ವಿರಾಜಪೇಟೆ: ದೇಶಕ್ಕಾಗಿ ತಮ್ಮ ಜೀವನವನ್ನೇ ಅರ್ಪಿಸುವಂತಹ ಯುವಜನತೆಯನ್ನು ವಿವೇಕನಂದರು ಅಪೇಕ್ಷಿಸಿದ್ದರು. ಒಳ್ಳೆಯ ಉದ್ದೇಶ, ಸತ್ಯಸಂಧತೆ ಮತ್ತು ಅನಂತ ಪ್ರೇಮ ಇವು ಜಗತ್ತನ್ನೇ ಗೆಲ್ಲಬಲ್ಲವು. ಈ ಸದ್ಗುಣಗಳನ್ನು ಹೊಂದಿದ ಒಬ್ಬನೇ ವ್ಯಕ್ತಿ ಕೋಟ್ಯಂತರ ದುಷ್ಟರ, ದುರುಳರ ಕಪಟ ಜಾಲವನ್ನು ನಾಶಮಾಡಬಹುದು ಎಂದು ಲಕ್ಷ್ಮೀ ಎಸ್ಟೇಟ್ ಮಾಲೀಕರಾದ ಕೆ.ಪಿ.ಉತ್ತಪ್ಪ ಅಭಿಪ್ರಾಯಪಟ್ಟರು.
ವಿರಾಜಪೇಟೆ ಕಾವೇರಿ ಕಾಲೇಜಿನಲ್ಲಿ ದಿ.ಕೂತಂಡ ಪೂವಯ್ಯ ಮತ್ತು ಪಾರ್ವತಿ ಪೂವಯ್ಯ ಸ್ಮರಣಾರ್ಥ ಸ್ವಾಮಿ ವಿವೇಕನಂದರ ಜೀವನ ಹಾಗೂ ಸಾಧನೆ ವಿಷಯ ಕುರಿತು ಗುರುವಾರ ಆಯೋಜಿಸಲಾಗಿದ್ದ ಜಿಲ್ಲಾ ಮಟ್ಟದ ಭಾಷಣ ಸ್ಪರ್ಧೆಯಲ್ಲಿ ಮಾತನಾಡಿ, ವಿವೇಕಾನಂದರು ಅದ್ಭುತ ದೇಶಭಕ್ತ, ಚಿಂತಕ, ಧಾರ್ಮಿಕ ನಾಯಕ. ಮಾನವೀಯರಾಗಿ ಬದುಕುವುದನ್ನು ಕಲಿಸಿದ, ಆತ್ಮ ಜಾಗೃತಿ ಹೊಂದುವಂತೆ ಬೋಧಿಸಿದ ಸಂತ. ಅವರ ಕೊಲಂಬೊದಿಂದ ಅಲ್ಮೇರ ಪುಸ್ತಕವನ್ನು ಯುವ ಜನರು ಹೆಚ್ಚಾಗಿ ಓದಬೇಕು. ಇದರಿಂದ ಸ್ವಾಮಿ ವಿವೇಕಾನಂದರ ಜೀವನ ಮತ್ತು ಸಾಧನೆ, ಅವರು ನಡೆಸಿದಂತಹ ಸಮಾಜ ಸೇವೆಯ ಕಾರ್ಯಗಳು ಯುವ ಸಮೂಹಕ್ಕೆ ತಿಳಿಯಲು ಸಾಧ್ಯ ಎಂದರು.
