸಾಯಿಬಾಬಾನ ಭಕ್ತರಿಗೆ ಸ್ಥಳೀಯವಾಗಿ ದರ್ಶನ ಮಾಡಿಕೊಳ್ಳುವ ಭಾಗ್ಯ ಕಲ್ಪಿಸಲಾಗಿದೆ. ಬದುಕಿನಲ್ಲಿ ನೆಮ್ಮದಿ ಮತ್ತು ಶಾಂತಿ ಧಾರ್ವಿುಕ ಪುಣ್ಯಕ್ಷೇತ್ರಗಳಿಂದ ಸಿಗಲು ಸಾಧ್ಯ. ಇಲ್ಲಿ ಮನಸ್ಸನ್ನು ಶುದ್ಧಿ ಮಾಡಿಕೊಳ್ಳುವ ರೀತಿಯಲ್ಲಿ ಸಮಾಜದ ಬದುಕನ್ನು ಅರ್ಥೈಸಿಕೊಳ್ಳಬೇಕು ಎಂದು ಭಕ್ತರಿಗೆ ಕಿವಿಮಾತು ಹೇಳಿದರು.
ಕವಿ ಕೊರ್ಲಕುಂಟೆ ತಿಪ್ಪೇಸ್ವಾಮಿ ಮಾತನಾಡಿ, ಸರ್ವ ಸಮುದಾಯಗಳು ಒಳಗೊಂಡ 12ನೇ ಶತಮಾನದ ಬಸವಣ್ಣನವರ ಅನುಭವ ಮಂಟಪದಂತೆ, ಯಾವುದೇ ಜಾತಿ, ವರ್ಗ ಎನ್ನದೆ ಸರ್ವ ಜನಾಂಗದ ಸಮಿತಿ ಮಾಡಿಕೊಂಡು ತಾಲೂಕು ಕೇಂದ್ರದಲ್ಲಿ ಬೃಹತ್ ಸಾಯಿ ಮಂದಿರ ಸ್ಥಾಪಿಸಲಾಗಿದೆ. ಕಡಿಮೆ ಅವಧಿಯಲ್ಲಿ ಅಪಾರ ಭಕ್ತರ ಮಂದಿರವಾಗಿ ಬೆಳೆಯುತ್ತಿದೆ ಎಂದರು.
ಸಾಯಿಬಾಬಾ ತನ್ನ ಚಿಕ್ಕವಯಸ್ಸಿನಲ್ಲಿ ತಪಸ್ಸು ಮತ್ತು ಲೌಕಿಕ ಚಿಂತನೆ ಬೆಳೆಸಿಕೊಂಡವರು. ಭಕ್ತ ಗಣ ವೃದ್ಧಿಸಿಕೊಂಡು ದೈವರೂಪಿಯಾಗಿ ಐಕ್ಯ ಪಡೆದವರು. ಧಾರ್ವಿುಕ ಮತ್ತು ಸಮಾಜ ಸುಧಾರಕರ ಲೋಕ ಸಂದೇಶ ಸಮಾಜದಲ್ಲಿ ಒಳ್ಳೆ ಕಾರ್ಯ ಜೀವಂತವಾಗಿ ಉಳಿಯಬೇಕು ಎಂದು ಸಾರಿದ್ದಾರೆ ಎಂದು ತಿಳಿಸಿದರು.
ಭೌಗೋಳಿಕವಾಗಿ ಬರದ ಪರಿಸ್ಥಿತಿಯಲ್ಲೂ ಹಿರಿಯರ ಪದ್ಧತಿ ಮತ್ತು ಪುಣ್ಯಾರಾಧನಾ ಹಬ್ಬಗಳಿಗೆ ಕೊರತೆ ಇಲ್ಲ. ಇಂತಹ ಜಾತ್ರಾ ಹಿನ್ನೆಲೆಗಳ ದಾಖಲೀಕರಣದಂತೆ ಕ್ಯಾಲೆಂಡರ್ ಮುದ್ರಣ ಮಾಡಿರುವುದು ಸಮಾಜಕ್ಕೆ ಒಂದು ಧಾರ್ವಿುಕ ಕೈಪಿಡಿಯಾಗಿದೆ ಎಂದು ಹೇಳಿದರು.
ವೆಂಕಟ ಸಾಯಿ ಸೇವಾ ಟ್ರಸ್ಟ್ ಅಧ್ಯಕ್ಷ ಬಿ.ಸಿ.ಸಂಜೀವಮೂರ್ತಿ ಮಾತನಾಡಿ, ಸಾಯಿ ಮಂದಿರಕ್ಕೆ ಹೊರ ಜಿಲ್ಲೆಗಳಿಂದಲೂ ಭಕ್ತರ ಆಗಮನ ಇದೆ. ಕೌಟುಂಬಿಕ ಸಮಸ್ಯೆಗಳು ಸೇರಿದಂತೆ ಭಕ್ತರ ಇಷ್ಟಾರ್ಥಗಳು ಈಡೇರುವ ನೆಲೆಯಾಗುತ್ತಿದೆ. ಸಾಯಿ ಮಂದಿರದ ಪೂಜಾ ಕಾರ್ಯ, ತಾಲೂಕಿನ ಜಾತ್ರಾ ಮಹೋತ್ಸವಗಳ ಮಾಹಿತಿಯಲ್ಲಿ ಕ್ಯಾಲೆಂಡರ್ ಮುದ್ರಿಸಲಾಗಿದೆ ಎಂದು ಹೇಳಿದರು.
ಮಕ್ಕಳ ತಜ್ಞ ಡಾ.ಚಂದ್ರನಾಯ್ಕ, ಟ್ರಸ್ಟ್ ಸಮಿತಿಯ ಕೆ.ಎಂ.ಜಗದೀಶ್, ಬಿ.ವಿ.ಚಿದಾನಂದಮೂರ್ತಿ, ಬಿ.ಸಿ.ಸತೀಶ್ಕುಮಾರ್, ರವಿಪ್ರಸಾದ್, ಪುಷ್ಪಾ ಸಂಜೀವಮೂರ್ತಿ, ರಶ್ಮಿ ಸುರೇಶ್, ಅರುಣಾ ಜಗದೀಶ್, ಬಿ.ಸುರೇಶ್, ಶ್ರೀನಾಥ್, ರೇಣುಕಾಸ್ವಾಮಿ, ವಕೀಲ ಡಿ.ಎಂ.ರವೀಂದ್ರ ಇತರರಿದ್ದರು.