ಪೊನ್ನಂಪೇಟೆ ಶ್ರೀ ರಾಮಕೃಷ್ಣ ಶಾರದಾಶ್ರಮದ ಅಧ್ಯಕ್ಷ ಪರಹಿತಾನಂದ ಸ್ವಾಮಿ ಮಾತನಾಡಿ, ಪೊನ್ನಂಪೇಟೆ ಶಾರದಾ ಆಶ್ರಮ 99 ವಸಂತಗಳನ್ನು ಪೂರ್ಣಗೊಳಿಸಿದ್ದು. ಈ ಆಶ್ರಮ ನಿರಂತರವಾಗಿ ವಿವೇಕಾನಂದರ ಕನಸಿನಂತೆ ಸಮಾಜ ಸೇವೆಯ ಕಾರ್ಯವನ್ನು ಮಾಡುತ್ತಾ ಬರುತ್ತಿದೆ. ವಿವೇಕನಂದರ ಕನಸು ನನಸಾಗಿಸಲು ಭಾರತೀಯರು ತಮ್ಮಲ್ಲಿ ಮುಖ್ಯವಾಗಿ ಸೇವಾ ಮನೋಭಾವನೆಯನ್ನು ರೂಢಿಸಿಕೊಳ್ಳುವುದರೊಂದಿಗೆ ಇತರರ ಯಶಸನ್ನು ಕಂಡು ಹೊಟ್ಟೆಕಿಚ್ಚು ಪಡದೆ ಅವರ ಯಶಸ್ಸನ್ನು ಗೌರವಿಸುವ ಮನೋಭಾವ ಬೆಳೆಸಿಕೊಳ್ಳಬೇಕು. ಪ್ರತಿಯೊಬ್ಬರಲ್ಲೂ ದೇವರು ಇದ್ದಾನೆ. ಆದ್ದರಿಂದ ಈ ಆಧ್ಯಾತ್ಮಿಕ ಶಕ್ತಿಯನ್ನು ಅರಿತು ಸರ್ವರನ್ನು ಗೌರವಿಸುವ ಗುಣವನ್ನು ಬೆಳೆಸಿಕೊಳ್ಳಬೇಕು ಎಂದು ಆಶೀರ್ವಚನ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಕಾವೇರಿ ಕಾಲೇಜಿನ ಪ್ರಾಂಶುಪಾಲ ಬೆನಡಿಕ್ಟ್ ಆರ್.ಸಲ್ದಾನ ಮಾತನಾಡಿ, ಸಮಾಜದ ಕೆಡುಕು ಸರಿಪ ಡಿಸುವಂತಹ ಕಾರ್ಯವನ್ನು ಹಲವಾರು ಮಹನೀಯರು ಮಾಡಿದ್ದಾರೆ. ಅಂತಹ ಮಹನೀಯರಲ್ಲಿ ಅತ್ಯಂತ ಪ್ರಮುಖರಂದರೆ ಸ್ವಾಮಿ ವಿವೇಕಾನಂದರು. ಅವರಿಲ್ಲಿ ಜನಿಸಿದ ಉದ್ದೇಶವೇ ಸಮಾಜವನ್ನು ಸರಿಪಡಿಸುವುದೆಂದನಿಸುತ್ತದೆ. ಇಷ್ಟು ವರ್ಷಗಳು ಸಾಗಿದರೂ ಅವರ ಜೀವನ ಬೋಧನೆ ಪ್ರಸ್ತುತವೆನಿಸುತ್ತದೆ ಎಂದರು.
ವಿರಾಜಪೇಟೆ ಕಾವೇರಿ ಕಾಲೇಜಿನ ಕನ್ನಡ ವಿಭಾಗದ ನಿವೃತ್ತ ಪ್ರಾಧ್ಯಾಪಕಿ ಪ್ರೊ.ದಂಬೆಕೋಡಿ ಪಿ.ಎ.ಸುಶೀಲಾ, ಸರ್ಕಾರಿ ಪಿ.ಯು ಕಾಲೇಜು ಪಾಲಿಬೆಟ್ಟದ ನಿವೃತ ಉಪನ್ಯಾಸಕ ಡಾ.ಕೆ.ಎಂ.ಭವಾನಿ ಅವರನ್ನು ಸನ್ಮಾನಿಸಲಾಯಿತು.
ನಂತರ ನಡೆದ ಸ್ಪರ್ಧಾ ಕಾರ್ಯಕ್ರಮದಲ್ಲಿ ಒಟ್ಟು 29 ಸ್ಪರ್ಧಿಗಳು ಭಾಗವಹಿಸಿದ್ದರು. ಸ್ಪರ್ಧೆಯು ಕನ್ನಡ ಹಾಗೂ ಆಂಗ್ಲ ಭಾಷೆಯಲ್ಲಿ ನಡೆಸಲಾಯಿತು. ಆಂಗ್ಲ ಭಾಷಾ ವಿಭಾಗದಲ್ಲಿ ಪ್ರಥಮ ಸ್ಥಾನ ವಿರಾಜಪೇಟೆ ಕಾವೇರಿ ಪದವಿ ಕಾಲೇಜಿನ ಎನ್.ಬಿ. ಮುತ್ತಮ್ಮ , ದ್ವಿತೀಯ ಸ್ಥಾನ ಪೊನ್ನಂಪೇಟೆ ಸಿ.ಐ.ಟಿ. ಕಾಲೇಜಿನ ಕವನ ಕಾವೇರಮ್ಮ , ತೃತೀಯ ಸ್ಥಾನವನ್ನು ಸೈಂಟ್ ಆನ್ಸ್ ಪದವಿ ಕಾಲೇಜಿನ ಅಮಾನತ್ ಹಾಗೂ ನಾಪೋಕ್ಲು ಮರ್ಕಜ್ಹ್ ಕಾಲೇಜಿನ ಮುನ್ಶೀನಾ ಪಡೆದುಕೊಂಡರು.
ಕನ್ನಡ ಭಾಷಾ ವಿಭಾಗದಲ್ಲಿ ವಿರಾಜಪೇಟೆ ಕಾವೇರಿ ಕಾಲೇಜಿನ ಬಿ.ಎಸ್.ರಕ್ಷಿತಾ ಪ್ರಥಮ ಸ್ಥಾನ , ಸೇಂಟ್ ಆನ್ಸ್ ಪದವಿ ಕಾಲೇಜಿನ ಟಿ.ಎಚ್ ಧನ್ಯಾ ದ್ವಿತೀಯ ಸ್ಥಾನ , ಮಡಿಕೇರಿ ಎಫ್.ಎಂ.ಸಿ ಕಾಲೇಜಿನ ಎಚ್.ಎನ್.ಶ್ರುತಿ ತೃತೀಯ ಸ್ಥಾನ ಪಡೆದುಕೊಂಡರು. ವಿಜೇತರಿಗೆ ನಗದು ಬಹುಮಾನ ನೀಡಿ ಗೌರವಿಸಲಾಯಿತು. ಸ್ಪರ್ಧೆಯ ಸರ್ವೋತ್ತಮ ಚಾಂಪಿಯನ್ ಪ್ರಥಮ ಟ್ರೋಪಿಯನ್ನು ವಿರಾಜಪೇಟೆ ಕಾವೇರಿ ಕಾಲೇಜು ಪಡೆದುಕೊಂಡರೆ, ದ್ವಿತೀಯ ಸ್ಥಾನವನ್ನು ಸೇಂಟ್ ಆನ್ಸ್ ಪದವಿ ಕಾಲೇಜು ಪಡೆದುಕೊಂಡಿತು. ತೀರ್ಪುಗಾರರಾಗಿ ಗೋಣಿಕೊಪ್ಪಲು ಕಾವೇರಿ ಕಾಲೇಜಿನ ಕನ್ನಡ ಉಪನ್ಯಾಸಕರಾದ ಡಾ.ರೇವತಿ ಹಾಗೂ ವಿರಾಜಪೇಟೆ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಇತಿಹಾಸ ಉಪನ್ಯಾಸಕಿ ಸುಜಾತಾ ಕಾರ್ಯನಿರ್ವಹಿಸಿದರು.
ಕಾವೇರಿ ವಿದ್ಯಾ ಸಂಸ್ಥೆಯು ನಿರ್ದೇಶಕರಾದ ಪಿ.ಟಿ.ಸುಭಾಷ್, ಕೆ.ಪಿ.ಅಚ್ಚಯ್ಯ, ಕಾರ್ಯಕ್ರಮದ ಸಂಚಾಲಕರಾದ ಡಾ.ಮುತ್ತಮ್ಮ, ಉಪನ್ಯಾಸಕರಾದ ಡಾ.ವೀಣಾ, ಅಕ್ಷಿತಾ, ನಿರ್ಮಿತಾ, ಕೂತಂಡ ವಾಣಿ ಉತ್ತಪ್ಪ ಹಾಗೂ ಕಾಲೇಜಿನ ವಿದ್ಯಾರ್ಥಿಗಳು ಹಾಜರಿದ್ದರು.
